Nov 15, 2012

ರಿಮೋಟಿಗಿಂದು ನಾನೇ ಒಡತಿ!

ಡಾ ಅಶೋಕ್ ಕೆ ಆರ್
ಇವರು ನಿನ್ನೆ ರಾತ್ರಿ ಚಿತ್ರದುರ್ಗಕ್ಕೆ ಹೊರಟರು, ಇವರ ಅಕ್ಕನ ಮಗಳಿಗೆ ಹೆರಿಗೆಯಾಗಿತ್ತು. ವಾರದಿಂದ ಬೆನ್ನು ನೋವು ನನಗೆ, ಮಗನೊಟ್ಟಿಗೆ ಇನ್ನೊಂದು ದಿನ ಹೋದರಾಯಿತೆಂದು ಸುಮ್ಮನಾಗಿದ್ದೆ. ಹಿರಿಮಗ ಹುಣಸೂರಿಗೆ ಸ್ನೇಹಿತನ ಮದುವೆಗೆಂದು ಇವತ್ತು ಬೆಳಿಗ್ಗೆ ಹೊರಟ. ಸೊಸೆ, ಮೊಮ್ಮಗಳು ಅವನೊಂದಿಗೆ ಹೋಗಿದ್ದಾರೆ. ಗೆಳೆಯರೆಲ್ಲಾ ಬಂದಿದ್ದಾರೆ ಅನ್ನೋ ನೆಪ ಮಾಡಿಕೊಂಡು ಬೆಳಗಿನ ಜಾವ ಐದು ಘಂಟೆಗೇ ಬೈಕನ್ನೇರಿ ಕಿರಿಯವನು ಗೋಪಾಲಸ್ವಾಮಿ ಬೆಟ್ಟಕ್ಕೆ ಹೋದ. ಎಂಟು ಘಂಟೆಯವರೆಗೆ ಪತ್ರಿಕೆ ತಿರುವಿ ಹಾಕಿ ಸ್ನಾನಕ್ಕೆ ಹೋದೆ. ಹಂಡೆಯಿಂದ ಬಕೇಟಿಗೆ ನೀರು ವರ್ಗಾಯಿಸುವುದರಲ್ಲಿ ‘ಸ್ನಾನ ಯಾಕೆ ಮಾಡಬೇಕಿವತ್ತು?’ ಎಂದೆನ್ನಿಸಿ ಕೈಕಾಲಿಗೊಂದು ಮುಖ ತೊಳೆಯಲೊಂದು ಚೊಂಬು ನೀರು ಖರ್ಚು ಮಾಡಿ ಉಳಿದದ್ದನ್ನು ಬಚ್ಚಲಿಗೆ ಚೆಲ್ಲಿ ಹೊರಬಂದೆ.


ದೇವರ ಪಟಕ್ಕೆ ಕೈಮುಗಿದು ದೀಪ ಹೊತ್ತಿಸಿ ತಿಂಡಿ ಮಾಡಲೊರಟವಳಿಗೆ ಅದೂ ಬೇಸರವೆನಿಸಿ ರಾತ್ರಿಯ ಅನ್ನಕ್ಕೆ ಉಪ್ಪುಮೆಣಸ್ಹಾಕಿಕೊಂಡು ಚಮಚದಷ್ಟು ತುಪ್ಪ ಸುರಿದುಕೊಂಡೆ. ಚಳಿಗಾಲ, ತಂಗಳನ್ನ, ಗಟ್ಟಿ ತುಪ್ಪ; ತುಪ್ಪವೆಲ್ಲಾ ಬೆರಳುಗಳಿಗೇ ಮೆತ್ತಿಕೊಂಡಿತು. ಬೆರಳುಗಳನ್ನು ನೆಕ್ಕುತ್ತ ಟಿ ವಿ ಮುಂದೆ ಕುಳಿತು ರಿಮೋಟಿಡಿದುಕೊಂಡರೆ ಮನದಲ್ಲಿ ಏನೋ ನಿರಾಳ ಭಾವ!

ಬೆಳಿಗ್ಗೆ ಏಳು ಘಂಟೆಗೆ ಕೇಬಲ್ ನವನು ಹಾಕುವ ಭಕ್ತಿಗೀತೆಗಳನ್ನು ನೋಡುತ್ತಿದ್ದಂತೆ ಕಿರಿಮಗ ಬಂದುಬಿಡುತ್ತಿದ್ದ, “ಷೇರುಪೇಟೆ ಹೇಗಿದೆ ಅಂತ ಬೆಳಗಿನ ಹೊತ್ತು ನೋಡಿದರೇ ತಿಳಿಯೋದು” ಎಂದ್ಹೇಳುತ್ತ ಅದ್ಯಾವುದೋ ಚಾನೆಲ್ ಹಾಕುತ್ತಿದ್ದ. ಅರ್ಧ ಪರದೆಯ ತುಂಬ ಅಂಕಿಸಂಖ್ಯೆಗಳೇ ಕಾಣುತ್ತಿದ್ದವು. ಇನ್ನು ಒಂಬತ್ತರವರೆಗೂ ರಿಮೋಟ್ ಅವನ ಕೈಯಲ್ಲೇ. ಹೊಸರುಚಿ ಬರುವ ಸಮಯದಲ್ಲಿ ಮಕ್ಕಳು ಸೊಸೆ ಕೆಲಸಕ್ಕೆ ಹೋಗಿರುತ್ತಿದ್ದರು, ಮೊಮ್ಮಗಳು ಶಾಲೆಗೆ. ಆದರೆ ಇವರಿಗೆ ನಿವೃತ್ತಿ ಆಗಿತ್ತಲ್ಲ; “ಗೊತ್ತಿರೋ ಅಡುಗೇನೇ ಮಾಡಲ್ಲ, ಇನ್ನು ಹೊಸದಾಗಿ ಏನ್ ಕಲೀತಿ ಬಿಡು” ಎಂದು ವ್ಯಂಗ್ಯ ಮಾಡುತ್ತ ರಿಮೋಟ್ ಕಸಿದು ಯಾವ್ಯಾವುದೋ ಚಿತ್ರಗೀತೆ ಹಾಕಿಕೊಳ್ಳುತ್ತಿದ್ದರು.

ಸಂಜೆ ಹಾಡೋ ಹಾಸ್ಯಾನೋ ನೋಡ್ತಿದ್ದರೆ ಮೊಮ್ಮಗಳು ಓಡಿಬಂದು ಕೈ ಕಾಲು ಒದರುತ್ತಾ “ಅಜ್ಜಿ…ಅಜ್ಜಿ…ಪೋಗೋ ಹಾಕಜ್ಜಿ….ಛೋಟಾ ಭೀಮ್ ಬರುತ್ತೆ ಹಾಕssss…ಜ್ಜಿ” ಗೋಗರೆಯುತ್ತಿದ್ದಳು. ದೊಡ್ಡವರಿಗೇ ಇಲ್ಲವೆನ್ನಲಿಲ್ಲ, ಇನ್ನು ಮಗೂಗೆ ಬೇಡ ಅನ್ನುತ್ತೀನಾ? ಮಗು ನಗುತ್ತಿದ್ದರೆ ನನಗೂ ಖುಷಿಯಲ್ಲವೇ? ಚಾನೆಲ್ ಬದಲಿಸುತ್ತಿದ್ದೆ. ರಾತ್ರಿ ಧಾರಾವಾಹಿ ಹಾಕಿದ್ದರೆ ಸೊಸೆಯ ಮಧ್ಯಪ್ರವೇಶ. “ಅದೇನಮ್ಮ ಯಾವಾಗಲೂ ಆ ಧಾರಾವಾಹಿ ಹಾಕ್ತೀರ. ಅವನ ಹೆಂಡತಿ ಜೊತೆ ಇವನು, ಇವನ ಹೆಂಡತಿ ಜೊತೆ ಇನ್ನೊಬ್ಬ. ಬರೀ extramarital affairsಉ. ನ್ಯೂಸ್ ನೋಡೋಣ ಇರಿ” ಎಂದ್ಹೇಳುತ್ತ ನನ್ನ ಉತ್ತರಕ್ಕೂ ಕಾಯದೆ ಚಾನೆಲ್ ಬದಲಾಯಿಸುತ್ತಿದ್ದಳು. ಧಾರವಾಹಿಯಲ್ಲಿ ಒಂದಿಬ್ಬರ ಅನೈತಿಕ ಸಂಬಂಧವಿದ್ದರೆ ರಾಜಕೀಯದಲ್ಲಿ ಪ್ರತಿಯೊಬ್ಬರದೂ ಅನೈತಿಕದಂತೆಯೇ ಕಾಣುತ್ತಿತ್ತು. ಪುಣ್ಯಕ್ಕೆ ದೊಡ್ಡ ಮಗನೊಬ್ಬನಿಗೆ ಟಿ ವಿ ಹುಚ್ಚಿಲ್ಲ. ಯಾವಾಗಲಾದ್ರೂ ಟಿವಿ ಮುಂದೆ ಕುಳಿತರೆ ಯಾರು ಏನು ಹಾಕಿರುತ್ತಾರೋ ಅದನ್ನೇ ಐದು ನಿಮಿಷ ನೋಡಿ ರೂಮು ಸೇರಿ ಪುಸ್ತಕ ಹಿಡಿಯುತ್ತಾನೆ.

ಆದರಿವತ್ತು!! ಅಬ್ಬ ರಿಮೋಟಿಗಿಂದು ನಾನೇ ಒಡತಿ!! ಇಷ್ಟ ಬಂದ ಚಾನೆಲ್ಲನ್ನು ಕಷ್ಟವಾದಷ್ಟು ಸಮಯ ನೋಡುತ್ತಾ ಕೂರಬಹುದು. ಯಾರ ಕಾಟವೂ ಇಲ್ಲ ಎಂದು ಸಂಭ್ರಮಪಡುತ್ತಾ ಟಿ ವಿ ಆನ್ ಮಾಡಿದಾಗ…….
photosource - deposit photos

1 comment:

  1. ಚೆನ್ನಾಗಿದೆ ಸರ್.. ಕಥೆಯನ್ನು ನೇಯುವಿಕೆಯಲ್ಲಿನ ತಾಜಾತನ ಓದುಗನನ್ನು ಹಿಡಿದಿಡುತ್ತದೆ.. ಬರಹ ಲಘು ಹಾಸ್ಯವೂ ಬೆರೆತಿರುವುದರಿಂದ ಓದುಗರಿಂದ ಓದಿಸಿಕೊಳ್ಳುತ್ತದೆ.. ಕಡೆಗೆ ಈಗಿನ ದೃಶ್ಯ ಮಾಧ್ಯಮದ ಅನಾಚಾರವನ್ನು ತೆರೆದಿಟ್ಟಿರುವಲ್ಲಿನ ಬರಹಗಾರನ ಸೂಕ್ಷ್ಮತೆ ಮೆಚ್ಚುಗೆಗೆ ಅರ್ಹ..

    ReplyDelete