Oct 18, 2012

ಆದರ್ಶವೇ ಬೆನ್ನು ಹತ್ತಿ....ಭಾಗ 10



ಆದರ್ಶವೇ ಬೆನ್ನು ಹತ್ತಿ....ಭಾಗ 9


“ಈದು ಗ್ರಾಮದಲ್ಲಿ ನಕ್ಸಲರ ಹತ್ಯೆ”

ಹೆಡ್ಡಿಂಗಿನ ಕೆಳಗೆ ಸತ್ತ ಹುಡುಗಿಯರ ಫೋಟೋ ಕೊಟ್ಟಿದ್ದರು. ಒಬ್ಬಳು ಪಾರ್ವತಿ, ಇನ್ನೊಬ್ಬಳು ಹಾಜೀಮಾ. ಯಶೋಧಾ ಎಂಬುವವಳಿಗೆ ಕೂಡ ಗುಂಡೇಟು ತಗುಲಿ ಗಾಯಗಳಾಗಿದ್ದವಂತೆ. ಈದು ಗ್ರಾಮದಲ್ಲಿ ಜನರನ್ನು ಸಂಘಟಿಸುತ್ತಿದ್ದಾಗ ಅವರ ಮೇಲೆ ಆಕ್ರಮಣ ಮಾಡಿದ ಪೋಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇವರೀರ್ವರೂ ಮೃತರಾಗಿದ್ದರು. ಘಟನೆಯ ಸಂಪೂರ್ಣ ವಿವರಗಳನ್ನು ಓದಬೇಕೆಂದು ಪ್ರಾರಂಭಿಸಿದವನು ವಿಕ್ರಮ್ ಹೊರಬರುತ್ತಿದುದನ್ನು ನೋಡಿ ಆತುರಾತುರವಾಗಿ ಪತ್ರಿಕೆಯನ್ನು ಮೇಜಿನ ಮೇಲಿಟ್ಟ. ‘ಯಾಕಿಷ್ಟು ಗಾಬರಿಗೊಂಡತಿದ್ದಾನೆ?’ ಎಂದು ಪೂರ್ಣಿಮಾ ಪತ್ರಿಕೆಯ ಮುಖಪುಟ ನೋಡಿದಳು. ‘ಇವನೇನಾದರೂ. . .’ ಸಂಶಯ ಬಂತು.

“ನೀವು ಹೇಳಿದ್ದು ಸರಿಯಿದ್ದರೂ ಇರಬಹುದು. ಕಾಂತರಾಜ್ ಗೆ ಕೂಡ ಈ ಕೆಲಸವನ್ನೆಲ್ಲ ರಾಜೇಶ್ ಮಾಡಿಸಿರಬೇಕು ಅನ್ನೋ ಅನುಮಾನವಿದೆ. ಮೊದಲೇ ಯಾಕ್ರೀ ಹೇಳ್ಲಿಲ್ಲ ಅಂದ್ರೆ ‘ನಾನು ಹೇಳಿದ್ರೂ ನೀವು ನಂಬುತ್ತಿರಲಿಲ್ಲ. ಮೇಲಾಗಿ ನೀವು ಕೇಳಲೂ ಇಲ್ಲ’ ಅಂತಾರೆ! ವಿಚಿತ್ರ ಆಸಾಮಿ. ಯಾರೋ ಜೈಲಲ್ಲಿರೋ ಹಾಗೆ ಮಾತನಾಡ್ತಾರೆ”

“ಈಗ ಏನು ಮಾಡೋಣ ಸರ್?” ಲೋಕಿ ಕೇಳಿದ.

“ಈಗಲೇ ಈ ವಿಷಯಗಳನ್ನೆಲ್ಲ ಕಾಲೇಜಿನಲ್ಲಿ ಹೇಳಲು ಹೋಗಬೇಡಿ. ಇವತ್ತು ಫಾತಿಮಾ ಬರ್ತಾ ಇದ್ದಾಳಲ್ಲ. ವಿಚಾರಣೆ ಮಾಡಿ ನೋಡೋಣ”

“ಒಮ್ಮೆ ಕಾಂತರಾಜ್ ಸರ್ ನ ಮಾತನಾಡಿಸಿ ಹೋಗಬಹುದಾ?”

“ಇಲ್ಲ ಅವರಿಗೆ ಯಾರನ್ನೂ ಮಾತನಾಡಿಸಲು ಮನಸ್ಸಿಲ್ಲ” ಎಂದ್ಹೇಳಿ ವಿಕ್ರಮ್ ಎದುರಿಗಿದ್ದ ಫೈಲ್ ತೆರೆದರು – ನೀವಿಬ್ಬರೂ ಇನ್ನು ಹೋಗಬಹುದು ಎಂಬಂತೆ.

“ಸರಿ, ಸರ್. ನಾವಿನ್ನು ಬರ್ತೀವಿ” ಇಬ್ಬರೂ ಹೊರಟರು.
* * *
“ಈಗ ಕಾಲೇಜಿಗೆ ಹೋಗ್ತೀಯ ಲೋಕೇಶ್?”

“ಮ್. ಕಾಲೇಜಿಗೆ ಹೊರಟೆ. ಯಾಕೆ ನೀನು ಬರೋದಿಲ್ವ?”

“ಯಾಕೋ ಮನಸ್ಸಾಗ್ತಿಲ್ಲ. ಸೆಂಟ್ರಲ್ ಲೈಬ್ರರಿಗೆ ಹೋಗಿಬಿಟ್ಟು ಅಲ್ಲಿಂದ ಮನೆಗೆ ಹೋಗ್ತೀನಿ”

“ಲೈಬ್ರರಿಗೀತಕ್ಕೆ?”

“ಯಾವುದಾದರೂ ಪುಸ್ತಕ ಓದಿ ಕಾಲ ಕಳೆಯೋಣ ಅಂತ. ನಿನಗೆ ಪುಸ್ತಕಗಳನ್ನು ಓದೋ ಅಭ್ಯಾಸವಿಲ್ಲವಾ?”

“ಹದಿನೈದಿಪ್ಪತ್ತು ಕಾದಂಬರಿ ಓದಿದ್ದೀನಿ ಅಷ್ಟೇ”

“ಕಾದಂಬರಿಗಳನ್ನು ಹೈಸ್ಕೂಲಿನಿಂದಲೇ ಓದಿ ಈಗ ಕಾದಂಬರಿಗಳೆಂದರೆ ಕೊಂಚ ಬೇಸರ”

“ಇನ್ಯಾವ ಪುಸ್ತಕ ಓದ್ತೀಯಾ?”

“ಇತ್ತೀಚೆಗೆ ಆತ್ಮಕಥೆಗಳನ್ನು ಓದೋ ಹುಚ್ಚು ಶುರುವಾಗಿದೆ. ಕಾದಂಬರಿಗಳಿಗಿಂತ ರೋಚಕವಾಗಿರುತ್ತೆ. ಬೇರೆಯವರ ದೃಷ್ಟಿಕೋನ ಅಭಿಪ್ರಾಯಗಳನ್ನು ತಿಳಿಯಬಹುದು”

“ಅದರಿಂದ ಏನುಪಯೋಗ?”

“ನಮ್ಮ ಶ್ರದ್ಧೆ ನಂಬಿಕೆಗಳು ಗಟ್ಟಿಯಾಗಬೇಕಾದರೆ ಇತರರ ಶ್ರದ್ಧೆ ನಂಬಿಕೆಗಳನ್ನು ಗೌರವಿಸಬೇಕು ಅಂತ ಎಲ್ಲೋ ಓದಿದ ನೆನಪು”

‘ಎಷ್ಟು ಸತ್ಯ ಅಲ್ಲವಾ. ನಾವು ಬೇರೆಯವರ ಅಭಿಪ್ರಾಯಗಳಿಗೆ ಮನ್ನಣೆ ಕೊಡೋದು ತುಂಬಾನೇ ಕಡಿಮೆ’

          “ಏನ್ ಲೋಕೇಶ್ ಬಾಳ ಯೋಚನೆ ಮಾಡ್ತಿದ್ದೀಯ?”

“ಲೈಬ್ರರಿಗೆ ಬರಲಾ ಅಥವಾ ಕಾಲೇಜಿಗೆ ಹೋಗಲಾ?”

          “ಯಾಕೆ ಈ ಪೂರ್ಣಿಯನ್ನು ಬಿಟ್ಟು ಕಾಲೇಜಿಗೆ ಹೋಗೋದಿಕ್ಕೆ ಮನಸ್ಸಾಗ್ತಾ ಇಲ್ಲವೇನೋ?” ಗಂಭಿರವಾಗಿ ಕೇಳಿ ಮರುಕ್ಷಣವೇ ಜೋರಾಗಿ ನಕ್ಕಳು. ‘ಇವಳು ಯಾವಾಗಲೂ ಹೀಗೆ ನಗುತ್ತಿದ್ದರೆ ಮನದೊಳಗೆ ಹುಚ್ಚು ಕುದುರೆ ಕಾಯಂ ಆಗಿ ನೆಲೆಸಿಬಿಡುತ್ತೆ’ ಎಂದುಕೊಳ್ಳುತ್ತ “ನೀನು ಆ ರೀತಿ ಭಾವಿಸುವುದಾದರೆ ನಾನು ಕಾಲೇಜಿಗೆ ಹೋಗ್ತೀನಿ. ನಿನ್ನ ಪಾಡಿಗೆ ನೀನು ಲೈಬ್ರರಿಗೆ ಹೋಗು”

          “ನಾನು ಯಾವ ರೀತಿ ಅಂದುಕೊಂಡೆ ಅಂತ ನೀನು ಅಂದುಕೊಂಡೆ!”

“ಯಾವ ರೀತಿ ಅಂದ್ರೆ. . .ನಾನು ಏನು ಅಂದುಕೊಂಡಿದ್ದೀನಿ ಅಂತ ನೀನು ಅಂದುಕೊಂಡಿದ್ದೀಯೋ ಆ ರೀತಿ!!”

“ನನ್ನ ಮಾತನ್ನು ನನಗೇ ತಿರುಗಿಸಿಬಿಟ್ಟೆಯಾ?! ನೀನೂ ಲೈಬ್ರರಿಗೆ ಬಾ. ನನಗೂ ನಿನ್ನ ಜೊತೆ ಇರಬೇಕು ಅಂತ ಅನ್ನಿಸ್ತಾ ಇದೆ”

ಕೇಳಲೋ ಬೇಡವೋ ಎಂಬಂತೆ “ಯಾಕೆ?” ಎಂದ.

“ಯಾಕೆ ಅಂದ್ರೆ. . . ನಿನಗೆ ಚೆನ್ನಾಗಿ ಮಾತನಾಡೋದು ಗೊತ್ತು. ಅಲ್ಲದೆ ಅದಕ್ಕಿಂತ ಹೆಚ್ಚಾಗಿ ಬೇರೆಯವರ ಮಾತುಗಳನ್ನು ಸಾವಧಾನವಾಗಿ ಕೇಳಿಸಿಕೊಳ್ತೀಯ. ಅದಿಕ್ಕೆ”

“ಪರಿಚಿತರಾದ ಮೊದಲ ದಿನವೇ ನನ್ನ ವ್ಯಕ್ತಿತ್ವ ಗೊತ್ತಾಗಿಹೋಯಿತಾ?!”

“ನಮ್ಮ ವ್ಯಕ್ತಿತ್ವವೇ ನಮಗೆ ಸರಿಯಾಗಿ ಅರ್ಥವಾಗಲ್ಲ. ಅಂಥಹದ್ರಲ್ಲಿ ಬೇರೆಯವರ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳೋ ಶಕ್ತಿ ನನಗಿಲ್ಲ”

ಮಾತುಗಳ ಮಧ್ಯೆ ಲೈಬ್ರರಿ ಬಂದದ್ದೇ ಇಬ್ಬರಿಗೂ ತಿಳಿಯಲಿಲ್ಲ. ಲೋಕಿ ಅವತ್ತೇ ಪ್ರಪ್ರಥಮ ಬಾರಿಗೆ ಮೈಸೂರಿನ ಕೇಂದ್ರ ಗೃಂಥಾಲಯದೊಳಕ್ಕೆ ಕಾಲಿರಿಸಿದ್ದು. ಅವನ ಜೀವನದಲ್ಲಿ ನಡೆಯೋ ಅನೇಕ ಮುಖ್ಯ ಘಟನೆಗಳು ಆ ಗೃಂಥಾಲಯದಿಂದಲೇ ಪ್ರಾರಂಭಗೊಳ್ಳುತ್ತಿಲಿದ್ದವು. ಆದರೆ ಅದ್ಯಾವುದರ ಪರಿವಿಯಿಲ್ಲದ ಲೋಕಿ ಪೂರ್ಣಿಯ ಭೇಟಿಯಿಂದಾದ ಸಂತೋಷದಿಂದ ಮೈಸೂರು ರಾಜರ ಕಾಲದಲ್ಲಿ ಕಟ್ಟಿದ್ದ ಕಟ್ಟಡದಳೊಗೆ ಕಾಲಿರಿಸಿದನು. ಹಳೆಯ ಕಾಲದ ಮರದ ಮೆಟ್ಟಿಲುಗಳನ್ನೇರಿ ಇಬ್ಬರೂ ಒಳಹೊಕ್ಕರು. ಅಲ್ಲಿದ್ದ ಪುಸ್ತಕ ಭಂಡಾರವನ್ನು ನೋಡಿದ ಲೋಕಿಗೆ ‘ಜೀವಮಾನವೆಲ್ಲ ಓದಿದರೂ ನನ್ನಿಂದ ಇಷ್ಟೊಂದು ಪುಸ್ತಕಗಳನ್ನು ಓದಿ ಮುಗಿಸಲಾಗುವುದಿಲ್ಲ’ ಎಂದೆನಿಸಿತು. ಪೂರ್ಣಿಮಾ ಒಂದು ಪುಸ್ತಕವನ್ನು ತೆಗೆದುಕೊಂಡು ಓದಲು ಶುರುಮಾಡಿದಳು. ಲೋಕಿ ಪುಸ್ತಕಗಳಿದ್ದ ಎಲ್ಲಾ ಕಪಾಟುಗಳ ಮೇಲೆ ಒಮ್ಮೆ ಕಣ್ಣಾಡಿಸಿ ಸುಭಾಷ ಚಂದ್ರ ಬೋಸರ ಜೀವನದ ಬಗ್ಗೆ ಬರೆದಿದ್ದ ‘ಕೋಲ್ಮಿಂಚು’ ಎಂಬ ಪುಸ್ತಕವನ್ನು ತೆಗೆದುಕೊಂಡು ಹೋಗಿ ಪೂರ್ಣಿಮಾಳ ಪಕ್ಕ ಕುಳಿತನು. ಆತ ತಂದ ಪುಸ್ತಕವನ್ನು ನೋಡಿ ಪೂರ್ಣಿಮಾಳಿಗೆ ಮತ್ತೆ ಪೋಲೀಸ್ ಠಾಣೆಯಲ್ಲಿ ಆತ ಆಸಕ್ತಿಯಿಂದ ಓದುತ್ತಿದ್ದ ಪತ್ರಿಕೆ ನೆನಪಾಯಿತು. ಮುಂದ್ಯಾವತ್ತಾದರೂ ಸಾಧ್ಯವಾದಲ್ಲಿ ಅದರ ಬಗ್ಗೆ ವಿಚಾರಿಸಬೇಕು ಎಂದು ಮನದಲ್ಲೇ ಗುರುತುಮಾಡಿಕೊಂಡಳು.

ಒಂದು ಪುಟ ಓದುವಷ್ಟರಲ್ಲೇ ‘ಇಷ್ಟೊಂದು ಜನರ ಮಧ್ಯೆ ಕುಳಿತು ಓದೋದಿಕ್ಕೆ ತುಂಬಾ ಏಕಾಗ್ರತೆ ಬೇಕು’ ಅನ್ನಿಸಿತು. ಸುತ್ತಮುತ್ತ ಕಣ್ಣಾಡಿಸಿದನು. ಪೂರ್ಣಿಮಾ ಏಕಾಗ್ರತೆಯಿಂದ ಓದುತ್ತಿದ್ದಳು. ಅಷ್ಟೊಂದು ಪುಸ್ತಕಗಳಿದ್ದರೂ ಕೂರೋದಿಕ್ಕಿರೋ ಆಸನಗಳ ಸಂಖ್ಯೆ ಕಡಿಮೆ. ಬಹಳಷ್ಟು ಜನ ನಿಂತುಕೊಂಡೇ ಪುಸ್ತಕ ತಿರುವಿಹಾಕುತ್ತಿದ್ದಾರೆ. ಡಿಗ್ರಿ ಹುಡುಗರು ಲೈಬ್ರರಿಯಲ್ಲಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುತ್ತಿದ್ದರು. ಇನ್ನೂ ಸ್ವಲ್ಪ ಜನ ನೆಪಮಾತ್ರಕ್ಕೆ ಎದುರಿಗೊಂದು ಪುಸ್ತಕವನ್ನು ಇಟ್ಟುಕೊಂಡು ಪಕ್ಕದವರೊಡನೆ ಮೆಲುದನಿಯಲ್ಲಿ ಮಾತನಾಡುತ್ತಿದ್ದರು. ಕೊನೆಯ ಟೇಬಲ್ಲಿನ ಹಿಂದೆ ಒಂದು ಸ್ಟೂಲಿನ ಮೇಲೆ ಕುಳಿತಿದ್ದ ಒಬ್ಬ ಮದ್ಯವಯಸ್ಕ ಲೋಕಿಯ ಗಮನ ಸೆಳೆದ. ಆತನನ್ನು ರಸ್ತೆಯಲ್ಲೆಲ್ಲಾದರೂ ನೋಡಿದರೆ ಆತನೊಬ್ಬ ಹುಚ್ಚ ಎಂದು ಖಡಾಖಂಡಿತವಾಗಿ ಹೇಳಬಹುದಿತ್ತು. ಆ ರೀತಿಯಿತ್ತು ಅವನ ವೇಷ. ಕೆದರಿದ ಕೂದಲು, ಬಹಳ ದಿನಗಳಿಂದ ಕೂದಲಿಗೆ ನೀರು ಸೋಕಿಸಿಲ್ಲದ ಕಾರಣ ಕೂದಲು ಗಂಟುಬಿದ್ದಿತ್ತು. ಆತ ಧರಿಸಿದ್ದ ಅಂಗಿ ಅಲ್ಲಲ್ಲಿ ಹರಿದುಹೋಗಿತ್ತು. ಪಂಚೆಯ ಸ್ಥಿತಿಯೂ ಅದೇ. ಗಡ್ಡ ಮೀಸೆ ಯಥೇಚ್ಛವಾಗಿ ಬೆಳೆದು ಆತನ ಬಾಯಿಯೇ ಮುಚ್ಚಿಹೋಗಿತ್ತು. ‘ಈ ಹುಚ್ಚ ಇಲ್ಲೇನು ಓದುತ್ತಿರಬಹುದು?’ ಕುತೂಹಲ ಗರಿಗೆದರಿತು. ಲೋಕಿ ಅವನ ಬಳಿ ಹೋಗಲು ಮೇಲೆದ್ದ.

“ಯಾಕೆ ಲೋಕೇಶ್? ಆಗಲೇ ಹೊರಟುಬಿಟ್ಟೆ?”

“ಎದುರಿಗೆ ಇಷ್ಟೊಂದು ಜನ ಕುಳಿತಿದ್ದಾಗ ಏಕಾಗ್ರತೆಯಿಂದ ಓದುವುದು ಕಷ್ಟ. ಇನ್ಯಾವ್ಯಾವ ಪುಸ್ತಕಗಳಿವೆ ಅಂತ ನೋಡಿಕೊಂಡು ಬರ್ತೀನಿ” ಎಂದ್ಹೇಳಿ ಲೋಕಿ ಆ ಮಧ್ಯವಯಸ್ಕನ ಹಿಂದಿದ್ದ ಪುಸ್ತಕ ಕಪಾಟಿನ ಬಳಿಗೆ ಬಂದ. ಕೆಲ ನಿಮಿಷಗಳ ಕಾಲ ಪುಸ್ತಕ ಹುಡುಕುತ್ತಿರುವವನಂತೆ ನಟಿಸಿ ಆ ವ್ಯಕ್ತಿ ಓದುತ್ತಿದ್ದ ಪುಸ್ತಕದ ಕಡೆ ನೋಡಿದ. ಹಳೇ ಕಾಲದ ಪುಸ್ತಕವದು ಎಂಬುದು ಅದರ ಹಾಳೆಗಳ ಬಣ್ಣದಿಂದ ತಿಳಿಯುತ್ತಿತ್ತು. ಆ ವ್ಯಕ್ತಿಯ ಸಮೀಪಕ್ಕೆ ಬಂದ ಲೋಕಿಗೆ ಆ ಪುಸ್ತಕ ಇಂಗ್ಲೀಷ್ ಭಾಷೆಯಲ್ಲಿದೆ ಎಂಬುದನ್ನು ಕಂಡಾಗ ‘ಈ ಮನುಷ್ಯನಿಗೆ ಇಂಗ್ಲೀಷೂ ಬರುತ್ತಾ?!’ ಎಂದು ಅಚ್ಚರಿಯಾಯಿತು. ಮತ್ತಷ್ಟು ಸಮೀಪಕ್ಕೆ ಬಂದ. ಲೋಕಿಯ ಚಲನವಲನವನ್ನು ಆಗಿನಿಂದ ಗಮನಿಸುತ್ತಿದ್ದ ಆ ವ್ಯಕ್ತಿ ಇದ್ದಕ್ಕಿದ್ದಂತೆ ಲೋಕಿಯ ಕಡೆ ತಿರುಗಿ “ಏನು?” ಎಂದು ಕೇಳಿದ. ಕಣ್ಣಿನಲ್ಲಿ ಅಸಹನೆಯಿತ್ತಾ?

“ಏನಿಲ್ಲ” ಎಂದು ಉತ್ತರಿಸಿ ಉಗುಳು ನುಂಗಿಕೊಂಡು ಬೇರೆ ಕಪಾಟಿನ ಬಳಿ ಹೋದ. ಆತ ಓದುತ್ತಿದ್ದ ಪುಸ್ತಕದ ಹೆಸರು ಸಂಪೂರ್ಣ ತಿಳಿಯದೇ ಹೋದರೂ ಹಾಳೆಯ ಮೇಲ್ಬಾಗದಲ್ಲಿ ಬರೆದಿದ್ದ ಮಾರ್ಕ್ಸಿಸಂ ಎಂಬ ಪದ ಕಾಣಿಸಿತು. ಲೋಕಿಯಲ್ಲಿ ಅವನೆಡೆಗೆ ವಿಚಿತ್ರ ಆಕರ್ಷಣೆ. ಪೂರ್ಣಿಮಾಳ ಇರುವಿಕೆಯೂ ಒಂದರೆಕ್ಷಣ ಮರೆಯಾಯಿತು.

ಮತ್ತೆ ಪೂರ್ಣಿಮಾಳ ಬಳಿ ಬಂದು ‘ಕೋಲ್ಮಿಂಚ’ನ್ನೇ ಓದಲು ತೊಡಗಿದ. ಸುಭಾಷ ಚಂದ್ರ ಬೋಸರ ವಿಚಾರ ಸಾಹಸಗಳನ್ನು ಓದುತ್ತಾ ಅದರಲ್ಲೇ ಮಗ್ನನಾಗಿಹೋಗಿದ್ದ ಲೋಕಿಗೆ ಆ ‘ಹುಚ್ಚ’ ತನ್ನ ಬಳಿ ಬಂದು ತಾನು ಓದುತ್ತಿದ್ದ ಪುಸ್ತಕದ ಹೆಸರನ್ನು ನೋಡಿ ಮನಸ್ಸಿನಲ್ಲೊಮ್ಮೆ ನಕ್ಕು ಹೊರಟುಹೋಗಿದ್ದನ್ನು ಗಮನಿಸಲಾಗಲಿಲ್ಲ. 

ಸಂಜೆ ನಾಲ್ಕರ ಸುಮಾರಿಗೆ ಪೂರ್ಣಿಮಾ ಮತ್ತು ಲೋಕೇಶ್ ಲೈಬ್ರರಿಯಿಂದ ಹೊರಬಂದು ಮನೆಗೆ ಹೊರಟರು. ಸರಿಸುಮಾರು ಅದೇ ಸಮಯಕ್ಕೆ ಫಾತಿಮಾ ಮತ್ತು ಎಂ ಎಸ್ ಅಲಿ ಠಾಣೆಯ ಒಳಹೊಕ್ಕರು.

ಪೂರ್ಣಿಮಾಳ ಗುಂಗಿನಲ್ಲೇ ಹೊರಟಿದ್ದ ಲೋಕಿಗೆ ತನ್ನ ಹಿಂದೆ ಎಂಟ್ಹತ್ತು ಮಾರು ದೂರದಲ್ಲಿ ಇಬ್ಬರು ಯುವಕರು ತನ್ನನ್ನೇ ಹಿಂಬಾಲಿಸುತ್ತಿದ್ದುದು ತಿಳಿಯಲಿಲ್ಲ. ಲೋಕಿ ಮನೆಯೊಳಗೆ ಹೋದ ನಂತರ ಆ ಇಬ್ಬರು ಯುವಕರು ಲೋಕಿಯ ಮನೆಯನ್ನು ಗುರುತು ಮಾಡಿಕೊಂಡು ಹೊರಟುಹೋದರು!

* * * *
ಫಾತಿಮಾ ಅಲಿಯ ಜೊತೆ ವಿಕ್ರಮ್ ರ ಛೇಂಬರಿನೊಳಕ್ಕೆ ಹೋದಳು. ಕಾಫಿ ಕುಡಿಯುತ್ತಿದ್ದ ವಿಕ್ರಮ್ ಇವರನ್ನು ನೋಡಿ ಲೋಟವನ್ನು ಟೇಬಲ್ಲಿನ ಮೇಲಿಟ್ಟು ಇಬ್ಬರಿಗೂ ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದನು.

“ನಮಸ್ಕಾರ ಸರ್”

“ನಮಸ್ತೆ” ಎಂದ್ಹೇಳಿ ಆಕೆಯ ಪಕ್ಕ ಕುಳಿತಿದ್ದ ಅಲಿಯ ಕಡೆ ಕೈ ತೋರಿಸಿ “ನೀವ್ಯಾರು ಅಂತ ತಿಳಿಯಲಿಲ್ಲ” ಎಂದು ಕೇಳಿದನು.

“ನಾನು ಮೊಹಮದ್ ಸಮೀರುದ್ದೀನ್ ಅಲಿ ಅಂತ ಸರ್. ಇತಿಹಾಸ ವಿಭಾಗದಲ್ಲಿ ಹೊಸದಾಗಿ ಸೇರಿದ್ದೀನಿ”

“ಸರಿ, ಸರಿ. ನೀವು ಬಂದ ಕಾರಣ ತಿಳಿಯಲಿಲ್ಲ”

“ಫಾತಿಮಾ ನನ್ನ ಪರಿಚಯದ ಹುಡುಗಿ ಸರ್. .”

“ಪರಿಚಯ ಅಂದ್ರೆ?”

“ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದೆವು. ಮನೆಯವರ ಒಪ್ಪಿಗೆಯೂ ಸಿಕ್ಕಿದೆ. ಫಾತಿಮಾಳ ಓದು ಮುಗಿದ ನಂತರ ಮದುವೆ ಇಟ್ಟುಕೊಳ್ಳಬೇಕೆಂದಿದ್ದೇವೆ”

“ಹಾಗೆ. ಒಳ್ಳೇದು ಒಳ್ಳೇದು. ನೀವು ಸ್ವಲ್ಪ ಹೊರಗೆ ಕುಳಿತಿರಿ ಅಲಿ. ವಿಚಾರಣೆ ಮಾಡಿದ ಮೇಲೆ ಕರೆಸುತ್ತೀನಿ” ಎಲ್ಲಿ ಅಲಿಯನ್ನು ಹೊರಗೆ ಕಳುಹಿಸಿಯೇಬಿಡುತ್ತಾರೋ ಎಂಬ ಗಾಬರಿಯಿಂದ ಫಾತಿಮಾ “ಪರವಾಯಿಲ್ಲ ಸರ್. ಅಲಿ ಇಲ್ಲೇ ಇರಲಿ. ಅವರಿಂದ ಮುಚ್ಚಿಡೋದೂ ಏನೂ ಇಲ್ಲ”

“ನೋಡ್ರೀ ಫಾತಿಮಾ. ಇದು ನನ್ನ ಸುಪರ್ದಿಯಲ್ಲಿರೋ ಠಾಣೆ. ಇಲ್ಲಿ ನಾನು ಹೇಳಿದಂತೆಯೇ ನಡೆಯೋದು. ಅವರಿವರ ಮಾತಿನಂತಲ್ಲ. ಈ ಕೇಸಿಗೂ ಅವರಿಗೂ ಏನು ಸಂಬಂಧ ಇಲ್ಲದ ಮೇಲೆ ಅವರ ಅವಶ್ಯಕತೆ ಇಲ್ಲ” ಅಲಿಯ ಕಡೆ ತಿರುಗಿ “ನಿಮಗೂ ಇದಕ್ಕೂ ಯಾವ ಸಂಬಂಧಾನೂ ಇಲ್ಲ ಅಲ್ವೇನ್ರೀ?” ಎಂದು ತುಸು ಒರಟುತನದಿಂದಲೇ ಕೇಳಿದ.

“ಅಯ್ಯೋ ಇಲ್ಲ ಸರ್! ಜೊತೆಗೆ ಮಾರಲ್ ಸಪೋರ್ಟಿಗೆ ಬಂದಿದ್ದಷ್ಟೇ. ನಿಮ್ಮ ಪಾಡಿಗೆ ನೀವು ವಿಚಾರಣೆ ನಡೆಸಿ. ನಾನು ಹೊರಗಿರ್ತೀನಿ” ಎಂದು ದಡಬಡಿಸಿ ಫಾತಿಮಾಳ ಕಡೆಗೆ ತಪ್ಪಿಯೂ ಕಣ್ಣಾಡಿಸದೆ ಹೊರಗೆ ನಡೆದುಹೋದ.

‘ಅಲಿಯ ನಡವಳಿಕೆಯಲ್ಲಿ ಗಾಬರಿಯಿತ್ತಾ? ಸ್ಟೇಷನ್ನಿಗೆ ಕಾಲಿಡುವ ಬಹುತೇಕರಿಗೆ ಗಾಬರಿಯಿದ್ದೇ ಇರುತ್ತೆ. ನಮ್ಮ ಹಿಂದೆ ಬಯ್ಕೊಂಡು ಅಡ್ಡಾಡ್ತಾರೆ. ಎದುರು ಬಂದರೆ ನಡುಗುತ್ತಾರೆ. ಥೂ ಹಾಳು ಪೋಲೀಸ್ ಜೀವನ’ ‘ಇವಳ ಜೊತೆ ಯಾವ ರೀತೆ ಮಾತು ಮುಂದುವರಿಸೋದು. ಈ ಹುಡುಗಿಯರ ವಿಚಾರದಲ್ಲಿ ತುಂಬಾ ಹೆದರಿಸಿ ಬೆದರಿಸಿ ವಿಚಾರಣೆ ನಡೆಸೋ ಹಾಗೂ ಇಲ್ಲ. ಕಂಪ್ಲೇಂಟ್ ಕೊಟ್ಟ ಯುವತಿಯ ಮೇಲೇ ಪೋಲೀಸ್ ದೌರ್ಜನ್ಯ ಅಂತ ಸುದ್ದಿ ಮಾಡಿ ವಿಕ್ರಮ್ ಒಬ್ಬ ಸ್ತ್ರೀ ದ್ವೇಷಿ ಎಂದು ಬಿಂಬಿಸಿಬಿಡುತ್ತಾರೆ’ ಎಂದು ಯೋಚಿಸುತ್ತಾ “ನೋಡೋದಿಕ್ಕೆ ಬಾಳ ಚಲೋ ಇದ್ದೀರ್ರೀ ನೀವು. ನಿಮ್ದೂ ಅಲೀದೂ ಒಳ್ಳೇ ಜೋಡಿಯಾಗುತ್ತೆ” ನಗುತ್ತ ಹೇಳಿದ.

“ಥ್ಯಾಂಕ್ಯೂ ಸರ್” ಗಾಬರಿಗೊಂಡಿದ್ದ ಫಾತಿಮಾ ಹಣೆಯ ಮೇಲಿನ ಬೆವರಿನಸಾಲುಗಳನ್ನು ಕೈಚೌಕದಲ್ಲಿ ಒರೆಸಿಕೊಳ್ಳುತ್ತಾ ಹೇಳಿದಳು.

“ಯಾಕ್ರೀ ಫಾತಿಮಾ ಬೆವರುತ್ತಿದ್ದೀರ. ಗಾಬರಿಯಾಗಬೇಡ್ರೀ. ಇಲ್ಲಾಂದ್ರೆ ಇನ್ಸ್ ಪೆಕ್ಟರ್ ಹುಡುಗಿಯನ್ನು ಹೆದರಿಸಿ ಕಳಿಸಿದ್ದಾರೆ ಅಂತ ಪುಕಾರೆದ್ದುಬಿಡುತ್ತೆ”

“ಮೊದಲ ಸಲ ಪೋಲೀಸ್ ಠಾಣೆ ಮೆಟ್ಟಿಲತ್ತಿದ್ದಲ್ಲವಾ ಸರ್. ಅದಕ್ಕೆ ಸ್ವಲ್ಪ ಗಾಬರಿ ಅಷ್ಟೇ. ಏನು ವಿವರ ಬೇಕೋ ಕೇಳಿ ಸರ್ ಹೇಳ್ತೀನಿ” ವಿಕ್ರಮನ ನಗು ಫಾತಿಮಾಳ ದುಗುಡವನ್ನು ಒಂದಷ್ಟು ಕಡಿಮೆಗೊಳಿಸಿತು. ವಿಕ್ರಮ್ ಇನ್ನೇನು ಪ್ರಶ್ನೆ ಕೇಳಬೇಕು ಫೋನ್ ಟ್ರಿಣ್ ಗುಟ್ಟಿತು. ಗೊಣಗುತ್ತಲೇ ರಿಸೀವರ್ ತೆಗೆದುಕೊಂಡ.

“ಹಲೋ”
        
“ನಮಸ್ಕಾರ ಸರ್. ಏನು ಹೇಳಿ ಸರ್”
        
 “ನಾಳೆ ಬರಬೇಕಾ ಸರ್. ಎಷ್ಟೊತ್ತಿಗೆ”
        
“ಸರಿ ಸರ್”
        
“ಸರ್ ಒಂದ್ನಿಮಿಷ. ಇಲಾಖಾ ವಿಚಾರಣೆಯ ತೀರ್ಪು ಯಾವಾಗ ಬರಬಹುದು ಸರ್”
        
“ಹೌದಾ ಸರ್. ಅಗಲೇ ನನ್ನನ್ನು ಎರಡು ತಿಂಗಳು ಅಮಾನತ್ತಿನಲ್ಲಿರಿಸಿದ್ದರು. ವರ್ಗಾವಣೆನೂ ಮಾಡಿಬಿಟ್ಟರು. ಈಗ ಮತ್ತೆ ಏನಾದರೂ ಶಿಕ್ಷೆ ಆಗಿಬಿಟ್ಟರೆ ತೊಂದರೆಯಾಗುತ್ತೆ ಸರ್”
        
“ಏನ್ಸಾರ್ ನೀವೂ ಯಾಕೆ ಅಂತ ಕೇಳ್ತೀರಲ್ಲ. ದಿನಾ ಬೆಳಿಗ್ಗೆ ಪೋಲೀಸ್ ಡ್ರೆಸ್ ಧರಿಸಿ ಪಿಸ್ತೂಲ್ ಹಿಡಿಯದಿದ್ದರೆ ನನಗೆ ರಾತ್ರಿ ಹೊತ್ತು ನಿದ್ದೇನೇ ಬರಲ್ಲ ಸರ್”
        
“ಏನೋ ಸರ್. ನೀವಿದ್ದೀರ ಅನ್ನೋ ಧೈರ್ಯದ ಮೇಲೆ ಒಂದಷ್ಟು ನೆಮ್ಮದಿಯಾಗಿದ್ದೇನೆ ಸರ್. ಇವತ್ತು ರಾತ್ರಿ ಬಸ್ಸಿಗೆ ಹೊರಟು ನಾಳೆ ಬೆಳಿಗ್ಗೇನೆ ಬಂದು ತಲುಪ್ತೀನಿ ಸರ್”
        
“ಓಕೆ ಸರ್. ನಾಳೆ ಸಿಗ್ತೀನಿ” ಎಂದ್ಹೇಳಿ ವಿಕ್ರಮ್ ಫೋನ್ ಕೆಳಗಿಟ್ಟ. ಮುಖದಲ್ಲಿ ಚಿಂತೆಯಿತ್ತು. ಮತ್ತೆ ರಿಸೀವರ್ ಎತ್ತಿಕೊಂಡು ಡಯಲ್ ಮಾಡಿದ.
“ಹಲೋ ರಘು. ನಾನು ಕಣೋ ವಿಕ್ರಮ್. ನಿನ್ನಿಂದ ಒಂದು ಸಹಾಯವಾಗಬೇಕಿತ್ತಲ್ಲ?”
                  
“ಏನಿಲ್ಲ ಇವತ್ತು ರಾತ್ರಿ ನಾನು ಬೆಳಗಾವಿಗೆ ಹೋಗಬೇಕಾಗಿದೆ. ಒಂದು ಟಿಕೇಟ್ ಬುಕ್ ಮಾಡಿಸಿಬಿಡು”
        
“ನೀನೇನು ಬರೋದು ಬೇಡ. ನಾನೇ ಬಂದು ತೆಗೆದುಕೊಳ್ತೀನಿ”
        
“ಮತ್ತದೇ ಆ ಮೆಡಿಕಲ್ ಕಾಲೇಜ್ ಸ್ಟೂಡೆಂಟ್ ಕೇಸು ಕಣಪ್ಪ. ತಲೆನೋವಾಗಿಬಿಟ್ಟಿದೆ. ಸರಿ ಸ್ವಲ್ಪ ಬ್ಯುಸಿ ಇದ್ದೀನಿ. ನಂತರ ಸಿಗ್ತೀನಿ ಬಿಡು” ರಿಸೀವರನ್ನು ಅದರ ಜಾಗದಲ್ಲಿ ಸೇರಿಸಿದನು.

ಮ್ಲಾನಗೊಂಡ ವಿಕ್ರಮ್ ರ ಮುಖವನ್ನು ನೋಡಿ ಫಾತಿಮಾ “ಯಾಕ್ಸಾರ್? ಏನಾಯ್ತು?” ಎಂದು ಕೇಳಿದಳು. ವಿಕ್ರಮ್ ಈ ಪ್ರಶ್ನೆಗೇ ಕಾಯುತ್ತಿದ್ದವನಂತೆ “ಏನೂಂತ ಹೇಳೋದು ಫಾತಿಮಾ. ಮುಂಚೆ ನಾನು ಬೆಳಗಾವಿಯಲ್ಲಿ ಕೆಲಸದಲ್ಲಿದ್ದಾಗ ಒಂದು ಘಟನೆ ನಡೆದಿತ್ತು. ಅಲ್ಲಿರೋ ಮೆಡಿಕಲ್ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿಯೇ ಗಾಂಜಾ ಭಾಂಗ್ ಮಾರುತ್ತಿದ್ದ. ಅದೇ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಆತ ಗಾಂಜಾ ಮಾರುತ್ತಿದ್ದಾಗಿನ ಕೆಲವು ಫೋಟೋಗಳನ್ನು ತೆಗೆದು ಆತನನ್ನು ರೆಡ್ ಹ್ಯಾಂಡಾಗಿ ನನ್ನ ಕೈಗೆ ಸಿಗುವಂತೆ ಮಾಡಿದ್ದರು. ಡ್ರಗ್ಸ್ ಮಾರುತ್ತಿದ್ದ ಆ ವಿದ್ಯಾರ್ಥಿಗೆ ಶಿಕ್ಷೆ ಕೊಡಿಸುವುದಕ್ಕಿಂತ ಹೆಚ್ಚಾಗಿ ಈ ಡ್ರಗ್ಸ್ ನ ಮೂಲ ಜಾಲ ಹುಡುಕಿ ಹಿಡಿಯಬೇಕೆಂದು ನನ್ನ ಬಯಕೆ. ಅದಿಕ್ಕೆ ಅವನ ವಿಚಾರಣೆ ನಡೆಸುತ್ತಿದ್ದೆ. ‘ನಾನು ಡ್ರಗ್ಸ್ ಮಾರುತ್ತಿರಲಿಲ್ಲ’ ಎಂದ. ಫೋಟೋ ತೋರಿಸಿದೆ. ‘ಈಗೆಲ್ಲ ಕಂಪ್ಯೂಟರಿನಲ್ಲಿ ಇಂಥ ಫೋಟೋ ತೆಗೆಯಬಹುದು. ನಿಮಗೆ ಗೊತ್ತಿಲ್ಲವಾ?’ ಎಂದು ಮಾರುತ್ತರ ಕೊಟ್ಟ.ತಾಳ್ಮೆ ಕಳೆದುಕೊಳ್ಳದೆ ಕಾದೆ. ಈ ಜಾಲದ ಹಿಂದಿರುವವರ ಹೆಸರು ಹೇಳು ನಿನ್ನನ್ನು ಕೇಸಿನಿಂದ ಹೊರಬರುವಂತೆ ಮಾಡುತ್ತೇನೆ ಎಂದು ಪುಸಲಾಯಿಸಿದೆ. ಬಾಯೇ ತೆರೆಯಲಿಲ್ಲ. ಈತ ಸತ್ಯ ಹೇಳೋದಿಲ್ಲ ಅನ್ನಿಸಿ ಕೋಪ ಬಂದು ಈ ಪಿಸ್ತೂಲಿನಿಂದ” ಎಂದ್ಹೇಳುತ್ತಾ ತನ್ನ ಸೊಂಟದಲ್ಲಿದ್ದ ಪಿಸ್ತೂಲನ್ನು ಹೊರಗೆ ತೆಗೆದು ಫಾತಿಮಾಳೆಡೆಗೆ ಗುರಿಯಿಟ್ಟು “ಈ ಪಿಸ್ತೂಲಿನಿಂದ ಶೂಟ್ ಮಾಡಿಬಿಟ್ಟೆ”

“ಸತ್ತುಹೋದ್ನಾ?” ದನಿ ಕ್ಷೀಣವಾಗಿತ್ತು.

“ಇಲ್ಲ. ಬಡ್ಡೀಮಗ ಬದುಕಿಕೊಂಡ. ಬುಲೆಟ್ ಅವನ ಕಾಲಿಗೆ ಬಡಿದಿತ್ತು. ತಪ್ಪು ಮಾಡಿದ ಅನ್ನೋ ಕಾರಣಕ್ಕೆ ನನಗೆ ಕೋಪ ಬರಲಿಲ್ಲ. ಏನೋ ದುಡ್ಡಿನಾಸೆಗೆ ಬಿದ್ದು ದಾರಿ ತಪ್ಪಿದ್ದಾನೆ, ಮತ್ತೆ ಸರಿ ದಾರಿಗೆ ತಂದರಾಯಿತು ಎಂದುಕೊಂಡಿದ್ದೆ. ಆದರೆ ಸುಳ್ಳು ಹೇಳೋರನ್ನು ಕಂಡರೆ ನನಗಾಗಿ ಬರೋದಿಲ್ಲ. ಒಂದೇ ಒಂದು ಗುಂಡು ಅವನ ಕಾಲಿನೊಳಗೆ ಹೋಯ್ತು ನೋಡಿ ತನ್ನ ತಪ್ಪನ್ನು ಒಪ್ಪಿಕೊಂಡದಲ್ಲದೆ ಎಲ್ಲ ವಿವರಗಳನ್ನೂ ಬಾಯಿಬಿಟ್ಟ. ಅದಿಕ್ಕೇ ಇಲಾಖೆಯಿಂದ ವಿಚಾರಣೆ. ಬೆಳಗಾವಿಗೆ ಹೋಗಬೇಕು ನಾಳೆ” ತನ್ನ ಸಾಹಸವನ್ನು ಬಣ್ಣಿಸಿ ಪಿಸ್ತೂಲನ್ನು ಟೇಬಲ್ಲಿನ ಮೇಲೆ ಅದರ ನಳಿಕೆ ಫಾತಿಮಾಳೆಡೆಗೆ ಇರುವಂತೆ ಇಟ್ಟು ಲೋಟದಿಂದ ನೀರು ಕುಡಿದ. “ನಿಮ್ಮನ್ನು ಯಾವುದೋ ಕೇಸಿನ ವಿಚಾರಣೆಗೆ ಕರೆಸಿ ಏನೇನೋ ಹೇಳ್ಲಿಕ್ಕೆ ಪ್ರಾರಂಭಿಸಿಬಿಟ್ಟೆ. ಕಾಂತರಾಜರನ್ನೂ ವಿಚಾರಣೆ ಮಾಡಿದೋ. ಅವರೇಳ್ತಾರೆ ನೀವು ಅವರಿಂದ ನೋಟ್ಸ್ ತೆಗೆದುಕೊಂಡು ಏಳು ಮೂವತ್ತೈದಕ್ಕೆಲ್ಲಾ ಅವರ ಮನೆ ಬಿಟ್ಟುಬಿಟ್ಟರಂತೆ. ಏಳು ಮುಕ್ಕಾಲರ ಸುಮಾರಿಗೆ ಅವರ ಸ್ನೇಹಿತರೊಬ್ಬರು ಬಂದಿದ್ದರಂತೆ, ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆ ಕೊಡಲು. ಆ ಸ್ನೇಹಿತರಿಗೂ ಬರಲು ಹೇಳಿಕಳುಹಿಸಿದ್ದೀನಿ. ಇನ್ನೇನು ಅವರೂ ಬರಬಹುದು.ನಿನ್ನೆ ಕಾಲೇಜಿನಲ್ಲಿ ನೀನು ಕಂಪ್ಲೇಂಟ್ ಬರೆಯುವಾಗ ನಿನ್ನ ಸಹಪಾಠಿಗಳೂ ಕೆಲವರು ಇದ್ದರು. ಅವರನ್ನು ಹೊರಗೆ ಕಳುಹಿಸಬೇಕಿತ್ತು, ನಾನು ಅವರ ಇರುವಿಕೆಗೆ ಹೆಚ್ಚು ಗಮನ ನೀಡಲಿಲ್ಲ. ಅವರ ಮುಂದೆ ಎಲ್ಲಾ ವಿಷಯಗಳನ್ನೂ ಹೇಳೋದಿಕ್ಕೆ ನಿನಗೆ ಮುಜುಗರವಾಯಿತೋ ಏನೋ? ಅವತ್ತು ಸರ್ ಮನೆಯಲ್ಲಿ ಏನೇನು ನಡೆಯಿತು ಅಂತ ಮತ್ತೊಮ್ಮೆ ವಿವರವಾಗಿ ಹೇಳ್ತೀಯ. ನಿನ್ನೆ ಹೇಳಲಾಗದ ಸಂಗತಿಗಳನ್ನು ಮೊದಲು ಹೇಳಿಬಿಡು” ನಾನು ಮಾತನಾಡಿದ್ದು ಮುಗಿಯಿತು, ಇನ್ನೂ ನಿನ್ನ ಸರದಿ ಎಂಬಂತೆ ಕಣ್ಣು ಮುಚ್ಚಿ ಹಿಂದಕ್ಕೆ ಒರಗಿ ಕುಳಿತ ವಿಕ್ರಮ್.

ಸ್ವಲ್ಪ ಸಮಯ ಫಾತಿಮಾ ಏನೊಂದೂ ಮಾತನಾಡಲಿಲ್ಲ. ಮೌನವಾಗಿ ಕುಳಿತಿದ್ದಳು. ಆಕೆ ಮಾತು ಶುರು ಮಾಡೋವರೆಗೆ ಕಣ್ಣು ತೆರೆಯುವುದು ಬೇಡ ಎಂಬಂತೆ ಕುಳಿತಿದ್ದ ವಿಕ್ರಮ್ ಗೆ ಯಾರೋ ಅಳುತ್ತಿರುವಂತೆ ಭಾಸವಾಯಿತು. ಕಣ್ತೆರೆದು ನೋಡಿದರು. ಫಾತಿಮಾ ಮೇಜಿನ ಮೇಲೆ ಹಣೆಯಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. “ಫಾತಿಮಾ ಏನಾಯ್ತು? ನಾನೇನಾದರೂ ತಪ್ಪು ಮಾತನಾಡಿದೆನಾ? ಯಾಕೆ ಅಳುತ್ತಿದ್ದೀರಿ?”. ಫಾತಿಮಾ ಒಮ್ಮೆ ವಿಕ್ರಮ್ ಕಡೆ ನೋಡಿ, ನಂತರ ಮೇಜಿನ ಮೇಲಿದ್ದ ಪಿಸ್ತೂಲನ್ನು ನೋಡಿ “ಇಲ್ಲ ಸರ್. ನಾನೇ ತಪ್ಪು ಮಾಡಿಬಿಟ್ಟೆ. ಏನೂ ತಪ್ಪು ಮಾಡದಿರೋ ಕಾಂತರಾಜ್ ಸರ್ ಮೇಲೆ ಸುಳ್ಳು ಕಂಪ್ಲೇಂಟ್ ಕೊಟ್ಟುಬಿಟ್ಟೆ”
ಮುಂದುವರೆಯುವುದು....
 

No comments:

Post a Comment