ಡಾ ಅಶೋಕ್ ಕೆ ಆರ್
ಬೆಳಿಗ್ಗೆ ಎದ್ದ ಕೂಡಲೇ ಲೋಕಿಗೆ ಸಯ್ಯದನ ನೆನಪಾಯಿತು. ‘ನಿನ್ನೆ ನಡೆದ ವಿಷಯಗಳ್ಯಾವುದನ್ನೂ ಆತನಿಗೆ ತಿಳಿಸಲೇ ಇಲ್ಲವಲ್ಲ. ಕಾಂತರಾಜ್ ಸರ್ ನ ಅಮಾನತ್ತು ಮಾಡಿದ ದಿನ ಆತ ನನಗೋಸ್ಕರ ಕಾಲೇಜೆಲ್ಲ ಹುಡುಕಾಡಿದನಂತೆ. ಅಂತಹದ್ರಲ್ಲಿ ನಿನ್ನೆ ನಾನು ಅವನಿಗೆ ಒಂದು ಮಾತೂ ತಿಳಿಸಲಿಲ್ಲವಲ್ಲ. ಪೂರ್ಣಿಯೊಡನೆ ಮಾತನಾಡಿದ ಖುಷಿಯಲ್ಲಿ ಸಯ್ಯದನನ್ನೇ ಮರೆತು ಬಿಟ್ಟೆ’ ಒಂದಷ್ಟು ಬೇಸರವಾಯಿತು ತನ್ನ ವರ್ತನೆಯ ಬಗ್ಗೆ. ಅವನ ಮನೆಗೆ ಹೋಗಿ ವಿಷಯ ತಿಳಿಸಿ ಕಾಲೇಜಿಗೆ ಅವನೊಡನೆಯೇ ಹೋದರಾಯಿತು ಎಂದುಕೊಂಡು ಸ್ನಾನ ಮಾಡಿ ‘ತಿಂಡಿ ಕ್ಯಾಂಟೀನಿನಲ್ಲೇ ತಿಂತೀನಿ’ ಎಂದು ಸ್ನೇಹಳಿಗೆ ತಿಳಿಸಿ ಸಯ್ಯದ್ ಮನೆ ಕಡೆ ಹೊರಟ. ಬಸ್ಸಿನಲ್ಲಿ ಹೋದರೆ ಮೂರು ನಿಮಿಷದ ಪಯಣ, ನಡಿಗೆಯಲ್ಲಿ ಹದಿನೈದು ನಿಮಿಷ ಸಾಕು. ನಡೆದೇ ಹೊರಟ. ಮನೆಯ ಆವರಣದಲ್ಲಿದ್ದ ತೆಂಗಿನಮರದ ಕೆಳಗೆ ಕುರ್ಚಿ ಹಾಕಿಕೊಂಡು ಕುಳಿತಿದ್ದ ಸಯ್ಯದ್. ಕಾಫಿ ಹೀರುತ್ತ ಪತ್ರಿಕೆ ಓದುತ್ತಿದ್ದ. ಗೇಟಿನ ಶಬ್ದವಾದಾಗ ತಿರುಗಿ ನೋಡಿದ.
ಬೆಳಿಗ್ಗೆ ಎದ್ದ ಕೂಡಲೇ ಲೋಕಿಗೆ ಸಯ್ಯದನ ನೆನಪಾಯಿತು. ‘ನಿನ್ನೆ ನಡೆದ ವಿಷಯಗಳ್ಯಾವುದನ್ನೂ ಆತನಿಗೆ ತಿಳಿಸಲೇ ಇಲ್ಲವಲ್ಲ. ಕಾಂತರಾಜ್ ಸರ್ ನ ಅಮಾನತ್ತು ಮಾಡಿದ ದಿನ ಆತ ನನಗೋಸ್ಕರ ಕಾಲೇಜೆಲ್ಲ ಹುಡುಕಾಡಿದನಂತೆ. ಅಂತಹದ್ರಲ್ಲಿ ನಿನ್ನೆ ನಾನು ಅವನಿಗೆ ಒಂದು ಮಾತೂ ತಿಳಿಸಲಿಲ್ಲವಲ್ಲ. ಪೂರ್ಣಿಯೊಡನೆ ಮಾತನಾಡಿದ ಖುಷಿಯಲ್ಲಿ ಸಯ್ಯದನನ್ನೇ ಮರೆತು ಬಿಟ್ಟೆ’ ಒಂದಷ್ಟು ಬೇಸರವಾಯಿತು ತನ್ನ ವರ್ತನೆಯ ಬಗ್ಗೆ. ಅವನ ಮನೆಗೆ ಹೋಗಿ ವಿಷಯ ತಿಳಿಸಿ ಕಾಲೇಜಿಗೆ ಅವನೊಡನೆಯೇ ಹೋದರಾಯಿತು ಎಂದುಕೊಂಡು ಸ್ನಾನ ಮಾಡಿ ‘ತಿಂಡಿ ಕ್ಯಾಂಟೀನಿನಲ್ಲೇ ತಿಂತೀನಿ’ ಎಂದು ಸ್ನೇಹಳಿಗೆ ತಿಳಿಸಿ ಸಯ್ಯದ್ ಮನೆ ಕಡೆ ಹೊರಟ. ಬಸ್ಸಿನಲ್ಲಿ ಹೋದರೆ ಮೂರು ನಿಮಿಷದ ಪಯಣ, ನಡಿಗೆಯಲ್ಲಿ ಹದಿನೈದು ನಿಮಿಷ ಸಾಕು. ನಡೆದೇ ಹೊರಟ. ಮನೆಯ ಆವರಣದಲ್ಲಿದ್ದ ತೆಂಗಿನಮರದ ಕೆಳಗೆ ಕುರ್ಚಿ ಹಾಕಿಕೊಂಡು ಕುಳಿತಿದ್ದ ಸಯ್ಯದ್. ಕಾಫಿ ಹೀರುತ್ತ ಪತ್ರಿಕೆ ಓದುತ್ತಿದ್ದ. ಗೇಟಿನ ಶಬ್ದವಾದಾಗ ತಿರುಗಿ ನೋಡಿದ.
“ಏನ್ ಲೋಕಿ.
ಇಷ್ಟು ಬೆಳಿಗ್ಗೇನೆ ಮನೆ ಕಡೆ ಬಂದಿದ್ದೀಯಾ? ಬಾ ಒಳಗೆ” ಲೋಕಿ ಸಯ್ಯದ್ ನನ್ನೇ ನೋಡಿದ. ಕಣ್ಣೆಲ್ಲಾ
ಕೆಂಪಗಾಗಿದ್ದವು, ಬಹುಶಃ ರಾತ್ರಿಯೆಲ್ಲ ನಿದ್ರೆ ಮಾಡಿಲ್ಲ ಎಂದುಕೊಂಡ. ಸಯ್ಯದ್ ನ ಮಾತಿನ ರೀತಿಯಲ್ಲೂ
ವ್ಯತ್ಯಾಸ ಗೋಚರಿಸಿತು. ನಾನು ಅವನ ಮನೆಗೆ ಹೋದಾಗಲೆಲ್ಲಾ ಬಹಳ ಖುಷಿಯಿಂದ ಉಲ್ಲಾಸದಿಂದ ಮಾತನಾಡುತ್ತಿದ್ದ.
ಇವತ್ತು ಯಾಕೋ ನಾನು ಬಂದಿದ್ದೇ ಇಷ್ಟವಾಗಿಲ್ಲದ ರೀತಿ ಉದಾಸೀನತೆಯಿಂದ ವರ್ತಿಸುತ್ತಿದ್ದಾನಲ್ಲ. ಯಾಂತ್ರಿಕವಾಗಿ
ತನ್ನ ಕೋಣೆಗೆ ಕರೆದುಕೊಂಡು ಹೋದ. ಬಂದವನನ್ನು ಬೇಸರಗೊಳಿಸಬಾರದೆಂತಲೋ ಅಥವಾ ಔಪಚಾರಿಕ ಮಾತುಕತೆಗೆ
ಸೀಮಿತವಾಗಿಸಲೋ “ತಿಂಡಿ ತಿನ್ನು” ಎಂದ.
“ಇಲ್ಲಾ ಸಯ್ಯದ್
ಬೇಡ. ಈಗ ತಾನೇ ಆಯ್ತು” ಎಂದೊಂದು ಸುಳ್ಳು ಹೇಳಿ “ಯಾಕೆ ಸಯ್ಯದ್ ಬಹಳ ಬೇಸರದಲ್ಲಿರೋ ಹಾಗಿದೆ”
“ಬೇಜಾರೇನಿಲ್ಲ.
ರಾತ್ರಿ ನಿದ್ದೆ ಸರಿಯಾಗಿ ಬರಲಿಲ್ಲ. ಅದಿಕ್ಕೆ ಸ್ವಲ್ಪ ಸುಸ್ತು ಅಷ್ಟೆ. ನೀನೇನು ಕಾಲೇಜಿನ ಕಡೆ ಹೋಗದೆ
ಇಲ್ಲಿಗೆ ಬಂದುಬಿಟ್ಟಿದ್ದೀಯ? ಏನು ಸಮಾಚಾರ?” ತನ್ನ ಮನಸ್ಸಿನಲ್ಲಿ ನಡೆಯುತ್ತಿರುವ ದ್ವಂದ್ವದ ಯುದ್ಧ
ಈತನಿಗೆ ಕಾಣಿಸಬಾರದೆಂದು ಮುಖದ ಮೇಲೆ ಬಲವಂತದ ಮುಗುಳ್ನಗೆ ತಂದುಕೊಂಡು ಕೇಳಿದ.
“ವಿಷಯ ಗೊತ್ತಾಯ್ತ?”
“ಯಾವ ವಿಷಯ?”
“ಕಾಂತರಾಜ್
ಸರ್ ವಿಷಯ. ಪಾಪ ಸರ್ ಯಾವ ತಪ್ಪೂ ಮಾಡಿಲ್ಲವಂತೆ. ರಾಜೇಶ್ ಸರ್, ಎಂ ಎಸ್ ಎ ಮತ್ತು ಫಾತಿಮಾ ಸೇರಿಕೊಂಡು
ಅವರ ಮೇಲೆ ಸುಳ್ಳು ಆರೋಪ ಹೊರಿಸಿದ್ದಂತೆ” ಸಯ್ಯದ್ ನ ಮುಖಭಾವದಲ್ಲಿ ಯಾವ ಬದಲಾವಣೆಯೂ ಆಗದ್ದು ನೋಡಿ
ಅಚ್ಚರಿಯಾಯಿತು. ಮೌನವಾಗಿ ಬಾಗಿಲ ಬಳಿ ಹೋಗಿ ಚಿಲುಕ ಹಾಕಿ ತಿರುಗಿ ಬಂದು ಹಾಸಿಗೆಯ ಮೇಲೆ ಕುಳಿತು
ಮಂಚದ ಪಕ್ಕದಲ್ಲಿದ್ದ ಮೇಜಿನ ಡ್ರಾಯರಿನಿಂದ ಸಿಗರೇಟು ತೆಗೆದು ಹಚ್ಚಿದನು. ಕೊಂಚ ಸಮಯದ ನಂತರ ಲೋಕಿಯೆಡೆಗೆ
ನೋಡಿ “ಕಾಂತರಾಜ್ ಸರ್ ಅರೆಸ್ಟ್ ಆದ ಸಂಜೆಯೇ ನನಗೆ ಈ ವಿಷಯ ಗೊತ್ತಾಯ್ತು” ಎಂದು ಹೇಳಿ ಸಿಗರೇಟಿನ
ಹೊಗೆಯನ್ನು ಸುರುಳಿಸುರುಳಿಯಾಗಿ ಬಿಟ್ಟನು. ಅಚ್ಚರಿಯ ವಿಷಯವನ್ನು ಸಯ್ಯದನಿಗೆ ತಿಳಿಸಬೇಕೆಂದು ಕಾತರದಿಂದ
ಬಂದ ಲೋಕಿಗೆ ಅಘಾತವಾಯ್ತು.
”ಈ ವಿಷಯ
ನಿನಗೆ ಮುಂಚೇನೆ ಗೊತ್ತಿತ್ತಾ ಸಯ್ಯದ್”
“ಹೌದು ಗೊತ್ತಿತ್ತು”
“ಯಾರು ಹೇಳಿದ್ದು?”
“ಎಂ ಎಸ್
ಎನೇ ಈ ವಿಷಯ ತಿಳಿಸಿದರು. ಅವತ್ತು ಸ್ಕೇಟಿಂಗ್ ಗ್ರೌಂಡ್ ಹತ್ತಿರ ಸಿಹಿ ಕೊಟ್ಟು ಹೋದರು ನೋಡು. ಅದಾದ
ಮೇಲೆ ನೀನು ಮನೆಗೆ ಹೊರಟುಹೋದೆ. ನನಗೆ ದಾರಿಯಲ್ಲಿ ಮತ್ತೆ ಸಿಕ್ಕಿದ್ದರು. ‘ಏನ್ಸಾರ್ ಕಾಂತರಾಜ್ ಸರ್
ಬಂಧನವಾದರೆ ನೀವು ಇಷ್ಟೊಂದು ಖುಷಿ ಪಡ್ತಿದ್ದೀರಲ್ಲ. ಕಾರಣ ಏನು ಅಂಥ ಕೇಳಬಹುದಾ?’ ಎಂದೆ. ಅವರು ನೇರವಾಗಿ
ಏನನ್ನೂ ತಿಳಿಸದಿದ್ದರೂ ಕಾಂತರಾಜ್ ಬಂಧನವಾದರೆ ರಾಜೇಶ್ ಸರ್ ವಿಭಾಗದ ಮುಖ್ಯಸ್ಥರಾಗೋ ವಿಷಯ ಅದರಿಂದ
ಇವರಿಗೆ ಪಿ ಎಚ್ ಡಿ ಮಾಡಲು ಅನುಕೂಲವಾಗೋ ವಿಷಯ ತಿಳಿಸಿದರು. ಅಲ್ಲಿಗೆ ಕಾಂತರಾಜ್ ಸರ್ ವಿಷಯದಲ್ಲಿ
ನಡೆದದ್ದೇನು ಅಂತ ಅರ್ಥ ಮಾಡಿಕೊಂಡೆ”
“ಇಷ್ಟೆಲ್ಲ
ಗೊತ್ತಿದ್ದರೂ ನನಗೊಂದು ಮಾತು ತಿಳಿಸಲಿಲ್ಲವಲ್ಲಾ? ನನಗೆ ತಿಳಿಸದೆ ಇದ್ರೆ ಬೇಡ. ಪೋಲೀಸರಿಗೆ ಈ ವಿಷಯಾನೆಲ್ಲ
ತಿಳಿಸಿ ಕಾಂತರಾಜ್ ಸರ್ ನ ಬಿಡಿಸಿಕೊಂಡು ಬರಬೇಕೆಂದು ಅನ್ನಿಸಲಿಲ್ಲವೇ?”
ಸಯ್ಯದ್ ತಲೆತಗ್ಗಿಸಿ
ಕುಳಿತ. ಅವನ ಮೌನ ಲೋಕಿಯನ್ನು ಕೆರಳಿಸಿತು. “ಅಲ್ಲಿ ಒಬ್ಬ ನಿರಪರಾಧಿ ತನ್ನದಲ್ಲದ ತಪ್ಪಿಗೆ ಶಿಕ್ಷೆ
ಅನುಭವಿಸುತ್ತಿದ್ದರೆ, ಪೂರ್ಣವಾಗಲ್ಲದಿದ್ದರೂ ಸತ್ಯದ ಅರಿವಿದ್ದ ನೀನು ಸುಮ್ಮನಿದ್ದಿದ್ದು ಸರಿಯಾ?”
“ಸರಿಯಲ್ಲ.
ಗೊತ್ತು ನನಗೆ. ಕೋಪ ಮಾಡಬೇಡ ಲೋಕಿ. ಕೆಲವೊಂದು ವೈಯಕ್ತಿಕ ಕಾರಣಗಳಿಂದಾಗಿ ನಾನು...”
“ನಿನನ್ನ
ವೈಯಕ್ತಿಕ ಕಾರಣಕ್ಕೋಸ್ಕರ ಸತ್ಯ ಮರೆಮಾಚಿಬಿಟ್ಟೆಯಾ?! ಶಬ್ಬಾಸ್. ಅಂಥ ಮಹಾ ಕಾರಣ ಯಾವುದಿತ್ತು ಸಯ್ಯದ್?
ಫಾತಿಮಾ, ಎಂ ಎಸ್ ಎ ಎಲ್ಲ ಸಾಬರು ಅನ್ನೋ ಕಾರಣವಾ?” ಕೊನೆಯ ವಾಕ್ಯವನ್ನು ಹೇಳಬಾರದೆಂದು ಮನಸ್ಸು ಸಾರುತ್ತಿದ್ದರೂ
ಕೋಪದ ಬುದ್ಧಿ ಹೇಳಿಸಿಬಿಟ್ಟಿತು.
ಸಯ್ಯದ್ ಖಿನ್ನನಾಗಿಹೋದ.
ಸೇದುತ್ತಿದ್ದ ಸಿಗರೇಟು ಮುಗಿಯುತ್ತ ಬಂದಿತ್ತು. ಈ ಸಿಗರೇಟಿನ ತುದಿಯಂತೆ ನಮ್ಮಿಬ್ಬರ ನಡುವಿನ ಸ್ನೇಹವೂ
ಮುರುಟಿಹೋಗುತ್ತಿದೆಯಾ? ಉಹ್ಞೂ ಹಾಗಾಗಲು ಬಿಡಬಾರದು ಎಂದುಕೊಂಡು ಮತ್ತೊಂದು ಸಿಗರೇಟು ಹಚ್ಚಿದ. ಸಿಗರೇಟು
ಉರಿಯಲಾರಂಭಿಸಿತು.
“ಲೋಕಿ ನನ್ನ
ಬಗ್ಗೆ ಈ ರೀತಿ ಮಾತಾಡ್ತ ಇದ್ದೀಯ? ನಾನು ಯಾವತ್ತಾದ್ರು ಜಾತಿ ಧರ್ಮ ಅನ್ನೋ ಭಾವನೆಯಿಂದ ವರ್ತಿಸೋದನ್ನು
ನೋಡಿದ್ದೀಯ?”
“ಮತ್ತಿನ್ಯಾವ
ಕಾರಣವೂ ನನಗೆ ಹೊಳೆಯುತ್ತಿಲ್ಲ”. ಸಯ್ಯದ್ ಪದಗಳಿಗೆ ತಡಕಾಡುತ್ತ ಸುಮ್ಮನಿದ್ದ. ಲೋಕಿ ಮತ್ತೆ ಕಾರಣ
ಕೇಳಿದ.
ಅರ್ಧ ಉರಿದ
ಸಿಗರೇಟನ್ನು ಬಿಸುಟು ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು “ಸರಿ ಲೋಕಿ. ಹೇಳ್ತೀನಿ ಕೇಳು. ನಾನು
ರೂಪಾಳನ್ನು ಪ್ರೀತಿಸುತ್ತಿರೋ ವಿಷಯ ನಿನಗೆ ಗೊತ್ತಿರೋದೆ. ನನಗೆ ರೂಪಾಳಿಗೆ ಈ ಜಾತಿ ಧರ್ಮದ ವಿಷಯದಲ್ಲಿ
ನಂಬಿಕೆ ಇಲ್ಲ. ಆದರೆ ನಮ್ಮ ತಂದೆತಾಯಿ ನಂಬುತ್ತಾರಲ್ಲ. ನಮ್ಮಿಬ್ಬರ ಮದುವೆಗೆ ನಮ್ಮ ಮನೆಯಲ್ಲಾಗಲೀ
ಅವರ ಮನೆಯಲ್ಲಾಗಲೀ ಒಪ್ಪೋ ಸಾಧ್ಯತೆ ಇಲ್ಲವೇ ಇಲ್ಲ. ಹಿಂದೂ ಹುಡುಗಿ ಮುಸ್ಲಿಂ ಹುಡುಗ ಮದುವೆಯಾಗ್ತಾರೆ
ಅಂದ್ರೆ ಈ ಸಮಾಜವೂ ಸಲೀಸಾಗಿ ಒಪ್ಪುವುದಿಲ್ಲ. ಈ ಎಂ ಎಸ್ ಎ ಇದ್ದಾರಲ್ಲ ಅವರು ನಮಗೆ ದೂರದ ಸಂಬಂಧಿ.
ಅದಕ್ಕಿಂತ ಹೆಚ್ಚಾಗಿ ನಮ್ಮ ತಂದೆ ಮತ್ತು ಅಲಿಯವರ ತಂದೆ ತುಂಬಾ ಒಳ್ಳೆ ಸ್ನೇಹಿತು. ಈ ಅಲಿಯವರ ಕಾಕಾ
ಒಬ್ಬರಿದ್ದಾರೆ, ಮೊಹಮ್ಮದ್ ಮುನೀಬುದ್ದೀನ್ ಅಲಿ ಅಂತ. ಮೈಸೂರಿನಲ್ಲಿರೋ ಮುಸ್ಲಿಮರಲ್ಲಿ ಹಿರಿಯ. ಎಂಬತ್ತಕ್ಕೂ
ಹೆಚ್ಚಾಗಿರಬೇಕು ಅವರ ವಯಸ್ಸು. ಆ ಕಾಲದ ಮುಸ್ಲಿಂ ಆದರೂ ಈಗಿನವರಿಗಿಂತ ಎಷ್ಟೋ ಜಾತ್ಯತೀತ ಮನಸ್ಸು
ಅವರದು. ಮುಸ್ಲಿಂ ಸಮಾಜದಲ್ಲಿ ಅವರ ಮಾತಿಗೆ ಯಾರೂ ಎದುರಾಡೋದಿಲ್ಲ. ಅವರು ಒಂದೊಂದು ಬಾರಿ ಹೇಳೊ ಮಾತು
ಸಂಪ್ರದಾಯವಾದಿಗಳಿಗೆ ಇಷ್ಟವಾಗದೀ ಇದ್ದರೂ ಕೂಡ ಈ ಕಾಕಾ ಏನೇ ಮಾಡಿದ್ರೂ ನಮ್ಮ ಒಳ್ಳೇದಕ್ಕೆ ಮಾಡ್ತಾರೆ
ಅನ್ನೋ ಭಾವನೆ. ನನ್ನ ಮದುವೆಗೆ ವಿರೋಧ ಬರೋದು ಸಹಜ. ಕಡೇ ಪಕ್ಷ ನಮ್ಮ ಮನೆಯವರಾದರೂ ಒಪ್ಪಬೇಕೆಂದರೆ
ಈ ಕಾಕಾ ನನ್ನ ಪರವಾಗಿ ಮಾತನಾಡಬೇಕು. ಕಾಕಾನನ್ನು ಒಪ್ಪಿಸುವ ಜವಾಬ್ದಾರಿ ನನಗಿರಲಿ ಎಂದು ಹಿಂದೊಮ್ಮೆ
ಎಂ ಎಸ್ ಎ ಹೇಳಿದ್ದರು” ಇಷ್ಟು ಹೇಳಿ ಸುಮ್ಮನಾದ. ಲೋಕಿಯ ಮಾತಿಗೆ ಕಾಯುತ್ತಿದ್ದ.
ಲೋಕಿ ಒಂದು
ಕ್ಷಣ ಸುಮ್ಮನಿದ್ದು ನಂತರ ಜೋರಾಗಿ ನಗಲು ಪ್ರಾರಂಭಿಸಿದ. ಏನಾಯ್ತು ಎಂಬಂತೆ ನೋಡಿದ ಸಯ್ಯದ್. “ಅಲ್ಲ
ಸಯ್ಯದ್. ನಾನು ಯಾವುದೋ ದೊಡ್ಡ ಕಾರಣ ಇರಬೇಕು ಅಂದುಕೊಂಡಿದ್ದೆ. ರೂಪಾಗೋಸ್ಕರವಾ ಇಷ್ಟೆಲ್ಲ ಪಡಿಪಾಟಲು!
ನೀನೊಬ್ಬ ನಿಜ ಹೇಳದಿದ್ದರೆ ಸತ್ಯ ಹೊರಗೆ ಬರೋದಿಲ್ಲ ಎಂದ್ಯಾಕೆ ಭಾವಿಸಿದೆಯೋ ಗೊತ್ತಿಲ್ಲ. ಸತ್ಯ ಅನ್ನೋದು
ನಾವು ಉಸಿರಾಡೋ ಗಾಳಿಯ ಹಾಗಿ ಸಯ್ಯದ್. ಉಸಿರಾಡುತ್ತಲೇ ಇರಬೇಕು, ಗಾಳಿಯನ್ನು ಹೊರಹಾಕುತ್ತಲೇ ಇರಬೇಕು.
ಇಲ್ಲಾಂದ್ರೆ ನಮ್ಮ ಸಾವಿನಿಂದ ಗಾಳಿಗೆ ಬಿಡುಗಡೆ ಸಿಗುತ್ತದಷ್ಟೇ. ಗಾಳಿ ಸರ್ವಾಂತರ್ಯಾಮಿ ಅನ್ನೋದನ್ನು
ನೀನು ಮರೆಯಬಾರದಿತ್ತು. ನಿನ್ನಂತವನ ಜೊತೆ ಇಷ್ಟು ದಿನ ಸ್ನೇಹ ಬೆಳೆಸಿದ್ದಕ್ಕೆ ನಿಜಕ್ಕೂ ನನ್ನ ಮೇಲೇ
ಬೇಸರವಾಗುತ್ತಿದೆ” ಎಂದ್ಹೇಳಿ ಲೋಕಿ ಮೇಲೆದ್ದು ಹೊರಟ, ಬಾಗಿಲ ಚಿಲುಕ ತೆಗೆಯುತ್ತಿದ್ದವನು ಮತ್ತೆ
ಸಯ್ಯದ್ ನ ಕಡೆ ತಿರುಗಿ ”ಇನ್ನೊಂದು ಮಾತು ಸಯ್ಯದ್. ರೂಪಾ ನಿನ್ನನ್ನು ಪ್ರೀತಿಸುತ್ತಿರುವುದೇ ಸುಳ್ಳು.
ಅವಳು ನಿನ್ನನ್ನು ಮದುವೆಯೂ ಆಗುವುದಿಲ್ಲ. ರೂಪಾಳ ಅಸಲಿ ಮುಖದ ಪರಿಚಯ ನನಗಿದೆ” ಲೋಕಿ ಹೊರಟುಹೋದ.
ಮುಂದೆ ಅವರಿಬ್ಬರೂ
ಭೇಟಿಯಾಗಿ ಮಾತನಾಡುವಾಗ ಕಾಲಚಕ್ರ ಉರುಳಿ ಇಬ್ಬರ ಜೀವನದ ಪಥವೂ ಬೇರೆಯಾಗುವ ಸಿದ್ಧತೆಯಲ್ಲಿತ್ತು.
* * *
ಕಾಲೇಜಿನ ಆವರಣದೊಳಗೆ ಹೋಗುತ್ತಿದ್ದಂತೆಯೇ ಕಣ್ಣು
ಪೂರ್ಣಿಗಾಗಿ ಹುಡುಕಹತ್ತಿತು. ಪೂರ್ಣಿಮಾ ಅಲ್ಲೆಲ್ಲೂ ಕಾಣಲಿಲ್ಲ. ಬೇಸರದಿಂದ ಲೋಕಿ ತರಗತಿಯೆಡೆಗೆ
ಹೋಗುತ್ತಿದ್ದಾಗ ಕಾರಿಡಾರಿನಲ್ಲಿ ಕಾಣಿಸಿದಳು. ‘ಇವತ್ತೊಂದು ದಿನ ನಾನೇ ಮೊದಲು ಮಾತನಾಡಿಸಿಬಿಡ್ತೀನಿ.
ನಾಳೆಯಿಂದ ಬೇಕಾದರೆ ಅವಳೇ ಮಾತನಾಡಿಸಲಿ’ ಎಂದುಕೊಂಡು ಅವಳೆಡೆಗೆ ನೋಡಿ ನಕ್ಕ.
“ಇವತ್ತು ಕಾಂತರಾಜ್ ಸರ್ ಕಾಲೇಜಿಗೆ ಬರ್ತಿದ್ದಾರೆ
ಲೋಕಿ”
‘ಛೇ! ಇವತ್ತೂ ಇವಳೇ ಮೊದಲು ಮಾತನಾಡಿಸಿಬಿಟ್ಟಳಲ್ಲ!
ಇರಲಿ. ನಾಳೆ ನಾನು ಮೊದಲು ಮಾತನಾಡಿಸ್ತೀನಿ, ನಾಡಿದ್ದಿಂದ ಅವಳೇ ಬೇಕಾದ್ರೆ ಮಾತನಾಡಿಸಲಿ’ ಎಂದುಕೊಳ್ಳುತ್ತ
“ಹೌದಾ! ಯಾವಾಗ ಬರುತ್ತಾರಂತೆ?”
“ಇನ್ನೊಂದರ್ಧ ಘಂಟೆಯೊಳಗೆ ಬರಬಹುದು”
ಲೋಕಿ ಒಂದು ಕ್ಷಣ ಯೋಚಿಸಿ “ಒಂದ್ವಿಷಯ ಪೂರ್ಣಿ.
ಮೊನ್ನೆ ಏನೂ ತಪ್ಪು ಮಾಡದೇ ಇರೋ ಕಾಂತರಾಜ್ ಸರ್ ಮೇಲೆ ವಿನಾಕಾರಣ ಕೂಗಾಡಿಬಿಟ್ಟೆ, ಎಲ್ಲ ವಿದ್ಯಾರ್ಥಿಗಳೂ
ಅವರಿಗೆ ಪ್ರಿನ್ಸಿಪಾಲರಿಗೆ ಧಿಕ್ಕಾರವನ್ನೂ ಹಾಕಿದೆವು. ಇವತ್ತು ನಾವೆಲ್ಲ ಸೇರಿ ಅವರಿಬ್ಬರ ಕ್ಷಮೆ
ಕೇಳಿ, ಕಾಂತರಾಜ್ ಸರ್ ನಮ್ಮನ್ನೆಲ್ಲ ಕ್ಷಮಿಸಿದ ಮೇಲೆ ಅವರನ್ನು ಕಾಲೇಜಿನೊಳಕ್ಕೆ ಬರಮಾಡಿಕೊಳ್ಳೋಣ”
“ರಾಜೇಶ್ ಸರ್, ಎಂ ಎಸ್ ಎ ಮತ್ತು ಫಾತಿಮಾ ವಿರುದ್ಧ
ಧಿಕ್ಕಾರ?”
“ಅದೆಲ್ಲ ಏನೂ ಬೇಡ ಅನ್ಸುತ್ತೆ ಪೂರ್ಣಿ. ಒಬ್ಬರ
ವಿರುದ್ಧ ಧಿಕ್ಕಾರ ಕೂಗಿ ಈ ಅನರ್ಥ ಸೃಷ್ಟಿಸಿರೋದೆ ಸದ್ಯಕ್ಕೆ ಸಾಕು. ಹೇಗಿದ್ದರೂ ಅವರನ್ನೆಲ್ಲ ವಿಚಾರಿಸಿಕೊಳ್ಳುವುದಕ್ಕೆ
ವಿಕ್ರಮ್ ಇದ್ದಾರಲ್ಲ”
“ಸರಿ ಲೋಕಿ ನೀನು ಹೇಳಿದ ಹಾಗಿ ಆಗಲಿ. ನಡಿ ಎಲ್ಲ
ಕ್ಲಾಸ್ ರೆಪ್ರೆಸೆಂಟೇಟಿವ್ ಗಳಿಗೆ ಈ ವಿಷಯ ತಿಳಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆವರಣದಲ್ಲಿ
ಸೇರಿಸೋಣ”. ಒಂದು ಪ್ರಶ್ನೆ ಪೂರ್ಣಿಮಾಳ ಮನಸ್ಸಿನಲ್ಲೇ ಉಳಿದು ಹೋಯಿತು. ಅವತ್ತೆಲ್ಲ ಪೂರ್ಣಿಮಾ ಎಂದು
ಕರೆಯುತ್ತಿದ್ದವನು ಇವತ್ತೇನು ಪೂರ್ಣಿ ಎಂದು ಮಾತನಾಡಿಸುತ್ತಿದ್ದಾನಲ್ಲ? ಕೇಳೋಣವೆಂದುಕೊಂಡವಳು ‘ಇರಲಿ.
ಇವನು ಪೂರ್ಣಿ ಎಂದು ಕರೆಯೋದೆ ಒಂಥರಾ ಚೆನ್ನಾಗಿದೆ’ ಎಂದು ಸುಮ್ಮನಾದಳು.
ಹತ್ತು ನಿಮಿಷದಲ್ಲಿ ಬಹುತೇಕ ವಿದ್ಯಾರ್ಥಿಗಳು ಕಾಲೇಜಿನ
ಆವರಣದಲ್ಲಿದ್ದರು. ಪ್ರಥಮ ಬಿ ಎನಲ್ಲಿರೋ ಲೋಕಿ ಮತ್ತು ಪೂರ್ಣಿಮಾ ಹೇಳಿದ ಮಾತ್ರಕ್ಕೆ ನಾವ್ಯಾಕೆ ಹೋಗಬೇಕು
ಅನ್ನೋ ಕಾರಣಕ್ಕೆ ಕೆಲವು ಹಿರಿಯ ವಿದ್ಯಾರ್ಥಿಗಳು ಬಂದಿರಲಿಲ್ಲವಷ್ಟೇ. ಕಾಂತರಾಜ್ ಪ್ರಿನ್ಸಿಪಾಲರ
ಜೊತೆ ಬಂದರು. ಪ್ರಿನ್ಸಿಪಾಲರು ಲೋಕಿಯ ಬಳಿ ಬಂದು ನಗುತ್ತ “ಏನಪ್ಪ ಲೋಕೇಶ್. ಇವತ್ತು ಯಾರ ವಿರುದ್ಧ
ಧಿಕ್ಕಾರ ಕೂಗಬೇಕು ಅಂತ ಎಲ್ಲರನ್ನೂ ಸೇರಿಸಿದ್ದೀರಾ?!”
“ಧಿಕ್ಕಾರ ಕೂಗೋದಿಕ್ಕಲ್ಲ ಸರ್. ಮೊನ್ನೆ ನಿಮ್ಮ
ವಿರುದ್ಧ ಕಾಂತರಾಜ್ ಸರ್ ವಿರುದ್ಧ ನಿಜ ಘಟನೆಗಳನ್ನು ಅರಿಯದೆ ವಿನಾಕಾರಣ ಕೂಗಾಡಿದೆವಲ್ಲ ಅದಕ್ಕೋಸ್ಕರ
ನಿಮ್ಮೀರ್ವರ ಬಳಿ ಕ್ಷಮೆ ಕೇಳೋಣ ಅಂತ ಸೇರಿದ್ದೀವಿ” ಲೋಕಿ ಮಾತು ನಿಲ್ಲಿಸುತ್ತಿದ್ದ ಹಾಗೆ “ಸಾರಿ
ಸರ್” ಎಂದು ವಿದ್ಯಾರ್ಥಿಗಳೆಲ್ಲಾ ಒಕ್ಕೊರಲಿನಿಂದ ಕೂಗಿದರು.
ಮುಗುಳ್ನಗು ಬೀರುತ್ತ ಕಾಂತರಾಜ್ “ಇದಕ್ಕೆಲ್ಲಾ
ಕ್ಷಮೆ ಕೇಳುವ ಅವಶ್ಯಕತೆ ಖಂಡಿತವಾಗಿಯೂ ಇಲ್ಲ. ಅವತ್ತು ನಾನು ತಪ್ಪು ಮಾಡಿದ್ದೀನಿ ಅನ್ನೋ ಕಾರಣಕ್ಕೆ
ನನ್ನ ವಿರುದ್ಧ ಕೂಗಾಡಿದ್ರಿ. ನನಗೆ ನಿಜಕ್ಕೂ ಅಂದು ಖುಷಿಯಾಯಿತು. ನಮ್ಮ ಯುವಜನಾಂಗ ಇನ್ನೂ ಅನ್ಯಾಯದ
ವಿರುದ್ಧ ದನಿಯೆತ್ತಲು ಸಿದ್ಧರಿದ್ದಾರಲ್ಲ ಎಂದು”
“ಹಾಗಾದ್ರೆ ನಮ್ಮನ್ನ ಕ್ಷಮಿಸಿದ್ದೀರಾ ಸರ್?” ಸಿಂಚನಾಳ
ಪಕ್ಕದಲ್ಲಿ ನಿಂತಿದ್ದ ಗೌತಮ್ ಕೇಳಿದ.
“ನನ್ನ ಪ್ರಕಾರ ನೀವು ತಪ್ಪೇ ಮಾಡಿಲ್ಲವೆಂದ ಮೇಲೆ
ನಿಮ್ಮನ್ನು ಕ್ಷಮಿಸೋ ಮಾತೆಲ್ಲಿಯದು? ಎಲ್ಲ ಕ್ಲಾಸಿಗೆ ನಡೆಯಿರಿ” ಎಂದ್ಹೇಳಿ ತಮ್ಮ ಛೇಂಬರಿನೆಡೆಗೆ
ತೆರಳಿದರು.
ಸಂಜೆ ಕಾಲೇಜು
ಮುಚ್ಚುವ ಸಮಯದಲ್ಲಿ ವಿಕ್ರಮ್ ಕಾಲೇಜಿನ ಬಳಿ ಲೋಕಿಗೆ ಸಿಕ್ಕಿದ್ದರು. “ಏನ್ಸಾರ್ ಸಿವಿಲ್ ಡ್ರೆಸ್ಸಿನಲ್ಲಿ
ಬಂದು ಬಿಟ್ಟಿದ್ದೀರ? ರಜೆನಾ ಇವತ್ತು?”
“ನಮಗೆಲ್ಲಿ
ರಜಾ ಬಿಡ್ರಿ ಲೋಕೇಶ್. ಮೈಮೇಲೆ ಯುನಿಫಾರ್ಮ ಇರಲಿ ಇಲ್ಲದಿರಲಿ ಇಪ್ಪತ್ನಾಲ್ಕು ಘಂಟೆ ಡ್ಯೂಟೀನೇ!.
ಕಾಂತರಾಜರನ್ನು ನೋಡಬೇಕಿತ್ತು, ಅದಿಕ್ಕೆ ಬಂದಿದ್ದೆ”
“ಸಿಕ್ಕಿದ್ರಾ
ಸರ್”
“ಹ್ಞೂ ಸಿಕ್ಕಿದ್ದರು.
ಆ ಕಾಂತರಾಜ್ ನಿಜಕ್ಕೂ ಹುಚ್ಚ ಕಣ್ರೀ ಲೋಕೇಶ್”
“ಯಾಕ್ ಸರ್?!”
“ಇನ್ನೇನ್ರೀ
ಮತ್ತೆ. ಆ ರಾಜೇಶ್ ಮೇಲೆ ಒಂದು ಕಂಪ್ಲೇಂಟ್ ಕೊಡಿ ಅಂದ್ರೆ ‘ಹೋಗ್ಲಿ ಬಿಡಿ ಸರ್’ ಅಂತಾರೆ. ಕೊನೇ ಪಕ್ಷ
ಮಾನನಷ್ಟ ಮೊಕದ್ದಮೆನಾದ್ರೂ ಹಾಕಿ ಅಂದ್ರೆ ‘ಅವೆಲ್ಲಾ ಯಾಕೆ? ವಿಭಾಗದ ಮುಖ್ಯಸ್ಥರಾಗಬೇಕು ಅನ್ನೋ ಆಸೆಗೆ
ಬಿದ್ದು ಈ ರೀತಿ ಮಾಡಿದ್ದಾರಷ್ಟೇ. ಇಲ್ಲಾಂದ್ರೆ ಆ ಮನುಷ್ಯ ಒಳ್ಳೆಯವನೇ. ಒಂದು ಆರು ತಿಂಗಳಾದ ಮೇಲೆ
ಈ ಕಾಲೇಜು ಕೆಲಸ ಬಿಟ್ಟು ಪತ್ರಿಕೆ ಶುರು ಮಾಡಬೇಕು ಎಂದುಕೊಂಡಿದ್ದೆ. ಈಗಲೇ ಸಮಯ ಕೂಡಿ ಬಂದಿದೆ. ರಾಜೀನಾಮೆ
ಕೊಟ್ಟು ಪತ್ರಿಕೆ ಆರಂಭಿಸಲು ಬೇಕಾದ ಸಿದ್ಧತೆ ಶುರುಮಾಡಿಕೊಳ್ಳುತ್ತೇನೆ. ಆ ರಾಜೇಶೇ ಹೆಚ್ ಓ ಡಿ ಆಗಲಿ
ಬಿಡಿ’ ಅಂತ ಹೇಳ್ತಾರಲ್ಲ!”
“ಅರೆರೆ ಅವರು
ಕಾಲೇಜು ಬಿಟ್ಟುಬಿಡ್ತಾರಂತ?! ನಿಜವಾಗ್ಲೂ ಆ ರೀತಿ ಹೇಳಿದ್ರ ಸರ್”
“ನಾನ್ಯಾಕಪ್ಪ
ಸುಳ್ಳು ಹೇಳಲಿ”
“ಛೇ. ನಾವು
ಮಾಡಿದ ತಪ್ಪಿನಿಂದ ಅವರು ಕಾಲೇಜು ಬಿಡ್ತಿದ್ದಾರೋ ಏನೋ?”
“ಹಾಗೇನೂ
ಇಲ್ಲ ಲೋಕಿ. ಅವರು ಮೊದಲೇ ನಿರ್ಧಾರ ಮಾಡಿದ್ದಾರೆನ್ನಿಸುತ್ತೆ ನನಗೆ. ಮೇಲಾಗಿ ಅವರ ನಿರ್ಧಾರ ಒಳ್ಳೆಯದೂ
ಹೌದು. ಅಂಥ ವ್ಯಕ್ತಿಯೊಬ್ಬನ ಆದರ್ಶಗಳು ಕಾಲೇಜಿನಲ್ಲಿ ಪಾಠ ಮಾಡುವುದರಲ್ಲೇ ಕಳೆದುಹೋಗಬಾರದು ಅಲ್ವ?”
ಹೌದೆಂಬಂತೆ ತಲೆಯಾಡಿಸಿದ ಲೋಕಿ.
ಮುಂದುವರೆಯುವುದು....
No comments:
Post a Comment