Apr 5, 2013

ದಶಕದ ಇರಾಕ್ ಯುದ್ಧ


                                           
ಡಾ ಅಶೋಕ್ ಕೆ ಆರ್

ಮಾರ್ಚ್ 20 2013 ಯುದ್ಧವಾರಂಭಿಸಿ ದಶಕವಾಯಿತು ಮತ್ತು “ಅಧಿಕೃತ”ವಾಗಿ ಈ ಯುದ್ಧವನ್ನು ಅಂತ್ಯಗೊಳಿಸಿ ಹೆಚ್ಚು ಕಡಿಮೆ ಒಂದು ವರುಷವಾಗುತ್ತ ಬಂದಿದೆ. ಯುದ್ಧದಲ್ಲಿ ಗೆಲುವು ಕಂಡಿದ್ಯಾರು? ಸೋತವರ್ಯಾರು? ಯುದ್ಧವಾರಂಭಿಸಲು ಕೊಟ್ಟ ನೆಪಗಳಲ್ಲಿ ಸತ್ವವಿತ್ತೇ? ದೇಶವೊಂದರ ಮೇಲೆ ಯುದ್ಧ ಸಾರುವ ಮುನ್ನ ಜಗತ್ತಿನೆದುರಿಗಿಟ್ಟ ಆರೋಪಗಳಲ್ಲಿ ಒಂದಾದರೂ ಸತ್ಯವಿತ್ತೇ? ಅಧಿಕಾರದ ಕೇಂದ್ರಬಿಂದುವಿನಲ್ಲಿರುವ ವ್ಯಕ್ತಿಯನ್ನು ಬದಲಿಸಿದಕ್ಕಾಗಿ ಯುದ್ಧ ಗೆದ್ದ ಭ್ರಮೆಯಲ್ಲಿರುವವರನ್ನು ಅಭಿನಂದಿಸಬೇಕಾ ಅಥವಾ ಜನಸಾಮಾನ್ಯರ ಜೀವನವನ್ನು ಮತ್ತಷ್ಟು ದುರ್ಬರಗೊಳಿಸಿದಕ್ಕಾಗಿ ಈ ಯುದ್ಧ ನಿರ್ಮಾಪಕ ನಿರ್ವಾಹಕರ ಮೇಲೆ ದೋಷಾರೋಪ ಮಾಡಬೇಕಾ? 


ಇರಾಕಿನ ಮೇಲೆ 2003ರಲ್ಲಿ ಯುದ್ಧ ಸಾರಲು ಅಮೆರಿಕಾ ಮತ್ತದರ ಮಿತ್ರಪಕ್ಷಗಳಿಗೆ ಇದ್ದ ನೆಪ ಇರಾಕಿನಲ್ಲಿರುವ ಸಮೂಹ ನಾಶಪಡಿಸುವ ಶಸ್ತ್ರಾಸ್ತ್ರಗಳು. ನಿಜಕ್ಕೂ ಇರಾಕಿನಲ್ಲಿ ಆ ಶಸ್ತ್ರಗಳಿದ್ದವೆ? ಯು.ಎನ್ ನ ಬೆದರಿಕೆ ಒತ್ತಡಗಳಿಗೆ ಮಣಿದ ಸದ್ದಾಂ ಹುಸೇನನ ಆಡಳಿತ ಯು.ಎನ್ ತಂಡವನ್ನು ಇರಾಕಿನಲ್ಲಿರುವ ಶಸ್ತ್ರಾಸ್ತ್ರಗಳ ಪರಿಶೀಲನೆಗೆ ಒಪ್ಪಿಕೊಳ್ಳುತ್ತದೆ. ಶಸ್ತ್ರಗಳ ಸಂಗ್ರಹವನ್ನು ಕಂಡ ಯು.ಎನ್ ತಂಡಕ್ಕೆ ಒಂದು ದೇಶದ ಸಂರಕ್ಷಣೆಗೆ ಬೇಕಾದ ಶಸ್ತ್ರಗಳನ್ನು ಹೊರತುಪಡಿಸಿ ಅನ್ಯದೇಶದ ಸಮೂಹವನ್ನು ನಾಶಪಡಿಸಲು ಶಕ್ತವಾದ ಭಯಾನಕ ಶಸ್ತ್ರಾಸ್ತ್ರಗಳು ಒಂದೂ ಕಣ್ಣಿಗೆ ಬೀಳುವುದಿಲ್ಲ. ಆಗ ಜಾರ್ಜ್ ಬುಷ್ ಅಮೆರಿಕಾದ ಅಧ್ಯಕ್ಷರಾಗಿದ್ದರು, ಇರಾಕಿನ ಮೇಲೆ ದಾಳಿ ನಡೆಸಲು ಸಂಪೂರ್ಣ ಸಿದ್ಧವಾಗಿದ್ದ ಬುಷ್ ಆಡಳಿತ ಯು.ಎನ್ ವರದಿಯ ನಂತರವೂ ಯುದ್ಧನೀತಿಯಿಂದ ಹಿಂದೆ ಸರಿಯಲಿಲ್ಲ. ‘ಎಲ್ಲವನ್ನೂ ಪರೀಕ್ಷಿಸಿದೆವಾದರೂ ಕೆಲವೊಂದು ಜಾಗಗಳ ಪರಿಶೀಲನೆ ಸಾಧ್ಯವಾಗಲಿಲ್ಲ’ ಎಂದಿದ್ದ ಯು.ಎನ್ ವರದಿಯ ಭಾಗವನ್ನೇ ಮುಖ್ಯವಾಗಿಸಿಕೊಂಡು ಇರಾಕಿನ ಮೇಲೆ ಯುದ್ಧ ಸಾರಲು ನಿರ್ಧರಿಸಿತು. ಇದೊಂದೇ ನೆಪ ಸಾಲುವುದಿಲ್ಲವೆನಿಸಿತೋ ಏನೋ ಮತ್ತಷ್ಟು ಕಾರಣಗಳನ್ನೂ ಹೆಸರಿಸಿತು. ಸರ್ವಾಧಿಕಾರಿ ಸದ್ದಾಂನನ್ನು ಕೆಳಗಿಳಿಸಿ “ಪ್ರಜಾಪ್ರಭುತ್ವ” ಇರಾಕನ್ನು ಕಾಣುವ ‘ಆಸೆ’, ಆಲ್ ಖೈದಾ ಸಂಘಟನೆಗೆ ಪರೋಕ್ಷವಾಗಿ ಸದ್ದಾಂ ಸಹಾಯ ಮಾಡುತ್ತಿದ್ದಾನೆನ್ನುವ ಆರೋಪ ಮತ್ತು ಇರಾಕಿನಲ್ಲಿ ತನ್ನ ಆಡಳಿತದ ವಿರುದ್ಧ ನಿಂತವರ ಮೇಲೆ ಸದ್ದಾಂ ನಡೆಸುತ್ತಿರುವ ದಬ್ಬಾಳಿಕೆ, ಹಿಂಸೆ.

ಸದ್ದಾಂ ಹುಸೇನ್! ಅಮೆರಿಕಾದ ಪ್ರಕಾರ ಹಿಟ್ಲರನ ನಂತರ ಜಗತ್ತು ಕಂಡ ಭೀಕರ ಸರ್ವಾಧಿಕಾರಿ! ಸುನ್ನಿ ಸಮುದಾಯಕ್ಕೆ ಸೇರಿದ ಸದ್ದಾಂನಲ್ಲಿ ಧರ್ಮ ಮೂಲಭೂತವಾದಿಗಳು ಮತ್ತು ಸೆಕ್ಯುಲರ್ ಗಳು ಸಮಾನವಾಗಿ ಇಷ್ಟಪಡುವ ಮತ್ತು ದ್ವೇಷಿಸುವ ಗುಣಗಳಿದ್ದವು. ಇರಾಕಿನಲ್ಲಿ ಶಿಯಾ ಮುಸ್ಲಿಮರ ಜನಸಂಖೈ ಹೆಚ್ಚು, ಆದರೆ ಅಧಿಕಾರದ ಮುಖ್ಯಸ್ಥಳದಲ್ಲಿದ್ದ ವ್ಯಕ್ತಿ ಸುನ್ನಿ ಮುಸ್ಲಿಂ. ಇದಿಷ್ಟೇ ಆಗಿದ್ದರೆ ಸೆಕ್ಯುಲರ್ ಸದ್ದಾಂ ಜಾತ್ಯತೀತ ಧರ್ಮಾತೀತ ರಾಷ್ಟ್ರ ಕಟ್ಟಿದ ಜನನಾಯಕನಾಗಿ ಪ್ರಖ್ಯಾತನಾಗುತ್ತಿದ್ದ. ಆದರೆ ಜಾತ್ಯತೀತನೆನಿಸಿಕೊಂಡ ಸದ್ದಾಂಗೆ ಶಿಯಾ ಮುಸ್ಲಿಮರ ಮೇಲೆ ಅಗಾಧ ದ್ವೇಷ. ತನ್ನ ದೇಶವಾಸಿಗಳೇ ಆದರೂ ಶಿಯಾ ಪ್ರಾಬಲ್ಯದ ಇರಾನನ್ನು ಬೆಂಬಲಿಸುವ ಜನ ಎಂಬ ಅಪನಂಬುಗೆ [ಭಾರತದ ಮುಸ್ಲಿಮರನ್ನು ಧರ್ಮದ ಕಾರಣದಿಂದ ಅನುಮಾನದಿಂದ ನೋಡುವ ಮನಸ್ಸುಗಳ ಹಾಗೆ!]. ತನ್ನದೇ ದೇಶದ ಜನರನ್ನು ಕೊಲ್ಲಿಸುತ್ತಿದ್ದ, ಅವರನ್ನು ಕೊಲ್ಲಲು ರಾಸಯನಿಕಗಳನ್ನೂ ಉಪಯೋಗಿಸಿದ್ದಾನೆ ಎಂಬುದು ಆರೋಪ. ಶಿಯಾ ಇರಾನಿನ ಮೇಲೆ, ಪಕ್ಕದ ಮತ್ತೊಂದು ಮುಸ್ಲಿಂ ಬಹುಸಂಖ್ಯಾತರ ರಾಷ್ಟ್ರವೇ ಆದ ಕುವೈತಿನ ಮೇಲೆ ಯುದ್ಧ ಸಾರಿದಾಗ ಇತರೆ ಮುಸ್ಲಿಂ ದೇಶಗಳ ಮತ್ತು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ವಿರೋಧ ಕಟ್ಟಿಕೊಂಡ ಸದ್ದಾಂ. ತೈಲೋತ್ಪಾದನೆಯಿಂದ ಆದಾಯ ಪಡೆಯುತ್ತಿದ್ದ ಇರಾಕನ್ನು ಮುಸ್ಲಿಂ ದೇಶಗಳು ಮತ್ತು ಮೂಲಭೂತವಾದಿ ಸಂಘಟನೆಗಳು ಬೆಂಬಲಿಸುತ್ತಿದ್ದುದಕ್ಕೆ ಮೂಲ ಕಾರಣ ಸದ್ದಾಂ ಹುಸೇನನ ಅಮೆರಿಕಾವನ್ನು ವಿರೋಧಿಸುತ್ತಿದ್ದುದು. ಶತ್ರುವಿನ ಶತ್ರು ಮಿತ್ರನೆಂಬ ಏಕೈಕ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿಗಳಿಂದ ಸದ್ದಾಮನಿಗೆ ಬೆಂಬಲ ದೊರೆಯುತ್ತಿತ್ತಷ್ಟೇ ಹೊರತು ಧರ್ಮಾಂದನಲ್ಲದ ಜಾತ್ಯತೀತ ಸಮಾಜದ ಕನಸು ಕಂಡಿದ್ದ ಸದ್ದಾಮನ ಬಗ್ಗೆ ದ್ವೇಷವೇ ಇತ್ತು. ಈ ದ್ವೇಷಕ್ಕೆ ಕಾಶ್ಮೀರದ ವಿಷಯದಲ್ಲಿ ಭಾರತವನ್ನು ಬೆಂಬಲಿಸಿದ ಸದ್ದಾಮನ ನಿರ್ಧಾರವೂ ಕಾರಣವಾಗಿತ್ತೆನ್ನುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಮುಸ್ಲಿಂ ಮೂಲಭೂತವಾದವನ್ನು ವಿರೋಧಿಸಿದ ಸದ್ದಾಂ ಹುಸೇನ್ ಇವತ್ತು ಅದೇ ಮೂಲಭೂತವಾದಿಗಳ ಹುಟ್ಟಿಗೆ ಕಾರಣವಾಗುತ್ತಿರುವುದು, ಅಮೆರಿಕಾದ ವಿರುದ್ಧ ಪರೋಕ್ಷ ಯುದ್ಧ ಸಾರಲು ಮತಾಂಧ ಸಂಸ್ಥೆಗಳಿಗೆ ಸ್ಪೂರ್ತಿಯಾಗುತ್ತಿರುವುದು ವಿಪರ್ಯಾಸವೇ ಸರಿ. ಇದಕ್ಕೆ ಕಾರಣ? ಇರಾಕಿನ ಮೇಲೆ ಯುದ್ಧ ಸಾರಿದ ಅಮೆರಿಕಾ ಮತ್ತದರ ಮಿತ್ರ ರಾಷ್ಟ್ರಗಳು!

ಇರಾಕಿನಲ್ಲಿ ಪ್ರಪಂಚವನ್ನೇ ನಾಶಪಡಿಸುವಂತಹ ಸಮೂಹ ನಾಶಕ ಶಸ್ತ್ರಾಸ್ತ್ರಗಳಿವೆ ಎಂಬ ಸಂಗತಿಯನ್ನು ವ್ಯವಸ್ಥಿತವಾಗಿ ಹರಡುವಲ್ಲಿ ಅಮೆರಿಕಾ ಸಫಲವಾಯಿತು. ಯು.ಎನ್ ತಂಡದ ವರದಿ ಅಮೆರಿಕ ಹಬ್ಬಿಸಿದ ಸಂಗತಿಗೆ ವಿರೋಧವಾಗಿದ್ದರೂ ಅಮೆರಿಕಾ ತನ್ನ ಯುದ್ಧ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಜಾರ್ಜ್ ಬುಷ್ ನೇತೃತ್ವದ ಅಮೆರಿಕಾ ಇರಾಕಿನ ಮೇಲೆ ದಾಳಿ ಮಾಡಲು ಮತ್ತಷ್ಟು ಕಾರಣಗಳನ್ನು ತೋರಿಸಿತು. ಸದ್ದಾಂ ಹುಸೇನನ ಆಡಳಿತದಲ್ಲಿನ ಕ್ರೌರ್ಯ, ಸದ್ದಾಮನ ಸರ್ವಾಧಿಕಾರತನ, ಶಿಯಾಗಳ ಮೇಲಿನ ಹಿಂಸೆ ಅಮೆರಿಕಾ ಕೊಟ್ಟ ಕೆಲವು ಕಾರಣಗಳು. “ಪ್ರಜಾಪ್ರಭುತ್ವ” ರಾಷ್ಟ್ರವಾದ ಅಮೆರಿಕಾ ಯಾವುದೇ ದೇಶದ ಮೇಲೆ ಯುದ್ಧ ಸಾರಲು ಮತ್ತೊಂದು ಕಾರಣ ‘ಆ ದೇಶದಲ್ಲಿ ಸರ್ವಾಧಿಕಾರತನವಿದೆ, ಮೂಲಭೂತವಾದವಿದೆ. ಪ್ರಜಾಪ್ರಭುತ್ವದ ಸ್ಥಾಪನೆಗೆ ನೆರವು ನೀಡುವುದಷ್ಟೇ ನಮ್ಮ ಉದ್ದೇಶ’ ಎಂಬ ಕಾರಣವನ್ನು ಅಮೆರಿಕ ವಿಯೆಟ್ನಾಮ್ ಯುದ್ಧದಿಂದ ಹಿಡಿದು ಇರಾಕಿನ ಯುದ್ಧದವರೆಗೂ ನೀಡುತ್ತಲೇ ಬಂದಿದೆ. ಲಿಬಿಯಾದಲ್ಲಿ ಅಂತರ್ಯುದ್ಧ ನಡೆದಾಗ ಪ್ರತಿಭಟನಕಾರರಿಗೆ ಬೆಂಬಲ ನೀಡುವಾಗಲೂ ಅಮೆರಿಕಾ ಇದೇ ಕಾರಣವನ್ನು ನೀಡಿದೆ. ಆಲ್ ಖೈದಾದೊಡನೆ ಸದ್ದಾಂ ಹುಸೇನನಿಗಿದ್ದ ಸಂಬಂಧವನ್ನು ಉಲ್ಲೇಖಿಸಿ ಯುದ್ಧ ಅನಿವಾರ್ಯವೆಂಬ ಭಾವ ಮೂಡಿಸುವಲ್ಲಿಯೂ ಅಮೆರಿಕ ಸಫಲವಾಗಿತ್ತು. 9/11ರ ದಾಳಿಯಿಂದ ಜರ್ಜರಿತವಾಗಿದ್ದ ಅಮೆರಿಕ ಅದಾಗಲೇ ಉಗ್ರಗಾಮಿಗಳನ್ನು ಹತ್ತಿಕ್ಕುವ ಸಲುವಾಗಿ ಅಫಘಾನಿಸ್ತಾನದ ಮೇಲೆ ಯುದ್ಧ ಸಾರಿ ಎರಡು ವರುಷಗಳಾಗಿದ್ದವು. ಅಲ್ ಖೈದಾದ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ನನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿತ್ತು. ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಾದ ಪ್ರಕಾರ ಇರಾಕ್, ಇರಾನ್ ಮತ್ತು ಉತ್ತರ ಕೊರಿಯಾ ಮುಂಚೂಣಿಯಲ್ಲಿತ್ತು. ಮೂರು ರಾಷ್ಟ್ರಗಳಲ್ಲಿ ಒಂದರ ಮೇಲೆ ಯುದ್ಧ ಸಾರಲು ಹಾತೊರೆಯುತ್ತಿದ್ದ ಅಮೆರಿಕಾಗೆ ಮೂರರಲ್ಲಿ ಕೊಂಚ ದುರ್ಬಲ ರಾಷ್ಟ್ರದಂತೆ ಕಂಡಿದ್ದು ಇರಾಕ್. ಇದ್ದಕ್ಕಿದ್ದಂತೆ ಭಯೋತ್ಪಾದನೆಯ ವಿರುದ್ಧದ ಯುದ್ಧ ಇರಾಕ್ ಯುದ್ಧವಾಗಿ ಮಾರ್ಪಟ್ಟಿತು.

ಅಮೆರಿಕಾದ ಆರೋಪದಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು?!

ಸದ್ದಾಂ ಹುಸೇನ್ ಸರ್ವಾಧಿಕಾರಿ ಎಂಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಆತನ ಆಡಳಿತದಲ್ಲಿ ಶಿಯಾ ಮುಸ್ಲಿಮರ ಮೇಲೆ ದೌರ್ಜನ್ಯಗಳಾಗುತ್ತಿದ್ದುದೂ ಸುಳ್ಳಲ್ಲ. ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಅಮೆರಿಕಾ ಇಂದಿಗೂ ನಡೆಸುತ್ತಿರುವ ದಬ್ಬಾಳಿಕೆ ಅತ್ಯಾಚಾರವನ್ನು ನೋಡಿದರೆ ಸದ್ದಾಮನೇ ಅಮೆರಿಕಾಕ್ಕಿಂತ ವಾಸಿವೆನ್ನಿಸುವುದರಲ್ಲಿ ಸಂದೇಹವಿಲ್ಲ! ಇನ್ನು ಸದ್ದಾಂ ಹುಸೇನನಿಗೆ ಆಲ್ ಖೈದಾದ ಜೊತೆ ಸಂಬಂಧವಿರಲಿಲ್ಲ ಎಂದು ವಿವಿಧ ತನಿಖಾ ಸಂಸ್ಥೆಗಳೇ ಹೇಳಿವೆ. ಪ್ರಜಾಪ್ರಭುತ್ವದ ಸ್ಥಾಪನೆ ದೇಶವಾಸಿಗಳಿಂದಲೇ ನಡೆಯಬೇಕೆ ಹೊರತು ಇನ್ನೊಂದು ದೇಶ ನಡೆಸುವ ಯುದ್ಧದಿಂದಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಕಮ್ಯುನಿಷ್ಟ್ ವಿಯೆಟ್ನಾಮಿನ ಮೇಲೆ ದಾಳಿ ನಡೆಸಿದ ಅಮೆರಿಕಾ ಪುಟ್ಟ ರಾಷ್ಟ್ರದ ಕೈಲಿ ಮರೆಯಲಾಗದ ಸೋಲು ಕಂಡರೂ ಪಾಠ ಕಲಿಯಲಿಲ್ಲ. ಹೋಗಲಿ ಈಗಲಾದರೂ ಇರಾಕಿನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿದೆಯಾ ಅಲ್ಲಿ ನೆಮ್ಮದಿಯ ಜೀವನವಿದೆಯಾ ಎಂದು ನೋಡಿದರೆ ನಿರಾಸೆಯಾಗುತ್ತದೆ. ಇರಾಕ್ ಯುದ್ಧಕ್ಕೆ ಬಹುಮುಖ್ಯ ಕಾರಣವಾದ ಸಮೂಹ ನಾಶಕ ಶಸ್ತ್ರಾಸ್ತ್ರಗಳ ಇರುವಿಕೆಯನ್ನು ಪತ್ತೆ ಹಚ್ಚುವುದು ಅಮೆರಿಕಾದ ಪ್ರಕಾರ ಯುದ್ಧದಿಂದಷ್ಟೇ ಸಾಧ್ಯವಾಗುವಂತದ್ದು. ಸದ್ದಾಮನಿಗೆ ಕೊನೆಯ ಬಾರಿಗೆ ಶರಣಾಗುವಂತೆ ಎಚ್ಚರಿಕೆ ನೀಡಲಾಯಿತು. ಸದ್ದಾಂ ನಿರಾಕರಿಸಿದ. ಮಾರ್ಚ್ 20 2003ರಲ್ಲಿ ಯಾವುದೇ ಮುನ್ಸೂಚನೆ ನೀಡದೆ ಇರಾಕಿನ ಮೇಲೆ ಯುದ್ಧವಾರಂಭಿಸಿತು ಜಾರ್ಜ್ ಬುಷ್ ನೇತೃತ್ವದ ಅಮೆರಿಕಾ ಸರ್ಕಾರ ತನ್ನ ಕೆಲವು ಮಿತ್ರದೇಶಗಳ ಸಹಕಾರದೊಂದಿಗೆ. ಸದ್ದಾಂ ಹುಸೇನನನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಸಫಲವಾದ ಅಮೆರಿಕಾ ಮೂರು ಯುದ್ಧವಾರಂಭಿಸಿದ ಮೂರು ವರುಷಗಳ ತರುವಾಯ ಸದ್ದಾಮನನ್ನು ಬಂಧಿಸುವಲ್ಲಿಯೂ ಯಶ ಪಡೆಯಿತು. 1982ರಲ್ಲಿ 148 ಶಿಯಾ ಮುಸ್ಲಿಮರನ್ನು ಹತ್ಯೆಗೈದ ಆರೋಪದ ಮೇಲೆ ಸದ್ದಾಂ ಹುಸೇನನಿಗೆ ಇರಾಕಿನ ನ್ಯಾಯಾಲಯ ಮರಣದಂಡನೆ ವಿಧಿಸಿತು. ಡಿಸೆಂಬರ್ ಮೂವತ್ತು 2006ರಂದು ಸದ್ದಾಮನನ್ನು ಗಲ್ಲಿಗೇರಿಸಲಾಯಿತು. ಸುನ್ನಿ ಇರಾಕಿಗಳು ಈದ್-ಅಲ್-ಅದಾ ಆಚರಿಸುವ ದಿನದಂದೇ ಸುನ್ನಿ ಮುಸ್ಲಿಮನಾಗಿದ್ದ ಸದ್ದಾಂ ಹುಸೇನನ್ನು ಗಲ್ಲಿಗೇರಿಸಿದ ನಿರ್ಧಾರ ಆಕಸ್ಮಿಕವಿರಲಾರದು. ಸದ್ದಾಮನ ಪದಚ್ಯುತಿ ಮಾಡಿ ಸರ್ವಾಧಿಕಾರಿಗೆ ಶಿಕ್ಷೆ ವಿಧಿಸಬಯಸಿದ ಅಮೆರಿಕಾದ ಕನಸು ಈಡೇರಿತು. ಆದರೆ ಸಮೂಹ ನಾಶಕ ಶಸ್ತ್ರಾಸ್ತ್ರಗಳು? ಇಲ್ಲಿಯವರೆಗೂ ಅಮೆರಿಕಾಕ್ಕೆ ಒಂದೇ ಒಂದು ಸಮೂಹ ನಾಶಕ ಶಸ್ತ್ರಾಸ್ತ್ರವನ್ನು ಪತ್ತೆ ಹಚ್ಚಿ ಜಗತ್ತಿಗೆ ತೋರಿಸಲು ಸಾಧ್ಯವಾಗಿಲ್ಲ! ಬಹುಶಃ ಸಮೂಹ ನಾಶಕ ಶಸ್ತ್ರಾಸ್ತ್ರವೆಂಬುದು ಅಮೆರಿಕಾ ಸೃಷ್ಟಿಸಿದ ಭೀತಿಯಷ್ಟೇ! ನಿಜವಾದ ಯುದ್ಧದ ಕಾರಣ ತೈಲ ರಾಷ್ಟ್ರಗಳ ಮೇಲೆ ನಿಯಂತ್ರಣ ಸಾಧಿಸಬಯಸುವ ಅಮೆರಿಕಾದ ಹಂಬಲವೇ ಹೊರತು ಪ್ರಜಾಪ್ರಭುತ್ವದ ಸ್ಥಾಪನೆಯೂ ಅಲ್ಲ, ಸಮೂಹ ನಾಶಕಗಳೂ ಅಲ್ಲ, ಭಯೋತ್ಪಾದನೆಯ ಯುದ್ಧವೂ ಅಲ್ಲ.

ಇರಾಕ್ ದೇಶ ಸದ್ದಾಮನ ಆಡಳಿತಾವಧಿಯಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿತ್ತು ಎಂಬ ಅಮೆರಿಕಾದ ವಾದವನ್ನೇ ಕೆಲ ಕ್ಷಣಗಳ ಮಟ್ಟಿಗೆ ನಂಬೋಣ. ಸದ್ದಾಂ ಹುಸೇನನ ಪತನದ ನಂತರ, ಅಮೆರಿಕ ಇರಾಕಿನಲ್ಲಿ ಸ್ಥಾಪಿಸಿದ ಪ್ರಜಾಪ್ರಭುತ್ವ ಸರಕಾರ ಬಂದ ಮೇಲೆ ಭಯೋತ್ಪಾದಕತನ ಕಡಿಮೆಯಾಗಿದೆಯಾ? ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ನಿರಾಸೆಯಾಗುತ್ತದೆ. ಜಗತ್ತಿನ ಅತಿದೊಡ್ಡ ಭಯೋತ್ಪಾದಕ ಅಮೆರಿಕ ಎಂಬುದರ ಅರಿವೂ ಆಗುತ್ತದೆ. ತನ್ನೆಲ್ಲ ಸರ್ವಾಧಿಕಾರತನದ ನಡುವೆಯೂ ಜಾತ್ಯತೀತನೆನಿಸಿಕೊಂಡಿದ್ದ [ಶಿಯಾ ಇರಾಕಿಗಳ ಮೇಲೆ ವಿನಾಕಾರಣದ ದೌರ್ಜನ್ಯ ನಡೆಸಿದ ಸದ್ದಾಮನನ್ನು ಜಾತ್ಯತೀತನೆನ್ನುವುದು ಎಷ್ಟರ ಮಟ್ಟಿಗೆ ಸರಿ? ಮುಸ್ಲಿಂ ಮೂಲಭೂತವಾದಿಯಾಗಿರಲಿಲ್ಲವೆಂಬ ಒಂದೇ ಕಾರಣಕ್ಕೆ ಸದ್ದಾಮನ್ನು ಜಾತ್ಯತೀತನೆನ್ನಬಹುದೇ?] ಸದ್ದಾಂ ಮುಸ್ಲಿಂ ಮೂಲಭೂತವಾದಿಗಳಿಗೆ ಅಪ್ರಿಯ ಮಿತ್ರನಾಗಿದ್ದ. ಅದೇ ಸದ್ದಾಂ ಅಮೆರಿಕ ನಡೆಸಿದ ಯುದ್ಧದಲ್ಲಿ ಬಂಧಿತನಾಗಿ ಮರಣದಂಡನೆಗೆ ಗುರಿಯಾಗಿ ಸಾವನಪ್ಪಿದ ನಂತರ ಹುತಾತ್ಮನಾಗಿಬಿಟ್ಟ. ಮೂಲಭೂತವಾದಿಗಳಿಗೆ ಬೆಂಬಲ ನೀಡದ ಕಾರಣಕ್ಕೆ ಸದ್ದಾಮನನ್ನು ದ್ವೇಷಿಸುತ್ತಿದ್ದ ಭಯೋತ್ಪಾದಕ ಸಂಘಟನೆಗಳೇ ಈಗ ಸದ್ದಾಮನ ಗಲ್ಲುಶಿಕ್ಷೆಯನ್ನು ಮುಸ್ಲಿಂ ರಾಷ್ಟ್ರಗಳಲ್ಲಿ ಅಮೆರಿಕ ವಿರೋಧಿ ಭಾವನೆಯನ್ನು ಮತ್ತಷ್ಟು ಹೆಚ್ಚಿಸಲು ಬಯಸಿದವು. ಕೊನೆಯ ದಿನಗಳಲ್ಲಿ ಕುರಾನಿನ ಮೊರೆ ಹೋದ ಸದ್ದಾಮನ ನಡವಳಿಕೆ ಕೂಡ ಮತ್ತಷ್ಟು ಯುವಕರನ್ನು ಉಗ್ರಗಾಮಿಗಳಾಗಿ ರೂಪಿಸುವುದಕ್ಕೆ ಭಯೋತ್ಪಾದಕ ಸಂಘಟನೆಗಳಿಗೆ ನೆರವಾಗಿರುವುದು ಇವತ್ತಿಗೂ ನೆರವಾಗುತ್ತಿರುವುದು ಸುಳ್ಳಲ್ಲ. 

ಸದ್ದಾಮನ ಸರ್ವಾಧಿಕಾರಿ ಆಡಳಿತವೇನೋ ಅಂತ್ಯವಾಯಿತು. ಆದರೆ ಇರಾಕಿನ ಯುದ್ಧದಲ್ಲಿ ಜಯ ಗಳಿಸಿದ್ಯಾರು? ಅಮೆರಿಕ ಮತ್ತು ಇರಾಕಿನ ಮೇಲೆ ಪ್ರತ್ಯಕ್ಷವಾಗಿ ಜಗತ್ತಿನ ಮೇಲೆ ಪರೋಕ್ಷವಾಗಿ ಈ ಇರಾಕ್ ಯುದ್ಧ ಬೀರಿದ ಪರಿಣಾಮವೇನು? ಇರಾಕಿನಲ್ಲಿ ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು “ಆಶಿಸಿದ” ಶಾಂತಿ ನೆಲೆಸಿದೆಯಾ? ಜಾರ್ಜ್ ಬುಷ್ ನೇತೃತ್ವದ ಅಮೆರಿಕ ಸರ್ಕಾರ ಇರಾಕ್ ಯುದ್ಧವಾರಂಭಿಸಿದಾಗ ಇದು ಕೆಲವು ತಿಂಗಳುಗಳ ಕಾರ್ಯಾಚರಣೆಯಷ್ಟೇ ಎಂಬ ಭಾವನೆಯಲ್ಲಿದ್ದ ಅಮೆರಿಕಾದ ಜನತೆ ಸರ್ವಾಧಿಕಾರಿಯ ಪತನವಾಗಿ ಪ್ರಜಾಪ್ರಭುತ್ವದ ಸ್ಥಾಪನೆಗೆ ನೆರವಾಗುತವ ನೆಪದ ಯುದ್ಧಕ್ಕೆ ಅಭೂತಪೂರ್ವ ಬೆಂಬಲ ನೀಡಿದರು. ಯಾವಾಗ ಇರಾಕಿನಲ್ಲಿ ಯಾವುದೇ ಸಮೂಹ ನಾಶಕ ಶಸ್ತ್ರಾಸ್ತ್ರಗಳು ಸಿಗಲಿಲ್ಲವೋ ಅಮೆರಿಕದಲ್ಲಿ ಅಸಹನೆ ಆರಂಭವಾಯಿತು. ಜೊತೆಗೆ ಇರಾಕಿನ ಯುದ್ಧ ಕೆಲವೇ ತಿಂಗಳುಗಳಲ್ಲಿ ಮುಗಿಯುವ ಯುದ್ಧವೂ ಆಗಿರಲಿಲ್ಲ. ನಾಲ್ಕು ಸಾವಿರಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಯುದ್ಧದಲ್ಲಿ ಮಡಿದರು. ಮೂವತ್ತು ಸಾವಿರಕ್ಕೂ ಅಧಿಕ ಸೈನಿಕರು ಗಾಯಾಳುಗಳಾಗಿ ಅಂಗವಿಹೀನರಾಗಿ ಹಿಂದಿರುಗಿದರು. ಯುದ್ಧ ಹುಟ್ಟಿಸಿದ ನೋವುಗಳನ್ನು ಯುದ್ಧದ ನಿರರ್ಥಕತೆಯನ್ನು ನಿಧಾನವಾಗಿ ಅರಿಯಲಾರಂಭಿಸಿದ ಅಮೆರಿಕಾದ ಜನತೆಗೆ ವಿಯೆಟ್ನಾಂ ಯುದ್ಧದ ನೆನಪು ಮರುಕಳಿಸಿ ಅಘಾತವಾಗಿದ್ದರೆ ಅಚ್ಚರಿಯಿಲ್ಲ. ಕಾಲ ಮೀರಿತ್ತು. ಸಂಪೂರ್ಣ ಅರಾಜಕತೆಯಲ್ಲಿ ಇರಾಕನ್ನು ತೊರೆದು ಬಂದರೆ ಜಾಗತಿಕವಾಗಿ ಅವಮಾನ. ಯುದ್ಧವನ್ನು ಮುಂದುವರೆಸಲು ತನ್ನದೇ ನಾಗರೀಕರ ವಿರೋಧ, ಯುದ್ಧಕ್ಕೆ ಆಗುತ್ತಿರುವ ಅಪಾರ ವೆಚ್ಚ ಏರುಪೇರುಗೊಳಿಸುತ್ತಿರುವ ಆರ್ಥಿಕತೆ, ಸದ್ದಾಂ ಹುಸೇನನ್ನು ಬಂಧಿಸಿ ಯುದ್ಧ ಗೆದ್ದ ಖುಷಿಯಲ್ಲಿ ಬೀಗುತ್ತಿದ್ದ ಅಮೆರಿಕಾಗೀಗ ಸೋತ ಅನುಭವ. ಇರಾಕಿನಿಂದ ಸೈನಿಕರನ್ನು ವಾಪಸ್ಸು ಪಡೆಯುವುದಾಗಿ ಘೋಷಿಸಿದ್ದ ಬರಾಕ್ ಒಬಾಮ ಅಧಿಕಾರಕ್ಕೆ ಬಂದೊಡನೆಯೇ ಅದನ್ನು ಮಾಡಲಾಗಲಿಲ್ಲವಾದರೂ ಹಂತಹಂತವಾಗಿ ಸೈನಿಕರನ್ನು ವಾಪಸ್ಸು ಕರೆಸಿಕೊಂಡು 2011ರ ಡಿಸೆಂಬರಿನಲ್ಲಿ ಅಧಿಕೃತವಾಗಿ ಯುದ್ಧ ಅಂತ್ಯವಾಗಿರುವುದಾಗಿ ಘೋಷಿಸಿತು. ಯುದ್ಧ ನಿಜಕ್ಕೂ ಅಂತ್ಯವಾಗಿದೆಯಾ?

ಯುದ್ಧದ ನೆಪದಲ್ಲಿ ಭಯೋತ್ಪಾದಕರ ಅಂತ್ಯದ ನೆಪದಲ್ಲಿ 2003ರಿಂದ ಸತ್ತ ಇರಾಕಿಗಳ ಸಂಖೈ ಒಂದು ಲಕ್ಷಕ್ಕೂ ಅಧಿಕ. ಕೆಲವು ಸ್ವತಂತ್ರ್ಯ ತನಿಖಾ ಸಂಸ್ಥೆಗಳ ಪ್ರಕಾರ ಸತ್ತವರು ಇನ್ನೂ ಅಧಿಕ. ನಿಖರವಾದ ಮಾಹಿತಿ ಹೊರಬಂದಿಲ್ಲ ಬರುವುದೂ ಇಲ್ಲ. ಬಹುಶಃ ಸದ್ದಾಮನ ಸಂಪೂರ್ಣ ಆಡಳಿತಾವಧಿಯಲ್ಲು ಇಷ್ಟು ಹತ್ಯೆಯಾಗಿರಲಿಕ್ಕಿಲ್ಲ! ಸತ್ತವರಲ್ಲಿ ಭಯೋತ್ಪಾದಕರೆಷ್ಟು? ಸಾಮಾನ್ಯ ನಾಗರೀಕರೆಷ್ಟು? ಉತ್ತರ ನಿರೀಕ್ಷಿತವೇ ಅಲ್ಲವೇ, ಉಗ್ರಗಾಮಿಗಳ ಹತ್ಯೆಯ ನೆಪದಲ್ಲಿ ಸತ್ತವರಲ್ಲಿ ಬಹುತೇಕರು ಸಾಮಾನ್ಯ ಜನರೇ. ಸದ್ದಾಮಿನ ಪತನದ ನಂತರ ಭಯೋತ್ಪಾದಕ ದಾಳಿಗಳೂ ಹೆಚ್ಚಾಗಿವೆ. ಕಾರ್ ಬಾಂಬ್ ಸ್ಪೋಟವೆಂಬುದು ಇರಾಕಿನ ದಿನನಿತ್ಯ ಘಟನೆಯಾಗಿಹೋಗಿದೆ. ಇರಾಕಿನ ಯುದ್ಧ ಅಧಿಕೃತವಾಗಿ ಅಂತ್ಯವಾಗಿದ್ದರೂ ಇರಾಕಿ ಜನರ ಹತ್ಯೆ ನಿಂತಿಲ್ಲ. ಮುಸ್ಲಿಂ ಮೂಲಭೂತವಾದಿಗಳು ಪ್ರಾಬಲ್ಯ ಪಡೆಯುತ್ತಿರುವ ಇರಾಕಿನಲ್ಲಿ ಈ ಹತ್ಯೆಗಳು ಸದ್ಯಕ್ಕೆ ನಿಲ್ಲುವ ಸೂಚನೆಗಳೂ ಇಲ್ಲ. ಈ ಹಿಂಸಾಚಾರಕ್ಕೆ ಕಾರಣಕರ್ತರಾರು? ಸದ್ದಾಮನೇ? ಇರಾಕಿನ ತೈಲವೇ? ಮುಸ್ಲಿಂ ಮೂಲಭೂತವಾದಿ ಸಂಘಟನೆಗಳೇ? ಅಥವಾ ಪ್ರಜಾಪ್ರಭುತ್ವದ ಹೆಸರಿನಲ್ಲಿ ತನ್ನದೇ ದುರಾಸೆಭರಿತ ಉದ್ದೇಶಗಳಿಗಾಗಿ ಭಯೋತ್ಪಾದನೆಯನ್ನು ನಿಯಂತ್ರಿಸುವ ಹೆಸರಿನಲ್ಲಿ ಉಗ್ರಗಾಮಿತನವನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತಿರುವ ಅಮೆರಿಕಾ ಕಾರಣವೇ?
article that was first published in PRAJASAMARA

No comments:

Post a Comment