ಡಾ. ಅಶೋಕ್. ಕೆ. ಆರ್
‘ದುಡಿಯೋ ವಯಸ್ನಲ್ಲಿ ಮನೇಲಿ
ಕುಂತವ್ನೆ, ದಂಡಪಿಂಡ’ “ಇದ್ಯಾಕ್ ಮಗಾ ಬೆಂಗ್ಳೂರಿಗೆ ಹೋಗ್ಲಿಲ್ವಾ ಇವತ್ತು” ಬಾಗಿಲು ತಳ್ಳುತ್ತಾ
ಒಳಬಂದ ಚಿಕ್ಕಪ್ಪ ಪತ್ರಿಕೆ ಓದುತ್ತಿದ್ದ ದಿಲೀಪನನ್ನು ವ್ಯಂಗ್ಯದಿಂದ ನೋಡುತ್ತಾ ಕೇಳಿದರು. ವ್ಯಂಗ್ಯದ
ಅರಿವಾಗದೆ ಇರಲಿಲ್ಲ ದಿಲೀಪನಿಗೆ. ‘ಅದನ್ನೆಲ್ಲಾ ಕಟ್ಟಿಕೊಂಡು ನಿಮಗೇನ್ರಿ ಆಗಬೇಕು’ “ಓ! ಬನ್ನಿ ಚಿಕ್ಕಪ್ಪ.
ಇವತ್ತೊಂದಷ್ಟು ಕಾಯಿ ಕೀಳಿಸಬೇಕಿತ್ತು ಅದಿಕ್ಕೆ ಉಳ್ಕೊಂಡೆ” ಎಂದೆನ್ನುತ್ತಾ ಪತ್ರಿಕೆ ಮಡಿಚಿದ.
‘ಬೆಂಗ್ಳೂರಿಗೆ ಹೋಗೆ ನೀನು ಕಿಸಿಯೋದೂ ಅಷ್ಟರಲ್ಲೇ ಇದೆ ಬಿಡು’ “ಹ್ಞು. ನಾನು ಈ ವಾರ ಕಾಯಿ ಕೀಳಿಸ್ಬೇಕು
ಅಂದ್ಕೋತಿದ್ದೆ ನೋಡು. ಅಂದ್ಹಂಗೆ ಅಣ್ಣ ಎಲ್ಲೋದ್ರು”
“ಸ್ನಾನಕ್ಕೆ ಹೋಗಿದ್ರು. . . ಇನ್ನೇನು ಬರೋ
....ಅಗೋ ಬಂದ್ರಲ್ಲ. ನಾನೂ ಸ್ನಾನ ಮಾಡ್ಕೊಂಡು ಬರ್ತೀನಿ ಚಿಕ್ಕಪ್ಪ” ಎಂದವನೇ ಚಿಕ್ಕಪ್ಪನ ಕೈಗೆ ಪತ್ರಿಕೆಯನ್ನು
ಕೊಟ್ಟು ಒಳಗೋಡಿದ ದಿಲೀಪ. ‘ಸದ್ಯ ಅವರ ಕೊಂಕು ಮಾತು ಕೇಳೋದಾದ್ರೂ ತಪ್ತಲ್ಲ’ ಎಂದುಕೊಳ್ಳುತ್ತಾ ಬನೀನು,
ಅಂಡರ್ವೇರು ತೆಗೆದುಕೊಂಡು ಹೆಗಲಿಗೊಂದು ಟವೆಲ್ಲೇರಿಸಿಕೊಂಡು ಬಚ್ಚಲಿಗೆ ಹೋದ. ಹೊರಗೆ ಹರಟೆ ಹೊಡೆಯುತ್ತಿದ್ದ
ಅಪ್ಪ ಚಿಕ್ಕಪ್ಪನ ಮಾತುಗಳು ಕೇಳುತ್ತಿದ್ದವು. ಕಬ್ಬಿನ ರೇಟು, ಮಳೆ, ನಾಲೆಗೆ ನೀರು ಬಿಟ್ರಾ, ಕೊಡಗಿನಲ್ಲಿ
ಮಳೆ ಆಯ್ತಾ...ಹೀಗೆ ಮಾತುಗಳು ಸರ್ವ ಲೋಕ ಸಂಚರಿಸಿ ಕೊನೆಗೆ ಚಿಕ್ಕಪ್ಪನ ಮಗಳ ಮದುವೆಗೆ ಬಂದು ನಿಂತಿತು.
ಮತ್ಯಾವುದಾದ್ರೂ ಸಂಬಂಧ ಬಂತಾ ಅಂತ ಅಪ್ಪ ಕೇಳಿದ್ದು, ಮುಂದಿನ ಭಾನುವಾರ ಬಿದಿರಕೋಟೆಯವರೊಬ್ಬರು ಬರ್ತಾರಂತೆ,
ಅದನ್ನೇ ಹೇಳುವಾ ಅಂತ ಬಂದಿದ್ದು ಎಂದು ಚಿಕ್ಕಪ್ಪ ಹೇಳಿದ್ದೆಲ್ಲಾ ಕೇಳಿಸಿತು. ದಿಲೀಪ ಸುಮತಿ ಒಂದೇ
ವಾರಿಗೆಯವರು. ಎದುರು ಸಿಕ್ಕಾಗ ನಾಲ್ಕು ಮಾತನಾಡ್ತಾನಷ್ಟೇ. ಪಿಕ್ಚರ್ ಮಾಡ್ತೀನೀಂತ ಓಡಾಡೋದಿಕ್ಕೆ
ಪ್ರಾರಂಭಿಸಿದ ಮೇಲೆ ಅದೂ ಕಡಿಮೆಯಾಗಿದೆ. ಎಲ್ಲರ ದೃಷ್ಟಿಯಲ್ಲಿರೋ ವ್ಯಂಗ್ಯ, ಅಪಹಾಸ್ಯ ನೋಡಿ ಬೇಸತ್ತುಹೋಗಿದ್ದಾನೆ.
ಅವನು ಹೊರಬರೋದಕ್ಕೂ ಚಿಕ್ಕಪ್ಪ “ನಿನ್ನ ಮಗನ ದೋಸ್ತ್ ಒಳ್ಳೆ ರುಸ್ತುಮ್ ಗಿರಾಕಿಯಿದ್ದ ಬಿಡಪ್ಪ. ಅಂಥ
ಹುಡುಗನ್ನ ಓಳ್ಳೆಯವನು ಅಂದುಬಿಟ್ನಲ್ಲ ದಿಲೀಪ” ಎಂದು ನಗುವುದಕ್ಕೂ ಸರಿಹೋಯಿತು. ‘ಏನು ಮಾಡೋದು ದಿಲೀಪವ್ರೇ,
ನನಗೇನೋ ನಿಮ್ಮ ಕತೆ ಬಾಳಾನೇ ಸೇರಿತು. ನಿಮ್ಮಲ್ಲೂ ಒಳ್ಳೇ ಕೆಪಾಸಿಟಿ ಇದೆ. ದುಡ್ಡು ಒಂದಿಲ್ಲದೇ ಇದ್ರೆ
ಎರಡು ಕೋಟಿಯಾದ್ರೂ ಪರವಾಗಿಲ್ಲ ಅಂದ್ಕೊಂಡಿದ್ದೆ. ನಿಮಗೇ ಗೊತ್ತಲ್ಲ, ರಿಸಿಷನ್ನೂ. ಬಿಸಿನೆಸ್ಸು ಪೂರಾ
ಬಿದ್ದೋಗಿದೆ. ಯಾವಾಗ್ ಎದ್ನಿಲ್ಲುತ್ತೋ ಗೊತ್ತಿಲ್ಲ. ಇವಾಗ್ಲೇ ಕಣ್ಣು ಬಾಯಿ ಬಿಡೋ ಪರಿಸ್ಥಿತಿ. ಇನ್ನೊಂದು
ಆರು ತಿಂಗಳು ಬಿಟ್ಟು ಭೇಟಿಯಾಗಿ ನೋಡೋಣ. ನೀವು ಬೇಜಾರು ಮಾಡ್ಕೋಬೇಡಿ, ಬೇರೆಯಾರಾದ್ರೂ ಪ್ರೊಡ್ಯೂಸರ್
ಸಿಕ್ಕಿದ್ರೆ ಮಾಡಿ. ನಿಮಗಿರೋ ಕೆಪ್ಯಾಸಿಟಿಗೆ ಬಹಳ ಎತ್ತರಕ್ಕೆ ಹೋಗ್ತೀರ’ ಎಂದ್ಹೇಳಿ ಆಕಾಶ ನೋಡಿ
ಸ್ಕಾರ್ಪಿಯೋ ಹತ್ತಿದ ರಿಯಲ್ ಎಸ್ಟೇಟ್ ಪ್ರೊಡ್ಯೂಸರ್ರು. ‘ನೋಡು ದಿಲಿ. ನಿನ್ನ ಮಾತಿನಂತೆ ಎಂ.ಎ ಮಾಡ್ದೆ.
ಕೆಲಸಕ್ಕೂ ಸೇರಿದೆ. ನೀನು ಮುಂಚಿನ ಥರಾನೇ ಇಪ್ಪತ್ತು ಸಾವಿರದ ಕೊಡುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡ್ತಾ
ಇದ್ರೆ ಮನೇಲೂ ಹೇಳೋದಿಕ್ಕೆ ಧೈರ್ಯವಾಗ್ತಿತ್ತು. ನೀನು ಈ ಫಿಲಮ್ಮೂ ಗಿಲಮ್ಮಿನ ಹುಚ್ಚನ್ನೆಲ್ಲ ಮರೆತುಬಿಡು.
ಇಲ್ಲ ನನ್ನನ್ನು ಮರೆತು....’ ತಡರಾತ್ರಿ ಫೋನ್ ಮಾಡಿ ಇದ್ದಕ್ಕಿದ್ದಂತೆ ಕಟ್ ಮಾಡಿದ ಸೋನು. ಇವೆಲ್ಲವುದರಿಂದಾಗಿ
ಮೊದಲೇ ದಿಲೀಪನಿಗೆ ತಲೆಕೆಟ್ಟುಹೋಗಿತ್ತು. ಈಗ ಈ ಚಿಕ್ಕಪ್ಪ ಅನ್ನಿಸಿಕೊಂಡವನಿಂದ ಇಲ್ಲದಿರೋ ಆಪಾದನೆ.
ಟವೆಲಿನಲ್ಲಿ ತೋಳು ಒರೆಸಿಕೊಳ್ಳುತ್ತಾ ಅಪ್ಪ ಚಿಕ್ಕಪ್ಪ ಕುಳಿತಿದ್ದಲ್ಲಿಗೆ ಬಂದ “ಅಲ್ಲ ಚಿಕ್ಕಪ್ಪ.
ತಲೇಲಿ ಒಂದ್ಸ್ವಲ್ಪ ಬುದ್ಧಿ ಇಟ್ಕೊಂಡು ಮಾತಾಡಿ. ನಾನೇನು ನಿಮ್ಮ ಕೊರಳ ಪಟ್ಟಿ ಇಡ್ಕೊಂಡಿದ್ನಾ ಸುಮತೀನ
ಅವನಿಗೇ ಕೊಟ್ಟು ಮದುವೆ ಮಾಡಿ ಅಂತ. ಅರ್ಧ ಮಾತುಕತೆ ಮುಗಿದ ಮೇಲೆ ತಾನೆ ನಿಮಗೆ ನಾನೂ ಅನಂತ ಕ್ಲಾಸ್
ಮೇಟ್ಸೂ ಅಂತ ಗೊತ್ತಾಗಿದ್ದು. ಹುಡುಗ ಹೆಂಗೆ ಅಂದ್ರಿ.....ನಿಮ್ಮ ದೃಷ್ಟೀಲಿ ನನ್ನಂಥವನಂತೂ ಒಳ್ಳೇ
ಹುಡುಗ ಅಲ್ಲ ತಾನೇ?” ಇರಿಯುವ ದೃಷ್ಟಿಯಿಂದ ಚಿಕ್ಕಪ್ಪನನ್ನು ನೋಡುತ್ತಾ ಕೇಳಿದ.
“ಅದೂ .. ಅದೂ...ಹಂಗಲ್ಲ”
“ಯಾಕೆ ತೊದಲ್ತೀರಿ. ಇಲ್ಲ ಅಂತ್ಹೇಳಿ. ನಿಮ್ಮ
ದೃಷ್ಟೀಲಿ ಒಳ್ಳೇ ಹುಡುಗ ಹೆಂಗಿರ್ಬೇಕೋ ಹಂಗಿದ್ದ. ನಾನೂ ಅದನ್ನೇ ಹೇಳಿದ್ದು. ಈಗ ನಾನೇ ಏನೋ ಸುಮತೀಗೆ
ವಿಷ ಕೊಟ್ಟಿರೋ ಥರ ಮಾತಾಡ್ತೀರ”
“ಅದು ಹಂಗಲ್ಲ ಕಣ್ಮಗಾ”
“ಹಂಗೂ ಇಲ್ಲ. ಹಿಂಗೂ ಇಲ್ಲ. ನಿಮ್ಮ ನಿಮ್ಮ ತೂತು
ಮುಚ್ಕೊಳ್ಳಿ ಅಂದ್ರೆ ಊರೋರ ತೂತು ನೋಡಿ ನಗೋದ್ ಚೆನ್ನಾಗಿ ಕಲ್ತಿದ್ದೀರ” ಎಂದ್ಹೇಳಿ ಒಳಹೋದ. ಇಷ್ಟೊತ್ತು
ಸುಮ್ಮನಿದ್ದ ಅಪ್ಪ “ಲೋ ದೊಡ್ಡೋರು ಚಿಕ್ಕೋರು ಅನ್ನೋ ಜ್ಞಾನ ಬೇಡ್ವಾ. ಹಿಂಗಾ ದೊಡ್ಡೋರತ್ರ ಮಾತಾಡೋದು”
ಎಂದರು. “ದೊಡ್ಡೋರಿಗೆ ದೊಡ್ಡೋರ್ ಥರಾ ನಡ್ಕೋಳ್ಳೋದು ಕಲ್ಸಿ ಮೊದ್ಲು. ಎಲ್ಲ ನನಗೆ ಹೇಳೋರೇ ಆದ್ರೂ”
ರೂಮು ಸೇರಿದ. ‘ಮೈದುನಂದೂ ಅದೇ ಗೋಳು, ಮಗಂದೂ ಅದೇ ಗೋಳು. ದಬ್ಬೆ ಕಟ್ಟಿದರೂ ನೆಟ್ಟಗಾಗದವರು’ ಎಂದುಕೊಳ್ಳುತ್ತಾ
ವಗ್ಗರಣೆ ಹಾಕುತ್ತಿದ್ದರು ದಿಲೀಪನ ತಾಯಿ. ಬಟ್ಟೆ ತೊಟ್ಟು ಹೊರಬಂದ. “ತೋಟಕ್ಕೆ ಹೋಗ್ಬರ್ತೀನಿ ಕಣಮ್ಮ”
ಎಂದ್ಹೇಳಿ ಹೊರಡಲನುವಾದ. “ಲೋ. ಸಿಟ್ಬಂತು ಅಂತ ಅನ್ನ ಬಿಟ್ಬಿಟ್ತಾರಾ? ನೀನು ಕೇಳಿದೆ ಅಂತ ಉಪ್ಪಿಟ್ಟು
ಮಾಡ್ತಿದ್ದೀನಿ. ಇನ್ನೆರಡು ನಿಮಿಷ ಇರು” ಒಳಗಿನಿಂದಲೇ ಕೂಗಿ ಹೇಳಿದರು.
‘ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಕ್ಕೆ ಬಂದವ್ರಲ್ಲ.
ತಟ್ಟೆ ತುಂಬಾ ಹಾಕ್ಕೊಡಿ ಅವ್ರಿಗೆ’ ಚಿಕ್ಕಪ್ಪನ ಕಡೆ ನೋಡುತ್ತಾ “ನನಗೀಗ ಹಸಿವಿಲ್ಲ. ಕಾಯಿ ಕೀಳಿಸಿ
ಬಂದು ತಿಂತೀನಿ” ಎಂದು ಹೇಳಿ ಅಪ್ಪ ‘ದಿಲೀ..ಲೋ ದಿಲೀ’ ಎಂದು ಕೂಗಿಕೊಂಡಿದ್ದಕ್ಕೂ ಪ್ರತಿಕ್ರಿಯಿಸದೆ
ಹೊರಟು ಹೋದ.
* * * *
ನಾಲ್ಕು ತಿಂಗಳ ಮೊದಲು ವಿಜಾಪುರದ ಇಬ್ರಾಹಿಂ
ರೋಜಾದ ಹುಲ್ಲು ಹಾಸಿನ ಮೇಲೆ ಕುಳಿತು ಚಿತ್ರಕಥೆಯ ಇಂಟರ್ವಲ್ ನಂತರದ ಮೊದಲ ಸೀನನ್ನು ಬರೆಯುತ್ತಿರುವಾಗ
ಅನಂತನ ಫೋನ್ ಬಂದಿತ್ತು. ಅವನ ನಂಬರ್ರೂ ಇರಲಿಲ್ಲ ದಿಲೀಪನ ಬಳಿ. ಅನಂತ ಅವನಿಗೆ ಇಂಜಿನಿಯರ್ರಿಂಗ್
ಓದುವಾಗ ಕ್ಲಾಸ್ಮೇಟು. ಅನಂತನದು ಮುಂದಿನ ಬೆಂಚು, ಇವನು ಹಿಂದಿನ ಬೆಂಚೋ ಅಥವಾ ಗುರುಶ್ರೀ ಸಂಜಯ ಸಿದ್ಧಾರ್ಥ
ಥಿಯೇಟರ್ರೋ ಅಥವಾ ಸೆಂಟ್ರಲ್ ಲೈಬ್ರರೀನೋ. ಎದುರು ಸಿಕ್ಕಾಗೊಮ್ಮೆ ನಗು ‘ಹಾಯ್ ಊಟ ಆಯ್ತಾ? ತಿಂಡಿ
ಆಯ್ತಾ? ಕಾಫಿ ಕುಡ್ದ?’ ಎಂದು ಕೇಳುವಷ್ಟರ ಮಟ್ಟಿಗಿನ ಪರಿಚಯ. ಈಗ ಅನಂತನಿಗೆ ಐವತ್ತೋ ಅರವತ್ತೋ ಸಾವಿರ
ಸಂಬಳ, ಒಂದು ಫಾರಿನ್ ಟ್ರಿಪ್ಪೂ ಆಗಿದೆ. ಇಪ್ಪತ್ತು ಸಾವಿರ ಸಂಬಳಕ್ಕೆ ಕೆಲಸದಲ್ಲಿದ್ದ ದಿಲೀಪ; ಕಥಾಪಾತ್ರಗಳು
ಒದ್ದೂ ಒದ್ದೂ ಅವುಗಳ ಒತ್ತಾಯದ ಮೇರೆಗೆ ಎ.ಸಿ. ಚೇಂಬರನ್ನು ತೊರೆದು ಗಾಂಧೀನಗರದಲ್ಲಿ ಅಲೆಯಲು ಪ್ರಾರಂಭಿಸಿ
ಹತ್ತಿರತ್ತಿರ ಎರಡು ವರ್ಷವಾಗಿತ್ತು. ದುಡ್ಡು ನಿಯಮಿತವಾಗಿ ಬರೋ ಕೆಲಸಕ್ಕೆ ಸಮಾಜದಲ್ಲಿರೋ ಬೆಲೆ ತಿಳಿದಿದ್ದು
ಕೆಲಸ ಬಿಟ್ಟ ಮೇಲೆ. ಬೇರೆಯವರ ಮಾತುಗಳನ್ನೆಲ್ಲಾ ಅಷ್ಟಾಗಿ ತಲೆಗೆ ಹಚ್ಚಿಕೊಳ್ಳದೆ ಸಿಗುವ ಚಿಕ್ಕ ಪುಟ್ಟ
ಕೆಲಸಗಳನ್ನೇ ಶ್ರದ್ಧೆಯಿಂದ ಮಾಡುತ್ತಾ ಚಿತ್ರಕಥೆಗಳನ್ನು ಬರೆಯುವುದರಲ್ಲಿ ಬ್ಯುಸಿಯಾಗಿದ್ದ.
“ಹಲೋ ದಿಲೀಪ! ನಾನು ಅನಂತ ಕಣೋ ಗೊತ್ತಾಯ್ತ?
ನಿನ್ನ ಇಂಜಿನಿಯರಿಂಗ್ ಫ್ರೆಂಡೂ” ಎಂದು ಅನಂತ ಹೇಳಿದಾಗ ದೇವ್ರಾಣೆ ದಿಲೀಪನಿಗೆ ಗೊತ್ತಾಗಲಿಲ್ಲ.
“ಹ್ಞು ಹ್ಞು ಗೊತ್ತಾಯ್ತು ಗುರು. ಹೆಂಗಿದ್ದೀಯ?” ಎಂದು ಕೇಳಿ ಸ್ವಲ್ಪ ಸಮಯದ ನಂತರವಷ್ಟೇ ಅನಂತನ ಮುಖಾರವಿಂದ
ಕಣ್ಣಪಟಲದಲ್ಲಿ ಮೂಡಿದ್ದು.
“ನನಗೇನಪ್ಪ ಆರಾಮಿದ್ದೀನಿ. ನಿನ್ಕಥೆ ಹೇಳು.
ಕೆಲಸ ಎಲ್ಲಾ ಬಿಟ್ಬಿಟ್ಟು ಪಿಕ್ಚರ್ ತೆಗೀತೀನಿ ಅಂತ ಓಡಾಡ್ತಿದ್ದೀಯಂತೆ”
‘ಇವರ್ಗೆಲ್ಲಾ ಕಾಮಿಡಿ ಆಗೋಯ್ತಲ್ಲ ನನ್ನ ಜೀವನ’
“ಏನೋ ಈ ಫೀಲ್ಡಿಗೆ ಬರಬೇಕು ಅನ್ನಿಸ್ತು, ಬಂದೆ. ಮತ್ತೆ ನಂಬರ್ ಯಾರ್ ಕೊಟ್ರಪ್ಪ”
“ನಿನ್ನ ತಂಗಿ ಸುಮತಿ ಕೊಟ್ಲೂ ಕಣೋ”
‘ಎಲಾ ಬಡ್ಡೀಮಗನೇ ಸುಮತಿಗೆ ಎಲ್ಲಿ ಗಂಟು ಬಿದ್ದ’
“ಓ ಅವಳು ಕೊಟ್ಳಾ! ನಿನಗೆ ಹೇಗೆ ಪರಿಚಯ?”
“ನೀನ್ಬಿಡಪ್ಪಾ ಮನೆ ಮಠ ಎಲ್ಲ ಮರೆತು ಆರಾಮವಾಗಿದ್ದೀಯ.
ಊರ ಕಡೆ ಬಂದ್ರೆ ಗೊತ್ತಾಗುತ್ತೆ. ಮನೇಲಿ ಹೆಣ್ಣು ಹುಡುಕುತ್ತಿದ್ರು. ನಿನ್ನ ತಂಗಿ ಸಂಬಂಧ ಬಂತು.
ಈಗ ಮೂರು ದಿನದ ಕೆಳಗೆ ನೋಡೋದಿಕ್ಕೆ ಹೋಗಿದ್ದೆ. ಹಂಗೇ ಮಾತಾಡ್ತ ನಮ್ಮ ಕಾಲೇಜು ವಿಷಯ ಬಂತು. ನಿಮ್ಮಪ್ಪ
ಹೇಳಿದ್ರು ನನ್ನ ಮಗಾನೂ ಅದೇ ಕಾಲೇಜು ಅಂತ. ಯಾರು ಅಂತ ಕೇಳಿದ್ರೆ ನೀನು!. ಅದಿಕ್ಕೆ ನಂಬರ್ ತೆಗೊಂಡು
ಫೋನ್ ಮಾಡ್ದೆ”
“ಅಚ್ಛಾ ಅಚ್ಛಾ.. ಮತ್ತೆ ಮದುವೆ ಮಾತುಕತೆ ಎಲ್ಲಿಗೆ
ಬಂತು”
“ನನಗೇನೋ ಒಪ್ಪಿಗೆನಪ್ಪ. ಮೋಸ್ಟ್ಲೀ ಸುಮತಿಗೂ
ನಾನು ಹಿಡಿಸಿರಬೇಕು. ದೊಡ್ಡೋರು ಏನೇನ್ ಮಾಡ್ತಾರೋ ನೋಡ್ಬೇಕಲ್ಲ”
“ಅದ್ಸರಿ ಅನ್ನು. ಸರಿ ಅನಂತ ನಾನು ಸ್ವಲ್ಪ ಹೊರಗಿದ್ದೀನಿ.
ಊರಿಗೆ ಬಂದಾಗ ಸಿಗ್ತೀನಿ” ಎಂದ್ಹೇಳಿ ಮಾತು ಮುಗಿಸಿದ. ಅರ್ಧ ಘಂಟೆಯ ನಂತರ ಸುಮತೀನೂ ಫೋನ್ ಮಾಡಿದ್ಲು,
ಚಿಕ್ಕಪ್ಪನೂ ಮಾತನಾಡಿದ್ರು. ಊರಿಗೆ ಬಂದಿದ್ರೆ ಚೆನ್ನಾಗಿರೋದು ಈ ಟೈಮಲ್ಲಿ ಅಂದ್ರು. ಸರಿ ಇದಾದ್ರೂ
‘ಒಳ್ಳೆ’ ಕೆಲಸ ಆಗ್ಲಿ ನನ್ನಿಂದ ಅಂದುಕೊಳ್ಳುತ್ತಾ ಇಂಟರ್ವಲ್ಲಿಗೇ ಕಥೆ ನಿಲ್ಲಿಸಿ ಊರಿಗೆ ಹೊರಟ.
ಊರು ತಲುಪುವಷ್ಟರಲ್ಲಿ ಎರಡೂ ಮನೆಯವರು ಹೆಚ್ಚು ಕಡಿಮೆ ಒಪ್ಪಿಯಾಗಿತ್ತು.
ಚಿಕ್ಕಪ್ಪ ಹುಡುಗ ಹೆಂಗೆ ಎಂದು ಕೇಳಿದರು. “ಒಳ್ಳೇ
ಹುಡುಗ” ಎಂದುತ್ತರಿಸುವಷ್ಟರಲ್ಲಿ “ಅಲ್ಲ ನಿನ್ನ ಥರ ‘ಒಳ್ಳೆ’ ಹುಡುಗನಾ?” ದೊಡ್ಡ ಜೋಕ್ ಮಾಡಿದವರಂತೆ
ನಕ್ಕರು. ಎಲ್ಲರೂ ನಕ್ಕರು. ಇವನೊಬ್ಬನನ್ನು ಬಿಟ್ಟು. “ಅಲ್ಲ ಚಿಕ್ಕಪ್ಪ. ನನ್ನ ಪಾಡಿಗೆ ನಾನು ಕೆಲಸ
ಮಾಡಿಕೊಂಡಿದ್ದಾಗ ಫೋನ್ ಮಾಡಿ ಕರೆಸಿದ್ದು ಕಾಮಿಡಿ ಮಾಡ್ಲಿಕ್ಕ?! ಅವನ್ಯಾವಾಗ್ಲೂ ಕಾಲೇಜಲ್ಲಿ ಫಸ್ಷ್
ಬೆಂಚು, ನಮ್ತರ ಹುಡುಗೀರಿಗೆ ಸಿಳ್ಳೆ ಹಾಕಿಲ್ಲ, ರಾಕೆಟ್ ಬಿಟ್ಟಿಲ್ಲ. ಓದು ಮುಗಿಯೋವರೆಗಂತೂ ನಮ್ಜೊತೆ
ಸಿಗರೇಟು ಸೇದಿಲ್ಲ, ಎಣ್ಣೇನೂ ಹಾಕಿಲ್ಲ. ಆಮೇಲಿನದ್ದು ನನಗೆ ಗೊತ್ತಿಲ್ಲ. ಒಳ್ಳೇನೋ ಕೆಟ್ಟೋನೋ ನೀವೇ
ನಿರ್ಧರಿಸಿ” ಹೇಳಿ ಮುಗಿಸಿ ದಡ ದಡ ಎದ್ದು ಬಂದಿದ್ದ. ಅಷ್ಟಕ್ಕೆ ಇವನನ್ನು ಬಿಟ್ರಾ? ಉಹ್ಞು! ಮತ್ತೆ
ರಾತ್ರಿ ಬಂದ್ರು. “ಏನ್ ಮಗಾ ನಾನೇನೋ ತಮಾಷೆಗೆ ಹೇಳಿದ್ರೆ ಬೇಜಾರು ಮಾಡ್ಕೊಂಡು ಎದ್ದು ಬರೋದಾ?” ದನಿ
ಮೆತ್ತಗಾಗಿತ್ತು.
“ಹೋಗ್ಲಿ ಬಿಡಿ. ನಾನೂ ಯಾವುದೋ ಮೂಡಿನಲ್ಲಿದ್ದೆ.
ಯಾವಾಗ ಬರ್ತಾರಂತೆ ಮಾತುಕತೆಗೆ?” ದಿಲೀಪ ಸಾವಧಾನದಿಂದ ಕೇಳಿದ.
“ನಾಡಿದ್ದು ಬರ್ತೀವಿ ಅಂದ್ರು. ಅದಿಕ್ಕೆ ಮುಂಚೆ
ನೀನು ಅನಂತನ ಹತ್ತಿರ ಮಾತನಾಡು ಒಂದ್ಸಲ. ಅವನ ಡಿಮ್ಯಾಂಡ್ಸೂ ಏನು ಅಂತ”
‘ಓಹೋ ಹಿಂಗೆ! ಇದಿಕ್ಕೆ ಮತ್ತೆ ಬಂದಿರೋದು ನನ್ನ
ಬಳಿ’ “ನಾಡಿದ್ದು ಬರ್ತಾರಲ್ಲ ಆಗ್ಲೇ ಮಾತನಾಡಿ”
“ಅದು ಸಂಪ್ರದಾಯ. ಅದರ ಪಾಡಿಗದು ನಡೆಯುತ್ತೆ.
ಅವನು ನಿನ್ನ ಫ್ರೆಂಡು. ಮುಂಚೇನೆ ವಿಚಾರಿಸಿಕೊಂಡ್ರೆ ತಪ್ಪೇನು”
“ಸರಿ ಸರಿ ನಾನು ಫೋನ್ ಮಾಡಿ ಬೆಳಿಗ್ಗೆ ಹೇಳ್ತೀನಿ
ಬಿಡಿ” ಎಂದ.
ಚಿಕ್ಕಪ್ಪ ಹೋದ ನಂತರ ಅನಂತನಿಗೆ ಫೋನ್ ಮಾಡಿದ್ದ.
‘ನನಗೇ ಅರವತ್ತು ಸಾವಿರ ಬರುತ್ತೆ. ನನ್ನಂದೆಂತ ಡಿಮ್ಯಾಂಡಿರುತ್ತೋ? ಏನು ಡಿಮ್ಯಾಂಡಿಲ್ಲಪ್ಪ. ಎಲ್ಲ
ದೊಡ್ಡೋರು ಮಾತಾಡ್ಕೋತಾರೆ ಬಿಡು’ ಎಂದಿದ್ದ. ಮಾರನೇ ಬೆಳಿಗ್ಗೆ ಅವನು ಹೇಳಿದ್ದನ್ನೇ ಹೋಗಿ ವರದಿ ಒಪ್ಪಿಸಿದ.
‘ಹುಡುಗ ತುಂಬಾ ಒಳ್ಳೆಯವನು’ ‘ಚಿನ್ನದಂಥ ಹುಡುಗ’ ‘ಅಪ್ಪ ಅಮ್ಮನ ಮಾತು ಮೀರೋನಲ್ಲ’ ಕೊನೆಯದನ್ನು ಮಾತ್ರ
ದಿಲೀಪನನ್ನು ನೋಡುತ್ತಲೇ ಹೇಳಿದಂತಿತ್ತು. “ನೀನು ನಿಲ್ಲಬೇಕು ಅವತ್ತಿನ ದಿನ” ಎಂದು ಚಿಕ್ಕಪ್ಪ ಒತ್ತಾಯಿಸಿದರು.
ಏನೋ ಒಂದು ನೆವ ನೀಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನಾದರೂ
‘ಹಾಳಾದೋನು ವರ’ ಇವನ ಸ್ನೇಹಿತನಾದ್ದರಿಂದ
ಸಾಧ್ಯವಾಗಲಿಲ್ಲ.
ಮಾತುಕತೆ ದಿನ ಬಂತು. ಮೊದಲೇ ಹೇಳಿದಂತೆ ಅನಂತನಿಂದ
ಯಾವುದೇ ಬೇಡಿಕೆಯಿರಲಿಲ್ಲ. ಅವರ ಅಪ್ಪ ಅಮ್ಮನದು ಒಂದೇ ಒಂದು ಬೇಡಿಕೆ. ಬೆಂಗಳೂರಿನ ನಾಗರಬಾವಿಯಲ್ಲಿ
ಐವತ್ತು ಎಂಭತ್ತರದೊಂದೇ ಒಂದು ಸೈಟು. ಅದಾಗಲಿಲ್ಲ ಅಂದ್ರೂ ಪರವಾಗಿಲ್ಲ ಅಲ್ಲೇ ನಾಗರಬಾವಿ ಸುತ್ತಮುತ್ತ
ನಲವತ್ತು ಅರವತ್ತರಲ್ಲಿ ಕಟ್ಟಿರೋ ಒಂದು ಮನೆಯಾದ್ರೂ ಸಾಕು. ಅಷ್ಟೇ! ಅನಂತನದು ಹಿರಿಯರಿಗೆ ವಿಧೇಯವಾದ
ಮೌನ! ಮದುವೆ ಮಾತುಕತೆ ಅಲ್ಲಿಗೆ ನಿಂತಿತು. ದಿಲೀಪನನ್ನು ಅಪಹಾಸ್ಯ ಮಾಡಲು ಮತ್ತೊಂದು ವಿಷಯ ದಕ್ಕಿತು.
* * *
ಅಂದಹಾಗೆ ಮುಂದಿನ ತಿಂಗಳು ಸುಮತಿಗೆ ಮದುವೆ ನಿಶ್ಚಯವಾಗಿದೆ.
ಈಗ ಸಿಕ್ಕಿರೋ ಹುಡುಗ ಅನಂತನಷ್ಟು ಒಳ್ಳೆಯವನಲ್ಲ. ಮಂಡ್ಯದಲ್ಲೊಂದು ನಲವತ್ತು ಅರವತ್ತರ ಸೈಟಿಗೇ ಮದುವೆಯಾಗುತ್ತಿದ್ದಾನೆ!
story that was published in avadhi
photo source - quantmleap
No comments:
Post a Comment