ಹರೀಶ್ಚಂದ್ರಾಚಿ ಫ್ಯಾಕ್ಟರಿ |
ದಾದಾ ಸಾಹೇಬ ಫಾಲ್ಕೆಯ ಹೆಸರು ಕೇಳಿದ್ದು ನಮ್ಮ ರಾಜಣ್ಣನಿಗೆ ಆ ಪ್ರಶಸ್ತಿ ಬಂದಾಗ. ದಾದಾ ಸಾಹೇಬ ಫಾಲ್ಕೆ ಯಾರೆಂಬುದೂ ಸರಿಯಾಗಿ ತಿಳಿದಿರಲಿಲ್ಲ. ತಿಳಿದಿದ್ದು ಮರಾಠಿ ಚಿತ್ರ ಹರೀಶ್ಚಂದ್ರಾಚಿ ಫ್ಯಾಕ್ಟರಿಯನ್ನು ನೋಡಿದಾಗ. ಪರೇಶ್ ಮೊಕಾಶಿಯ ಸಮರ್ಥ ನಿರ್ದೇಶನದಲ್ಲಿ ಪಡಿಮೂಡಿರುವ ಈ ಚಿತ್ರ ಭಾರತೀಯ ಸಿನಿಮಾರಂಗದ ಹುಟ್ಟಿನ ಕಥೆಯೂ ಹೌದು. ಅದು 1911ರ ಇಸವಿ, ಜೊತೆಗಾರನಿಂದ ಬೇರ್ಪಟ್ಟು ಪ್ರಿಂಟಿಂಗ್ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಜಾದೂಗಾರನಾಗುತ್ತಾನೆ ಫಾಲ್ಕೆ.
ಅದರಲ್ಲಿ ಹುಟ್ಟುವ ಹಣ ಸಂಸಾರ ತೂಗಿಸಲೂ ಕಷ್ಟ. ಆದರೂ ಮನೆಯವರ ಬೆಂಬಲ ಸದಾ ದೊರೆಯುತ್ತದೆ. ಹೀಗಿರುವಾಗ ಒಂದು ದಿನ ಆಕಸ್ಮಿಕವಾಗಿ ಮಗನೊಟ್ಟಿಗೆ ಆಂಗ್ಲ ಸಿನಿಮಾ ನೋಡಲು ಹೋಗುತ್ತಾನೆ. 'ಚಲಿಸುವ ಚಿತ್ರಗಳನ್ನು' ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಬಹುತೇಕರು ಅಚ್ಚರಿಪಟ್ಟು ಅದರ ಬಗ್ಗೆ ಒಂದಷ್ಟು ದಿನ ಚರ್ಚಿಸಿ ಮುಗಿದುಹೋಗುತ್ತಿತ್ತೇನೋ! ಫಾಲ್ಕೆಗೆ ಅಂಥದೇ ಚಲಿಸುವ ಚಿತ್ರಗಳನ್ನು ಭಾರತದ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ತೆಗೆಯಲೇಬೇಕೆಂಬ ಹಟಮೂಡುವುದರೊಂದಿಗೆ ಭಾರತೀಯ ಸಿನಿಮಾರಂಗ ಎಂಬ ದೈತ್ಯ ಉದ್ಯಮದ ಜನ್ಮ ಮುಹೂರ್ತ ನಿರ್ಧರಿತವಾಗುತ್ತದೆ.
ಹೊಸ ವಿಚಾರಗಳಿಗೆ ತೆರೆದುಕೊಂಡವರು ನಾನಾ ದಿಕ್ಕುಗಳಿಂದ ತೊಂದರೆ ಅನುಭವಿಸುವುದು ಖಂಡಿತ! ಫಾಲ್ಕೆಯೂ ಇದಕ್ಕೆ ಹೊರತಲ್ಲ. ಫಾಲ್ಕೆಯ ಯಶಸ್ಸಿಗೆ ಒಂದು ಮುಖ್ಯ ಕಾರಣ ಅವನ ಹೆಂಡತಿ ಮಕ್ಕಳ ಬೆಂಬಲ. ಮನೆಯ ಸಾಮಾನನ್ನು ಕೊನೆಗೆ ಒಡವೆಯನ್ನು ಒಂದೊಂದಾಗಿ ಮಾರಿ ಚಿತ್ರ ತಯಾರಿಕೆಯ ಬಗ್ಗೆ ಕಲಿಯಲಾರಂಭಿಸುತ್ತಾನೆ. ಸ್ಥಳೀಯ ಆಂಗ್ಲ ಚಿತ್ರಮಂದಿರದ ಪ್ರೊಜೆಕ್ಟರ್ ರೂಮಿಗೆ ಹೋಗಿ ಫೋಟೋಗಳು ಚಲಿಸುವ ರೀತಿ ಕಂಡು ಬೆರಗಾಗುತ್ತಾನೆ. "ಕೆಲಸ ಕಾರ್ಯ" ಮಾಡದೆ ಚಲಿಸುವ ಚಿತ್ರ ಮಾಡುತ್ತೇನೆಂದು ಹೊರಟವನ ಬುದ್ಧಿಮತ್ತೆಯ ಮೇಲೆಯೇ ಅನುಮಾನ ಬಂದು ಅವನ ನೆರೆಹೊರೆಯವರು ಹುಚ್ಚಾಸ್ಪತ್ರೆಗೂ ಕರೆದೊಯ್ದುಬಿಡುತ್ತಾರೆ! ಮಧ್ಯೆ ಕಣ್ಣಿನ ತೊಂದರೆಯುಂಟಾದರೂ ಚಿತ್ರ ಮಾಡುವ ಉದ್ದೇಶಕ್ಕೆ ಚ್ಯುತಿಯಾಗುವುದಿಲ್ಲ.
ನಿರ್ದೇಶಕ - ಪರೇಶ್ ಮೊಕಾಶಿ |
ಚಿತ್ರೀಕರಣ ಮುಗಿಸಿ ಚಿತ್ರ ತೆರೆಕಂಡಾಗ ನಿರೀಕ್ಷೆಯಂತೆ ಮೊದಲ ಕೆಲವು ದಿನಗಳು ಜನರೇ ಸುಳಿಯುವುದಿಲ್ಲ! ತೆರೆಕಂಡ ನಂತರ ತಂಡದವರು ಮಾಡಿದ ಪ್ರಚಾರ, ಚಿತ್ರ ನೋಡಿದವರು ಕೊಟ್ಟ ಬಾಯಿ ಮಾತಿನ ಪ್ರಚಾರದಿಂದ ಕೆಲವೇ ದಿನಗಳಲ್ಲಿ ಚಿತ್ರ ಅಮೋಘ ಯಶಸ್ಸನ್ನು ಕಾಣುತ್ತದೆ. ಭಾರತೀಯ ಚಿತ್ರರಂಗ ಅಧಿಕೃತವಾಗಿ ಜನ್ಮತಾಳುತ್ತದೆ. ಹಾಡು ಕುಣಿತ ಸಾಹಸವಿಲ್ಲದಿದ್ದರೂ ಮನೋರಂಜನೆಗಾಗಿ ಚಿತ್ರ ನೋಡುವವರಿಗೂ ಹರೀಶ್ಚಂದ್ರಾಚಿ ಫ್ಯಾಕ್ಟರಿ ಬೇಸರ ಮೂಡಿಸುವುದಿಲ್ಲ! ಬದ್ಧತೆಯೊಂದಿದ ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ.
Brief English Summary - Harischandrachi factory, a marathi movie directed by Paresh Mokashi depicts the story of birth of Indian Cinema, the largest cinema industry. Dada Saheb Phalke , the lead role of the movie gets inspired by the 'moving picture' of Jesus Christ. That inspiration drives him to learn about the cinema making. He begins his learning from the projector room of the theaters and continues his informal education in England! He returns from England, starts picturing the first movie of Indian Cinema about 'Raja Harischandra'. His journey through the film making, troubles he faced, great support from his wife and children is shown in a humorous way. Director Paresh Mokashi has taken immense care in creating an entertainment movie which otherwise would have been a serious documentary!
No comments:
Post a Comment