Oct 19, 2012

ತನಿಖಾ ವರದಿಯ ನೈತಿಕತೆಯೇ ಪ್ರಶ್ನಾರ್ಹವೆನಿಸತೊಡಗಿದಾಗ?!



ಡಾ ಅಶೋಕ್ ಕೆ ಆರ್

ಮಹಾಲಯ ಅಮಾವಾಸೆಗೆಂದು ಶನಿವಾರ ಊರು ತಲುಪಿ ಕನ್ನಡದ ಸುದ್ದಿವಾಹಿನಿಗಳನ್ನು ನೋಡೋಣವೆಂದು ಚಾನೆಲ್ಲನ್ನು ಬದಲಿಸುತ್ತ ಕುಳಿತಾಗ ನಟಿ ಹೇಮಾಶ್ರಿಯ ಸಾವಿನ ಸುತ್ತ ಗೋಜಲು – ಗೊಂದಲಗಳನ್ನು ನಿರ್ಮಿಸುವಲ್ಲಿ ಎಲ್ಲಾ ವಾಹಿನಿಗಳೂ ಪೈಪೋಟಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದವು. ‘ಅಯ್ಯೋ! ಮೂರು ದಿನದಿಂದ ಎಲ್ಲಾ ಚಾನೆಲ್ಲಿನಲ್ಲೂ ಇದೇ ಸುದ್ದಿ. ಸತ್ತೋಳ ಬಗ್ಗೆ ನಿಜವೋ – ಸುಳ್ಳೋ ಬೇಡದ ಮಾತನ್ನೆಲ್ಲಾ ಆಡುತ್ತಿದ್ದಾರೆ’ ಎಂದರು ಮನೆಯವರು. ಈ ಸುದ್ದಿ ವಾಹಿನಿಗಳ ಗೋಳೇ ಇಷ್ಟು ಎಂದುಕೊಳ್ಳುತ್ತಾ ಚಾನೆಲ್ ಬದಲಿಸಿದೆ. ಮಾರನೇ ದಿನ ಮತ್ತೊಂದು ‘ಪ್ರಹಸನಕ್ಕೆ’ ಕನ್ನಡ ವಾಹಿನಿಗಳು ಸಿದ್ಧಗೊಳ್ಳುತ್ತಿರಬಹುದೆಂಬ ಯಾವುದೇ ಸೂಚನೆಯಿಲ್ಲದೆ ಭಾನುವಾರ ಪಬ್ಲಿಕ್ ಟಿ ವಿ ಹಾಕಿದೆ!!

ಸ್ವಾಮಿಯ ಕಳ್ಳ ಹೋರಾಟದ ಕಥೆ: -

          ಯಾವುದೇ ಚಳುವಳಿಯಲ್ಲಿ ಪಾಲ್ಗೊಂಡ ಹೋರಾಟಗಾರರ ನಡುವೆ ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಯನ್ನೇ ಪ್ರಮುಖವಾಗಿಸಿಕೊಂಡವರು ಇದ್ದೇ ಇರುತ್ತಾರೆ. ಅವರನ್ನು ಗುರುತಿಸಿ ಚಳುವಳಿಯಿಂದ ಅವರನ್ನು ಹೊರಹಾಕುವ ಅಥವಾ ಅವರನ್ನು ಸರಿದಾರಿಗೆ ತರುವ ಜವಾಬುದಾರಿ ಆ ಚಳುವಳಿಯ ಮುಖಂಡರದು. ಮುಖಂಡರೇ ಲೋಭಿಯಾಗಿಬಿಟ್ಟಿದ್ದರೆ? ಆ ಮುಖಂಡನ ಹಿಂದಿರುವ ಜನರೇ ಮುಖಂಡನನ್ನು ಚಳುವಳಿಯಿಂದ ದೂರ ಸರಿಸಿ ಹೋರಾಟ ಮುಂದುವರಿಸಬೇಕಷ್ಟೇ. ತತ್ವಾಧಾರಿತ ಹೋರಾಟಗಾರರ ಉಪಸ್ಥಿತಿಯಲ್ಲಿ ಮುಖಂಡನೊಬ್ಬನ ಆಗಮನ – ನಿರ್ಗಮನದಿಂದ ಚಳುವಳಿ ವಿಚಲಿತಗೊಳ್ಳಲಾರದು; ಕೊಂಚ ಹಿನ್ನಡೆ ಅನುಭವಿಸುವುದು ಸ್ವಾಭಾವಿಕವಾದರೂ ಮಂದಡಿಯಿಡಲು ಹೆಚ್ಚು ಸಮಯ ತೆಗೆದುಕೊಳ್ಳಲಾರದು. ನಿತ್ಯಾನಂದನ ವಿರುದ್ಧದ ಹೋರಾಟದ ಮೂಲಕ ದೃಶ್ಯ ಮಾಧ್ಯಮಗಳ ಮುಖಾಂತರವೇ ಪ್ರಸಿದ್ಧಿಗೆ ಬಂದ ಕಾಳಿ ಸ್ವಾಮಿ[ಋಷಿಕುಮಾರ ಸ್ವಾಮಿ] ತನ್ನ ಮಾಜಿ ‘ಶಿಷ್ಯ’ರ ಮೂಲಕ ತನ್ನ ನಿಜರೂಪದ ವಿಶ್ವದರ್ಶನ ಮಾಡಿಸಿದ್ದಾನೆ! ಮಾಜಿ ಶಿಷ್ಯರು ಪಬ್ಲಿಕ್ ಟಿವಿಯನ್ನು ವೇದಿಕೆಯಾಗಿ ಉಪಯೋಗಿಸಿಕೊಂಡು ಕಪಟ ಸ್ವಾಮಿಯೊಬ್ಬನ ಅಸಲಿ ಮುಖವನ್ನು, ಆತನ ಧನದಾಹವನ್ನು ಅನಾವರಣಗೊಳಿಸಿ ಸ್ವಾಮೀಜಿಯ ‘ಸಮಾಜ ಪರ’ ಕಾಳಜಿಗಳನ್ನು ನೈಜವೆಂದೇ ನಂಬಿದ್ದ ಸಹಚರರಿಗೆ, ಹಿಂಬಾಲಕರಿಗೆ ಅಘಾತವುಂಟುಮಾಡಿದ್ದಾರೆ.

          ಮಾಜಿ ಶಿಷ್ಯರು ಸ್ವಾಮೀಜಿಯ ದುರುಳ ಮುಖವನ್ನು ಅನಾವರಣಗೊಳಿಸಲು ಪಟ್ಟ ಶ್ರಮ ಮತ್ತು ಪಬ್ಲಿಕ್ ವಾಹಿನಿ ಅದನ್ನು ಪ್ರಸಾರ ಮಾಡಿದ್ದು ಎರಡೂ ಶ್ಲಾಘನೀಯವೇ. ಚಳುವಳಿಗಳನ್ನು ಅನೀತಿವಂತರ ದೆಸೆಯಿಂದ ಹಾಳಾಗುವುದನ್ನು ತಪ್ಪಿಸಲು ಸಹಕಾರಿಯಾಗುವಂತಹ ಸಂಗತಿಯೂ ಹೌದು. ಆದರೆ ಇಂಥದೊಂದು ವರದಿ ಮತ್ತದರ ಪ್ರಸಾರದ ವಿಷಯದಲ್ಲಿ ದೃಶ್ಯಮಾಧ್ಯಮಗಳು ನಡೆದುಕೊಂಡ ರೀತಿ ಸರಿಯೇ? ಮಾಧ್ಯಮದವರೇ ಉತ್ತರಿಸಬೇಕು. ಇಂಥಹ ವರದಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಬೇಕಾದ ಮಾಧ್ಯಮ ಮುಖ್ಯಸ್ಥರೇ ಎಡವುತ್ತಿದ್ದಾರೆಯೇ? ಒಂದು ಘಂಟೆಯ ಚರ್ಚೆಯಲ್ಲಿ, ನಂತರ ದಿನಕ್ಕತ್ತು ನಿಮಿಷ ಆ ಘಟನೆಯ ಫಾಲೋಅಪ್ ನಲ್ಲಿ ಮುಗಿಯಬೇಕಿದ್ದ ವರದಿಯನ್ನು ಒಂದಲ್ಲ ಎರಡಲ್ಲ ಮೂರು ದಿನ ಸತತವಾಗಿ ಜಗ್ಗಾಡಿದ ಉದ್ದಿಶ್ಯವೇನು ಎಂಬ ಸಂಶಯ ನೋಡುಗನಲ್ಲಿ ಮೂಡುವುದು ಸಹಜವಲ್ಲವೇ? ಮೊದಲ ದಿನ ಪಬ್ಲಿಕ್ ಟಿವಿಯಲ್ಲಿ ನಂತರ ಇತರ ವಾಹಿನಿಗಳಲ್ಲಿ ಸತತವಾಗಿ ಸ್ವಾಮಿಯ ಬಗ್ಗೆಯೇ ಚರ್ಚೆ ನಡೆಯಿತು. ಹೋಗಲಿ, ಕರ್ನಾಟಕದಲ್ಲಿ ಯಾವ ರೀತಿಯ ಸಾಮಾಜಿಕ ಸಮಸ್ಯೆಗಳೂ ಇಲ್ಲ, ಇರುವುದಿದೊಂದೇ ಸಮಸ್ಯೆ ಎಂಬ ಭಾವನೆ ಮಾಧ್ಯಮದವರಿಗಿದ್ದರೆ ಕೊನೇ ಪಕ್ಷ ಚರ್ಚೆಯ ಸ್ವರೂಪವನ್ನಾದರೂ ಸರಿದಿಕ್ಕಿನಲ್ಲಿಡಬೇಕಿತ್ತಲ್ಲವೇ? ಈ ಕಳ್ಳ ಸ್ವಾಮಿಯ ‘ಡೀಲ್’ ಚಳುವಳಿಗಳ ನೆಪದಲ್ಲಿ ದೇಶದಲ್ಲಿ - ರಾಜ್ಯದಲ್ಲಿ ಸ್ವಸ್ವಾರ್ಥದಿಂದಾಗಿ ಕುಗ್ಗಿ ಹೋದ ಚಳುವಳಿಗಳ ವಿಮರ್ಶೆ ನಡೆದಿದ್ದರೆ ನೈಜ ಕಳಕಳಿಯ ಇಂದಿನ ಹೋರಾಟಗಾರರು ತಮ್ಮ ಸಂಗಡಿಗರ ಬಗ್ಗೆ ಮುಖಂಡರ ಬಗ್ಗೆ ಎಚ್ಚರವಹಿಸಿ ಚಳುವಳಿಗಳ ಬಲ ಕುಗ್ಗದಂತೆ ಜಾಗ್ರತವಹಿಸಲು ಸಹಕಾರಿಯಾಗುತ್ತಿತ್ತೇನೋ? ಆದರೆ ನಡೆದ ಚರ್ಚೆಗಳು ಸ್ವಾಮಿಯ ‘ಪೂರ್ವಜನ್ಮದ’ ವೈಯಕ್ತಿಕ ವಿಷಯಗಳೆಡೆಗೇ ಹೆಚ್ಚೆಚ್ಚು ಕೇಂದ್ರೀಕೃತಗೊಳ್ಳುತ್ತಾ ಸಾಗಿ ಸ್ವಾಮೀಜಿಯ ವಿರುದ್ಧ ದೋಷಾರೋಪಣೆ ಮಾಡಿದವರಲ್ಲೂ ಯಾವುದೋ ವೈಯಕ್ತಿಕ ಹಿತಾಸಕ್ತಿ ಇದ್ದಿರಬಹುದು ಎಂಬ ಅನುಮಾನ ಮೂಡಿಸುವಲ್ಲಿ ಮಾಧ್ಯಮಗಳು ಯಶಸ್ವಿಯಾಗಿವೆ. ಸ್ವಾಮೀಜಿಯ ಮದುವೆ – ಮಕ್ಕಳು, ನಾಟ್ಯ, ನಾಟಕ, ಸಿನಿಮಾದ ಸಂಗತಿಗಳನ್ನೇ ಅಗತ್ಯಕ್ಕಿಂತ ಹೆಚ್ಚಾಗಿ ವೈಭವೀಕರಿಸಿದ ಮಾಧ್ಯಮಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಸಂಶಯ ಹುಟ್ಟುತ್ತದೆ. ಕೆಲವು ಮಾಧ್ಯಮಗಳು ವಿರುದ್ಧವಾಗಿ, ಕೆಲವು ಮಾಧ್ಯಮಗಳು ಸ್ವಾಮಿಯ ಪರವಾಗಿ ನಡೆಸಿದ ಕಾರ್ಯಕ್ರಮಗಳು ಪ್ರತಿಯೊಂದೂ ವಾಹಿನಿಗೂ ಅಥವಾ ಅದರ ಒಡೆಯರಿಗೂ ‘ಹಿಡನ್ ಅಜೆಂಡಾ’ ಇರಬಹುದೆಂಬ ಭಾವ ಮೂಡಿಸುತ್ತದೆ. 

          ಸುದ್ದಿ ಸಂಗ್ರಹ, ಅದರ ನೈಜತೆಯ ಜೊತೆಜೊತೆಗೆ ಅದನ್ನು ಪ್ರಸ್ತುತಪಡಿಸುವ ವಿಧಾನವೂ ಮುಖ್ಯವೆಂಬ ಅಂಶ ಪತ್ರಿಕೋದ್ಯಮದಲ್ಲೇ ಈಸುತ್ತಿರುವವರಿಗೆ ತಿಳಿಯಲಿಲ್ಲವೇ? ಇಂಥ ಕೆಟ್ಟ ಪ್ರಸ್ತುತಿಯ ವರದಿಗಳನ್ನು ನಾಟಕದಂತೆ, ಸಿನಿಮಾದಂತೆ ನೋಡುತ್ತ ‘ಆನಂದಿಸುವ’, ವಾಹಿನಿಗಳ ಟಿ ಆರ್ ಪಿ ಹೆಚ್ಚಿಸಿ  ಇಂಥಹುದೇ ಕಾರ್ಯಕ್ರಮಗಳು ಮೂಡಿಬರಲು ತನ್ನ ಕೊಡುಗೆ ನೀಡುತ್ತಿರುವ ನೋಡುಗನ ಪಾತ್ರವನ್ನೂ ಇಲ್ಲಿ ಮರೆಯಬಾರದು. ಸಾಮಾಜಿಕ ಪ್ರಾಮುಖ್ಯತೆಯ ವರದಿಯೊಂದನ್ನು ವೈಯಕ್ತಿಕ ಟೀಕೆಯ ಮಟ್ಟಕ್ಕೆ ಇಳಿಸಿಬಿಡುವ ಇಂಥ ವರದಿಗಾರಿಕೆಗಳು ದೃಶ್ಯ ಮಾಧ್ಯಮದ ಮೇಲೆ ನಿಯಂತ್ರಣ ಹೇರಬೇಕೆಂಬ ಧ್ವನಿಗೆ ಮತ್ತಷ್ಟು ಬಲ ನೀಡುವುದರಲ್ಲಿ ಸಂಶಯವಿಲ್ಲ.
article printed in vartamaana

No comments:

Post a Comment