Aug 3, 2012

ಗುಡ್ಡೆ ಮೇಲೆ ದೇವಸ್ಥಾನ


-      S. ಅB ಹನಕೆರೆ.
        
 “ಹತ್ತೋವಾಗಲೆ ಎಷ್ಟು ಮೆಟ್ಟಿಲು ಇದೆ ಅಂತ ಎಣಿಸಿಬಿಟ್ಟು ಇನ್ನು ಇಳಿಯುವಾಗ relax ಆಗ್ಬಿಟ್ರೆ ಅಂತ ಅದರ ಕಡೆ ಗಮನ ಕೊಡಲಿಲ್ಲ” ಎಂದು ಸಮರ್ಥನೆ ಮಾಡಿಕೊಂಡಳು ಗಾಯತ್ರಿ. ಸುತ್ತಲೂ ನೋಡುತ್ತಾಳೆ, ಕೆಳಗಿನ ಊರು, ರಸ್ತೆ ಮೇಲಿನ ವಾಹನ ಎಲ್ಲವೂ ಸ್ತಬ್ಧವಾಗಿ ಮತ್ತೊಮ್ಮೆ ಎಲ್ಲವೂ ಚಲಿಸುತ್ತಿರುವಂತೆ ಕಾಣುತ್ತವೆ. “ನಿನ್ನ ಈ ವಕ್ರ ದೃಷ್ಟೀನೆ ನನಗೆ ಇಷ್ಟ ಆಗೋದು” ಎಂದು ಗಾಯತ್ರಿ ಕಣ್ಣನ್ನೇ ದೃಷ್ಟಿಸಿದ ಶೇಖರನ್ನ ನೋಡಿ, ಗಾಯತ್ರಿ ಮನದೊಳಗೆ ‘ನನ್ನ ದೃಷ್ಟಿ ಇವನಿಗೆ ಹೇಗೆ ಗೊತ್ತಾಯ್ತು? ಈ ಮನುಷ್ಯನಿಗೆ ಸೃಷ್ಟಿ ಯಾವುದು? ದೃಷ್ಟಿ ಯಾವುದು? ಸಮರ್ಥನೆ ಯಾವುದೆಂದು ಗೊತ್ತಾಗಿದ್ರೆ ನನ್ನ ಹಿಂದೆ ಯಾಕ್ ಬೀಳ್ತಿದ್ದ’ ಎಂದುಕೊಂಡು ಶೇಖರನೊಡನೆ ದೇವಸ್ಥಾನದೊಳಗೆ ಹೋದಳು.

          ಪೂಜೆ ಮಾಡಲು ಬುಟ್ಟಿ ಕೊಟ್ಟ ಮೇಲೆ ಪೂಜಾರಿನ ಮತ್ತೆ ದೇವರನ್ನ alternate ಆಗಿ ನೋಡುತ್ತಿದ್ದ ಕಣ್ ಗುಡ್ಡೆಗಳ ಮೇಲೆ ರೆಪ್ಪೆ ಮುಚ್ಚಿದರೆ ಕಂಡಿದ್ದು ಕತ್ತಲೆ, ‘ಛೇ! ಈ ಕತ್ತಲನ್ನು ನೋಡಲು ಇಷ್ಟ್ ಕಷ್ಟ ಪಟ್ಟು ಗುಡ್ಡ ಬೆಟ್ಟ ಪಾತಾಳಗಳನ್ನು ಹುಡುಕಿಕೊಂಡು ಹೋಗಬೇಕಾ?’ ಅಂದುಕೊಂಡ ಗಾಯತ್ರಿ ಬುಟ್ಟಿ ಈಸಿಕೊಂಡು ಶೇಖರನ ಜೊತೆ ಮತ್ತೆ ಮೆಟ್ಟಿಲು ಇಳಿದು ಕೆಳಗೆ ಗಾಡಿ ಹತ್ತಿರ ಬಂದಾಗ “ಎಷ್ಟು ಮೆಟ್ಟಿಲು ಇತ್ತೇ” ಅಂದೊಡನೆ, ಗಾಬರಿಯಿಂದ “next time ಹೇಳ್ತೀನಿ” ಅಂತ ನಗುತ್ತಾ ಬೈಕಿನಲ್ಲಿ ಅವನಿಗೆ ತಾಕದಂತೆ ಕುಳಿತುಕೊಂಡಳು. ಸುಯ್ ಅಂತ ಬೀಸುವ ಗಾಳಿಗೆ ಕಣ್ಣು ಮುಚ್ಚಿದರೆ ಕತ್ತಲೆ ಬಿಟ್ಟು ಬೇರೇನೇನೋ ಕಾಣುತ್ತದೆ.

          ಮನೆಯ ಬಳಿ ಶೇಖರ ಬಿಟ್ಟು ಹೋಗೋವಾಗ “ಲವ್ ಯೂ, ಬೈ” ಅಂದಿದ್ದು ಅಮ್ಮನಿಗೂ ಕೇಳಿಸಿತು. ಅವಳು ನಸು ನಕ್ಕಿ ಒಳ ಹೋದ್ಲು. ಪುಸ್ತಕ ಓದುತ್ತಾ ಕುಳಿತ ಗಾಯಿತ್ರಿ ಕಣ್ಣಲ್ಲಿ ಕಿವಿಯಲ್ಲಿ ಇದು ಮಿಂಚಿ ಮರೆಯಾಯ್ತು. ಮತ್ತೆ ಪುಸ್ತಕದ ಮೇಲಿದ್ದ ಅಕ್ಷರಗಳನ್ನು ಓದುತ್ತಿದ್ದಂತೆ ದೃಶ್ಯಗಳು ತೆರೆದುಕೊಳ್ಳಲು ಶುರುಮಾಡಿದವು, ಸಾಕು ಇವತ್ತಿಗೆ ಓದಿದ್ದು ಅನ್ನಿಸಿ ಮಲಗಲು ಅಣಿಯಾಗಿ ದೀಪವಾರಿಸಿದರೆ ಬೀದಿ ದೀಪದ ಬೆಳಕು ಕಿಟಕಿಯಿಂದ. ಎದ್ದು ಕರ್ಟನ್ ಸರಿಸಿ ಬಂದು ಮಲಗಿದರೆ ಕಣ್ಣು ಮುಚ್ಚಲು ಮನಸ್ಸಾಗಲಿಲ್ಲ, ಕತ್ತಲೆ ಕೋಣೆಯಲ್ಲಿ ಕತ್ತಲನ್ನು ಹುಡುಕಾಡಿದರೆ ಸಿಗಲಿಲ್ಲ ಅವಳ ದೃಷ್ಟಿಗೆ! ಅಪ್ಪ ಅಮ್ಮ, ಫ್ರೆಂಡ್ಸ್, ಅಕ್ಕ, ಶೇಖರ, ಬೀದಿ ಜನ, ಕಟ್ಟಡ ಏನೇನೋ .... ಬರೀ ಬೆಳಕೇ ಬೆಳಕು. ಕಣ್ಣು ಮುಚ್ಚಿದಳು ನಿದ್ರೆ ಬರೋವರೆಗು ಸ್ತಬ್ಧವಾದ ಜನ, ಹರಿಯುವ ನದಿ, ಹಸಿರು ಮರಗಳ, ಆಮೇಲೆ ನಿದ್ರಾದೇವಿಯ ಆಗಮನ. ನಿದ್ರೆ ಹತ್ತಿದಮೇಲೆ ಕತ್ತಲೆಗೂ ಬೆಳಕಿಗೂ ವ್ಯತ್ಯಾಸ ಗುರುತಿಸೋರ್ಯಾರು? ಇದು ಒಂದು ದಿನದ ಕಥೆಯಲ್ಲ. ವರ್ಷಗಟ್ಟಲೆ ಕಾಡಿದೆ.

          ಬೆಳಿಗ್ಗೆ ಎದ್ದು ತಯ್ಯಾರಾಗಿ ಶೇಖರನಿಗೆ ಕಾಯುತ್ತ ಕುಳಿತಿರೋದನ್ನು ಗಮನಿಸಿದ ಅಮ್ಮ “ಸುತ್ತಾಡಿ ಸುತ್ತಾಡಿ, ಮದುವೆ ಆದ್ಮೇಲೆ ನೀನ್ ಮನೇಲಿ – ಅವನು ಆಫೀಸಿನಲ್ಲಿ” ಅಂತ ನಸು ನಕ್ಕಳು. ಗಾಯತ್ರಿ ಮನದೊಳಗೆ ‘ಅಮ್ಮನಿಗೆ ಹೊಟ್ಟೆ ಉರಿಯೇನೋ ನನ್ನ ಮೇಲೆ ಕತ್ತಲೆಗೆ ಇರುವಂತೆ’ ಅಂದುಕೊಳ್ಳುತ್ತಿದ್ದಂತೆ ಬೈಕ್ ಸದ್ದಾಯಿತು. ಶೇಖರನ ಹಿಂದೆ ಕುಳಿತು ಕಣ್ ಮುಚ್ಚುತ್ತಾಳೆ; ಮತ್ತೆ ಕತ್ತಲೆ ಕಾಣೋದೆ ಇಲ್ಲ. “ಇವತ್ತು ಎಲ್ಲಿಗೆ ಹೋಗ್ಹೋಣ? ಬೋಟಿಂಗ್” ಅಂತಾನೆ. ‘ಇವನಿಗೆ ಬೋಟಿಂಗ್ ಹೋಗೋಕೆ ಇಷ್ಟ. ಸುಮ್ನೆ ನೆಪಕ್ಕೆ ಕೇಳ್ತಾನೆ’ ಅಂದುಕೊಂಡು ಗಾಯಿತ್ರಿ “ಬೇಡ. ನಿನ್ನೆ ಹೋಗಿದ್ದ ದೇವಸ್ಥಾನಕ್ಕೆ ಹೋಗೋಣ”. “ಲೇ ಮೆಟ್ಟಿಲಿನ ಲೆಕ್ಕ ಬೇಡ ಬಿಡೆ” ಎಂದು ನಗುತ್ತಾ ಬೈಕನ್ನು ಸ್ಪೀಡಾಗಿ ಓಡಿಸಿಕೊಂಡು ಗುಡ್ಡದ ಬುಡದಲ್ಲಿ ನಿಲ್ಲಿಸಿದಾಗ ಶೇಖರನನ್ನು ಲೆಕ್ಕಿಸದೆ ಖುಷಿ ಖುಷಿಯಿಂದ ಮೆಟ್ಟಿಲು ಹತ್ತಿ ದೇವಸ್ಥಾನದೊಳಗೆ ಹೋಗಿ ದೇವರ ಮುಂದೆ ಕೈ ಮುಗಿಯುತ್ತಾ ಕಣ್ಣು ಮುಚ್ಚುತ್ತಾಳೆ, ರೆಪ್ಪೆ ನಿಧಾನವಾಗಿ ಮುಚ್ಚಿದ ಹಾಗೆಯೆ ಕಗ್ಗತ್ತಲು ಆವರಿಸುತ್ತದೆ. ಮೆಟ್ಟಿಲು ಇಳಿದು ಬರುವಾಗ ಶೇಖರ “ ಏನೇ ಇಷ್ಟ ಆಯ್ತು ಇಲ್ಲಿ ಎರಡನೆ ಸಲ ಅದೂ ಇವತ್ತೇ ಕರೆದುಕೊಂಡು ಬಂದೆ, ಹೋಗದ್ ಜಾಗಕ್ಕೆ ಹೋಗೋದು ಬೇಡ ಅಂತಿದ್ದೆ”. “ನನಗೆ ಇಲ್ಲಿ ಕತ್ತಲೆ ಕಾಣಿಸ್ತು” ಎಂದು ಪಟಪಟನೆ ಇಳಿದಳು. ಗೊಂದಲಗೊಂಡ ಶೇಖರ ‘ದೇವರು ಕಂಡ, ಪ್ರಿಯತಮ ಕಂಡ, ಬೆಳಕು ಕಾಣ್ತು ದೇವಸ್ಥಾನದ್ದಲ್ಲಿ ಅಂತ ಎಲ್ಲಾ ಅಂತಾರೆ, ಇವಳಿಗೆ ಕತ್ತಲೆ ಕಾಣಿಸ್ತಾ?! ಕತ್ತಲೆ ಕಾಣೋದು ಒಂದು ವಿಷಯಾನಾ?!...’ ಮನದೊಳಗಿನ ಗೊಂದಲಕ್ಕೆ ಅಲ್ಲೇ ಹೋಗುತ್ತಿದ್ದ ಭಕ್ತಾದಿಗಳಲ್ಲಿ ಒಬ್ಬ ಇನ್ನೊಬ್ಬನಿಗೆ “ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಬರ್ತಾರೆ ದೇವಸ್ಥಾನಕ್ಕೆ, ಅದು ದೇವರಿಗೂ ಗೊತ್ತಿಲ್ಲಾ ಮತ್ತದು ದೇವರಿಗೆ ಬೇಕಾಗಿಯೂ ಇಲ್ಲ” ಅಂದಿದ್ದು ಕಿವಿಗೆ ಬೀಳುತ್ತೆ. ಮತ್ತೆ disturb ಆದ ಶೇಖರ ಮೆಟ್ಟಿಲು ಇಳಿಯುತ್ತಾ ಗಾಯತ್ರಿಯೆಡೆಗೆ ನೋಡಿದೊಡನೆ ಕತ್ತಲು ಆವರಿಸಿಕೊಳ್ಳುತ್ತದೆ.

          ಬೈಕ್ ಸ್ಟಾರ್ಟ್ ಮಾಡಿ ಹಿಂದೆ ಕುಳಿತ ಗಾಯತ್ರಿ ಖುಷಿ ಖುಷಿಯಿಂದ ಮೈ ತಾಕಿಸುತ್ತಿದ್ದರೆ ಅವಳನ್ನು ನೋಡಲೆಂದು ಬೈಕಿನ ಕನ್ನಡಿಯನ್ನು ಸರಿಮಾಡುತ್ತಿದ್ದಂತೆ ಮತ್ತೆ ಕಣ್ಣ ತುಂಬಾ ಕತ್ತಲು ಆವರಿಸುತ್ತದೆ.

          ಲಾರಿಗೆ ಗುದ್ದಿದ ರಭಸಕ್ಕೆ ಇಬ್ಬರು ಕಣ್ಣು ಬಿಟ್ಟೆ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾರೆ.

          ಕಾಣದ ಕೈಗಳು ಕಣ್ಮುಚ್ಚಿದ್ಮೇಲೆ ಅವರ ಕಣ್ಣಲ್ಲಿ ಕತ್ತಲೆ ಇತ್ತಾ? ಬೆಳಕೇ ಇತ್ತಾ? ಗುಡ್ಡದ ಮೇಲಿನ ದೇವಸ್ಥಾನವೇ ಇತ್ತಾ?.....


No comments:

Post a Comment