ಆದರ್ಶವೇ ಬೆನ್ನು ಹತ್ತಿ . . . ಭಾಗ 7
ಡಾ ಪ್ರಭುಲಿಂಗಸ್ವಾಮಿ
– ತಂದೆಯ ಗೆಳೆಯ. ಅವರೇ ನಿಂತು ವಿಜಿಯನ್ನು ನೋಡಿಕೊಳ್ಳುತ್ತಿದ್ದರು. ಅವರನ್ನು ಕಂಡರೆ ಲೋಕಿಗೆ ಆಗುತ್ತಿರಲಿಲ್ಲ.
ಹಿಂದೆ ಲೋಕಿ ಚಿಕ್ಕವನಾಗಿದ್ದಾಗ ನಡೆದ ಒಂದು ಘಟನೆ ಲೋಕಿಗೆ ಇನ್ನೂ ಮರೆಯಲಾಗಿರಲಿಲ್ಲ. ಆಗ ಪ್ರಭುಲಿಂಗಸ್ವಾಮಿಯವರು
ಹುಣಸೂರಿನಲ್ಲಿದ್ದರು. ಒಮ್ಮೆ ಲೋಕಿ ತನ್ನ ತಂದೆಯ ಜೊತೆ ನೆಂಟರೊಬ್ಬರ ಮದುವೆಗೆ ಹುಣಸೂರಿಗೆ ಹೋಗಿದ್ದ.
ಛತ್ರದಲ್ಲಿ ಊಟ ಮುಗಿಸಿ ಆಸ್ಪತ್ರೆಗೆ ಹೋಗಿದ್ದರು. ನಾಲ್ಕು ಮುಕ್ಕಾಲಿನ ಸಮಯದಲ್ಲಿ ಒಬ್ಬ ರೈತ ತನ್ನ
ಹದಿಮೂರು ಹದಿನಾಲ್ಕು ವರ್ಷದ ಮಗನೊಂದಿಗೆ ಬಂದ.
“ಡಾಕ್ಟ್ರೇ
ನನ್ನ ಮಗ ಕಳೆದೆರಡು ದಿನದಿಂದ ಮೂತ್ರಕ್ಕೇ ಹೋಗಿಲ್ಲ. ಮೂತ್ರಕ್ಕೋಗೋ ಜಾಗದಲ್ಲಿ ತುಂಬಾ ನೋವು ಅಂತಿದ್ದಾನೆ”
“ನಾಳೆ ಬಂದು
ತೋರಿಸು”
“ತುಂಬಾ ನೋವು
ಅಂತಾನೆ. ಸ್ವಲ್ಪ ಬೇಗ ನೋಡಿ ಸ್ವಾಮಿ”
“ಅಷ್ಟು ನೋವು
ಇದ್ದರೆ ಬೆಳಿಗ್ಗೇನೆ ಬರಬೇಕಿತ್ತು”
“ಬಸ್ಸಿಗೂ
ದುಡ್ಡಿರಲಿಲ್ಲ ಡಾಕ್ಟ್ರೇ. ಕೊನೆಗೆ ಅವರಿವರ ಬಳಿ ಸಾಲ ಮಾಡಿ ಬರುವಷ್ಟರಲ್ಲಿ ಇಷ್ಟೊತ್ತಾಯಿತು”
“ಅದಿಕ್ಕೆ
ನಾನೇನು ಮಾಡ್ಲಿ. ಆಸ್ಪತ್ರೆ ಸಮಯ ಮುಗಿದುಹೋಯ್ತು. ನಾಳೆ ಬಾ” ಅವರು ಹೀಗೆ ಹೇಳಿದಾಗ ಆಸ್ಪತ್ರೆ ಮುಚ್ಚಲು
ಇನ್ನೂ ಹತ್ತು ನಿಮಿಷ ಸಮಯವಿತ್ತು. ‘ಮಾತನಾಡುತ್ತ ಸಮಯ ವ್ಯರ್ಥ ಮಾಡುವ ಬದಲು ಅವನನ್ನು ನೋಡೇ ಕಳುಹಿಸಬಹುದಲ್ಲ’
ಎಂದೆನಿಸಿತು ತಂದೆಯ ಪಕ್ಕದಲ್ಲಿ ಕುಳಿತಿದ್ದ ಲೋಕಿಗೆ. ಡಾಕ್ಟರ್ ಯಾಕೆ ನೋಡುತ್ತಿಲ್ಲ ಎಂಬುದನ್ನರಿತವನಂತೆ
ಆ ರೈತ ಟೇಬಲ್ ಮೇಲೆ ಹತ್ತರ ಎರಡು ನೋಟುಗಳನ್ನಿರಿಸಿದ.
“ನನ್ನನ್ನು
ಏನಂತ ಅಂದುಕೊಂಡಿದ್ದೀಯಾ?” ಪ್ರಭುಲಿಂಗಸ್ವಾಮಿ ರೇಗಿದರು. ‘ಅಬ್ಬ! ಪರವಾಗಿಲ್ಲ ಈ ಅಂಕಲ್ ಲಂಚ ತೆಗೆದುಕೊಳ್ಳುವುದಿಲ್ಲ’
ಎಂದು ಸ್ವಲ್ಪ ಸಮಾಧಾನವಾಯಿತು ಲೋಕಿಗೆ.
“ಯಾಕೆ ಸ್ವಾಮಿ”
ದೀನನೇತ್ರನಾಗಿ ಕೇಳಿದ ಆ ರೈತ.
“ಯಾಕಂತೆ
ಯಾಕೆ. ಬರೀ ಇಪ್ಪತ್ತು ರುಪಾಯಿ ಇಟ್ಟಿದ್ದೀಯಲ್ಲ. ಅಷ್ಟು ಜುಜುಬಿ ಡಾಕ್ಟರ್ ಅಂತ ಮಾಡಿದ್ದೀಯ ನನ್ನನ್ನು.
ಈ ದುಡ್ಡು ತೆಗೆದುಕೊಂಡು ಹೋಗಿ ನಾಳೆ ಮತ್ತಷ್ಟು ದುಡ್ಡಿನೊಂದಿಗೆ ಬಾ. ಆಗ ನೋಡಿದರಾಯಿತು. ಒಂದು ದಿನಕ್ಕೆ
ಸಾಯೋ ಖಾಯಿಲೆಯೇನೂ ಬಂದಿಲ್ಲ ನಿನ್ನ ಮಗನಿಗೆ”
“ಇಲ್ಲ ಸ್ವಾಮಿ.
ಇದ್ದಿದ್ದಿದ್ದರೆ ಕೊಡುತ್ತಿರಲಿಲ್ಲವಾ? ಇರೋದೆ ಅಷ್ಟು. ಇನ್ನು ಹತ್ತು ರುಪಾಯಿ ಊರಿಗೆ ವಾಪಸ್ಸಾಗಲು
ಬೇಕು” ಎಂದಾ ರೈತ ಪರಿಪರಿಯಾಗಿ ಬೇಡಿದ ನಂತರವೇ ಆ ಹುಡಗನನ್ನು ಪರೀಕ್ಷೆ ಮಾಡಲು ತೊಡಗಿದ್ದು.
‘ಛೀ ಈ ಡಾಕ್ಟರಿಗೆ
ಸ್ವಲ್ಪವೂ ಕರುಣೆಯೇ ಇಲ್ಲವಲ್ಲ. ಇಪ್ಪತ್ತು ರುಪಾಯಿ ಬೇಡವೆಂದಾಗ ನಾನು ಏನೋ ಅಂತಿದ್ದೆ. ಹೆಚ್ಚು ದುಡ್ಡಿಗಾಗಿ
ಅವರಾರೀತಿ ಹೇಳಿದ್ದು’ ಅಸಹ್ಯವೆನಿಸಿತು. ಮೈಸೂರಿಗೆ ವಾಪಸ್ಸಾಗುವಾಗ ತಂದೆಯನ್ನು ಕೇಳಿದ “ಅಲ್ಲಪ್ಪ
ಆ ಡಾಕ್ಟರ್ ಅಂಕಲ್ ನನಗೆ ತುಂಬಾ ಕ್ಲೋಸ್ ಅಂತೀರಲ್ಲ. ಅವರು ಬಹಳ ಕಷ್ಟದಲ್ಲಿದ್ದಾರೆ, ಅವರ ಹತ್ತಿರವೂ
ದುಡ್ಡು ಕೇಳ್ತೀರಲ್ಲ ನೋಡಿ ಕಳ್ಸಿ ಅಂತ ಹೇಳಬಹುದಿತ್ತಲ್ಲ?”
“ನನಗ್ಯಾಕೆ
ಬೇಕು ಲೋಕಿ. ಅವರವರ ವ್ಯವಹಾರ ಅವರವರಿಗೆ. ನನ್ನ ಜೊತೆ ಚೆನ್ನಾಗಿದ್ದಾರೆ. ಅವರ ಬೇರೆ ಸಂಗತಿಗಳ ಬಗ್ಗೆ
ನಾನ್ಯಾಕೆ ತಲೆಕೆಡಿಸಿಕೊಳ್ಳಲಿ”. ಲೋಕಿ ಮಾತು ಮುಂದುವರಿಸಲಿಲ್ಲ. ಡಾಕ್ಟರ್ ಅಂಕಲ್ ಮೇಲಿನ ಕೋಪದ ಜೊತೆಗೆ
ಅಪ್ಪನೆಡೆಗೆ ತಿರಸ್ಕಾರದ ಭಾವನೆಯೂ ಬೆಳೆಯಿತು.
ಮೂರು ಜನ
ವಿಜಿ ಮಲಗಿದ್ದ ಮಂಚದ ಬಳಿ ಬಂದರು. ತಂದೆ ಮತ್ತು ಅಣ್ಣನನ್ನು ನೋಡುತ್ತಿದ್ದಂತೆ ಅಳಲಾರಂಭಿಸಿದ. ತಂದೆ
ವಿಜಿಯ ತಲೆಯ ಬಳಿ ಕುಳಿತು ಕೂದಲೊಳಗೆ ಕೈಯಾಡಿಸುತ್ತಾ ಸಮಾಧಾನ ಮಾಡಲೆತ್ನಿಸಿದರು. ಲೋಕಿ ಅವರಿಬ್ಬರನ್ನೂ
ನೋಡುತ್ತಾ ನಿಂತ. ತಂದೆ ನಿಜವಾಗಲೂ ದುಃಖದಿಂದಿದ್ದಾರೋ ಅಥವಾ ಬರೀ ನಟಿಸುತ್ತಿದ್ದಾರೋ ನಿರ್ಧರಿಸಲಾಗಲಿಲ್ಲ.
“ಲೋಕಿ ಮನೆಗೆ
ಹೋಗಿ ಸ್ನೇಹಳಿಗೆ ವಿಷಯ ತಿಳಿಸಿ ರವೆ ಗಂಜಿ ಮಾಡಿಸಿಕೊಂಡು ಬಾ”
“ಸರಿ” ಎಂದ್ಹೇಳಿ
ಲೋಕಿ ಹೊರಡುತ್ತಿದ್ದಾಗ ಪ್ರಭುಲಿಂಗಸ್ವಾಮಿ “ಬೇಡ ಲೋಕಿ. ಇಲ್ಲೇ ಎಲ್ಲಾದರೂ ಎಳನೀರೋ ಜ್ಯೂಸೋ ತೆಗೆದುಕೊಂಡು
ಬಾ. ಇನ್ನೊಂದರ್ಧ ಘಂಟೆಯಾದ ಮೇಲೆ ಮನೆಗೆ ಕರೆದುಕೊಂಡು ಹೋಗಿ”
“ಏನು ತೊಂದರೆಯಿಲ್ವಾ
ಪ್ರಭು?”
“ಇಲ್ಲ. ಬೇರೆ
ಎಲ್ಲ ವಿಷಯ ಪ್ರಿನ್ಸಿಪಾಲರು ತಿಳಿಸಿರಬೇಕಲ್ಲವಾ? ಪಾಪ ಬೆಳಿಗ್ಗೆ ಖುದ್ದು ಅವರೇ ತಮ್ಮ ಕಾರಿನಲ್ಲಿ
ಕರೆದುಕೊಂಡು ಬಂದಿದ್ದರು. ಅವರು ಹೇಳಿದ ಹಾಗೆ ಕೇಳು. ಕಂಪ್ಲೇಂಟೆಲ್ಲ ಕೊಡ್ಲಿಕ್ಕೆ ಹೋಗ್ಬೇಡ”
ಲೋಕಿಗೆ ತಮ್ಮನ
ಕಣ್ಣನ್ನು ದೃಷ್ಟಿಸಲಾಗಲಿಲ್ಲ. ಹೊರಗ್ಹೋಗಿ ಎಳನೀರು ತಂದುಕೊಟ್ಟು ಮತ್ತೆ ಹೊರಬಂದ. ಸಯ್ಯಾಜಿರಾವ್
ರಸ್ತೆಗೆ ಬಂದು ಅಂಗಡಿಯಲ್ಲೊಂದು ಸಿಗರೇಟ್ ಕೊಂಡು ಹಚ್ಚಿದ. ನಾನೂ ಬೇರೆಯವರ ಹಾಗೆ ಒತ್ತಡಕ್ಕೆ ಮಣಿದು
ರಾಜಿ ಮಾಡಿಕೊಂಡುಬಿಟ್ಟೆನಲ್ಲವೇ?! ವಿಜಿಯ ಕಣ್ಣು ನನಗೇನೋ ಹೇಳಲು ಪ್ರಯತ್ನಿಸುತ್ತಿದ್ದವು. ನೋಡಲು
ನನಗೇ ಧೈರ್ಯವಾಗಲಿಲ್ಲ. ಸಿಗರೇಟು ಮುಗಿಸಿ ಆಸ್ಪತ್ರೆಗೆ ಹಿಂದಿರುಗಿದ. ವಿಜಿಯನ್ನು ಮನೆಗೆ ಕರೆದುಕೊಂಡ
ಹೋಗಲು ಆಟೋ ಹತ್ತಿದಬೇಕಾದರೆ ಲೋಕಿ ಗಮನಿಸಿದ. ಯಾವಾಗಲೂ ನಗುಮುಖದಿಂದಿರುತ್ತಿದ್ದ ವಿಜಿಯ ಮೊಗದಿಂದಾನಗು
ಮಾಯವಾಗಿತ್ತು, ಬಹುಶಃ ಶಾಶ್ವತವಾಗಿ.
ಮನೆಗೆ ಹೋದ
ನಂತರ ವಿಜಿ ರೂಮಿಗ್ಹೋಗಿ ಮಲಗಿದ. ಲೋಕಿ ಸ್ನೇಹಳನ್ನು ತಾರಸಿಯ ಮೇಲೆ ಕರೆದುಕೊಂಡು ಹೋಗಿ ನಡೆದ ವಿಷಯವನ್ನು
ಹೇಳಿದ. ಮಧ್ಯೆ ಮಧ್ಯೆ ಬಿಕ್ಕಳಿಸಿ ಅಳುತ್ತಿದ್ದವಳನ್ನು ಸಮಾಧಾನಿಸಿದ. “ಅಣ್ಣ ಮಾಡಿದ್ದು ಸರಿಯೇನೇ?”
ಕೊನೆಯಲ್ಲಿ ಕೇಳಿದ.
“ಒಂದು ದೃಷ್ಟಿಯಲ್ಲಿ
ನೋಡಿದ್ರೆ ತಪ್ಪು ಅನ್ನಿಸುತ್ತೆ. ಆದರೆ ಇನ್ನೊಂದು ರೀತೀಲಿ ಸರಿ. ದೊಡ್ಡ ಮನುಷ್ಯರನ್ನೆಲ್ಲಾ ಎದುರು
ಹಾಕಿಕೊಂಡು ಈ ಸಮಾಜದಲ್ಲಿ ಬದುಕಲಾಗುತ್ತಾ?”
“ನಿನ್ನ ಪ್ರಕಾರ
ಯಾರು ದೊಡ್ಡ ಮನುಷ್ಯರು? ನಮ್ಮನ್ನು ನಾವು ಸಣ್ಣವರನ್ನಾಗಿ ಕಲ್ಪಿಸಿಕೊಂಡರೆ ಮಾತ್ರ ಬೇರೆಯವರು ದೊಡ್ಡವರಾಗಿ
ಕಾಣುತ್ತಾರೆ. ಸಮಾಜ ಅಂದ್ರೆ ಏನು ಹೇಳು? ಸಮಾನ ಜನರಿರೋ ಒಂದು ಗುಂಪು” ಎಂದು ತುಸು ಕೋಪದಿಂದಲೇ ಹೇಳಿ
“ನಾನು ಕಾಲೇಜ್ ಕಡೆಗೆ ಹೋಗಿ ಬರ್ತೀನಿ” ಎಂದ್ಹೇಳಿ ದುಡುದುಡು ಹೊರಟುಹೋದ.
* * *
ಕ್ಲಾಸಿಗೆ
ಹೋಗಲು ಲೋಕಿಗೆ ಮನಸ್ಸಾಗಲಿಲ್ಲ. ಬೆಳಿಗ್ಗೆಯಿಂದ ನಡೆದ ಘಟನಾವಳಿಗಳು ಮನಸ್ಸಿನ ಸ್ವಾಸ್ಥ್ಯವನ್ನು ಹಾಳು
ಮಾಡಿದ್ದವು. ಕ್ಯಾಂಟೀನಿಗೆ ಹೋಗಿ ಒಂದು ಮೂಲೆಯಲ್ಲಿ ಕುಳಿತು ಕಾಫಿ ಮತ್ತು ಸಿಗರೇಟನ್ನು ತರಿಸಿದನು.
ಇನ್ನೇನು ಸಿಗರೇಟ್ ಹಚ್ಚಬೇಕೆನ್ನುವಷ್ಟರಲ್ಲಿ “ಕ್ಲಾಸಿಗೂ ಬಂದಿಲ್ಲ. . .ಲೈಬ್ರರೀಲೂ ಇಲ್ಲ. ನಿನ್ನನ್ನು
ಬೆಳಿಗ್ಗೆಯಿಂದ ಹುಡುಕಿ ಹುಡುಕಿ ನನಗೆ ಸುಸ್ತಾಗಿ ಹೋಗಿದೆ. ನೀನು ನೋಡಿದ್ರೆ ಇಲ್ಲಿ ಆರಾಮಾಗಿ ಸಿಗರೇಟು
ಸೇದ್ತಾ ಇದ್ದೀಯ” ಹುಸಿಗೋಪ ತೋರಿಸುತ್ತಾ ಬಂದು ಕೂತಳು. ಅವಳ್ಯಾವಾಗಲೂ ಹಾಗೆ – ಮಾತನಾಡೋದಿರಲಿ, ನಡೆಯೋದಾಗಲಿ,
ಕೆಲಸದಲ್ಲಾಗಲೀ – ಎಲ್ಲಾ ವೇಗವಾಗಿ – ‘ಚೀತಾ’ದ ಹಾಗೆ, ಅದಾಕೆಯ ಅಡ್ಡಹೆಸರು, ತರಗತಿಯವರಿಟ್ಟಿದ್ದು.
“ಯಾಕೋ ಮನಸ್ಸೇ
ಸರಿಯಿಲ್ಲ ಪೂರ್ಣಿ”
“ಇವತ್ತಿನ
ದಿನಾನೂ ಮನಸ್ಸು ಸರಿಯಿಲ್ಲ ಅಂದ್ರೆ ಹೇಗೋ ಲೋಕಿ?” “ಹೋಗಲಿ ಇವತ್ತು ಏನು ವಿಶೇಷ ಅನ್ನೋದಾದರೂ ನೆನಪಿದೆಯಾ”
“ಉಹ್ಞೂ.
ಏನಿವತ್ತು?”
”ಏನಿರಬಹುದು
ಯೋಚಿಸಿ ಹೇಳು” ಲೋಕಿಗೆ ಇಂದಾಕೆಯೊಡನೆ ಮಾತನಾಡಲಾಗಲಿ ಯೋಚಿಸಲಾಗಲಿ ಮನಸ್ಸಿರಲಿಲ್ಲ. ಆಕೆಗೆ ಬೇಸರವಾಗಬಾರದೆಂಬ
ಕಾರಣದಿಂದ ಸುಮ್ಮನಿದ್ದ. ಪೂರ್ಣಿಯ ಕಡೆಗೆ ನೋಡಿದ. ಹೊಸ ಬಟ್ಟೆ ಧರಿಸಿದ್ದಂತೆ ಅನ್ನಿಸಿತು. ಏನೋ ಹೊಳೆದವನಂತೆ
“ರಿಯಲಿ ಸಾರಿ. ಈ ದಿನ ಮರೆಯೋವಂತದ್ದೇ ಅಲ್ಲ” ಎಂದ್ಹೇಳಿ ಆಕೆಯೆಡೆಗೆ ಕೈಚಾಚಿದ. ‘ಸದ್ಯ ಈಗಲಾದರೂ
ಈತನಿಗೆ ಹೊಳೆಯಿತಲ್ಲ’ ಎಂದು ನಿಟ್ಟುಸಿರುಬಿಡುವಷ್ಟರಲ್ಲಿ “ವಿಷ್ ಯು ಮೆನಿ ಮೆನಿ ಹ್ಯಾಪಿ ರಿಟರ್ನ್ಸ
ಆಫ್ ದಿ ಡೇ. ಇವತ್ತು ನಿನ್ನ ಹುಟ್ಟುಹಬ್ಬ ತಾನೇ!?!”
ಪೂರ್ಣಿ ಲೋಕಿಯ
ಕೈಮೇಲೊಂದು ಬಾರಿಸಿ “ಬುದ್ಧು! ನನ್ನ ಹುಟ್ಟುಹಬ್ಬ ಏಪ್ರಿಲ್ ಹದಿನಾಲ್ಕಕ್ಕೆ!!”
“ಹೌದಲ್ವಾ!
ಹಾಗಾದರೆ ಮತ್ತೇನು ವಿಶೇಷ?”
“ಸ್ವಲ್ಪ
ಯೋಚನೆ ಮಾಡೋ ಲೋಕಿ. ನಾನಿವತ್ತು ನಿನ್ನ ಜೊತೆ ಮಾತಾಡ್ತ ಇದ್ದೀನಿ”
“ಒಂದು ವರ್ಷದಿಂದಾನೂ
ನಾವು ಮಾತನಾಡುತ್ತಿದ್ದೀವಿ. ಅದರಲ್ಲೇನು ವಿಶೇಷ?”
“ಅಪ್ಪ ಕ್ರಾಂತಿಕಾರಿ!!
ಅದೇ ವಿಶೇಷ. ನಾನು ನೀನು ಮೊದಲನೇ ಬಾರಿಗೆ ಮಾತನಾಡಿ ಇಂದಿಗೆ ಒಂದು ವರ್ಷವಾಯಿತು”. ತಮ್ಮನಿಗಾದ ಅನ್ಯಾಯದ
ವಿರುದ್ಧ ಏನೂ ಮಾಡಲಾಗದವನಂತೆ ಪರರ ಒತ್ತಡಕ್ಕೆ ಮಣಿದು ಓಡಿ ಬಂದಿದ್ದೀನಿ. ನಾನ್ಯಾವ ಕ್ರಾಂತಿಕಾರಿ?
ಎಂಬ ಯೋಚನೆ ಬಂತು. ಅದನ್ನು ತೋರಗೊಡದೆ “ಹೌದಾ?!! ನಾವಿಬ್ಬರೂ ಭೇಟಿಯಾಗಿ ಒಂದು ವರುಷವಾಯಿತಾ?!” ಮಾತಿನಲ್ಲಿ
ಅಚ್ಚರಿಯ ಭಾವವಿದ್ದರೂ ಮುಖ ಮಾತ್ರ ಯಾವ ಭಾವನೆಯನ್ನೂ ತೋರ್ಪಡಿಸದೆ ನಿರ್ಭಾವುಕವಾಗಿತ್ತು.
“ಇಂಥ ಚಿಕ್ಕ
ಚಿಕ್ಕ ವಿಷಯಗಳನ್ನು ಮರೆಯಬೇಡ ಕಣೋ. ಇಬ್ಬರ ಪರಿಚಯವಾಗಿ ಒಂದು ವರ್ಷವಾಯಿತು. ಮಧ್ಯಾಹ್ನ ಊಟಕ್ಕೆ ಎಲ್ಲಾದರೂ
ಹೊರಗೆ ಹೋಗೋಣ ಅಂದುಕೊಂಡಿದ್ದೆ. ಹೋಗೋಣ್ವಾ?”
“ಇಲ್ಲ ಪೂರ್ಣಿ.
ಇವತ್ತು ಬೇಡ. ಮತ್ತ್ಯಾವತ್ತಾದರೂ ಹೋಗೋಣ” ಲೋಕಿ ಸಿಗರೇಟು ಹಚ್ಚಿದ. ಸಾಮಾನ್ಯವಾಗಿ ಲೋಕಿ ಪೂರ್ಣಿಮಾ
ಎದುರಿಗಿದ್ದಾಗ ಸಿಗರೇಟು ಸೇದುವುದಿಲ್ಲ. ‘ಮನಸ್ಯಾಕೋ ಸರಿಯಿಲ್ಲ. ಒಬ್ಬನೇ ಇರಬೇಕೆನ್ನಿಸುತ್ತಿದೆ’
ಅನ್ನೋದನ್ನು ಸೂಚಿಸಬೇಕಾದಾಗ ಮಾತ್ರ ಆಕೆಯ ಮುಂದೆ ಧೂಮಪಾನ ಮಾಡುತ್ತಿದ್ದ. ಪೂರ್ಣಿಗೂ ಅರ್ಥವಾಗಿತ್ತು.
“ಸರಿ ನಿನಗ್ಯಾಕೋ ಮನಸ್ಸು ಸರಿಯಿಲ್ಲ ಅನ್ನಿಸುತ್ತೆ. ನಾಳೆ ಸಿಗ್ತೀನಿ” ಎಂದು ಪೂರ್ಣಿ ಹೊರಟುಹೋದಳು.
ಮನದಲ್ಲಿ ಬೇಸರ; ಲೋಕಿಯೆಡೆಗೆ ರವಷ್ಟು ಕೋಪವಿತ್ತು.
ಲೋಕಿ ಕುಕ್ಕರಹಳ್ಳಿ
ಕೆರೆಯ ಬಳಿಗೆ ಹೋದ. ಎನ್ ಸಿ ಸಿಯ ನೌಕಾದಳದ ವಿದ್ಯಾರ್ಥಿಗಳು ಕೆರೆಯಲ್ಲಿ ಅಭ್ಯಾಸ ನಡೆಸುತ್ತಿದ್ದರು.
ಅವರ ಅಭ್ಯಾಸವನ್ನು ನೋಡುತ್ತಾ ಮುಂದೆ ಹೋಗಿ ಅಷ್ಟಾಗಿ ಜನರು ಓಡಾಡದ ಮೂಲೆಯಲ್ಲಿ ಕುಳಿತ, ಬಾಯಲ್ಲಿ
ನಾಲ್ಕನೇ ಸಿಗರೇಟು ಉರಿಯುತ್ತಿತ್ತು. ಛೇ!! ನನ್ನ ಮನಸ್ಸಂತೂ ಕದಡಿದ ನೀರಿನಂತಾಗಿದೆ. ಅದಕ್ಕೋಸ್ಕರ
ಆಕೆಯನ್ನೂ ನೋಯಿಸಿಬಿಟ್ಟೆನಲ್ಲ. ಇವತ್ತು ನಾವಿಬ್ಬರೂ ಮಾತನಾಡಿ ಒಂದು ವರ್ಷವಾಯಿತಂತೆ. ಇಂಥ ವಿಷಯಗಳನ್ನು
ಜನ ಅದು ಹೇಗೆ ನೆನಪಿಟ್ಟುಕೊಳ್ಳುತ್ತಾರೋ?! ನನಗಂತೂ ನೆನಪಿರುವುದಿಲ್ಲ. ಆಕೆ ಎಷ್ಟು ಖುಷಿಯಿಂದ ಬಂದಿದ್ದಳು.
ಕಾಲ ಎಷ್ಟು ಬೇಗ ಉರುಳಿ ಹೋಯ್ತಲ್ಲಾ? ಕಾಲಚಕ್ರ ಮತ್ತೆ ಹಿಂದೆ ತಿರುಗಿತು.
* * * * *
ಕಾಂತರಾಜ್
ಸರ್ ಅನ್ನು ಅಮಾನತ್ತು ಮಾಡಿದ ದಿನವೇ ಸಂಜೆ ಅವರನ್ನು ಬಂಧಿಸಿದ್ದಾರೆ ಎನ್ನುವುದು ತಿಳಿಯಿತು. ಲೋಕಿ
ಮತ್ತು ಸಯ್ಯದ್ ಬ್ಯಾಸ್ಕೆಟ್ ಬಾಲ್ ಮೈದಾನದ ಬಳಿ ಕುಳಿತಿದ್ದರು. ಅಲಿ ಸರ್ ಬಂದು ಈ ವಿಷಯ ತಿಳಿಸಿ
ಸಿಹಿ ಕೊಟ್ಟು ಹೋಗಿದ್ದರು. ಅವರು ಕೊಟ್ಟ ಸಿಹಿಯನ್ನು ತಿನ್ನತ್ತಾ ಸಯ್ಯದ್ “ತನ್ನ ಸಹೋದ್ಯೋಗಿಯೊಬ್ಬರನ್ನು
ಪೋಲೀಸರು ಬಂಧಿಸಿದರೆ, ಈ ಅಲಿ ಸರ್ ಯಾಕಿಷ್ಟು ಖುಷಿಯಾಗಿದ್ದಾರೆ?” ಎಂದು ಕೇಳಿದ.
ಮುಂದುವರೆಯುವುದು....
No comments:
Post a Comment