Sep 3, 2012

ಮಿನುಗುವ ಮನಗಳ “ರಸ್ತೆ ನಕ್ಷತ್ರ”



-      ಡಾ ಅಶೋಕ್ ಕೆ ಆರ್.

ಇಲ್ಲಿಯವರೆಗೆ ಹೆಚ್ಚುಕಡಿಮೆ ನಾಲ್ಕುನೂರು ಪುಸ್ತಕಗಳನ್ನು ಓದಿದ್ದೇನೆ. ಕಥೆ – ಕವಿತೆ – ಕಾದಂಬರಿ – ನಾಟಕ – ಹಾಸ್ಯ – ಆತ್ಮಕತೆ – ಸಾಮಾಜಿಕ – ಚಿಂತನೆ – ಪ್ರಬಂಧಗಳು – ಐತಿಹಾಸಿಕ – ಕಾಮೋದ್ರೇಕ – ಆದ್ಯಾತ್ಮ ಹೀಗೆ ಇನ್ನೂ ವಿಧವಿಧವಾದ ಪುಸ್ತಕಗಳನ್ನು ಓದಿರುವೆನಾದರೂ ಇದೊಂದು ಪುಸ್ತಕವನ್ನು ಸಾಹಿತ್ಯದ ಯಾವ ಉಪವಿಭಾಗಕ್ಕೆ ಸೇರಿಸಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದೇನೆ! ಬಡಜನರ ಆತ್ಮಕಥೆಯಷ್ಟೇ ಎಂದುಕೊಳ್ಳೋಣವೆಂದರೆ ದುತ್ತನೆ ರಾಜಕೀಯ ಧಾರ್ಮಿಕ ವಿಶ್ಲೇಷಣೆ ಎದುರಾಗುತ್ತದೆ! ಯಾವ ತಾತ್ವಿಕನಿಗೂ ಕಾಣದ ಜೀವನದೃಷ್ಟಿ ಇಲ್ಲಿರುವ ಜನಸಾಮಾನ್ಯರ ಮಾತಿನಲ್ಲಿ ಸಲೀಸಾಗಿ ಕಾಣಸಿಗುತ್ತದೆ. ಅಯೋಧ್ಯೆಯಿಂದ ಹಿಡಿದು ಭಾರತೀಯ ಸೈನ್ಯದ ವಿಶ್ಲೇಷಣೆಯೂ ನಡೆದುಬಿಡುತ್ತದೆ! ಅಂದಹಾಗೆ ಪುಸ್ತಕದ ಹೆಸರು ‘ರಸ್ತೆ ನಕ್ಷತ್ರ’. ಆಕಾಶದೆಡೆಗೆ ನೆಟ್ಟು ಹೋದ ನಮ್ಮ ನಿಲುವುಗಳನ್ನು ರಸ್ತೆಯ ಮೇಲೆ ಎಳೆದುತಂದು ನಕ್ಷತ್ರಗಳನ್ನು ಗುರುತಿಸುವಂತೆ ಮಾಡಿದ ಶ್ರೇಯ ಇತ್ತೀಚೆಗಷ್ಟೇ ಪಿ.ಸಾಯಿನಾಥ್ ಪ್ರಶಸ್ತಿ ಪಡೆದ ಟಿ.ಕೆ. ದಯಾನಂದರವರದು.

          ‘ಕೆಂಡಸಂಪಿಗೆ’ಯಲ್ಲಿ ಪ್ರಕಟವಾಗಿದ್ದ ಈ ಲೇಖನಗಳು ನಾವು ಅಸ್ತಿತ್ವದಲ್ಲಿದ್ದಾರೆಂಬುದನ್ನೇ ಮರೆತ ಜನರ ಕತೆಗಳು. ದೇವದಾಸಿ, ಮನೆಗೆಲಸದವರು, ವಲಸಿಗರು, ವೇಶ್ಯೆ, ಚಿಂದಿ ಆರಿಸುವವರು, ಬೀದಿನಿವಾಸಿಗಳು – ಹೀಗೆ ಇನ್ನೂ ವಿಧವಿಧ ವೃತ್ತಿಯಲ್ಲಿರುವ ಜನರ ಬಗೆಗಿನ ಪುಸ್ತಕವೇ ರಸ್ತೆ ನಕ್ಷತ್ರ. ಎಲ್ಲ ಲೇಖನಗಳು ಹೇಳುಗನ ಭಾಷೆಯಲ್ಲೇ ಇರುವುದು ಪುಸ್ತಕಕ್ಕೊಂದು ಘನತೆ ಒದಗಿಸಿದೆ. ಭಾಷಾ ವಿಜ್ಞಾನಿಗಳೂ ಆಸಕ್ತಿಯಿಂದ ಓದಬೇಕಾದ ಪುಸ್ತವಿದು. ಬಡತನವನ್ನೇ ಹಾಸಿ ಹೊದ್ದು ಕೆಲವೊಮ್ಮೆ ಉಂಡು ಮಲಗಿದವರಲ್ಲಿ ಇರುವ ಜೀವನೋತ್ಸಾಹವನ್ನು ಯಾವ ವಿಶ್ವವಿದ್ಯಾಲಯವೂ ನೀಡಲಾರದು. ಎಲ್ಲಿಯಾದರೂ ಬದುಕು ರೂಪಿಸಿಕೊಳ್ಳುವೆವೆಂಬ ಈ ರಸ್ತೆ ನಕ್ಷತ್ರಗಳ ಛಲ ನಮ್ಮಲ್ಲಿ ಎಷ್ಟು ಜನಕ್ಕಿದ್ದೀತು? ಪ್ರೀತಿ ಪ್ರೇಮ ವಿಫಲವಾಗಿ ಸಾಯಲು ಬಯಸುವವರು, ಯಕಶ್ಚಿತ್ ಪರೀಕ್ಷೆಗಳಲ್ಲಿ ಫೇಲಾಗಿ ನೇಣಿಗೆ ಕೊರಳೊಡ್ಡಲು ತೀರ್ಮಾನ ಮಾಡಿಕೊಂಡವರಿಗೆ ಒಮ್ಮೆ ಈ ಪುಸ್ತಕ ಓದಲು ಕೊಡಬೇಕು. ನಗರೀಕರಣದ ಅನುಕೂಲ – ಅನಾನುಕೂಲತೆಗಳೆರಡೂ ಇಲ್ಲಿ ಬಿಚ್ಚಿಕೊಂಡಿದೆ. ಭಾಷೆ – ಧರ್ಮಗಳ ನಡುವಿನ ವಿರಸ ಸರಸಗಳೂ ಅನಾವರಣಗೊಳ್ಳುತ್ತವೆ. ಈ ಪುಸ್ತಕದಲ್ಲಿರುವ ಅಷ್ಟೂ ವಿಷಯಗಳನ್ನು ಪುಟ್ಟದಾಗಿ ವಿಮರ್ಶಿಸಲು ಪ್ರಯತ್ನಿಸಿದರೂ ಮತ್ತೊಂದು ಪುಸ್ತಕವಾಗಿಬಿಡುತ್ತದೆಂಬ ಅಂಶವೇ ಈ ಪುಸ್ತಕದ ಆಳ – ವಿಸ್ತಾರಗಳೆರಡನ್ನೂ ವಿವರಿಸುತ್ತದೆ.

ರಸ್ತೆಯಿಂದ ಆಯ್ದ ಕೆಲವು ನಕ್ಷತ್ರಗಳು – 

Ø  ಇವಾಗ ನಾವು ಬಡುವ್ರು ದುಡೀತಾ ಇದೀವಿ. ಅದೇ 10 -20 ರೂಪಾಯ್ ಹುಡಕ್ಕಂಡು ಎಣ್ಣೆ ಹುಯ್ಕಂಡ್ ತಿರುಗಾಡ್ತಾರಲ್ಲ ಅಂಥೋರು ಜಾತಿಪಾತಿ ಅಂತ ಗಲಾಟೆ ಮಾಡ್ತರೆ. ಸಿಕ್ಕಾಕೊಳೋದು ಯಾರು? ಈ ಬಡುವ್ರು.. ಗಲಾಟೆ ಮಾಡಿದ್ರೆ 100 -200 ಕೊಡ್ತೀವಿ ಅಂದ ಹೇಳಿದೋರು ತಪ್ಪಿಸಿಕೊಳ್ತಾರೆ. ಬಡುವ್ರು ಜೈಲಿಗೋಯ್ತಾರೆ. ಮುಸ್ಲಿಂದು ಯಾವ ತಪ್ಪೂ ಇಲ್ಲ, ಹಿಂದುದೂ ಯಾವ ತಪ್ಪೂ ಇಲ್ಲ. ಈ ಸೆಂಟ್ರಲ್ಲಿ ಇರ್ತಾನಲ್ಲ ಹರಾಮ್ ಖೋರ್ ಅವುರ್ದು ಕರಾಮತ್ತು. ಈ ಜನಕ್ಕೆ ಗೊತ್ತಾಗಲ್ಲ – ಸರ್ದಾರ್.

Ø  ಕೊನೇಗೆ ಮಣ್ಣಿಗೆ ಹೋಗ್ತೀವಲ್ಲ... ಆ ಆರಡಿ ಮೂರಡಿ ಜಾಗ ಅದೇ ಶಾಸ್ವುತ. ಇರೋತಂಕನೇ ಜನ ನಂದು ತನ್ನದು ಅಂತ ಹೊಡೆದಾಡೋದು, ಮಣ್ಣಿಗೆ ಹಾಕೋವಾಗ ಉಡುದಾರನೂ ಬಿಡಲ್ಲ...ಮಣ್ಣಿಗೆ ಬೀಳೋದು ಮೈಯೇ ಹೊರತು ಒಡವೆ ವಸ್ತ್ರ ಅಲ್ಲ..ಅಲ್ಲೇನ್ರಿ.. – ಚಿಕ್ಕವ್ವ

Ø  ದೇವುಸ್ತಾನದೋರು ಆನೆ ಸಾಕ್ಕೊಂಡು ರೋಡು ರೊಡಲ್ಲಿ ಭಿಕ್ಷೆ ಮಾಡೋದು ತಪ್ಪಲ್ಲುವಾ? ಕೆರೇನಾಗಿರೋ ಮೀನುಗಳನ್ನ ಹಿಡಕೊಂಡು ಬಂದು ಮನೇಲಿ ಇಟ್ಟಗಳಾದು ತಪ್ಪಲ್ಲುವಾ? ನಮ್ ಮುಖ್ಯಮಂತ್ರಿಗೋಳು ದೇವುಸ್ಥಾನಕ್ಕೆ ಆನೆ ಕೊಟ್ರಲ್ಲ...ಅದು ತಪ್ಪಲ್ಲವಾ? ಅದೆಂಗೆ ನಾವು ಕರಡಿ ಆಡಿಸಾದು ಮಾತ್ರ ಬರೋಬ್ಬರಿ ತಪ್ಪಾಗತೇತಿ? – ರಾಜಾಹುಸೇನ್ ಖಲಂದರ್.

          ‘ಭೀಮಾ ತೀರದ ಹಂತಕರು’ ಪುಸ್ತಕ ಮತ್ತದರ ಚಿತ್ರದ ಸುತ್ತ ಬೆಳೆದ ವಿವಾದಗಳನ್ನು ನೀವು ಗಮನಿಸಿಯೇ ಇರುತ್ತೀರಿ. ಪರರ ಜೀವನದ ಬಗ್ಗೆ ಬರೆದಾಗ್ಯೂ ‘ಅದು ನನ್ನ ಹಕ್ಕು ನನ್ನ ಹಕ್ಕು’ ಎಂದು ಲೇಖಕರು ಹೇಳಿದ್ದನ್ನೂ ನೀವು ಮರೆತಿರಲಾರಿರಿ! ಇಪ್ಪತ್ನಾಲ್ಕು ಜನರ ಜೀವನದ ಬಗ್ಗೆ ಬರೆದ ದಯಾನಂದ ಮುನ್ನುಡಿಯಲ್ಲಿ ‘ಇದು ಆ ಜನರ ಪುಸ್ತಕ. ನನ್ನದಲ್ಲ ನನ್ನದಲ್ಲ’ ಎಂದು ಪದೇ ಪದೇ ಬರೆದಿದ್ದಾರೆ! ಒಬ್ಬರು ಹಿರಿಯ ಲೇಖಕರು, ಮತ್ತೊಬ್ಬರು ಕಿರಿಯ ಲೇಖಕರು. ಈರ್ವರ ಹೇಳಿಕೆಗಳೂ ವಿರುದ್ಧ ದಿಕ್ಕಿನಲ್ಲಿದೆಯಾದರೂ ಇಬ್ಬರದೂ ಕೊಂಚ ಅತಿಯಾಯಿತೇನೋ ಅಲ್ಲವೇ?!


1 comment:

  1. nice one :)

    i hope u might like my writings too

    at

    http://www.pallakki.blogspot.in/

    ReplyDelete