ಬದುಕು ಮಗ್ಗುಲು ಬದಲಿಸಲು ವಯಸ್ಸಿನ ಹಂಗಿಲ್ಲ. ಕೆಲಸ ನಿರ್ವಹಿಸುವುದರಲ್ಲೇ ಆತ್ಮತೃಪ್ತಿ ಕಂಡುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ವೃತ್ತಿ ಜೀವನದ ನಿವೃತ್ತಿಯ ಅಂಚಿನಲ್ಲಿ ತನ್ನಿಡೀ ಜೀವನದ ಆಗುಹೋಗುಗಳನ್ನು ವಿಮರ್ಶಿಸಲಾರಂಭಿಸುತ್ತ ಕೆಲವೊಮ್ಮೆ ಪುಟಿಯುತ್ತ ಕೆಲವೊಮ್ಮೆ ಕುಸಿಯುತ್ತಾ ಹೊಸ ಮನುಷ್ಯನಾಗಿ ಜನ್ಮ ತಳೆಯುವ ಕಥೆಯೇ ಕೂರ್ಮಾವತಾರ. ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪನವರ ಕಥೆಯೊಂದನ್ನು ಆಧರಿಸಿ ತೆಗೆದಿರುವ ಚಿತ್ರ ಕೂರ್ಮಾವತಾರ.
ಆನಂದ್ ರಾವ್ ಸರ್ಕಾರಿ ಕಛೇರಿಯೊಂದರ ನೌಕರ. ಕೆಲಸ ಕೆಲಸ ಮತ್ತು ಕೆಲಸ ಎಂದಷ್ಟೇ
ಬದುಕಿದವ. ಇಂಥ ಆನಂದರಾಯರನ್ನು ಹುಡುಕಿಕೊಂಡು ಧಾರವಾಹಿ ನಿರ್ದೇಶಕರೊಬ್ಬರು ಬರುತ್ತಾರೆ. ಬದುಕಿನಲ್ಲೂ
ನಟನೆ ಮಾಡದ ಆನಂದರಾಯರಿಗೆ ತಮ್ಮ ಧಾರವಾಹಿಯಲ್ಲಿ ಮುಖ್ಯಪಾತ್ರವೊಂದರಲ್ಲಿ ನಟಿಸಲು ಆಹ್ವಾನ. ಕಾರಣ?
ಆನಂದರಾಯರದು ಗಾಂಧಿಯನ್ನು ಹೋಲುವ ಮುಖಚರ್ಯೆ. ಮೊದಲು ಸಾರಸಗಟಾಗಿ ತಿರಸ್ಕರಿಸಿದರೂ ಮಗ ಸೊಸೆಯ ಒತ್ತಡಕ್ಕೆ
ಮಣಿದು ನಟಿಸಲು ಒಪ್ಪುತ್ತಾರೆ. ಧಾರವಾಹಿ ಅಭಿನಯದಿಂದ ಬರುವ ದುಡ್ಡನ್ನು ಶೇರಿಗೆ ವಿನಿಯೋಗಿಸಿ ಮತ್ತಷ್ಟು
ಹಣ ಮಾಡುವ, ಜೀವನ ಮಟ್ಟವನ್ನು ಹಣದ ಮುಖಾಂತರ ‘ಸುಧಾರಿಸಿ’ಕೊಳ್ಳುವ ಹಂಬಲ ಮಗನಿಗೆ; ಇರುವ ಒಬ್ಬನೇ
ಮಗನನ್ನು ಡಾಕ್ಟರಿಕೆಗೋ ಇಂಜಿನಿಯರಿಂಗಿಗೋ ಸೇರಿಸುವ ಆಸೆ. ಇವರ ಆಸೆ ಹಂಬಲಗಳಿಗೆ ಬೆಂಬಲವಾಗಲು ನಟಿಸುವ
ಮನಸ್ಸು ಮಾಡುತ್ತಾರೆ ಆನಂದ್ ರಾವ್.
ಮೊದಲ ದೃಶ್ಯವೇ ಭಾರತ ವಿಭಜನೆಯ ಅಧ್ಯಾಯ. ಭಾರತ ವಿಭಜಿಸದೇ ವಿಧಿಯಿಲ್ಲ
ಎಂಬ ವಾಸ್ತವವನ್ನರಿತಾಗ ಗಾಂಧಿಯಲ್ಲುಂಟಾಗುವ ಅಪಾರ ದುಃಖವನ್ನು ಅಭಿನಯಿಸಿ ತೋರಿಸುವಲ್ಲಿ ಆನಂದ ರಾಯರು
ಸಫಲರಾಗುವುದಿಲ್ಲ. ಹೇಗಾದರೂ ಮಾಡಿ ಅವರ ಮೊಗದಲ್ಲಿ ದುಃಖರಸ ಸ್ಪುರಿಸುವ ಪ್ರಯತ್ನದಲ್ಲಿದ್ದ ನಿರ್ದೇಶಕ
‘ನಿಮ್ಮ ಹೆಂಡತಿ ಸತ್ತಾಗ ನಿಮ್ಮಲ್ಲುಂಟಾದ ದುಃಖವನ್ನು ಮನಸ್ಸಿಗೆ ತಂದುಕೊಳ್ಳಿ’ ಎನ್ನುತ್ತಾನೆ. ಆನಂದ
ರಾಯರ ವ್ಯಕ್ತಿತ್ವ ಈ ದೃಶ್ಯದ ಮೂಲಕ ಅನಾವರಣಗೊಳ್ಳುತ್ತಾ ಸಾಗುತ್ತದೆ. ಹೆಂಡತಿ ಕ್ಯಾನ್ಸರ್ ಪೀಡಿತಳಾಗಿ
ಆಸ್ಪತ್ರೆಯಲ್ಲಿದ್ದಾಗ್ಯೂ ಆನಂದ ರಾಯರು ತಮ್ಮ ಕೆಲಸದಲ್ಲೇ ಮುಳುಗಿ ಹೋಗಿರುತ್ತಾರೆ. ಕೊನೆಗೆ ಒಂದು
ಹನಿ ಕಣ್ಣೀರನ್ನು ಹಾಕಿರುವುದಿಲ್ಲ ಮಡದಿ ಸತ್ತಾಗ! ಈ ವಿಷಯದ ಅರಿವಾದಾಗ ಚಿತ್ರತಂಡದವರು ಆನಂದರಾಯರನ್ನು
ಅಪಹಾಸ್ಯ ಮಾಡುತ್ತಾರೆ. ಈ ಅಪಹಾಸ್ಯ ಆನಂದರಾಯರ ವ್ಯಕ್ತಿತ್ವ ಬದಲಾವಣೆಗೆ ಪ್ರೇರಕ ಶಕ್ತಿಯಾಗಿ ಕೆಲಸ
ಮಾಡುತ್ತದೆ.
ಅಭಿನಯ ಕಷ್ಟವೆನಿಸಿ ವಿದಾಯ ಹೇಳಬೇಕೆಂದುಕೊಳ್ಳುತ್ತಾರಾದರೂ ಮನೆಯವರ ಹಣದ
ಆಸೆ ಮತ್ತದಕ್ಕಿಂತಲೂ ಮುಖ್ಯವಾಗಿ ದಾರಿಯಲ್ಲಿ ಕೆಲವರು ಇವರನ್ನು ಗಾಂಧಿ ಪಾತ್ರದ ಮುಖಾಂತರ ಗುರುತಿಸಿ
ಆಡಿದ ಪ್ರೋತ್ಸಾಹದ ಮಾತುಗಳು ಮತ್ತೆ ಅಭಿನಯಿಸಲು ಪ್ರಯತ್ನಿಸುವಂತೆ ಮಾಡುತ್ತದೆ. ಗಾಂಧಿ ಬಗ್ಗೆ ಹೆಚ್ಚೇನೂ
ತಿಳಿದಿರದ ರಾಯರು ಮಗ ತಂದುಕೊಟ್ಟ ಪುಸ್ತಕಗಳನ್ನು ಓದಿ ಗಾಂಧಿವಾದಿ ತಾತಯ್ಯನವರನ್ನೂ ಭೇಟಿ ಮಾಡುತ್ತಾರೆ.
ನಿಧನಿಧಾನವಾಗಿ ಗಾಂಧಿ ಆನಂದರಾಯರಲ್ಲಿ ವಿಲೀನರಾಗುತ್ತಾ ಸಾಗುತ್ತಾರೆ. ರಾಯರ ಆಲೋಚನೆಗಳಲ್ಲಿ, ವೇಷಭೂಷಣಗಳಲ್ಲಿ,
ಚಿಂತನೆಗಳಲ್ಲಿ ಮಾರ್ಪಾಡಾಗಲಾಂಭಿಸುತ್ತದೆ. ಕೊನೆಗೆ ಧಾರವಾಹಿಗಾಗಿ ಹೆಣೆದ ದೃಶ್ಯವೊಂದರ ಸತ್ಯಾಸತ್ಯತೆಯ
ಬಗ್ಗೆ ನಿರ್ದೇಶಕರ ಜೊತೆ ವಾಗ್ವಾದಕ್ಕಿಳಿಯುವಷ್ಟು ಗಾಂಧಿವಾದಿಯಾಗುತ್ತಾರೆ! ಗಾಂಧಿ ಹರಿಲಾಲನ ಮಧ್ಯೆಯಿದ್ದ
ಸಂಘರ್ಷದ ಮಗದೊಂದು ರೂಪದಂತೆ ಆನಂದ ರಾವ್ ಮತ್ತವರ ಮಗನ ನಡುವೆ ಹಣದ ವಿಷಯವಾಗಿ ಮನಸ್ತಾಪ ಉಂಟಾಗಿ ಬೇರ್ಪಡುತ್ತಾರೆ.
ತನ್ನ ಗಾಂಧಿ ಇಮೇಜನ್ನು ಜನರ ಕಷ್ಟಪರಿಹರಿಸುವ ನೆಪದಲ್ಲಿ ಕಮಿಷನ್ ದಂಧೆಯನ್ನಾಗಿ ಮಾಡಲವಣಿಸುವ ಮಗನ
ನಡೆ ರಾಯರಿಗೆ ಇಷ್ಟವಾಗುವುದಿಲ್ಲ. ಗಾಂಧಿ ಧಾರವಾಹಿಯಿಂದ ಗಾಂಧಿ ಬದುಕಿನಿಂದ ಪ್ರೇರಿತನಾಗಿ ವೈಚಾರಿಕ
ತಾತ್ವಿಕ ಗೊಂದಲಗಳಿಗೆ ಒಳಗಾಗುವ ಆನಂದ ರಾಯರಿಗೆ ಇಳಿಗಾಲದ ಸಂಗಾತಿಯಾಗಿ ಖ್ಯಾತ ನಟಿ ಸುಶೀಲ (ಜಯಂತಿ)
ಜೊತೆಗಾತಿಯಾಗುತ್ತಾರೆ, ರಾಯರ ಮನೆಯಲ್ಲಿ ಮತ್ತಷ್ಟು ಜಗಳಗಳಿಗೂ ಈ ಸಂಬಂಧ ಕಾರಣಕರ್ತವಾಗುತ್ತದೆ. ಹಿಂದೂ
ಮುಸ್ಲಿಂ ಭಾವೈಕ್ಯತೆಗಾಗಿ ಹೋರಾಡಿದ ಗಾಂಧಿ ಅದರಲ್ಲಿ ವೈಫಲ್ಯ ಕಂಡಿದ್ದೇ ಹೆಚ್ಚು. ತನ್ನ ಗುರು ಮೊಹಮದ್
ಗೌಸ್ ಸಾಹೇಬರ ಮಗ ಇಕ್ಬಾಲ್ ನಿಂದ ಗೋಡ್ಸೆ ಪಾತ್ರ ಮಾಡಿಸುವಲ್ಲಿ ನಿರ್ದೇಶಕನನ್ನು ಒಪ್ಪಿಸಿದ ಮೇಲೂ
ಆನಂದ್ ರಾವ್ ವಿಫಲರಾಗುತ್ತಾರೆ. ಗೋಡ್ಸೆ ಪಾತ್ರಧಾರಿ ಮುಸ್ಲಿಂ ಎಂಬುದೇ ಅನೇಕ ಜಟಿಲತೆಗಳನ್ನು ಸೃಷ್ಟಿಸಲಾರಂಭಿಸುತ್ತದೆ!
ಕಾಲ “ಮುಂದುವರಿದಂತೆ” ಧರ್ಮ ಜಾತಿಯ ಗೋಡೆಯೊಳಗೆ ಬಂಧಿತನಾಗುತ್ತಿರುವ ಮನುಷ್ಯ ಸ್ವಭಾವವನ್ನು ಚಿತ್ರಿಸುತ್ತದೆ.
ಚಿತ್ರದ ಕೊನೆಗೆ ಹಣದ ವ್ಯವಹಾರದಲ್ಲಿ ಸಿಲುಕಿದ ಮಗ ಜೈಲು ಸೇರುತ್ತಾನೆ. ಆತ ಹೊರಗೆ ಬರಲು ಲಂಚ ಕೊಡಬೇಕು.
ಆನಂದ ರಾಯರ ನಿರ್ಧಾರ?!
ಚಿತ್ರದ ಹೆಸರಿನ ಕಾರಣದಿಂದಲೋ ಏನೋ ನಿರ್ದೇಶಕರು ಚಿತ್ರದಲ್ಲಿ ಆಮೆಯೊಂದನ್ನು
ಬಳಸಿದ್ದಾರಾದರೂ ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆಂದೇ ಹೇಳಬಹುದು. ಅಲ್ಲಲ್ಲಿ
ಕೆಲವು ದೃಶ್ಯಗಳು ಚಿತ್ರದ ಉದ್ದಿಶ್ಯಕ್ಕೆ ಅನವಶ್ಯಕ ಎಂದೆನ್ನಿಸುತ್ತಾದರೂ ಒಟ್ಟಾರೆಯಾಗಿ ಚಿತ್ರ ತನ್ನ
ಸಂದೇಶವನ್ನು ಪ್ರೇಕ್ಷಕನಿಗೆ ದಾಟಿಸುವಲ್ಲಿ ಯಶ ಕಾಣುತ್ತದೆ. ಆನಂದ ರಾಯರ ಪಾತ್ರಧಾರಿ ಶಿಕಾರಿಪುರ
ಕೃಷ್ಣಮೂರ್ತಿ, ಮಗನಾಗಿ ಚಸ್ವಾ ನೀನಾಸಂ ಉಳಿದೆಲ್ಲರ ಅಭಿನಯವನ್ನು ಮೀರಿಸಿ ಗಮನ ಸೆಳೆಯುತ್ತಾರೆ. ಗಾಂಧಿ
ಬಗೆಗಿನ ಚಿತ್ರ ಕೊನೆಯಲ್ಲೊಂದಷ್ಟು ಗೊಂದಲಗಳನ್ನು ಮೂಡಿಸಿ ಚಿತ್ರಮಂದಿರದಿಂದ ಹೊರನಡೆಯುವಂತೆ ಮಾಡುತ್ತದೆ.
ಗಾಂಧಿ ಬಗೆಗೂ ನಮಗಿಷ್ಟೇ ಗೊಂದಲಗಳಿವೆಯಲ್ಲವೇ?!
ಹಿಂಗ್ಯಾಕೆ?!
ಕೆಲವು ವಾರದ ಹಿಂದೆ ಪಿ ಶೇಷಾದ್ರಿಯವರ ‘ಭಾರತ್ ಸ್ಟೋರ್ಸ್’ ಬಿಡುಗಡೆಗೊಂಡಿತ್ತು.
ಮಲ್ಟಿ ನ್ಯಾಷನಲ್ ಕಂಪೆನಿಗಳ ದೊಡ್ಡ ಮಳಿಗೆಗಳು ಸಣ್ಣ ಕಿರಾಣಿ ಅಂಗಡಿಯನ್ನು ಬಲಿ ತೆಗೆದುಕೊಳ್ಳುವ
ಕಥೆಯ ಸಿನಿಮಾ ಬಿಡುಗಡೆಗೊಂಡಿದ್ದು ಬೃಹತ್ ಬೆಂಗಳೂರಿನ ಅತ್ಯಾಧುನಿಕ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ!
ಗಿರೀಶ್ ಕಾಸರವಳ್ಳಿ ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕರೆಂದು ಪತ್ರಿಕೆಗಳಲ್ಲಿ
ಓದಿದ್ದೆನಾದರೂ ಅದರ ಅರಿವಾಗಿದ್ದು ‘ಕೂರ್ಮಾವತಾರ’ ನೋಡಿದಾಗ! ನಾನು ನೋಡಿದ ಅವರ ಮೊದಲ ಸಿನಿಮಾವಿದು!
ಕಾರಣ! ಇತ್ತೀಚೆಗಷ್ಟೇ ನಾನು ಬೆಂಗಳೂರಿಗೆ ಬಂದಿರುವುದು! ಮೊದಲಿದ್ದ ಯಾವ ಊರಿನಲ್ಲೂ ಈ ರೀತಿಯ ಚಿತ್ರಗಳು
ಬಿಡುಗಡೆಯಾಗುವುದೇ ಇಲ್ಲ!
ಇವರು ತೆಗೆಯುವ ಇಂಥ ಪರಿಣಾಮಕಾರಿ ಚಿತ್ರಗಳು ಬೆಂಗಳೂರಿಗರಿಗೆ ಮಾತ್ರ ಸೀಮಿತವೇ?
ಇಂಥ ಸಿನಿಮಾಗಳನ್ನು ನೋಡುವವರ ಸಂಖ್ಯೆ ಕಡಿಮೆ ಎಂಬುದು ಸತ್ಯ[ಸೋಮವಾರ ಸಂಜೆಯ ಆಟಕ್ಕೆ ಇದ್ದಿದ್ದು
ಇಪ್ಪತ್ತೈದು ಜನರಷ್ಟೇ] ಆದರೂ ಇಂಥ ಚಿತ್ರಗಳನ್ನು ನೋಡುವ ಆಸಕ್ತಿಯುಳ್ಳವರು ರಾಜ್ಯದಾದ್ಯಂತ ಇದ್ದಾರೆ
ಎಂಬುದೂ ಸತ್ಯ. ಥಿಯೇಟರುಗಳಲ್ಲಿ ಬಿಡುಗಡೆ ಮಾಡುವುದು ನಷ್ಟದ ಬಾಬತ್ತಾದರೆ ಅನ್ಯಮಾರ್ಗವನ್ನೇನಾದರೂ
ಯೋಜಿಸಬೇಕಲ್ಲವೇ? ಸಿ.ಡಿಯ ರೂಪದಲ್ಲೂ ಬೆಂಗಳೂರಿನ ಹೊರಗೆ ಸಿಗುವುದು ಕಷ್ಟ. ವಿದೇಶಿ ಭಾಷೆಯ ಇಂಥ ಚಿತ್ರಗಳು
ಕೊನೆ ಪಕ್ಷ ‘ಟೊರೆಂಟಿನಲ್ಲಿ’ ಸಿಕ್ಕುತ್ತದೆ! ಕಾಪಿರೈಟನ್ನು ಮರೆತು ಡೌನ್ ಲೋಡ್ ಮಾಡಿ ವೀಕ್ಷಿಸಬಹುದು!
ಯಾರಿಗೂ ತಲುಪಲಾಗದೇ ಹೋಗುವುದಕ್ಕಿಂತಾ ಈ ಪೈರಸಿಯೇ ಒಳ್ಳೆಯದಾ?!!
ಕೂರ್ಮಾವತಾರ ಡಿವಿಡಿ ದೊರೆಯುತ್ತದೆ
ReplyDeleteElli sigatte?
ReplyDelete