Aug 28, 2012

ಬೆಚ್ಚಿಬೀಳಿಸುವ ವ್ಯಾಸ!


astra
 ಡಾ ಅಶೋಕ್. ಕೆ. ಆರ್
ಭೌತಿಕವಾಗಿ ಒಂದು ಊರನ್ನು ಕಟ್ಟುವುದು ಎಷ್ಟು ಕಷ್ಟದ ಕೆಲಸವೋ ಅದಕ್ಕಿಂತಲೂ ಕಷ್ಟದ ಕೆಲಸ ಕಾಲ್ಪನಿಕ ಊರನ್ನು ಕಟ್ಟುವುದು. ಆಂಗ್ಲದಲ್ಲಿ ಬರೆದ ಆರ್.ಕೆ. ನಾರಾಯಣ್ ಮಾಲ್ಗುಡಿ ಎಂಬ ಊರನ್ನು ಅತ್ಯದ್ಬುತವಾಗಿ ಕಟ್ಟಿಕೊಡುತ್ತಾರೆ. ಅವರ ಕಥೆಗಳನ್ನು ಓದಿದ ಕೆಲವರು ಮಾಲ್ಗುಡಿ ಊರನ್ನು ಹುಡುಕಾಡಿದ್ದೂ ಉಂಟಂತೆ. ಕನ್ನಡದಲ್ಲಿ ಒಂದು ಊರನ್ನು ಮನಮುಟ್ಟುವಂತೆ ಕಟ್ಟಿ ಆ ಊರನ್ನೇ ತಮ್ಮ ಕಥೆಗಳಿಗೆ ಯಶಸ್ವಿಯಾಗಿ ಅಳವಡಿಸಿಕೊಂಡಿರುವುದು ಎಂ ವ್ಯಾಸ. ಅವರ ಕಥೆಗಳನ್ನು ಓದುತ್ತಿದ್ದಂತೆ ದುರ್ಗಾಪುರವೆಂಬ, ಅಲ್ಲಿ ಹರಿಯುವ ಶಂಕರೀ ನದಿ, ನದಿಯ ತಿರುವು, ತಿರುವಿನಂಚಿನ ಮನೆ, ಊರಿನ ದೇವಸ್ಥಾನ, ದೇವಸ್ಥಾನದ ರಸ್ತೆ ನಮ್ಮ ಮನಪಟಲದಲ್ಲಿ ಮೂಡಲಾರಂಭಿಸುತ್ತದೆ. ಎರಡನೆಯ ಕಥೆ ಓದುವಷ್ಟರಲ್ಲಿ ದುರ್ಗಾಪುರದ ನಕ್ಷೆ ನಮ್ಮೊಳಗೆ ಸೇರಿಬಿಡುತ್ತದೆ!

          ಇನ್ನು ಅವರ ಕಥೆಗಳ ಪಾತ್ರಗಳು, ಪಾತ್ರಗಳ ವಿಕ್ಷಿಪ್ತತೆ, ಕಥೆಯಲ್ಲಿನ ಅನಿರೀಕ್ಷಿತ ತಿರುವುಗಳು ನಮ್ಮನ್ನು ಬೆಚ್ಚಿಬೀಳಿಸದೆ ಇರುವುದಿಲ್ಲ. ಓಮ್, ಬಾಣ, ಅಸ್ತ್ರ, ಹಕ್ಕಿ, ಅಮ್ಮ, ಭ್ರಷ್ಟ ಹೀಗೆ ಈ ಸಂಕಲನದಲ್ಲಿರುವ ಎಲ್ಲ ಕಥೆಗಳು ಎರಡೇ ಅಕ್ಷರದ ಶೀರ್ಷಿಕೆಗಳನ್ನು ಒಳಗೊಂಡಿದೆ. ಕಥೆಗಾರನ ಹೆಸರು ಕೂಡ ಎರಡೇ ಅಕ್ಷರದ್ದೂ ಎಂಬ ಕಾರಣಕ್ಕೆ ವ್ಯಾಸರಿಗೆ ಎರಡಕ್ಷರದ ಶೀರ್ಷಿಕೆ ಇಡುವ ಅಭ್ಯಾಸವಾಯಿತಾ?! ಹುಟ್ಟು ಸಾವಿನ ಬಗ್ಗೆ, ನೈತಿಕತೆ ಅನೈತಿಕತೆಯ ಬಗ್ಗೆ ಕಾಮದ ಬಗ್ಗೆ ಬದುಕು ಸಾವಿನ ಬಗ್ಗೆ ಚಿಂತಿಸುವಂತೆ ಬರೆದಿರುವ ವ್ಯಾಸರವರ ಕಥೆಗಳು ನಾವುಗಳು ಹೆಚ್ಚಾಗಿ ಇಷ್ಟಪಡದ ಕೆಲವು ಕಠೋರ ಸತ್ಯಗಳನ್ನು ನಿರ್ಭಾವುಕವಾಗಿ ಬರೆದುಬಿಡುತ್ತಾರೆ. ಇನ್ನು ಸಾವಿರ ವರುಷಗಳ ನಂತರ ಓದಿದರೂ ಕಥೆಯ ಪ್ರಸ್ತುತತೆ ಮಾಯವಾಗುವುದಿಲ್ಲವೆಂಬುದಕ್ಕೆ ಮುಖ್ಯ ಕಾರಣ ಮನುಷ್ಯನ ಮನಸ್ಸಿನಾಳಕ್ಕೆ ಇಳಿದು ಅಕ್ಷರ ರೂಪದಲ್ಲಿ ವ್ಯಾಸರು ಮೂಡಿಸಿರುವ ಕಥೆಗಳು. ಭೌತಿಕವಾಗಿ ತಾತ್ವಿಕವಾಗಿ ಸೈದ್ಧಾಂತಿಕವಾಗಿ ಮನುಷ್ಯನಲ್ಲಿ ಮಹತ್ತರ ಬದಲಾವಣೆಗಳಾಗಬಹುದು ಆದರೆ ಅನ್ನ ಹಸಿವು ಕಾಮದ ವಿಷಯದಲ್ಲಿ ನಿಸರ್ಗ ನಿರ್ಮಿತ ನಿಯಮಗಳನ್ನು ಮೀರಲು ಮನುಷ್ಯನಿಗೆ ಎಂದಿಗೂ ಸಾಧ್ಯವಾಗಲಾರದು, ಸಾಧ್ಯವಾಗಲೂಬಾರದು.

ವ್ಯಾಸರ ವಿವಿಧ ಕಥೆಗಳಿಂದ ಹೆಕ್ಕಿಕೊಂಡ ಕೆಲವು ಸಾಲುಗಳು
·         ಕಾಮವೊಂದಿಲ್ಲದಿರುತ್ತಿದ್ದರೆ ಈ ಜಗತ್ತಿನಲ್ಲಿ ಧರ್ಮಗಳೂ ದೇವರುಗಳೂ ನೀತಿಗಳೂ ಯಾವುದೂ ಇರುತ್ತಿರಲಿಲ್ಲ. ಸಮುದ್ರ ಗರ್ಭದಲ್ಲಿ ನದಿಗಳ ಗುಪ್ತ ಪ್ರವಾಹವಿರುವಂತೆ, ಸಮಾಜ ಜೀವನದ, ಸಮೂಹ ಜೀವನದ ಶಾಂತ ಅಶಾಂತ ಗರ್ಭದಲ್ಲೂ ಕಾಮ ಹೀಗೆ ಪ್ರವಹಿಸುತ್ತಿರುತ್ತದೆ.
·         ಈ ಬೀದಿ ಬದಿಯಲ್ಲಿ ಕುರುಚಲು ಪೊದೆಗಳು ವಿಶಾಲಮರಗಳು. ಈ ಬೀದಿಯಲ್ಲಿ ತಟ್ಟನೆ ಪ್ರತ್ಯಕ್ಷವಾಗುವ ಅರೆನಗ್ನ ಮನುಷ್ಯರು. ನಗ್ನತೆಯ ಅವಮಾನ ಅರಿಯದ: ನಗ್ನತೆಯ ಸೌಂದರ್ಯ ಅರಿಯದ: ನಗ್ನ ಪಶು ಪಕ್ಷಿಗಳು. ಬೀದಿ ಇಳಿಯುತ್ತದೆ ಏರುತ್ತದೆ ತಿರುಗುತ್ತದೆ ಮತ್ತು ಇಗೋ ಇಗೋ ಎಂದಾಗ ತಟ್ಟನೆ ಮುಗಿಯುತ್ತದೆ.
·         ಸಾಯುವವರೆಗೂ ಆರೋಗ್ಯವನ್ನು ಕಾಪಾಡಿಕೊಂಡು ಧೃಡಕಾಯನಾಗಿದ್ದರೆ, ಸತ್ತ ಮೇಲೆ ಶವ ನಡೆದುಕೊಂಡು ಚಿತೆಗೆ ಹೋಗುವುದಿಲ್ಲ. ಸತ್ತ ಮನುಷ್ಯನನ್ನು ಹೊರಲು ಇನ್ನೊಬ್ಬರು ಬೇಕೇ ಬೇಕು.
·         ಇವತ್ತು ಏನೂ ಇಲ್ಲ. ನಿನ್ನೆ ಏನೂ ಇರಲಿಲ್ಲ. ನಾಳೆ ಏನೂ ಇರುವುದಿಲ್ಲ ಎಂದು ಖಚಿತವಾಗಿ ತಿಳಿದ ಮೇಲೆ ಯಾವ ಗಡಿಬಿಡಿಯೂ ನಿರೀಕ್ಷೆಯೂ ಇರುವುದಿಲ್ಲ. ಕ್ರಮಿಸಿ ಬಂದ ದಾರಿಯಲ್ಲಿ ಇನ್ನೊಮ್ಮೆ ನಡೆಯಬೇಕಾಗಿಲ್ಲ ಎಂದು ತಿಳಿಯುವುದು ಎಷ್ಟು ಆನಂದ ಕೊಡುತ್ತದೋ ಮುಂದೆ ನಡೆಯಬೇಕಾಗಿರುವ ದಾರಿ ಬಹಳ ಇಲ್ಲ ಎಂದು ತಿಳಿಯುವುದೂ ಅಷ್ಟೇ ಆನಂದ ಕೊಡುತ್ತದೆ.
·         ಸುಖ ಇರುವಾಗ ದುಃಖ ಇರೋದಿಲ್ಲ. ಸುಖ ಅನುಭವಿಸಿದ ನಂತರದ ಖಾಲಿ ಅಂತರದಲ್ಲಿ ದುಃಖ ಬರುತ್ತದೆ. ಬರುವ ದುಃಖಗಳೆಲ್ಲಾ ಭೂತಕಾಲದಿಂದ ನುಗ್ಗಿ ಬರುತ್ತದೆ. ಹಾಗಾಗಿ ದುಃಖ ಮರೆತರೆ ಸುಖ ಉಳಿಯುತ್ತದೆ. ಅದು ನನ್ನ ಲೆಕ್ಕಚಾರ. ಅಪ್ಪನದೂ...
ನೀವು ನಿಮ್ಮ ಕೆಲಸದಲ್ಲಿ ಬಹಳ ಬ್ಯುಸಿ ಇದ್ದು ಯೋಚಿಸಲೂ ಸಮಯದ ಅಭಾವವಿದ್ದಲ್ಲಿ ದಯವಿಟ್ಟು ವ್ಯಾಸರ ಕಥೆಗಳನ್ನು ಓದಬೇಡಿ! ಯೋಚನೆಗೆ ಹಚ್ಚದೆ ಚಿಂತಿಸಲು ಒಂದಷ್ಟು ಸಮಯ ಬೇಡದೆ ವ್ಯಾಸರ ಯಾವ ಕಥೆಯೂ ಮುಗಿಯುವುದಿಲ್ಲ!

ಕಥಾ ಸಂಕಲನದ ಹೆಸರು – ಅಸ್ತ್ರ

ಪ್ರಕಾಶಕರು – ಅಂಕಿತ ಪುಸ್ತಕ

ಬೆಲೆ – 95/- ಮಾತ್ರ.

No comments:

Post a Comment