ಡಾ
ಅಶೋಕ್ ಕೆ ಆರ್
ಜಮೀನ್ದಾರಿ ಪದ್ಧತಿಯ ವಿರುದ್ಧ, ಭೂರಹಿತರಿಗೆ ಭೂಮಿ ಹಂಚುವ ಪರವಾಗಿ ಪ್ರಾರಂಭವಾದ ನಕ್ಸಲ್ ಬರಿ ಹೋರಾಟ ಭಾರತದ ಚಳುವಳಿಗಳ ಇತಿಹಾಸದಲ್ಲಿ ಕ್ರಮಿಸಿರುವ ಹಾದಿ ದೊಡ್ಡದು, ವಿಸ್ತಾರವಾದುದು. ತನ್ನೊಳಗೇ ಕಾಲಕಾಲಕ್ಕೆ ನಡೆದ ಸೈದ್ಧಾಂತಿಕ ಸಂಘರ್ಷಗಳು, ಒಡಕುಗಳು, ಹಿಂಸಾತ್ಮಕ ಚಳುವಳಿಗಳ ಬಗ್ಗೆ ಮುಖ್ಯವಾಹಿನಿಯ ಬಹುತೇಕ ಜನರಲ್ಲಿರುವ ಭಯಭರಿತ ತಿರಸ್ಕಾರ, ಸಾವಿರಾರು ಕಾರ್ಯಕರ್ತರ – ಮುಖಂಡರ ಸಾವಿನ ನಂತರವೂ ನಕ್ಸಲ್ ಚಳುವಳಿ ಅಂತ್ಯ ಕಂಡಿಲ್ಲ. ನಕ್ಸಲೈಟ್, ಸಿಪಿಐ – ಎಂ.ಎಲ್, ಪೀಪಲ್ಸ್ ವಾರ್ ಗ್ರೂಪ್ ಮುಂತಾದ ಹೆಸರುಗಳಲ್ಲಿ ಚಲಾವಣೆಗೊಳ್ಳುತ್ತಲೇ ಇರುವ ಈ ಸಿದ್ಧಾಂತ ಹತ್ತನ್ನೆರಡು ವರುಷದ ಹಿಂದೆ ಸಣ್ಣ ಸಣ್ಣ ಸಂಘಟನೆಗಳ ವಿಲೀನದ ನಂತರ ಪಡೆದ ಹೆಸರು ಸಿಪಿಐ – ಮಾವೋವಾದಿ. ಪ್ರಧಾನಿ ಮನಮೋಹನಸಿಂಗ್ ಪದೇ ಪದೇ ಉಚ್ಛರಿಸಿರುವುದನ್ನು ಕೇಳಿರುವಿರಾದರೆ ಈ ಚಳುವಳಿ ಭಾರತದ ಅತಿದೊಡ್ಡ ಆಂತರಿಕ ಶತ್ರು. ಸಾವಿರಾರು ಪೋಲೀಸರು – ಅರೆಸೈನಿಕ ಪಡೆ, ಕೋಟ್ಯಾಂತರ ರುಪಾಯಿಯ ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ತಂತ್ರಜ್ಞಾನ, ಅಭಿವೃದ್ಧಿ – ವಿಕಾಸ ಹೊಂದಲು ನಮ್ಮೊಡನೆ ಕೈಜೋಡಿಸಿ ಎಂಬ ಸರಕಾರದ ಘೋಷಣೆಗಳ ನಡುವೆಯೂ ತನ್ನದೇ ಮಾರ್ಗದಲ್ಲಿ ದೇಶದ ವಿವಿಧ ರಾಜ್ಯ – ಜಿಲ್ಲೆಗಳಲ್ಲಿ ನಕ್ಸಲ್ ಚಳುವಳಿ ಬೆಳೆಯುತ್ತಲೇ ಸಾಗುತ್ತಿದೆ. ಕೆಲವೊಮ್ಮೆ ಅಬ್ಬರದಿಂದ, ಕೆಲವೊಮ್ಮೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನಕ್ಸಲ್ ಚಳುವಳಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮೂಡಿ ಬಂದ ಪರಿಣಾಮಕಾರಿ ಚಿತ್ರ ಪ್ರಕಾಶ್ ಝಾ ನಿರ್ದೇಶನದ “ಚಕ್ರವ್ಯೂಹ”.
ಸಂವಿಧಾನ ಕಾನೂನುಗಳನ್ನು ಪಾಲಿಸುವುದಷ್ಟೇ ಮುಖ್ಯವೆನ್ನುವ
ಆದಿಲ್ ಖಾನ್; ಆದಿಲ್ ಖಾನನ ನೆಚ್ಚಿನ ಮಡದಿಯಾಗಿ ನಿಷ್ಟಾವಂತ ಪೋಲೀಸ್ ಅಧಿಕಾರಿಣಿಯೂ ಆದ ರಿಯಾ; ಇವರಿಬ್ಬರ
ಗೆಳೆಯನಾಗಿ ವೈರುದ್ಯಗಳನ್ನೇ ಹೊತ್ತಿಕೊಂಡಿರುವ ಕಬೀರ್ ಖಾನ್ ಒಂದೆಡೆ. ಪ್ರೊಫೆಸರ್, ಕಾಮ್ರೇಡ್ ರಾಜನ್,
ಕಾಮ್ರೇಡ್ ಜೂಹಿ, ಕಾಮ್ರೇಡ್ ನಾಗ ಮತ್ತೊಂದೆಡೆ. ನಂದಿಘಾಟಿನಲ್ಲಿ ನಕ್ಸಲರ ದಾಳಿಯಿಂದ 84 ಪೋಲೀಸರು
ಹತರಾದಾಗ ನಂದಿಘಾಟ್ ಜಿಲ್ಲೆಗೆ ಎಸ್ ಪಿಯಾಗಿ ಆಗಮಿಸುತ್ತಾನೆ ಆದಿಲ್ ಖಾನ್. ಮಹಂತ ಸ್ಟೀಲ್ ಕಂಪನಿಯಿಂದಾಗಿ
ನಿರ್ವಸತಿಗರಾಗಬೇಕಾಗಿ ಬಂದ ಜನರ ಆಕ್ರೋಶ ನಕ್ಸಲ್ ಚಳುವಳಿಯ ಸಹಾಯಕ್ಕೆ ನಿಲ್ಲುತ್ತದೆ. ದಶಕಗಳಿಂದ
ತಮ್ಮಿರುವಿಕೆಯನ್ನೇ ಮರೆತು ಈಗ ಉದ್ಯಮ ಸ್ಥಾಪಿಸುವ ನೆಪದಲ್ಲಿ ತಮ್ಮನ್ನು ಹೊರದಬ್ಬಲು ಆಗಮಿಸಿರುವ
ಸರಕಾರಗಳ ಮೇಲಿನ ಅವಿಶ್ವಾಸ, ಪೋಲೀಸರೆಡೆಗಿನ ಭಯ ನಿವಾರಿಸುವಲ್ಲಿ ಆದಿಲ್ ಕಾರ್ಯಪ್ರವೃತ್ತನಾಗುತ್ತಾನದರೂ
ಯಶ ಕಾಣುವುದಿಲ್ಲ. ಊರಿನ ಜನರಿಗೆ ನಕ್ಸಲ್ ಮುಖಂಡರಾದ ಜೂಹಿ, ರಾಜನ್ ಮೇಲೇ ಹೆಚ್ಚು ನಂಬುಗೆ. ನಕ್ಸಲ್
ದಾಳಿಯಿಂದ ಗುಂಡೇಟು ತಿಂದ ಆದಿಲ್ ನನ್ನು ಕಾಣಲು ಬಂದ ಕಬೀರ್ ತಾನೇ ನಕ್ಸಲ್ ಸಂಘಟನೆಗೆ ಸೇರಿ ಅವರ
ಚಲನವಲನ, ಶಸ್ತ್ರಾಸ್ತ್ರಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡುವುದಾಗಿ ತಿಳಿಸುತ್ತಾನೆ. ಮನಸ್ಸಿಲ್ಲದಿದ್ದರೂ
ಬೇರೆ ಮಾರ್ಗ ಕಾಣದೆ ಕಬೀರನ ಮಾತುಗಳಿಗೆ ಒಪ್ಪುತ್ತಾನೆ ಆದಿಲ್. ನಕ್ಸಲರ ಮನಗೆದ್ದ ಕಬೀರ್ ನಿಯಮಿತವಾಗಿ
ಪೋಲೀಸರಿಗೆ ಮಾಹಿತಿ ನೀಡುತ್ತಾ ನಕ್ಸಲರ, ಆದಿವಾಸಿ ಮಕ್ಕಳ-ವೃದ್ಧರ ಸಾವಿಗೆ ಕಾರಣನಾಗುತ್ತಾನೆ. ಕೊನೆಗೆ
ರಾಜನ್ ನ ಬಂಧನಕ್ಕೂ ಪರೋಕ್ಷವಾಗಿ ಕಾರಣಕರ್ತನಾಗುತ್ತಾನೆ. ಇಷ್ಟೇ ಆಗಿಬಿಟ್ಟಿದ್ದರೆ ಚಿತ್ರ ಪೋಲೀಸರ
ಸಾಹಸ – ವ್ಯೂಹಗಳನ್ನು ತೋರಿಸುವುದರಲ್ಲೇ ಮುಗಿದುಬಿಡುತ್ತಿತ್ತೇನೋ?! ನಕ್ಸಲರ ನಡುವೆ ತಮ್ಮದೆಲ್ಲವನ್ನೂ
ಕಳೆದುಕೊಳ್ಳುವ ಭೀತಿಯಲ್ಲಿರುವ ಜನರ ನಡುವಿನ ಓಡಾಟದಿಂದ ಕಬೀರನಿಗೆ ಗೊಂದಲಗಳೇಳುತ್ತದೆ. ಸರಕಾರದ ಉದ್ಯಮ
ಪರ ನೀತಿಗಳಲ್ಲಿನ ಹುಳುಕುಗಳೇ ಈ ಚಳುವಳಿಯ ಬೆಳವಣಿಗೆಗೆ ಕಾರಣ ಎಂದರಿವಾಗುತ್ತದೆ. ಪೋಲೀಸರ ವಿನಾಕಾರಣ
ದೌರ್ಜನ್ಯದ ದರ್ಶನಗಳಾಗುತ್ತಿದ್ದಂತೆ ನಿಧಾನವಾಗಿ – ದೃಡವಾಗಿ ಕಬೀರ್ ಪೋಲೀಸ್ ಮಾಹಿತಿದಾರನಿಂದ ಕಾಮ್ರೇಡ್
ಆಜಾದ್ ಆಗಿ ಪರಿವರ್ತನೆಗೊಳ್ಳುತ್ತಾನೆ. ಮತ್ತೊಂದೆಡೆ ರಾಜಕಾರಣಿಗಳ ಉದ್ಯಮಿಗಳ ಅಪವಿತ್ರ ಮೈತ್ರಿಗಳ
ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಕಬೀರ್ ಖಾನನಾಗಿ ಅಭಿನಯಿಸಿರುವ ಅಭಯ್ ಡಿಯೋಲ್ ಉಳಿದೆಲ್ಲರಿಗಿಂತ
ಹೆಚ್ಚು ನೆನಪಲ್ಲಿ ಉಳಿಯುತ್ತಾರೆ.
ಚಿತ್ರ ವೀಕ್ಷಿಸುತ್ತಿದ್ದಂತೆ ವೇದಾಂತ ಕಂಪನಿ,
ಕೊಬಾದ್ ಗಾಂದಿ, ಕಿಶನ್ ಜೀ, ಆಜಾದ್, ನಂದಿಗ್ರಾಮ, ಸಲ್ವಾ ಜುಡುಂನ ನೈಜ ಘಟನೆಗಳು ಮನದಲ್ಲಿ ಸುಳಿಯದೇ
ಇರಲಾರದು. ನಕ್ಸಲರು ದೊಡ್ಡ ಸಂಖ್ಯೆಯಲ್ಲಿದ್ದರೂ ಗುಂಪಿನಲ್ಲಿ ಚಲಿಸದೆ ‘ಸಿಂಗಲ್ ಫೈಲಿನಲ್ಲಿ’ ನಡೆಯುವ
ವಿಧಾನವನ್ನು ಚಿತ್ರದ ಕೊನೆಯವರೆಗೂ ಉಳಿಸಿಕೊಂಡಿರುವುದು ನಿರ್ದೇಶಕರ ಅಧ್ಯಯನ ಪ್ರವೃತ್ತಿಗೆ ಸಾಕ್ಷಿ.
ಕೆಲವು ಸಿನಿಮೀಯ ರೀತಿಯ ಯುದ್ಧ ದೃಶ್ಯಗಳು, ಒಂದು ಐಟಂ ಹಾಡಿನ ಹೊರತಾಗಿ ಸಿನಿಮಾ ನೈಜವಾಗಿ ಮೂಡಿಬಂದಿದೆ.
ಭಾರತದ ಒಂದು ಸಾಮಾಜಿಕ ಚಳುವಳಿಯನ್ನು ಸಮರ್ಥವಾಗಿ ಬೆಳ್ಳಿತೆರೆಗೆ ಅಳವಡಿಸಿರುವ ಚಿತ್ರದಲ್ಲಿ ಈ ಅಂತರ್ಯುದ್ಧಕ್ಕೆ
ಪರಿಹಾರವೇನು ಎಂಬುದರ ಬಗ್ಗೆ ಎಲ್ಲೂ ಮಹತ್ತರವಾದ ಚರ್ಚೆ – ಸನ್ನಿವೇಶಗಳಿಲ್ಲ. ಚಕ್ರವ್ಯೂಹ ಮತ್ತು
ಅದರೊಳಗೆ ಬಲಿಯಾಗುವ ಅಭಿಮನ್ಯುಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತಲೇ ಸಾಗುವುದಾ? ಅಷ್ಟಕ್ಕೂ ಈ ಚಕ್ರವ್ಯೂಹ
ಕಟ್ಟಿದವರಾರು?!
No comments:
Post a Comment