Dec 26, 2012

ಆದರ್ಶವೇ ಬೆನ್ನು ಹತ್ತಿ....ಭಾಗ 13



ಡಾ ಅಶೋಕ್ ಕೆ ಆರ್

ಕಾಂತರಾಜ್ ಸರ್ ಹೇಳಿದಂತೆ ನಡೆದುಕೊಂಡರು. ಪ್ರಿನ್ಸಿಪಾಲರು, ಇತರೆ ಸಿಬ್ಬಂದಿಗಳು ಎಷ್ಟು ಹೇಳಿದರೂ ಕೇಳಲಿಲ್ಲ. ‘ನಾನಿದನ್ನು ಮುಂಚೆಯೇ ನಿರ್ಧರಿಸಿದ್ದೆ. ಇದೇನು ಆತುರದ ತೀರ್ಮಾನವಲ್ಲ’ ಎಂದ್ಹೇಳಿ ರಾಜೀನಾಮೆ ಕೊಟ್ಟುಬಿಟ್ಟರು. ಕಾಲೇಜಿನ ಪರವಾಗಿ ಅವರಿಗೊಂದು ಬೀಳ್ಗೊಡುಗೆ ಸಮಾರಂಭ ಇಟ್ಟುಕೊಳ್ಳಬೇಕೆಂಬ ವಿದ್ಯಾರ್ಥಿಗಳ ಆಸೆಗೂ ಬೇಡವೆಂದುಬಿಟ್ಟರು. ರಾಜೇಶ್ ಮತ್ತು ಎಂ.ಎಸ್.ಎ ಮೇಲೆ ದೂರೂ ನೀಡಲಿಲ್ಲ, ರೇಗಲೂ ಇಲ್ಲ, ಅನ್ಯರ ಬಳಿ ಕೆಟ್ಟಮಾತುಗಳನ್ನೂ ಆಡಲಿಲ್ಲ. ನಿಜಕ್ಕೂ ಈ ವ್ಯಕ್ತಿಗೆ ಹುಚ್ಚಿರಬೇಕೆಂಬ ಅನುಮಾನ ಎಲ್ಲರಿಗೂ ಬಂತು! ಒಬ್ಬ ಕಾಂತರಾಜರ ಹೊರತಾಗಿ!


ಕಾಲೇಜಿನಿಂದ ಹೊರಡುವ ಮೊದಲು ಕಾಂತರಾಜ್ ಲೋಕಿಯನ್ನು ಭೇಟಿಯಾಗಿದ್ದರು. “ನಿನ್ನಂಥ ಯುವಕರು ನಮ್ಮ ದೇಶಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕತೆಯಿದೆ ಲೋಕೇಶ್. ಬಿ ಎ ಓದಿ ಮುಗಿಯುತ್ತಿದ್ದಂತೆ ಬಂದು ನನ್ನನ್ನು ಕಾಣು. ಅಷ್ಟರೊಳಗೆ ನನ್ನ ಪತ್ರಿಕೆಯೂ ಶುರುವಾಗಿರುತ್ತೆ. ಒಂದಷ್ಟು ದಿನ ಅದ್ರಲ್ಲಿ ಕೆಲಸ ಮಾಡುವಿಯಂತೆ”

“ಖಂಡಿತ ಸರ್. ದಿನಪತ್ರಿಕೆ ಶುರು ಮಾಡ್ತಿದ್ದೀರ ಸರ್?”

“ದಿನಪತ್ರಿಕೆ ಮಾಡುವಷ್ಟು ಸದ್ಯಕ್ಕೆ ದುಡ್ಡಿಲ್ಲ ಲೋಕೇಶ್. ವಾರಪತ್ರಿಕೆ ಆರಂಭಿಸುತ್ತಿದ್ದೀನಿ”

“ಹೆಸರು ಸರ್”

“ಸಧನ್ಯಾ”

“ಸಧನ್ಯಾ??!”

“ಸತ್ಯ ಧರ್ಮ ನ್ಯಾಯ ಅಂತ”

“ಒಳ್ಳೆ ಹೆಸರು ಸರ್” ಸಯ್ಯದ್ ನ ವಿಷಯ ಹೇಳಲಾ ಬೇಡವಾ ಎಂದು ಯೋಚಿಸಿ ಕೊನೆಗೆ ಸುಮ್ಮನಾಗಿ ಹೋದರು ಕಾಂತರಾಜ್. ಸಯ್ಯದ್ ಹಿಂದಿನ ರಾತ್ರಿ ಕಾಂತರಾಜ್ ರನ್ನು ಭೇಟಿಯಾಗಿ ನಡೆದದ್ದನ್ನೆಲ್ಲಾ ವಿವರಿಸಿ ಕ್ಷಮೆ ಕೇಳಿದ್ದನು.

“ಸತ್ಯವನ್ನು ಮರೆಮಾಚಿ ತಪ್ಪು ಮಾಡಿದ್ದೀಯ ಅನ್ನೋದಂತೂ ನಿಜ. ‘ತಪ್ಪು ಮಾಡಿಬಿಟ್ಟಿದ್ದೀನಿ ಕ್ಷಮಿಸಿ’ ಅನ್ನೋ ನೇರವಂತಿಕೆ ತೋರಿಸುತ್ತಿದ್ದೀಯಲ್ಲ ಅಷ್ಟು ಸಾಕು ಬಿಡು” ಎಂದಾತನಿಗೆ ಸಮಾಧಾನ ಮಾಡಿ ಕಳಿಸಿದ್ದರು.
* * *

ಕಾಲೇಜಿನಲ್ಲಿ ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದಾಗ ಲೋಕಿಯ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಿದ್ದ ನಾಲ್ಕು ಕಣ್ಣುಗಳನ್ನು ಗುರುತಿಸುವುದು ಚಾಣಾಕ್ಷ್ಯ ಇನ್ಸ್ ಪೆಕ್ಟರ್ ವಿಕ್ರಮನಿಗೂ ಸಾಧ್ಯವಾಗಲಿಲ್ಲ.

ಆ ನಾಲ್ಕು ಕಣ್ಣುಗಳನ್ನು ಕಳುಹಿಸಿದ್ದು ಗೃಂಥಾಲಯದಲ್ಲಿ ಅವತ್ತು ಲೋಕೇಶ್ ನೋಡಿದ್ದ ‘ಹುಚ್ಚ’
* * *

‘ನಿಜಕ್ಕೂ ನಾನು ಅಷ್ಟೊಂದು ದೊಡ್ಡ ತಪ್ಪು ಮಾಡಿಬಿಟ್ಟೆನಾ?’ ಅನ್ನೋ ಅನುಮಾನ ಬಂದಿತ್ತು ಸಯ್ಯದ್ ನಿಗೆ. ‘ಯುದ್ಧ ಮತ್ತು ಪ್ರೀತಿಯಲ್ಲಿ ಏನು ಮಾಡಿದರೂ ನಡೆಯುತ್ತೆ ಅಂತಾರೆ, ಅಂತಹದ್ರಲ್ಲಿ ನಾನು ನನಗೆ ಗೊತ್ತಿದ್ದ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ ಅಷ್ಟೇ, ಅಷ್ಟೇನಾ? ಅಕಸ್ಮಾತ್ ಫಾತಿಮಾ ನಿಜ ತಿಳಿಸದೆ ಇದ್ದರೆ ಕಾಂತರಾಜ್ ಸರ್ ಗೆ ಶಿಕ್ಷೆಯಾಗುತ್ತಿತ್ತಲ್ವಾ? ಹೀಗ್ಯಾಕೆ ಅದೆಲ್ಲಾ? ಕಾಂತರಾಜ್ ಸರ್ ಕೂಡ ನನ್ನನ್ನು ಕ್ಷಮಿಸಿಬಿಟ್ಟರು. ಪತ್ರಿಕೆಗೆ ಬರುವಂತೆ ಆಹ್ವಾನವನ್ನೂ ನೀಡಿದರು. ಇನ್ನು ಲೋಕಿ ಕ್ಷಮಿಸದೆ ಇರುತ್ತಾನಾ? ಯಾಕೋ ಆತ ಅಂದು ಮಾತನಾಡಿದ ರೀತಿ ನೋಡಿದರೆ ಕ್ಷಮಿಸುವ ಹಾಗೆ ಕಾಣ್ತಾ ಇಲ್ಲ. ಛೇ! ಅನ್ಯಾಯವಾಗಿ ಒಬ್ಬ ಒಳ್ಳೆ ಸ್ನೇಹಿತನನ್ನು ಕಳೆದುಕೊಂಡುಬೆಟ್ಟೆನಲ್ಲಾ. ನಾಳಿ ನಾನೇ ಹೋಗಿ ಮಾತನಾಡಿಸ್ತೀನಿ, ಆಗಲೂ ಪ್ರತಿಕ್ರಿಯಿಸದಿದ್ದರೆ.....’ರೆ’ ಅಂತೆಲ್ಲಾ ಯಾಕೆ ನಾನೇ ಊಹೆ ಮಾಡಬೇಕು. ನಾಳೆ ಏನಾಗುತ್ತೋ ನೋಡೋಣ. ನಾನು ಸತ್ಯ ಮರೆಮಾಚಿದೆ ಅನ್ನೋ ಕಾರಣಕ್ಕೆ ಆತ ನನ್ನ ಮೇಲೆ ಕೋಪಗೊಂಡಿದ್ದ, ಅದರಲ್ಲಿ ಅರ್ಥವಿದೆ. ಆದರೆ ರೂಪ ಇಷ್ಟಪಟ್ಟಿರೋದು ನಿನ್ನ ಶ್ರೀಮಂತಿಕೆಯನ್ನೇ ಹೊರತು ನಿನ್ನ ಆದರ್ಶಗಳನ್ನಲ್ಲ, ಆಕೆ ನಿನ್ನನ್ನು ಮದುವೆಯಾಗೋದು ಅನುಮಾನ ಅಂತ ಯಾಕೆ ಹೇಳಿದ? ನನಗೆ ತಿಳಿಯದ್ದೇನೋ ಇವನಿಗೆ ತಿಳಿದಿದೆಯಾ? ಮೊದಲು ಈ ವಿಷಯದ ಬಗ್ಗೆ ಕೇಳಬೇಕು’ ಎಂದುಕೊಂಡ ಸಯ್ಯದ್.

ಸಯ್ಯದನ ನಿರೀಕ್ಷೆ ಹುಸಿಯಾಗಲಿಲ್ಲ. ಲೋಕಿ ಅವನ ಬಳಿ ಮಾತನಾಡಲಿಲ್ಲ. ‘ಲೋಕಿ ಲೋಕಿ’ ಎಂದು ಕೂಗಿ ಕರೆದರೂ ಕೇಳಿಸದವನಂತೆ ಹೊರಟುಹೋಗಿದ್ದ.

ಕಾಲೇಜಿನಲ್ಲಿ ಇಷ್ಟೆಲ್ಲಾ ರಂಪಾಟಗಳಾದ ನಂತರ ಖುಷಿಯಾಗಿತ್ತು ಲೋಕಿಗೆ. ತನ್ನನ್ನು ಕಾಲೇಜಿನಲ್ಲಿ ಎಲ್ಲಾ ತರಗತಿಯವರೂ ಗುರುತಿಸುತ್ತಾರೆ ಎಂಬುದೊಂದು ಕಾರಣವಾದರೆ ಮುಖ್ಯ ಕಾರಣ ಈ ಗೊಂದಲಗಳ ನಡುವೆ ಪೂರ್ಣಿ ಪರಿಚಿತಳಾಗಿದ್ದು. ತಂಗಿ ಸ್ನೇಹಳನ್ನು ಬಿಟ್ಟು ಇನ್ಯಾವ ಹುಡುಗಿಯ ಜೊತೆಯೂ ಬೆರೆಯದವನು ಈಗ ಪೂರ್ಣಿಯೊಡನೆ ಮಾತನಾಡಲಾರಂಭಿಸಿದ್ದ.

ಪೂರ್ಣಿಮಾ ಒಂದು ಸಂಜೆ ಸಿಂಚನಾಳನ್ನು ಲೋಕಿಗೆ ಪರಿಚಯ ಮಾಡಿಸಿದಳು. ಮುದ್ದು ಮುಖದ ಸಿಂಚನಾಳನ್ನು ಲೋಕಿ ಒಂದಷ್ಟು ಮೆಚ್ಚುಗೆಯಿಂದ ನೋಡುತ್ತಿದ್ದುದನ್ನು ಗಮನಿಸಿದ ಪೂರ್ಣಿಗೆ ಸಣ್ಣ ಈರ್ಷ್ಯೆ! ಅವಳ ಕಣ್ಣಲ್ಲಿದ್ದ ಅಸೂಯೆಯನ್ನು ಗುರುತಿಸಿದವಳಂತೆ ಸಿಂಚನಾ “ಏನು ಲೋಕೇಶ್ ಯಾವ ಹುಡುಗಿ ಜೊತೆಗೂ ಹೆಚ್ಚು .... ಹೆಚ್ಚೇನು ಕಡಿಮೆಯೂ ಮಾತನಾಡದವನು ಪೂರ್ಣಿ ಜೊತೆ ವಿಪರೀತ ಮಾತನಾಡುತ್ತೀಯಂತಲ್ಲ! ಏನು ಸಮಾಚಾರ?” ಎಂದು ಕೇಳಿದಳು.

“ಅದೂ. . . ಅದೂ. . .” ಎಂದು ಲೋಕಿ ಪದಗಳಿಗೆ ತಡಕುತ್ತಿದ್ದರೆ ಪೂರ್ಣಿ ಅವನೆಡೆಗೆ ಮೆಚ್ಚುಗೆಯ ಕಣ್ಗಂಳಿಂದ ನೋಡುತ್ತಿದ್ದಳು. ಕಾಲೇಜಿನ ವಿಷಯ ಹರಟುತ್ತಿದ್ದಾಗ ಸಿಂಚನಾಳ ಮೊಬೈಲ್ ಟ್ರಿನ್ ಗುಟ್ಟಿತು. ಅತ್ತಕಡೆಯಿಂದ ಗೌತಮ್ ಫೋನ್ ಮಾಡಿದ್ದ. “ಸರಿ ನೀನಲ್ಲೇ ಇರು. ನಾನು ಬರ್ತಾ ಇದ್ದೀನಿ” ಎಂದ್ಹೇಳಿ “ಪೂರ್ಣಿ ನನಗೆ ಸ್ವಲ್ಪ ಕೆಲಸ ಇದೆ. ನಾನು ಹೋಗಿರ್ತೀನಿ” ಎಂದಳು.

“ಹೂ. ಹೋಗು ಹೋಗು. ಗೌತಮ್ ಫೋನ್ ಮಾಡಿ ಕರೆದಿರಬೇಕು” ಎಂದು ಕೊಂಚ ವ್ಯಂಗ್ಯವಾಗಿ ಹೇಳಿ ಕಣ್ಣು ಮಿಟುಕಿಸಿ ನಕ್ಕಳು. ಅಷ್ಟರವರೆಗೆ ನಗುನಗುತ್ತಾ ಮಾತನಾಡುತ್ತಿದ್ದ ಸಿಂಚನಾ ಕೋಪದಿಂದ “ನಿನಗೆ ಎಷ್ಟು ಸಲ ಹೇಳಿದ್ದೀನಿ ಆ ಗೌತಮ್ ಮತ್ತು ನನ್ನ ಮಧ್ಯೆ ಏನೂ ಇಲ್ಲ ಅಂತ. ನಿನಗೇ ಗೊತ್ತು ನನ್ನ ವಿಷಯವೆಲ್ಲಾ ಅಂತಹದ್ರಲ್ಲಿ ಸುಮ್ಸುಮ್ನೆ ಯಾಕೆ ರೇಗಿಸ್ತೀಯೇ?” ಎಂದು ಹೇಳಿ ಪೂರ್ಣಿಮಾಳ ಪ್ರತಿಕ್ರಿಯೆಗೂ ಕಾಯದೆ ಹೊರಟು ಹೋದಳು.

“ಅಯ್ಯೋ ಅವಳು ಕೋಪ ಮಾಡಿಕೊಂಡು ಹೊರಟೇ ಹೋದಳಲ್ಲ?! ನೀನು ಕ್ಷಮೆ ಕೇಳೋದಕ್ಕಿಂತ ಮುಂಚೆಯೇ?”

“ಕ್ಷಮೇನಾ?? ಈ ಚಿಕ್ಕ ವಿಷಯಕ್ಕೆಲ್ಲಾ ಗೆಳೆತನದಲ್ಲಿ ಕ್ಷಮೆ ಕೇಳಬೇಕಾ?!”

ಲೋಕಿಗೆ ಸಯ್ಯದ್ ನ ನೆನಪಾಯಿತು. ‘ಪಾಪ. ಎಷ್ಟು ಬಾರಿ ಕ್ಷಮೆ ಕೇಳಿದ್ದ. ನಾನೇ ದೊಡ್ಡಸ್ತಿಕೆ ತೋರಿಸಿ ಮಾತನಾಡಲಿಲ್ಲ.

“ಗೌತಮ್ ಸಿಂಚನಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರಾ?”

“ಇಲ್ಲಪ್ಪಾ. ಗೌತಮ್ ಸಿಂಚನಾಳನ್ನು ಇಷ್ಟಪಡ್ತಿದ್ದಾನೆ ಅನ್ನೋ ಅನುಮಾನ ಇದೆ. ಆದರೆ ಅವನಾಗಿದ್ದವನೇ ಇನ್ನೂ ಹೇಳಿಲ್ಲ. ಅದೂ ಅಲ್ಲದೆ ಸಿಂಚನಾ ಗೌತಮ್ ಳನ್ನು ಪ್ರೀತಿಸೋದಿಕ್ಕೆ ಸಾಧ್ಯಾನೇ ಇಲ್ಲ ಬಿಡು” ಎಂದ್ಹೇಳಿ ‘ಯಾಕೆ ಸಾದ್ಯವಿಲ್ಲ ಅಂತ ಇವನು ಕೇಳ್ತಾನೆ ಆಮೇಲೆ ಎಲ್ಲ ವಿಷಯವನ್ನೂ ಹೇಳೋಣ’ ಎಂದುಕೊಂಡಳು.

“ಹೌದಾ” ಎಂದು ಸುಮ್ಮನಾದ ಲೋಕಿ. ‘ಸಿಂಚನಾಳ ವಿಷಯ ಹೇಳ್ತಾ ಇನ್ನೂ ಸ್ವಲ್ಪ ಹೊತ್ತು ಇವನ ಜೊತೆ ಕಾಲಕಳೆಯಬಹುದು’ ಎಂದು ನಿರೀಕ್ಷಿಸಿದ್ದ ಪೂರ್ಣಿಮಾಗೆ ನಿರಾಸೆಯಾಯಿತು. ‘ಸದ್ಯ! ಇವನಿಗೆ ಸಿಂಚಾಳೆಡೆಗೆ ಅಗತ್ಯಕ್ಕಿಂತ ಹೆಚ್ಚು ಆಸಕ್ತಿಯೂ ಇಲ್ಲವಲ್ಲ’ ಎಂದು ಸಮಾಧಾನವೂ ಆಯಿತು!
ಮುಂದುವರೆಯುವುದು.... 

No comments:

Post a Comment