ಪ್ರಜಾಸಮರ ಮತ್ತು ನಿಲುಮೆಯಲ್ಲಿ ಪ್ರಕಟವಾಗಿದ್ದ ಲೇಖನ
‘ಒಂದೂರಲ್ಲಿ ಒಬ್ಬ ರಾಜ ಇದ್ದ. ಆತನಿಗೊಬ್ಬಳು ಸುರಸುಂದರಿ
ಮಗಳು. ರಾಜನ ವೈರಿಗಳು ರಾಜನ ಮೇಲಿನ ದ್ವೇಷಕ್ಕೆ ಯುವರಾಣಿಯನ್ನು ಅಪಹರಿಸಿಬಿಟ್ಟರು. ಯುವರಾಣಿ ಅಘಾತಕ್ಕೊಳಗಾಗಿ
ಮೂರ್ಛೆ ತಪ್ಪಿದಳು. ಆಘಾತದಿಂದ ಹೊರಬಂದ ಮೇಲೆ ನೋಡುತ್ತಾಳೆ ಯಾವುದೋ ಗುಹೆಯೊಳಗೆ ಕೈ ಕಟ್ಟಿಹಾಕಿಹಾಕಿದ್ದಾರೆ.
ಹೊರಗಡೆ ಪಹರೆ. ಚಾಕಚಕ್ಯತೆಯಿಂದ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿ ವೈರಿಗಳೊಂದಿಗೆ ಶೌರ್ಯದಿಂದ
ಹೊಡೆದಾಡಿ........’ ರೀ ರೀ ರೀ ಕಥೆ ಹೋಗೋದು ಆ ರೀತಿ ಅಲ್ಲ ...... ‘ಪಕ್ಕದ ದೇಶದ ಯುವರಾಜ ಏಕಾಂಗಿಯಾಗಿ
ವೈರಿಗಳ ಮೇಲೆ ಕಾದಾಡಿ ಯುವರಾಣಿಯನ್ನು ರಕ್ಷಿಸುತ್ತಾನೆ. ಯುವರಾಜನ ಸಾಹಸಕ್ಕೆ ಮನಸೋತ ಯುವರಾಣಿಗೆ
ಪ್ರೇಮಾಂಕುರವಾಗುತ್ತದೆ. ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿ ನೂರ್ಕಾಲ ಚೆನ್ನಾಗಿ ಬಾಳಿ ಬದುಕುತ್ತಾರೆ’
ಇದು ಕಥೆ ಸಾಗುವ ರೀತಿ! ಚಿಕ್ಕಂದಿನಿಂದಲೂ ಈ ರೀತಿಯ ಕಥೆಗಳನ್ನೇ ಕೇಳಿ ಬೆಳೆದ ನಮಗೆ ಯುವರಾಣಿ ಅಬಲೆಯಲ್ಲ
ಬಲಿಷ್ಠೆ, ತನ್ನನ್ನು ತಾನು ಕಾಪಾಡಿಕೊಳ್ಳಲು ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದಲ್ಲವೇ?
ಯುವರಾಣಿಯ ಸಹಾಯಕ್ಕೆ ಯುವರಾಜನೊಬ್ಬ ಬೇಕೇ ಬೇಕು ಎಂಬ ಸಿದ್ಧಾಂತ ನಮ್ಮದು!
ಮುಂದಿನ ವರುಷದ ಲೋಕಸಭಾ
ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಜೋರಾಗಿಯೇ ನಡೆದಿದೆ. ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ
ನರೇಂದ್ರ ಮೋದಿಯೆಂಬುದು ಹೆಚ್ಚೂ ಕಡಿಮೆ ಖಚಿತವಾಗಿದೆ. ಇನ್ನು ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ
ಪ್ರಧಾನಿ ಅಭ್ಯರ್ಥಿಯಾ? ಖಚಿತವಾಗಿ ಹೇಳುವುದು ಕಷ್ಟ. ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ನರೇಂದ್ರ
ಮೋದಿ ಮತ್ತು ರಾಹುಲ್ ಗಾಂಧಿ ಅಭಿಮಾನಿಗಳ “ಯುದ್ಧ” ಜೋರಾಗಿಯೇ ನಡೆದಿದೆ. ಬಿಜೆಪಿ ಸಾಮಾಜಿಕ ತಾಣದ
ಪ್ರಚಾರಕ್ಕೆ ವರುಷಗಳಿಂದ ಕೊಟ್ಟ ಪ್ರಾಮುಖ್ಯತೆಯಿಂದ ಅಂತರ್ಜಾಲದಲ್ಲಿ ನರೇಂದ್ರ ಮೋದಿಯ ಬೆಂಬಲಿಗರೇ
ಹೆಚ್ಚಿರುವುದು ನಿಜ. ನರೇಂದ್ರ ಮೋದಿಯ ವಿರುದ್ಧವಾಗಿಯೋ ಅಥವಾ ರಾಹುಲ್ ಗಾಂಧಿಯ ಪರವಾಗಿಯೋ ನೀವೇನಾದರೂ
ಅಂತರ್ಜಾಲದಲ್ಲಿ ಬರೆದಿರೋ ನಿಮ್ಮ ಜನ್ಮ ಜಾಲಾಡಿ, ಹೀಯಾಳಿಸಿ, ಖಂಡಿಸಿ, ದೇಶದ್ರೋಹಿಯೆಂದು ಜರೆಯುವ
ಅಸಂಖ್ಯ ಕಮೆಂಟುಗಳು ಬರುವುದು ಖಂಡಿತ!!