Oct 9, 2012

ಕದ್ದ ಸಿನಿಮಾದ ಆಸ್ಕರ್ ಪಯಣ



ranbir

ಡಾ ಅಶೋಕ್ ಕೆ ಆರ್
“ಬಿಡ್ರೀ ರೀ. ಆಸ್ಕರ್ ಪ್ರಶಸ್ತಿ ಕೊಡೋದು ಪರದೇಶದೋರು. ಅದು ಸಿಗದಿದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು” ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳುತ್ತೇವಾದರೂ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರದ ಸಂಗೀತಕ್ಕೆ ಎ. ಆರ್. ರೆಹಮಾನ್ ಗೆ ಆಸ್ಕರ್ ಪ್ರಶಸ್ತಿ ಬಂದಾಗ ಖುಷಿಪಟ್ಟಿದ್ದು ಸುಳ್ಳಲ್ಲ. ಮುಂದೊಂದು ದಿನ ಭಾರತೀಯ ಭಾಷೆಯ ಚಿತ್ರವೊಂದಕ್ಕೆ ಆಸ್ಕರ್ ದೊರೆತರೆ ಅಭೂತಪೂರ್ವವಾಗಿ ಸಂಭ್ರಮಿಸುವುದೂ ಸತ್ಯ. ಇಲ್ಲಿಯವರೆಗೆ ಭಾರತ ನಲವತ್ತೈದು ಚಿತ್ರಗಳನ್ನು ಆಸ್ಕರ್ ಪ್ರಶಸ್ತಿಗೆಂದು ಕಳುಹಿಸಿದೆಯಾದರೂ ಯಾವೊಂದು ಚಿತ್ರವೂ ಪ್ರಶಸ್ತಿ ಪಡೆದಿಲ್ಲ. ಪ್ರಶಸ್ತಿಯ ಸನಿಹಕ್ಕೆ ಬಂದಿದ್ದು ಬೆರಳೆಣಿಕೆಯ ಚಿತ್ರಗಳಷ್ಟೇ. ಭಾರತೀಯ ಚಿತ್ರವೆಂದರೆ ಹಿಂದಿ ಚಿತ್ರಗಳು ಮಾತ್ರ ಎಂಬ ಪೂರ್ವಗ್ರಹವೂ ಇದಕ್ಕೆ ಕಾರಣ ಎಂದರೆ ತಪ್ಪಲ್ಲ. ನಲವತ್ತೈದು ಚಿತ್ರಗಳಲ್ಲಿ ಮೂವತ್ತು ಹಿಂದಿ ಭಾಷೆಯವು, 8 ತಮಿಳು, ಮಲಯಾಳಂ, ಮರಾಠಿ ಬಂಗಾಳಿಯ ಎರಡು ಮತ್ತು ಉರ್ದುವಿನ ಒಂದು ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಕಳುಹಿಸಲಾಗಿದೆ. ಈ ವರ್ಷ ಆಸ್ಕರ್ ಗೆ ಭಾರತದಿಂದ ಆಯ್ಕೆ ಮಾಡಿ ಕಳುಹಿಸಿದ ಚಿತ್ರ ಅನುರಾಗ್ ಬಸು ನಿರ್ದೇಶನದ ಹಿಂದಿ ಚಿತ್ರ ‘ಬರ್ಫಿ’. ನಿಜಕ್ಕೂ ಇದು ಆಸ್ಕರ್ ಮೆಟ್ಟಿಲೇರಲು ಸಮರ್ಥವಾದ ಚಿತ್ರವೇ?

anurag basu
          ನಿನ್ನೆ 1960ರ ಇಂಗ್ಲೀಷ್ ಚಿತ್ರ ‘ದಿ ಅಪಾರ್ಟ್ ಮೆಂಟ್’ [the apartment] ವೀಕ್ಷಿಸುತ್ತಿದ್ದೆ. ಅದರ ಬಹುತೇಕ ಎಲ್ಲ ದೃಶ್ಯಗಳನ್ನು ಎಲ್ಲಿಯೋ ನೋಡಿದ್ದ ನೆನಪು! ನಾಯಕಿ ವಿಷ ಕುಡಿದ ದೃಶ್ಯ ನೋಡುತ್ತಿದ್ದಂತೆ ಅರಿವಿಗೆ ಬಂದಿದ್ದು – ಈ ಎಲ್ಲ ದೃಶ್ಯಗಳು ಇರುವುದು ಇದೇ ಅನುರಾಗ್ ಬಸು ನಿರ್ದೇಶನದ ‘ಲೈಫ್ ಇನ್ ಎ ಮೆಟ್ರೋ’ ಚಿತ್ರದಲ್ಲಿ! ನಾಲ್ಕೈದು ದಶಕಗಳ ಹಿಂದಿನ ಆಂಗ್ಲ ಚಿತ್ರದ ತದ್ರೂಪು ಈ ‘ಮೆಟ್ರೋ’ ಚಿತ್ರ; ಕೊಂಚ ಹಿಂದೀಕರಣಗೊಂಡಿದೆ ಅಷ್ಟೇ! ಬಸುರವರ ಹಿಂದಿನ ಚಿತ್ರ ‘ಮರ್ಡರ್’ ಕೂಡ ‘unfaithful’ ಚಿತ್ರದಿಂದ ‘ಸ್ಪೂರ್ತಿ’ ಪಡೆದಿದೆಯಂತೆ! ಸ್ಪೂರ್ತಿ ಪಡೆಯುವ ಉತ್ಸಾಹದ ನಿರ್ದೇಶಕನ ‘ಬರ್ಫಿ’ ಚಿತ್ರ ಯಾವುದರಿಂದ ಪ್ರೇರಿತವಾಗಿರಬಹುದು ಎಂದು ಹುಡುಕಹೊರಟಾಗ ಅರಿವಾಗಿದ್ದು ‘ಬರ್ಫಿ’ ಯಾವೊಂದು ಚಿತ್ರದ ನಕಲಲ್ಲ! ಸ್ವಂತ ಕಥೆ, ಚಿತ್ರಕಥೆ, ofcourse ಸ್ವಂತದ್ದೇ ಆಗಿರಬೇಕಾದ ಹಿಂದಿ ಸಂಭಾಷಣೆ – ಹೀಗೆ ಎಲ್ಲವೂ ‘ಸ್ವಂತದ್ದೇ’ ಆಗಿರುವ ‘ಬರ್ಫಿ’ ಚಿತ್ರ ‘ಸ್ಪೂರ್ತಿ’ಯ ನೆಪದಲ್ಲಿ ಹತ್ತಾರು ಚಿತ್ರಗಳ ದೃಶ್ಯಗಳನ್ನು ಅಳವಡಿಸಿಕೊಂಡಿದೆ! ಮೂಕ ಭಾಷೆಯ ಚಾರ್ಲಿ ಚಾಪ್ಲಿನ್ ಸಿನಿಮಾಗಳಿಂದ ಹಿಡಿದು ಫ್ರೆಂಚ್ ಭಾಷೆಯ ‘ಅಮೆಲಿ’ಯ ಸಂಗೀತದವರೆಗೆ ಭಾಷಾಭೇದ ಮಾಡದೆ ‘ಸ್ಪೂರ್ತಿ’ ಪಡೆದಿದ್ದಾರೆ. ಇಂಟರ್ನೆಟ್ ಕ್ರಾಂತಿಯ ಯುಗದಲ್ಲಿ ಪರಭಾಷೆಯ ಪರದೇಶದ ಚಿತ್ರಗಳನ್ನು ಸಬ್ ಟೈಟಲ್ ನೊಂದಿಗೆ ನೋಡಿದ್ದು ನಮ್ಮ ತಪ್ಪೇ ಹೊರತು ಅನುರಾಗ್ ಬಸುವಿನದಲ್ಲ! ಚಾರ್ಲಿ ಚಾಪ್ಲಿನ್ ನ ‘ಸಿಟಿ ಲೈಟ್ಸ್’ ಚಿತ್ರದ ಕಥೆ ಈಗಾಗಲೇ ಹಿಂದಿ, ಕನ್ನಡದಲ್ಲಿ [ಅನುರಾಗ ಸಂಗಮ] ಚಿತ್ರಿತವಾಗಿದೆ. ಅದರ ಅರಿವಾಗಿಯೋ ಏನೋ ಕೆಲವೇ ಕೆಲವು ದೃಶ್ಯಗಳನ್ನು ಮಾತ್ರ ಎರವಲು ಪಡೆದುಕೊಂಡಿದ್ದಾರೆ ಅನುರಾಗ್ ಬಸು!

          ವರುಷಕ್ಕೆ ಸಾವಿರಾರು ಸಿನಿಮಾಗಳು ತಯ್ಯಾರಾಗುತ್ತವೆ. ಅವುಗಳಿಗೆಲ್ಲ ಹೊಸ ಕಥೆ ಹೊಸ ಪರಿಣಾಮಕಾರಿ ದೃಶ್ಯಗಳನ್ನು ರಚಿಸುವುದು ಕಷ್ಟವೇ ಇರಬಹುದು. ಮತ್ತೊಂದು ಸಿನಿಮಾದ ಕಥೆಯಿಂದ ಸ್ಪೂರ್ತಿ ಪಡೆಯುವುದೂ ಸಾಮಾನ್ಯವೇ. ಕೆಲವೊಮ್ಮೆ ಯಾವುದೋ ಸಿನಿಮಾದ ಒಂದ್ಯಾವುದೋ ದೃಶ್ಯದ ಪ್ರಭಾವದಿಂದ ಹೊಸತೊಂದು ಎಳೆ ಸೃಜಿಸಿ ಮತ್ತೊಂದು ಕಥೆಯೇ ಹುಟ್ಟಬಹುದು. ಆದರೆ ದೃಶ್ಯಗಳನ್ನೇ ಯಥಾವತ್ತಾಗಿ ಪುನರ್ ಸೃಷ್ಟಿಸುವುದು ಎಷ್ಟರ ಮಟ್ಟಿಗೆ ಸರಿ? ಈಗಲೂ ಅನುರಾಗ್ ಬಸು ತನ್ನದು ಸ್ವಂತ ಚಿತ್ರ ಎಂದು ಸಾರಿ ಹೇಳುತ್ತಾ ಕಳುವಿನ ಆರೋಪ ಹೊರಿಸುವವರ ಮೇಲೆಯೇ ರೇಗುತ್ತಿದ್ದಾನೆ. “ಹತ್ತಾರು ಚಿತ್ರಗಳಿಂದ ದೃಶ್ಯಗಳನ್ನು ಕದ್ದೇ ನಾನು ಸಿನಿಮಾ ಮಾಡುತ್ತೇನೆ. ನನ್ನ ಹಾಗೆ ಒಪ್ಪಿಕೊಳ್ಳುವವರು ಎಷ್ಟು ಜನರಿದ್ದಾರೆ ಹೇಳಿ” ಎಂದು ಮುಜುಗರವಿಲ್ಲದೆ ಹೇಳಿಕೊಳ್ಳುವ ನಮ್ಮ ಓಂ ಪ್ರಕಾಶ್ ರಾವೇ ಈ ಅನುರಾಗ್ ಬಸುಗಿಂತ ಮೇಲು!! ಅದ್ಯಾವುದದು ಸಮಿತಿ ಈ ‘ಬರ್ಫಿ’ ಚಿತ್ರವನ್ನು ಆಸ್ಕರ್ ರೇಸಿಗೆ ಕಳಿಸಿದ್ದು? ಭಾರತದ ನಿರ್ದೇಶಕರ ಮರ್ಯಾದೆಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅಧಃಪತನಕ್ಕೊಳಪಡಿಸುವುದರ ಹೊರತಾಗಿ ಈ ಚಿತ್ರ ಮತ್ತೇನೂ ಸಾಧಿಸಲಾರದು.
 ಕದ್ದ ದೃಶ್ಯಗಳ ವೀಡಿಯೊ


No comments:

Post a Comment