Oct 11, 2012

ಆದರ್ಶವೇ ಬೆನ್ನು ಹತ್ತಿ....ಭಾಗ 9


ಆದರ್ಶವೇ ಬೆನ್ನು ಹತ್ತಿ....ಭಾಗ 8

 ಅವರ ಜೊತೆಯೇ ಇದ್ದ ರೂಪ “ನಿನಗೆ ವಿಷಯ ಗೊತ್ತಿಲ್ವಾ ಸಯ್ಯದ್ ಈ ಅಲಿ ಸರ್ ಮತ್ತು ಫಾತಿಮಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ, ಮನೆಯವರೂ ಒಪ್ಪಿ ಮದುವೆಯ ಮಾತುಕತೆ ಮುಗಿದಿದೆಯಂತೆ”

“ಹೌದಾ?!! ಈ ವಿಷಯದಲ್ಲಿ ನಾವೆಲ್ಲೋ ಎಡವಿಬಿಟ್ಟಿದ್ದೀವಿ ಅನ್ನಿಸ್ತಾ ಇಲ್ವಾ ಲೋಕಿ?”

“ನನಗೂ ಒಮ್ಮೊಮ್ಮೆ ನಾವು ಅತಿಯಾಗಿ ವರ್ತಿಸಿದವೇನೋ ಅನ್ನಿಸುತ್ತೆ. ಸುಮ್ಮನೆ ನಾವೇ ಏನೇನೋ ಯೋಚಿಸೋದು ಬೇಡ. ಮುಂದೆ ಏನೇನಾಗುತ್ತೋ ನೋಡೋಣ” ಎಂದ್ಹೇಳಿ ಗಡಿಯಾರವನ್ನು ನೋಡಿ “ನಡಿ ಸಯ್ಯದ್ ಹೊರಡೋಣ. ಆಗಲೇ ಆರೂವರೆಯಾಗಿದೆ” ಸಯ್ಯದನಿಗೆ ಮುಂದೆ ಮಾತನಾಡಲು ಅವಕಾಶ ಕೊಡದೆ ಹೊರಡಿಸಿದ.
* * *
ಮಾರನೆಯ ದಿನ ಬೆಳಗಿನ ತರಗತಿ ಮುಗಿದ ನಂತರ ಲೋಕಿ ಕ್ಯಾಂಟೀನಿನ ಒಂದು ಮೂಲೆಯಲ್ಲಿ ಸಿಗರೇಟು ಸೇದಿ, ಕೊನೆಯಲ್ಲುಳಿದ ತುಂಡನ್ನು ನೆಲದ ಮೇಲೆ ಹಾಕಿ ಕಾಲಿನಲ್ಲಿ ಹೊಸಕಿ ದಿನಪತ್ರಿಕೆಯನ್ನು ಓದುತ್ತಿದನು.

“ಅಲ್ಲ ಲೋಕೇಶ್, ಒಂದು ಘಟನೆಯ ಬಗ್ಗೆ ಕೂಲಂಕುಷವಾಗಿ ವಿಶ್ಲೇಷಣೆ ಮಾಡದೆ ಆ ಫಾತಿಮಾಳ ಮಾತು ಕೇಳಿಕೊಂಡು ಕಾಂತರಾಜ್ ಸರ್ ನ ಅರೆಸ್ಟ್ ಮಾಡುವಂತೆ ಮಾಡಿದ್ದೀರಲ್ಲ. ಇದು ಸರೀನಾ?” ಒಂದೇ ಉಸುರಿನಲ್ಲಿ ಹೇಳಿ ಮುಗಿಸಿದವಳನ್ನು ಕತ್ತೆತ್ತಿ ನೋಡಿದ ಲೋಕಿ. ಈ ರೀತಿ ಪರಿಚಯವಾಗಿತ್ತು ಲೋಕಿ ಮತ್ತು ಪೂರ್ಣಿಗೆ! ಪೂರ್ಣಿ ಲೋಕಿಯ ಎದುರಿಗೆ ಕುಳಿತಳು.

“ರಾಜು ಬಾ ಇಲ್ಲಿ”

“ಒಂದ್ನಿಮಿಷ ಬಂದೆ ಅಕ್ಕ” ಸಪ್ಲೈಯರ್ ರಾಜು ಬಳಿ ಬಂದ.

 “ಎರಡು ಕಪ್ ಟೀ ತೆಗೆದುಕೊಂಡು ಬಾ ರಾಜು”

“ಇಲ್ಲ ನಾನು ಟೀ ಕುಡಿಯಲ್ಲ” ದನಿಯಾಕೋ ನಡುಗುತ್ತಿತ್ತು.

“ಕಾಫಿ, ಬಾದಾಮಿ ಹಾಲು?”

“ಏನೂ ಕುಡಿಯಲ್ಲ”

“ಆಶ್ಚರ್ಯ! ಸಿಗರೇಟು ಸೇದುವವರು ಸಾಮಾನ್ಯವಾಗಿ ಕುಡೀತಾರಲ್ಲ”

ಅರೆ! ಇವಳು ನನ್ನ ಜೊತೆ ಮಾತನಾಡುತ್ತಿರುವುದು ಇದೇ ಮೊದಲು. ಆಗಲೇ ನನ್ನ ಖಾಸಗಿ ವಿಷಯಗಳ ಬಗ್ಗೆ ಹೇಳುತ್ತಿದ್ದಾಳಲ್ಲ ಎಂದು ಒಂದು ಸ್ವಲ್ಪ ಕೋಪ ಬಂದರೂ ತೋರ್ಪಡಿಸಿಕೊಳ್ಳದೆ “ನನಗೆ ಅಭ್ಯಾಸವಿಲ್ಲ” ಎಂದು ಹೇಳಿ ತಲೆಯಾಡಿಸಿದ.

“ಹೋಗಲಿ. ಸಿಗರೇಟ್. ಇವರದ್ಯಾವ ಬ್ರ್ಯಾಂಡು ಗೊತ್ತಾ ರಾಜು”

“ಕಿಂಗ್”

“ಸರಿ. ಎರಡು ಕಿಂಗ್, ಒಂದು ಟೀ”

ಎಲಾ ಇವಳಾ! ಎಂದು ಯೋಚಿಸುತ್ತ ಲೋಕಿ ಅವಳೆಡೆಗೆ ನೋಡಿದ. ಹುಡುಗಿ ಚೆಂದ ಇದ್ದಾಳೆ ಎನ್ನಿಸಿತು. ಅವಳನ್ನೇ ನೋಡಹತ್ತಿದ. ನನಗಿಂತ ಸ್ವಲ್ಪ ಕುಳ್ಳು, ಕೋಲು ಮುಖ, ಮೂಗು ಸ್ವಲ್ಪ ಉದ್ದವೆನಿಸಿದರೂ ಅವಳ ಮುಖಕ್ಕೆ ತುಂಬಾ ಚೆನ್ನಾಗಿ ಒಪ್ಪುತ್ತೆ. ಕಟ್ ಮಾಡ್ಸಿರೋ ಕೂದಲು ಎರಡೂ ಕಿವಿಗಳನ್ನು ಮುಚ್ಚಿಬಿಟ್ಟಿದೆ, ಆ ಕಟ್ಟಿಗೆ ಯಾವ ಹೆಸರೋ? ಬಿಳಿ ಬಣ್ಣದ ಚೂಡಿ; ಅದಕ್ಕೊಪ್ಪುವ ಹಾಗೆ ಕಪ್ಪು ಬಣ್ಣದ ದುಪ್ಪಟ್ಟಾ ಆಕೆಯ ಕತ್ತಿನ ಮುಂದಿನಿಂದ ಸಾಗಿ ಬೆನ್ನ ಮೇಲೆ ಇಳಿಬಿದ್ದಿತ್ತು. ಎರಡು ಮೂರು ನಿಮಿಷದಿಂದ ತನ್ನ ಮುಖವನ್ನೇ ಗಮನಿಸುತ್ತಿರುವ ಲೋಕಿಯನ್ನು ನೋಡಿ ಪೂರ್ಣಿಮಾಗೆ ಕಸಿವಿಸಿಯಾಯಿತು. ಒಮ್ಮೆ ಕೆಮ್ಮಿ ನೋಡಿದಳು, ಉಹ್ಞೂ ಅವನ ಕಣ್ಣೋಟ ತನ್ನ ಮೇಲಿಂದ ಹಿಂದೆಗೆಯಲಿಲ್ಲ. ತನ್ನ ಕತ್ತಿನ ಸುತ್ತಿದ್ದ ದುಪ್ಪಟ್ಟಾವನ್ನು ಎದೆಯ ಮೇಲೆ ಎಳೆದುಕೊಂಡಳು. ಲೋಕಿಯ ದೃಷ್ಟಿ ಬದಲಿಸಲಿಲ್ಲ. ಬ್ರಾ ಪಟ್ಟಿ ಏನಾದರೂ ಕಾಣುತ್ತಿದೆಯಾ ಎಂಬ ಅನುಮಾನ. ಭುಜದ ಮೇಲೆ ಚೂಡಿಯ ಪಟ್ಟಿಯ ಮೇಲೆ ಕೈಯಾಡಿಸಿ ನೋಡಿದಳು. ಬ್ರಾಪಟ್ಟಿ ಒಳಗೇ ಇತ್ತು. ಅವಳತ್ತ ತದೇಕಚಿತ್ತದಿಂದ ನೋಡುತ್ತಿದ್ದ ಲೋಕಿಗೆ ಅವಳ ವರ್ತನೆಯ ಬಗ್ಗೆ ಪರಿವೆಯಿರಲಿಲ್ಲ.

“ಏನ್ ಲೋಕೇಶ್ ಹಾಗಿ ನೋಡ್ತಾ ಇದ್ದೀಯ?” ಕೇಳೇಬಿಟ್ಟಳು.

“ಏನಿಲ್ಲ” ಎಂದು ಚುಟುಕಾಗಿ ಉತ್ತರಿಸಿ ತಲೆತಗ್ಗಿಸಿದ. ಆತನ ತುಟಿಯಂಚಿನಲ್ಲಿ ಸುಳಿದು ಹೋದ ನಗೆಯನ್ನು ಆಕೆ ಗಮನಿಸದೆ ಇರಲಿಲ್ಲ. ಇನ್ನೂ ಸುಮ್ಮನಿದ್ದರೆ ‘ಹುಚ್ಚು ಕುದುರೆ’ ಮತ್ತಷ್ಟು ವೇಗವಾಗಿ ಓಡಿ ಮನಸ್ಸಿನ ಸ್ಥಿಮಿತವನ್ನು ಹಾಳು ಮಾಡುತ್ತದೆ ಎಂದೆನ್ನಿಸಿ “ಕಾಂತರಾಜ್ ಸರ್ ವಿಷಯ ಮಾತನಾಡಲು ಬಂದು ಸುಮ್ಮನಾಗಿಬಿಟ್ಟಿರಲ್ಲ?” ಎಂದು ಕೇಳಿದ.

“ತಾವು ಬೇರೆ ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದ ಹಾಗಿತ್ತು. ಅದಕ್ಕೇ ಸುಮ್ಮನಿದ್ದೆ”

ತಗ್ಗಿಸಿದ ತಲೆಯನ್ನು ಮೇಲೆತ್ತಿ “ಹಾಗೇನಿಲ್ಲ. ಕಾಂತರಾಜ್ ಸರ್ ಬಗ್ಗೆ ಯೋಚಿಸುತ್ತಿದ್ದೆ” ಎಂದ.

“ನನ್ನ ಮುಖ ನೋಡಿಕೊಂಡಾ?” ಪೂರ್ಣಿಮಾ ಮುಗುಳ್ನಕ್ಕಳು. ಅವಳ ಮೋಹಕ ನಗೆಯನ್ನು ಕೆನ್ನೆಯ ಮೇಲೆ ಮೂಡಿದ್ದ ಗುಳಿಗಳು ಮತ್ತಷ್ಟು ಹೆಚ್ಚಿಸಿದ್ದವು. ರಾಜು ಟೀ ಜೊತೆಗೆ ಸಿಗರೇಟನ್ನೂ ತಂದ. ಲೋಕಿ ಸಿಗರೇಟು ಹಚ್ಚಿಕೊಂಡ. ಪೂರ್ಣಿಮಾ ಒಂದು ಗುಟುಕು ಟೀ ಕುಡಿದು “ಆ ಫಾತಿಮಾ ಕೊಟ್ಟಿರೋ ಪೋಲೀಸ್ ಕಂಪ್ಲೇಂಟಿನಲ್ಲಿ ಏನೇನಿದೆ ಅಂತ ಗೊತ್ತಿರಬೆಕಲ್ಲಾ?”

“ಗೊತ್ತು”

“ಅದರ ಪ್ರಕಾರ ಆಕೆ ಅವರ ಮನೆಯಲ್ಲಿ ಏಳೂ ಮೂವತ್ತರಿಂದ ಎಂಟು ಘಂಟೆಯವರೆಗೆ ಇದ್ದಳಂತೆ?”

“ಹೌದು”

“ಅದು ಸಾಧ್ಯವೇ ಇಲ್ಲ!”
          
 “ಯಾಕೆ?”

“ಯಾಕಂದ್ರೇ ಅದೇ ದಿನ ಸಂಜೆ ನಾನು ಮತ್ತು ನನ್ನ ತಂದೆ ಸರ್ ಮನೆಗೆ ಹೋಗಿದ್ದೆವು. ಸುಮಾರು ಏಳುನಲವತ್ತಕ್ಕೆ. ಅರ್ಧ ಘಂಟೆ ಅಲ್ಲೇ ಮಾತನಾಡುತ್ತಾ ಕುಳಿತಿದ್ದೆವು. ನಂತರ ನಮ್ಮ ಮನೆಗೆ ಹೋಗುವಾಗ ದಾರಿಯಲ್ಲಿ ಫಾತಿಮಾ ಸಿಕ್ಕಿದ್ದಳು. ಅಲಿ ಸರ್ ಜೊತೆ. ಕಾಂತರಾಜ್ ಸರ್ ಮನೆಗೆ ಹೋಗಿ ನೋಟ್ಸ್ ತೆಗೆದುಕೊಂಡು ಬಂದಿದ್ದಾಗಿ ಅವಳೇ ಹೇಳಿದಳು”

“ನಿನಗೆ ಸಿಗುವುದಕ್ಕೆ ಮುಂಚೆಯೇ ಆ ಘಟನೆ ನಡೆದಿರಬಹುದಲ್ಲ”

“ಆ ಸಾಧ್ಯತೆ ಇದೆ. ಆದರೆ ಫಾತಿಮಾಳ ಮುಖದಲ್ಲಿ ಏನೋ ಕೆಟ್ಟದ್ದು ನಡೆದಿದೆಯೆಂಬ ಸುಳಿವಿರಲಿಲ್ಲ. ಎಂದಿನಂತೆ ಅಲಿಯವರೊಡನೆ ನಗುತ್ತಾ ನಡೆದು ಬರುತ್ತಿದ್ದಳು”

“ಅಲಿ ಸರ್ ಗೆ ಗೊತ್ತಾಗಬಾರದು ಎಂದು ಆ ರೀತಿ ವರ್ತಿಸಿರಬಹುದು”

“ಇರಬಹುದು. ಆದರೆ ಮಾರನೇಯ ದಿನ ಕಾಲೇಜಿನಲ್ಲಿ ಹುಡುಗರೆದುರು ಅಳುತ್ತಾ ಬಂದು ಅಲಿಯವರೊಡನೆಯೇ ಆಕೆ ಮೊದಲು ವಿಷಯ ತಿಳಿಸಿದ್ದು. ನಡೆದ ಘಟನೆಯನ್ನು ಹಿಂದಿನ ದಿನಾನೆ ಅಲಿಯವರಿಗೆ ತಿಳಿಸಬಹುದಿತ್ತಲ್ಲ? ಅದೂ ಅಲ್ಲದೆ ಇದರ ಹಿಂದೆ ಒಂದು ಪಿತೂರೀನೇ ಇದೆ ಅಂತ ನನ್ನ ಭಾವನೆ”

ಲೋಕಿ ಮತ್ತೊಂದು ಸಿಗರೇಟು ಹಚ್ಚಿ “ಪಿತೂರೀನಾ?” ಎಂದ.

“ಹೌದು. ನಮ್ಮ ಹಿಸ್ಟರಿ ವಿಭಾಗದ ಮುಖ್ಯಸ್ಥರು ಇನ್ನೆರಡು ತಿಂಗಳಿನಲ್ಲಿ ನಿವೃತ್ತರಾಗುತ್ತಾರೆ”

“ಹೌದು”

“ಅವರು ಹೋದ ಮೇಲೆ ಅವರ ಹಾಗಕ್ಕೆ ಯಾರು ಬರ್ತಾರೆ?”
          
 “ಕಾಂತರಾಜ್ ಅಥವಾ ರಾಜೇಶ್ ಸರ್”

“ಈಗ ಅರ್ಥ ಆಗಿರಬೇಕಲ್ಲ ಇದರ ಹಿಂದಿನ ಪಿತೂರಿ”

“ಅಂದ್ರೆ?”

“ಇಬ್ಬರೂ ಒಂದೇ ವಯಸ್ಸಿನವರಾದರೂ ಕಾಂತರಾಜ್ ಸರ್ ರಾಜೇಶ್ ಸರ್ರಿಗಿಂತ ಒಂದು ತಿಂಗಳು ಸೀನಿಯರ್. ಕಾಂತರಾಜ್ ಸರ್ ಮುಖ್ಯಸ್ಥರಾಗಿಬಿಟ್ಟರೆ ಅವರು ರಿಟೈರಾಗುವವರೆಗೂ ರಾಜೇಶ್ ಸರ್ ಗೆ ಆ ಪದವಿ ದಕ್ಕೋದಿಲ್ಲ. ಅವರು ನಿವೃತ್ತರಾದ ನಂತರ ಸಿಕ್ಕರೂ ಒಂದೇ ತಿಂಗಳಿನಲ್ಲಿ ರಿಟೈರ್ ಆಗಿಬಿಡ್ತಾರೆ. ಆದ್ದರಿಂದ ಅವರೇ ಈ ಪ್ಲಾನ್ ಮಾಡಿರಬೇಕೆಂದು ನನ್ನ ಊಹೆ”

“ನಿನ್ನ ಊಹೆಯೇನೋ ತರ್ಕಬದ್ಧವಾಗಿದೆ. ಅದರೆ ಈ ಕೆಲಸಕ್ಕೆ ಫಾತಿಮಾಳನ್ನೇ ಯಾಕೆ ಗಾಳವಾಗಿ ಬಳಸಿದರು?”

“ರಾಜೇಶ್ ಸರ್ ಗೆ ಅಲಿ ಸರ್ ಮೊದಲಿನಿಂದಲೂ ತುಂಬಾನೇ ಪರಿಚಯ. ವಯಸ್ಸಿನ ಅಂತರವಿದ್ದರೂ ಸ್ನೇಹಿತರಂತೆ ಇದ್ದಾರೆ. ಅಲ್ಲದೆ ಆತ ಪಿ.ಎಚ್.ಡಿಯನ್ನು ಅವರ ಕೆಳಗೆ ಮಾಡಬೇಕೆಂದಿದ್ದಾನೆ. ಅಲಿ ಸರ್ ಮತ್ತು ಫಾತಿಮಾ ಪ್ರೀತಿಸುತ್ತಿದ್ದಾರೆ. ಹೇಗಿದ್ದರೂ ಮದುವೆಯಾಗ್ತೀವಲ್ಲ ಎಂದ್ಹೇಳಿ ಅಲಿ ಸರ್ ಅವಳನ್ನು ಬಲವಂತದಿಂದ ಒಪ್ಪಿಸಿರಬೇಕು”

ಎಷ್ಟೆಲ್ಲ ಕೋನಗಳಿಂದ ಯೋಚಿಸುತ್ತಾಳೆ ಈಕೆ. ನಿಜಕ್ಕೂ ಉತ್ತಮ ಪತ್ರಕರ್ತೆಯಾಗುತ್ತಾಳೆ ಎಂದುಕೊಳ್ಳುತ್ತಾ “ಸರಿ ಈಗ ನಾವೇನು ಮಾಡಬೇಕು?” ಎಂದ.

“ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡಬೇಕಂತೆ. ನಾನು ಯಾವುದನ್ನೂ ಪ್ರತ್ಯಕ್ಷವಾಗಿ ನೋಡಿಲ್ಲ. ಹಾಗಿರಬಹುದು ಹೀಗಿರಬಹುದು ಎಂಬ ಊಹೆಯಷ್ಟೇ” ಲೋಕಿ ಸಿಗರೇಟಿನ ಹೊಗೆಯನ್ನು ಗಾಳಿಯಲ್ಲಿ ಲೀನವಾಗುವುದನ್ನು ನೋಡುತ್ತಾ ಕುಳಿತಿದ್ದ. ಪೂರ್ಣಿಮಾಳೇ ಮಾತು ಮುಂದುವರಿಸುತ್ತಾ “ಮೊದಲು ಇನ್ಸ್ ಪೆಕ್ಟರ್ ವಿಕ್ರಮ್ ರನ್ನು ಭೇಟಿಯಾಗಿ ನನ್ನ ಅಭಿಪ್ರಾಯ, ಊಹೆಯನ್ನು ಹೇಳಿ ಅವರೇನು ಹೇಳುತ್ತಾರೋ ನೋಡೋಣ ಅಂತ. ನೀನೇನು ಹೇಳುತ್ತೀಯ?”

“ಹಾಗೇ ಮಾಡೋಣ. ಸಯ್ಯದ್ ಗೂ ಒಂದು ಮಾತು ತಿಳಿಸಿ ಅವನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗೋಣ್ವಾ?”

“ಬೇಡ ಲೋಕೇಶ್. ಸದ್ಯಕ್ಕೆ ಅವನಿಗೆ ತಿಳಿಸೋದು ಬೇಡ. ಠಾಣೆಯಿಂದ ಬಂದ ನಂತರ ತಿಳಿಸಿದರಾಯಿತು”

‘ಯಾಕೆ?’ ಎಂದು ಕೇಳಬೇಕೆಂದುಕೊಂಡವನು ‘ಅಪರೂಪಕ್ಕೆ ಒಂದು ಹುಡುಗಿಯೊಡನೆ ಹೊರಗೆ ಹೋಗುತ್ತಿದ್ದೀನಿ. ನಮ್ಮ ನಡುವೆ ಬೇರೆಯವರ್ಯಾಕೆ?’ ಎಂಬ ಯೋಚನೆ ಬಂದು ಸುಮ್ಮನಾದನು. ‘ಛೇ! ಸಯ್ಯದ್ ನನ್ನು ಕೂಡ ಬೇರೆಯವನು ಎಂದುಕೊಂಡೆನಲ್ಲ’ ಎಂದು ಮರುಕ್ಷಣವೇ ಬೇಸರವಾದರೂ ಬೇಸರ ನೀಗಿಸಿಕೊಂಡು ಪೂರ್ಣಿಯ ಜೊತೆ ಹೆಜ್ಜೆ ಹಾಕಿದನು. ಇಬ್ಬರ ಬಳಿಯೂ ಗಾಡಿ ಇಲ್ಲದ್ದರಿಂದ ನಡೆದೇಹೊರಟರು.

“ಪತ್ರಿಕೆಗಳಲ್ಲಿ ನಿನ್ನ ಲೇಖನಗಳು ಬಂದಿವೆಯಂತೆ”

“ತಿಂಗಳಿಗೊಂದೆರಡು ಮೂರು ಬರುತ್ತಿರುತ್ತೆ”

“ಬಿ.ಎಗೆ ಸೇರಿದ ಮೇಲೆ ಬರೆಯುವುದಕ್ಕೆ ಪ್ರಾರಂಭಿಸಿದೆಯಾ?”

“ಹೈಸ್ಕೂಲಿನಲ್ಲೇ ಅದೂ ಇದೂ ಅಂತ ಗೀಚುತ್ತಿದ್ದೆ. ಎರಡನೇ ಪಿ ಯು ಸಿಯಲ್ಲಿ ಮೊದಲ ಲೇಖನ ಪ್ರಕಟವಾಗಿತ್ತು. ಬಿ ಎಗೆ ಸೇರಿದ ಮೇಲೆ ಹೆಚ್ಚೂ ಕಡಿಮೆ ದಿನಾ ಏನಾದರೂ ಬರೆಯುತ್ತೇನೆ. ಪರವಾಗಿಲ್ಲ ಚೆನ್ನಾಗಿದೆ ಎಂದು ನನಗೇ ಅನ್ನಿಸಿದ ಲೇಖನಗಳನ್ನು ಪತ್ರಿಕೆಗಳಿಗೆ ಕಳುಹಿಸುತ್ತೇನೆ. ಕೆಲವೊಂದು ಪ್ರಕಟವಾಗುತ್ತದೆಯಷ್ಟೇ”

“ಈ ವಿಷಯಗಳನ್ನೆಲ್ಲ ಕ್ಲಾಸಿನಲ್ಲಿ ಯಾರಿಗೂ ಹೇಳೇ ಇಲ್ವಲ್ಲ. ಪತ್ರಿಕೆಯಲ್ಲಿ ಒಂದು ಹನಿಗವನ ಪ್ರಕಟವಾಗಿದ್ದಕ್ಕೇ ನಮ್ಮ ಕ್ಲಾಸಿನ ಹುಡುಗಿಯರಿಗೆಲ್ಲ ಸ್ವೀಟ್ ಕೊಟ್ಟಿದ್ದೆ ನಾನು. ಇಂಥ ವಿಷಯವನ್ನೆಲ್ಲ ಸೆಲೆಬ್ರೇಟ್ ಮಾಡಬೇಕು ಅನ್ನಿಸೋಲ್ವ ನಿನಗೆ?”

“ಏನೋಪ್ಪ! ಯಾರಿಗೂ ಹೇಳಬೇಕು ಅಂತ ಅನ್ನಿಸುತ್ತಲೇ ಇರಲಿಲ್ಲ. ನನ್ನ ತಂಗಿಗೆ ಮಾತ್ರ ಹೇಳುತ್ತಿದ್ದೆ. ಈಗ ಒಂದು ತಿಂಗಳ ಹಿಂದೆ ನನ್ನದೊಂದು ಕತೆಯ ಜೊತೆಗೆ ನನ್ನ ಭಾವಚಿತ್ರವೂ ಪ್ರಕಟವಾದಾಗ ಬಹಳಷ್ಟು ಜನರಿಗೆ ನಾನು ಬರೆಯುವ ಸಂಗತಿ ತಿಳಿಯಿತು”

“ನನಗೂ ಆವಾಗಲೇ ತಿಳಿದಿದ್ದು. ಇನ್ನೊಂದ್ವಿಷಯ ನೀನು ಬೇಸರ ಮಾಡಿಕೊಳ್ಳೋದಿಲ್ಲ ಅಂದ್ರೆ ಕೇಳ್ತೀನಿ”
          
 “ಕೇಳು”

“ನೀನು ಯಾರ ಜೊತೆಯೂ ಹೆಚ್ಚು ಬೆರೆಯೋದಿಲ್ಲ; ಅದರಲ್ಲೂ ಹುಡುಗಿಯರೊಟ್ಟಿಗಂತೂ ಮಾತನಾಡೋದಿಕ್ಕೇ ಬರೋದಿಲ್ಲ, ಮಾತನಾಡುವುದೂ ಇಲ್ಲ ಅಂತ ತಿಳಿದಿದ್ದೆ. ಕ್ಲಾಸಿನ ಬಹುತೇಕರಿಗೂ ನಿನ್ನ ಬಗ್ಗೆ ಅದೇ ಭಾವನೆ. ನೀನು ಚೆನ್ನಾಗಿಯೇ ಮಾತನಾಡುತ್ತೀಯಲ್ಲ!!”

“ಅದೇ ನನಗೂ ಅರ್ಥ ಆಗ್ತಿಲ್ಲ! ಇಷ್ಟು ಸರಾಗವಾಗಿ ಮಾತನಾಡುತ್ತೀನಿ ಅಂತ ನನಗೇ ನಂಬಿಕೆಯಿರಲಿಲ್ಲ. ಮೇಲಾಗಿ ನಿನ್ನ ಜೊತೆ ಇನ್ನೂ ತುಂಬಾ ತುಂಬಾ. . .” ತಪ್ಪು ಮಾತನಾಡಿದವನಂತೆ ಲೋಕಿ ನಾಲಿಗೆ ಕಚ್ಚಿ ತಲೆ ಕೊಡವಿದ.

ಪೂರ್ಣಿಮಾ ಒಮ್ಮೆ ಲೋಕಿಯತ್ತ ನೋಡಿ ತಲೆತಗ್ಗಿಸಿ ನಡೆಯಲಾರಂಭಿಸಿದಳು. ಠಾಣೆ ಸಿಗುವವರೆಗೂ ಇಬ್ಬರೂ ಮಾತನಾಡಲಿಲ್ಲ. ‘ಆ ರೀತಿಯಾಗಿ ಹೇಳಬಾರದಿತ್ತೇನೋ’ ಎಂದುಕೊಂಡ.

“ಇನ್ಸ್ ಪೆಕ್ಟರ್ ವಿಕ್ರಮ್ ಇದ್ದಾರಾ?” ಬಾಗಿಲಿನ ಬಳಿ ನಿಂತಿದ್ದ ಪೇದೆಯೊಬ್ಬನನ್ನು ಕೇಳಿದಳು.

“ಅವರೀಗ ತಾನೇ ಯಾವುದೋ ಕೇಸಿನ ಸಲುವಾಗಿ ಕೋರ್ಟಿನ ಕಡೆಗೆ ಹೋದರಲ್ಲ”

“ಹೌದಾ! ಬರೋದು ಎಷ್ಟೊತ್ತಾಗಬಹುದು”

“ಕೋರ್ಟಿಗೆಂದು ಹೋದಮೇಲೆ ಸರಿಯಾಗಿ ಇದೇ ಸಮಯಕ್ಕೆ ವಾಪಸ್ಸಾಗ್ತಾರೆ ಅಂತ ಹೇಗೆ ಹೇಳೋದು?”

ಲೋಕಿ ಏನೋ ನೆನಪಾದವನಂತೆ “ಕಾಂತರಾಜ್ ಅನ್ನೋರು ಇದ್ದಾರಾ?”

“ಓ! ನೀವು ಅವರ ಕಡೆಯವರಾ!! ಆ ಮನುಷ್ಯನಿಗೇನು ಹುಚ್ಚಾ ಅಂತೀನಿ. ನಿಮ್ಮ ಕಡೆಯವರ್ಯಾರಿಗಾದರೂ ವಿಷಯ ತಿಳಿಸಬೇಕಾ? ಜಾಮೀನು ಪಡೆಯಲು ಎಂದು ನಮ್ಮ ಸಾಹೇಬ್ರೇ ಕೇಳಿದರೂ ಏನೂ ಬೇಡ ಅಂದರಲ್ಲ”

“ಅವರು ಸ್ವಲ್ಪ ಹಾಗೆಯೇ. ಈಗ ಅವರು ಲಾಕಪ್ಪಿನಲ್ಲೇ ಇದ್ದಾರಾ?”

“ಇಲ್ಲ. ಸಾಹೇಬ್ರು ಮತ್ತು ಕಾಂತರಾಜ್ ಇಬ್ಬರೂ ಕೋರ್ಟಿಗೆ ಹೋದರು. ಕಾಂತರಾಜ್ ರನ್ನು ನ್ಯಾಯಂಗ ಬಂಧನಕ್ಕೆ ತೆಗೆದುಕೊಳ್ಳಲು ಅನುಮತಿ ಪಡೆಯುವುದಕ್ಕೆ”

“ಠಾಣೆಯ ಫೋನ್ ನಂಬರ್ ಕೊಡ್ತೀರಾ? ಇನ್ನೊಂದು ಸ್ವಲ್ಪ ಸಮಯ ಬಿಟ್ಟು ಫೋನ್ ಮಾಡಿ ಬರ್ತೀವಿ” ಪೇದೆ ನಂಬರನ್ನು ಕೊಟ್ಟು “ಒಂದು ಒಂದೂವರೆ ಘಂಟೆ ಬಿಟ್ಟು ಫೋನ್ ಮಾಡಿ. ಬಹುಶಃ ಅಷ್ಟರೊಳಗೆ ಬಂದಿರುತ್ತಾರೆ”

“ಇನ್ನೂ ಒಂದು ಒಂದೂವರೆ ಘಂಟೆ ಏನು ಮಾಡೋದು?” ಲೋಕಿ ಕೇಳಿದ. ‘ಕಾಲೇಜಿಗೆ ಹೋಗಿ ನಂತರ ಬಂದರಾಯಿತು’ ಎಂದು ಹೇಳಬೇಕೆಂದವಳಿಗೆ ಯಾಕೋ ಲೋಕಿ ಜೊತೆಗೆ ಇನ್ನೊಂದಷ್ಟು ಸಮಯ ಕಳೆಯಬೇಕೆನಿಸಿತು. ಲೋಕಿ ಏನು ತಿಳಿದುಕೊಳ್ಳುತ್ತಾನೋ ಏನೋ ಎಂಬ ಭಯದಿಂದಲೇ “ಇಲ್ಲೇ ಹತ್ತಿರದಲ್ಲಿ ಒಂದು ಪಾರ್ಕಿದೆ. ಕುಳಿತು ಬರೋಣ್ವಾ?” ಮೆಲುದನಿಯಲ್ಲಿ ಕೇಳಿದಳು. ಒಳಗೆ ಸಂತೋಷವಾದರೂ ತೋರ್ಪಡಿಸಿಕೊಳ್ಳದೆ ಸರಿಯೆಂಬಂತೆ ತಲೆಯಾಡಿಸಿದ.

ಅದೊಂದು ಚಿಕ್ಕ ಪಾರ್ಕು. ಇದ್ದ ಎರಡು ಬೆಂಚಿನ ಮೇಲೆ ಯಾರೋ ಮಲಗಿದ್ದರು. ಒಂದು ಮೂಲೆಯಲ್ಲಿ ಅದೇ ಬೀದಿಯವರ್ಯಾರೋ ಹಸುಗಳನ್ನು ಕಟ್ಟಿದ್ದರು. ಆ ಮೂಲೆಯೆಲ್ಲ  ಸೆಗಣಿ ಮತ್ತು ಅರೆಕೊಳೆತ ಹುಲ್ಲಿನ ವಾಸನೆಯಿಂದ ತುಂಬಿಹೋಗಿತ್ತು. ಅದರ ಎದುರು ಮೂಲೆಯನ್ನು ನೋಡಿದಾಗ ಮಾತ್ರ ಇದೊಂದು ಪಾರ್ಕೆಂಬ ಭಾವನೆ ಬರುತ್ತಿತ್ತು. ಒಂದು ಮರದ ನೆರಳಿನ ಕೆಳಗೆ ಹುಲ್ಲುಹಾಸಿನ ಮೇಲೆ ಇಬ್ಬರೂ ಕುಳಿತರು. ಕೆಲಕಾಲ ಇಬ್ಬರ ನಡುವೆ ಮೌನ.

“ನಾನಾಗ ಆ ರೀತಿ ಅಂದಿದ್ದಕ್ಕೆ ಬೇಸರವಾಯಿತಾ?”

“ಮತ್ತೆ!! ಯಾರ ಬಳಿಯೂ ಹೆಚ್ಚು ಮಾತನಾಡದವನು ನನ್ನ ಜೊತೆ ಹರಟಬೇಕೆಂದಿದ್ದಾನೆ ಅಂತ ಖುಷಿ ಪಟ್ಟೆ ಅಂದುಕೊಂಡೆಯಾ?”

“ಸಾರಿ”

“ಸಾರಿ! ಅದೆಲ್ಲ ಬಿಟ್ಬಿಡು. ಸುಮ್ಮನೆ ತಮಾಷೆಗೆ ಹೇಳಿದೆ. ನನಗೇನೂ ಬೇಸರವಿಲ್ಲ. ಬೇಸರವಿದ್ದಿದ್ದರೆ ನಿನ್ನೊಡನೆ ಬಂದು ಕೂರುತ್ತಿದ್ದೆನಾ?”

“ಮತ್ತೆ ನಾನಾರೀತಿ ಹೇಳಿದ ತಕ್ಷಣ ಮೌನವಾಗಿಬಿಟ್ಟೆ”

“ಸಹಜ ಅಲ್ವ. ನನ್ನ ಜೊತೆ ಮಾತನಾಡೋದಿಕ್ಕೆ ಇವನಿಗ್ಯಾಕೆ ಖುಷಿ. ಅದೂ ಮೊದಲ ದಿನದ ಭೇಟಿಯಲ್ಲೇ? ಅಂತ ಯೋಚಿಸುತ್ತಿದ್ದೆ. ನನ್ನಲ್ಲಿ ಅಂತ ವಿಶೇಷ ಏನಿದೆ ಅಂತ?”

“ವಿಶೇಷ ಅಂತ ಏನೂ ಇಲ್ಲ. ಕೆಲವರು ವಿನಾಕಾರಣ ಇಷ್ಟವಾಗ್ತಾರೆ. ಇನ್ನೂ ಕೆಲವರಿರುತ್ತಾರೆ. ಅವರೊಡನೆ ಒಮ್ಮೆಯೂ ಜಗಳವಾಡಿರಲ್ಲ. ಆದರೂ ಅವರ ಮುಖ ನೋಡುತ್ತಿದ್ದ ಹಾಗೆ ಏನೋ ಕೋಪ. ಎಲ್ಲ ಘಟನೆಗಳಿಗೂ ಸರಿಯಾದ ವಿವರಣೆ ಕೊಡುವುದು ಕಷ್ಟ” ಲೋಕಿ ಹೇಳಿ ಮುಗಿಸುತ್ತಿದ್ದಂತೆ ಪೂರ್ಣಿ ಜೋರಾಗಿ ನಕ್ಕುಬಿಟ್ಟಳು. ಲೋಕಿಗೆ ಗೊಂದಲ. “ಯಾಕೆ?” ಎಂದ.

ನಗುವನ್ನು ಕಷ್ಟಪಟ್ಟು ತಡೆಯಿಡಿಯುತ್ತ “ಯಾಕೂ ಇಲ್ಲ. ಬೇರೆಯಾರಿಗಾದರೂ ಈ ಪ್ರಶ್ನೆ ಕೇಳಿದ್ರೆ ನಮ್ಮನ್ನು ಹೊಗಳಿ ಮಾತನಾಡುತ್ತಿದ್ದರೇ ಹೊರತು ನಿನ್ನ ಥರ ವೇದಾಂತಿಯಂತೆ ಉತ್ತರಿಸುತ್ತಿರಲಿಲ್ಲ. ಇದರಲ್ಲೇ ಗೊತ್ತಾಗುತ್ತೆ ನಿನಗೆ ಹುಡುಗಿಯರೊಟ್ಟಿಗೆ ವಿನಾಕಾರಣ ಹರಟೆ ಹೊಡೆದು ಗೊತ್ತಿಲ್ಲವೆಂದು”

ಲೋಕಿ ನಕ್ಕ.

ಮೊದಲ ಭೇಟಿಯಲ್ಲೇ ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದೇವೆ ಎಂದು ಇಬ್ಬರಿಗೂ ಅನ್ನಿಸಿತು. ಮೌನಕ್ಕೆ ಶರಣಾದರು. ಒಂದು ಘಂಟೆಯ ನಂತರ ಠಾಣೆಯ ನಂಬರ್ರಿಗೆ ಫೋನ್ ಮಾಡಿದರ. ವಿಕ್ರಮ್ ಬಂದಿದ್ದರು. ಹತ್ತು ಹೆಜ್ಜೆ ಹೋಗುವಷ್ಟರಲ್ಲಿ ಲೋಕಿ “ನಾನು ಸ್ಟೇಷನ್ನಿಗೆ ಬರೋದು ಅಷ್ಟು ಸರಿಯಲ್ಲ ಅನ್ನಿಸುತ್ತೆ” ಎಂದ.

“ಯಾಕೆ?”

“ನಿನ್ನೆ ವಿಕ್ರಮ್ ಅವರ ಬಳಿ ಬಹಳ ಕೋಪದಿಂದ ಮಾತನಾಡಿದ್ದೆ. ಇನ್ನೊಂದು ಸ್ವಲ್ಪ ರೇಗಿಸಿದ್ದರೆ ನನಗೆ ಹೊಡೆದೇ ಬಿಡುತ್ತಿದ್ದರೇನೋ! ನನ್ನ ಮೇಲೆ ಅವರಿಗೆ ಬಹಳ ಕೋಪ ಬಂದಿತ್ತು”

“ಹಾಗೇನೂ ಆಗಲ್ಲ. ಪೋಲೀಸರಿಗೆ ಅದೆಲ್ಲ ಮಾಮೂಲಿ. ನೀನೇನು ತಲೆ ಕೆಡಿಸಿಕೊಳ್ಳಬೇಡ. ಹೋಗೋಣ ಬಾ. ಮೇಲಾಗಿ ವಿಕ್ರಮ್ ಅವರಿಗೆ ಒಳ್ಳೆಯ ಹೆಸರಿದೆ ಎಂದು ಕೇಳಿದ್ದೇನೆ”

ಠಾಣೆಯ ಒಳಹೊಕ್ಕರು.

“ಓ ಬನ್ನಿ ಲೋಕೇಶ್!! ಏನ್ ಇಷ್ಟು ದೂರ ಪಾದ ಬೆಳೆಸಿದ್ದೀರ! ಮತ್ತೆ ಯಾರನ್ನಾದರೂ ಅರೆಸ್ಟ್ ಮಾಡಿಸಬೇಕಾ ಹೇಗೆ?! ಎಲ್ಲಿ ನಿಮ್ಮ ಗೆಳೆಯ ಸಯ್ಯದ್ ಕಾಣುತ್ತಿಲ್ಲ”

ತಪ್ಪು ಮಾಡಿದ ವಿಧೇಯ ವಿದ್ಯಾರ್ಥಿಯಂತೆ ಲೋಕಿ ತಲೆತಗ್ಗಿಸಿ ನಿಂತಿದ್ದ; ಪ್ರತಿಕ್ರಿಯಿಸಲಿಲ್ಲ.

“ಹಲೋ ಸರ್. ನಾನು ಪೂರ್ಣಿಮಾ ಅಂತ. ಲೋಕಿ ಕ್ಲಾಸ್ ಮೇಟು. ಕಾಂತರಾಜ್ ಸರ್ ವಿಷಯವಾಗಿ ನಿಮ್ಮ ಬಳಿ ಮಾತನಾಡಬೇಕಿತ್ತು”

“ಕೂತ್ಕೊಳ್ಳಿ ಪೂರ್ಣಿಮಾ. ನೀವೂ ಕೂರ್ರಿ ಲೋಕೇಶ್” “ಹೇಳಿ ಏನು ವಿಷಯ?”

“ಕಾಂತರಾಜ್ ಸರ್ ಏನಾದ್ರೂ ಹೇಳಿದ್ರಾ ಸರ್?”

“ಆ ಮನುಷ್ಯ ಸ್ವಲ್ಪ ಅಲ್ಲಲ್ಲ ಜಾಸ್ತೀನೆ ತಿಕ್ಲು ಅನ್ಸುತ್ತೆ. ಏನು ಕೇಳಿದ್ರೂ ‘ನಾನೇನೂ ಮಾಡಿಲ್ಲ. ಆ ಹುಡುಗಿ ಯಾಕೆ ಈ ಕಂಪ್ಲೇಂಟ್ ಕೊಟ್ಟಿದ್ದಾಳೋ ನನಗಂತೂ ಗೊತ್ತಿಲ್ಲ. ಆಕೆಯನ್ನೇ ಕರೆದು ವಿಚಾರಿಸಿ’ ಅಂತ ಹೇಳ್ತಾರೆ”

“ಅವರ ವಿಷಯವಾಗೇ ನಿಮಗೆ ಕೆಲವು ಸಂಗತಿಗಳನ್ನು ತಿಳಿಸಬೇಕಾಗಿತ್ತು ಸರ್”

“ಏನು ಹೇಳಿ?” ಎಂದ್ಹೇಳಿ ಪೇದೆಯ ಕಡೆ ತಿರುಗಿ ನೋಡಿ “ಮೂರು ಕಪ್ ಕಾಫಿ ತೆಗೆದುಕೊಂಡು ಬಾ” ಎಂದರು.

“ನನಗೆ ಬೇಡಿ ಸರ್. ನಾನು ಕಾಫಿ ಕುಡಿಯಲ್ಲ”

“ಅಬ್ಬಾ!! ಈವಾಗಲಾದರೂ ಬಾಯಿ ತೆರೆದೆಯಲ್ಲ. ಇನ್ನೂ ನನ್ನ ಮೇಲಿನ ಕೋಪ ಹೋಗಿಲ್ಲ ಎಂದುಕೊಂಡಿದ್ದೆ”

“ನನ್ನ ಮೇಲೆ ನನಗೇ ಬೇಸರವಾಗ್ತಿದೆ ಸರ್. ನಿಮ್ಮಂಥೋರ ಜೊತೆ ಕಠಿಣವಾಗಿ ನಡೆದುಕೊಂಡಿದ್ದಕ್ಕೆ. ಕೋಪ ಇಲ್ಲ”

“ಅದಕ್ಯಾಕೆ ಬೇಜಾರು ಮಾಡ್ಕೋತೀರ. ನಾನು ವಿದ್ಯಾರ್ಥಿಯಾಗಿದ್ದಾಗ ನಿಮಗಿಂತ ಜೋರಿದ್ದೆ. ಅದೇನೋ ಹೇಳಬೇಕು ಅಂತಿದ್ರಲ್ಲ ಪೂರ್ಣಿಮಾ ಮುಂದುವರೆಸಿ”

ಪೂರ್ಣಿಮಾ ಲೋಕಿಯೊಡನೆ ಕ್ಯಾಂಟೀನಿನಲ್ಲಿ ಹೇಳಿದ್ದನ್ನೆಲ್ಲ ವಿವರಿಸಿದಳು. ಕೊನೆಯಲ್ಲಿ “ನಾನು ಹೇಳಿದ್ದೆಲ್ಲ ಸತ್ಯ ಅಂತ ಅಲ್ಲ. ಇದನ್ನು ನೀವು ಊಹೆ ಎನ್ನುತ್ತೀರೋ, ತರ್ಕವೆಂದು ಕರೆಯುತ್ತೀರೋ ನನಗೆ ಗೊತ್ತಿಲ್ಲ. ಕಾಂತರಾಜ್ ಸರ್ ನಿಜಕ್ಕೂ ತಪ್ಪು ಮಾಡಿದ್ದರೆ ನಾನು ಹೇಳಿದ್ದೆಲ್ಲ ವ್ಯರ್ಥ. ಆದರೆ ಅವರು ನಿರಪರಾಧಿಯಾಗಿದ್ದರೆ ನಾನು ಹೇಳಿದ ವಿವರಗಳು ನಿಮ್ಮ ಉಪಯೋಗಕ್ಕೆ ಬರುತ್ತೆ ಅನ್ನಿಸಿತು. ಅದಿಕ್ಕೆ ಬಂದೆ ಸರ್”

ವಿಕ್ರಮ್ ಕಣ್ಣು ಮುಚ್ಚಿ ತೋರುಬೆರಳುಗಳಿಂದ ಹುಬ್ಬನ್ನು ತೀಡಿಕೊಳ್ಳುತ್ತಾ ಆಕೆ ಹೇಳಿದ್ದನ್ನು ಚಿತ್ರರೂಪದಲ್ಲಿ ಮನದಲ್ಲಿ ತಂದುಕೊಂಡರು. “ಒಂದೈದು ನಿಮಿಷ ಕುಳಿತಿರಿ. ಬಂದುಬಿಡ್ತೀನಿ” ಎಂದ್ಹೇಳಿ ಲಾಕಪ್ ಒಳಗೆ ಹೋದರು. ಪೇದೆ ತಂದುಕೊಟ್ಟ ಕಾಫಿ ಕುಡಿಯುತ್ತಿದ್ದಳು ಪೂರ್ಣಿಮಾ. ಲೋಕಿ ಅಲ್ಲೇ ಇದ್ದ ದಿನಪತ್ರಿಕೆಯನ್ನು ಕೈಗೆತ್ತಿಕೊಂಡ. ಮುಖಪುಟದಲ್ಲಿ ದಪ್ಪ ಅಕ್ಷರಗಳಲ್ಲಿದ್ದ ಹೆಡ್ಡಿಂಗ್ ಆತನನ್ನಾಕರ್ಷಿಸಿತು –

           “ಈದು ಗ್ರಾಮದಲ್ಲಿ ನಕ್ಸಲರ ಹತ್ಯೆ”

ಮುಂದುವರೆಯುವುದು....

No comments:

Post a Comment