Aug 27, 2012

ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!


ಚಿತ್ರಕೃಪೆ - ಇಂಡಿಯಾ ಟುಡೇ
 ಡಾ ಅಶೋಕ್. ಕೆ. ಆರ್
ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!

          ಪೇಜಾವರ ಸ್ವಾಮಿಗಳು ಮದ್ಯಪಾನ ಸೇವನೆಯನ್ನು ಖಂಡಿಸುತ್ತ ಜೊತೆಗೆ ಮಾಂಸಹಾರ ಸೇವನೆಯನ್ನು ತುಚ್ಛವಾಗಿ ಕಾಣುವ ಕೆಲವು ಮಾತುಗಳನ್ನಾಡಿದ್ದರು. ಅವರ ಮದ್ಯಪಾನ ವಿರೋಧಿ ಹೇಳಿಕೆಯ ಬಗ್ಗೆ ಸ್ವತಃ ಮದ್ಯಪಾನಿಗಳದೂ ವಿರೋಧವಿರಲಾರದು! ಆದರೆ ಮಾಂಸಹಾರಿಗಳ ಪಕ್ಕ ಸಸ್ಯಹಾರಿಗಳು ಕುಳಿತುಕೊಳ್ಳುವುದರಿಂದ ಸಸ್ಯಹಾರಿಗಳೂ ಮಾಂಸ ಸೇವಿಸುವ ‘ದುಷ್ಟ’ ಕೆಲಸ ಆರಂಭಿಸಿಬಿಡುತ್ತಾರೆಂಬ ಅವರ ‘ಭಯ’ (ಅಲ್ಲಿಗೆ ಮಾಂಸ ಸೇವನೆಯಲ್ಲಿರುವ ಆಕರ್ಷಣೆಯ ಅರಿವು ಸ್ವಾಮಿಗಳಿಗೂ ಇದೆ!) ಜಾತಿಯಾಧಾರಿತ ಪಂಕ್ತಿ ಭೇಧವನ್ನು ಬದಲಾದ ಕಾಲಘಟ್ಟದಲ್ಲಿ ಹೊಸತೊಂದು ವಾದದಿಂದ ಸಮರ್ಥಿಸಿಕೊಳ್ಳುವ ಯತ್ನವಷ್ಟೇ. ಇನ್ನು ಹಿಂದೂ ಧರ್ಮ ‘ರಕ್ಷಿಸುತ್ತ’ ಮದ್ಯಪಾನಿಗಳ ಮೇಲೆ, ಮಾಂಸಹಾರಿಗಳ ಮೇಲೆ, ಮಹಿಳೆಯರ ಮೇಲೆ ಅವ್ಯಾವತವಾಗಿ ದಾಳಿ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಹತ್ತಾರು ಸಂಘಟನೆಗಳೂ ಕೂಡ “ಹೆಂಡ ಮಾರುವವರಿಂದ ಯಕಶ್ಚಿತ್ ಕ್ಯಾಲೆಂಡರಿಗಾಗಿ ಅರೆಬೆತ್ತಲೆ ಹುಡುಗಿಯರ ಫೋಟೋಶೂಟ್ ಮಾಡುವವರಿಂದ ಚಿನ್ನದ ಬಾಗಿಲನ್ನು ದಾನವಾಗಿ ಪಡೆದುಕೊಳ್ಳಬೇಡಿ” ಎಂದು ಸುಬ್ರಹ್ಮಣ್ಯ ದೇವಾಲಯದವರಿಗೆ ‘ಬುದ್ಧಿ’ ಹೇಳಿದ ವರದಿಗಳಾಗಿಲ್ಲ. ಕುಡಿಯೋದಷ್ಟೇ ತಪ್ಪು, ಕುಡಿಸುವುದಲ್ಲ ಎಂಬ ಮನೋಭಾವವೇ? ದೇವಸ್ಥಾನ ಪ್ರವೇಶಿಸುತ್ತ ಚಿನ್ನದ ಬಾಗಿಲೊಳಗೆ ಪ್ರವೇಶಿಸುವವರಿಗೆ ನಶೆಯೇರಿ ವಿಜಯ್ ಮಲ್ಯ ನೆನಪಾಗಿ ಸುಬ್ರಹ್ಮಣ್ಯ ಸ್ವಾಮಿಯೇ ಮರೆತುಹೋದರೆ ಯಾರು ಹೊಣೆ?! ನಮ್ಮ ಮದ್ಯಪಾನ, ಮಾಂಸಹಾರಗಳೆಲ್ಲವೂ ಈ ಸಂಘಟನೆಗಳಿಗೆ, ಸ್ವಾಮೀಜಿಗಳಿಗೆ ಪಥ್ಯವಾಗಬೇಕಾದರೆ ನಾವೂ ಕೂಡ ಕೋಟಿ ಲೆಕ್ಕದಲ್ಲಿ ದುಡಿದು ಚಿನ್ನದ್ದೋ ವಜ್ರದ್ದೋ ಬಾಗಿಲು – ಕಿರೀಟಗಳನ್ನು ದಾನ ಮಾಡಬೇಕೇನೋ?!

          ನೇರ ಸಂಬಂಧವಿರದಿದ್ದರೂ ಸುಬ್ರಹ್ಮಣ್ಯ ದೇವಾಲಯ ಹಿಂದೊಮ್ಮೆ ನನ್ನಲ್ಲಿ ಹುಟ್ಟಿಸಿದ್ದ ಪ್ರಶ್ನೆಯೊಂದಿದೆ. 
ಚಿಕ್ಕಂದಿನಿಂದಲೂ ನನಗೆ ದೇವರಲ್ಲಿ ‘ಬಹಳ’ ಎನ್ನುವಷ್ಟು ನಂಬುಗೆಯಿರಲಿಲ್ಲ. ಅಮ್ಮನ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಹಬ್ಬಹರಿದಿನಗಳಲ್ಲಿ ಮನೆಯಲ್ಲಿ ಪೂಜೆಯನ್ನೂ ಮಾಡುತ್ತಿದ್ದೆ. ದೇವರ ಅಸ್ತಿತ್ವದ ಬಗ್ಗೆ ಇದ್ದ ಗೊಂದಲಗಳನ್ನು ಕೊನೆಗಾಣಿಸಿ ನನ್ನನ್ನು ಸಂಪೂರ್ಣವಾಗಿ ನಾಸ್ತಿಕನನ್ನಾಗಿಸಿದ ಶ್ರೇಯ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ಸೇರಬೇಕು! ಹತ್ತನೇ ತರಗತಿಯಲ್ಲಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾಗ ದೇವಾಲಯದೊಳಗೆ ಪ್ರವೇಶಿಸಲು ಶರ್ಟು ತೆಗೆಯುವುದು ಕಡ್ಡಾಯವೆಂದು ಗೊತ್ತಾಯಿತು. ದೇವಲಾಯದ ಆವರಣ ಕೊಳೆಯಾಗಬಹುದೆಂಬ ಕಾರಣದಿಂದ ಚಪ್ಪಲಿ ಬಿಟ್ಟು ಒಳಹೋಗುವುದೇನೋ ಸರಿ, ಆದರೆ ಶರ್ಟು ಬಿಚ್ಚಿ ಹೆಗಲ ಮೇಲೆ ಹಾಕಿಕೊಳ್ಳುವುದು ಯಾವ ಪುರುಷಾರ್ಥಕ್ಕೆ? ಅವತ್ತಿನ ನನ್ನ ಮನಸ್ಸಿಗೆ ಕಾರಣ ಹೊಳೆದಿದ್ದು ಜನಿವಾರದವರಿಗೆ ಮತ್ತು ಜನಿವಾರರಹಿತರಿಗೆ ದೇವಲಾಯದ ಸಿಬ್ಬಂದಿ ಮಾಡುತ್ತಿದ್ದ ಭೇದಭಾವವನ್ನು ಕಂಡಾಗ! ಆ ಸಿಬ್ಬಂದಿಯವರ ಮೇಲೆ ಹುಟ್ಟಿದ ಅಸಹ್ಯ, ಕೋಪ, ಜಿಗುಪ್ಸೆ ಅವರ ನಡುವೆಯೇ ಕುಳಿತು ಕಣ್ಣು ಮುಚ್ಚಿದ್ದ ದೇವರ ಮೇಲೆಯೂ ಹುಟ್ಟಿತು. ಅಂದಿನಿಂದ ನಾಸ್ತಿಕನಾದೆ. ಶರ್ಟು ತೆಗೆಸುವುದಕ್ಕೆ ಬೇರೆ ಯಾವುದಾದರೂ ಕಾರಣವಿದ್ದಲ್ಲಿ ಅರಿತವರು ತಿಳಿಸಬೇಕಾಗಿ ವಿನಂತಿ!

6 comments:

  1. u r right Sir, I agree with u........

    ReplyDelete
  2. ಥೋ,. ನನ್ನ ತಾಯಿಯವರ ಒತ್ತಾಯಕ್ಕೆ ನಾನು ಕುಕ್ಕೆಗೆ ಹೋಗಿದ್ದೆ, ಒಳಗೆ ಹೋದ ಮೇಲೇನೆ ನನಗೆ ಈ ಅಂಗಿ ಬಿಚ್ಚುವ ಸಂಪ್ರದಾಯ ಗೊತ್ತಾಗಿದ್ದು (ಮೊದಲೇ ಗೊತ್ತಿದ್ದರೆ ಹೋಗುತ್ತಲೇ ಇರಲಿಲ್ಲ) , ಅಂಗಿ ಬಿಚುವುದು ಯಾಕೆ ಅಂತ ಕೇಳಲು ಅಲ್ಲಿರುವವರೊಬ್ಬರು ಹೇಳಿದ ಮಾತು " ಮನುಷ್ಯ ಎಷ್ಟೇ ಶ್ರೀಮಂತನಿದ್ದರು ದೇವರ ಮುಂದೆ ಬರೀ ಮೈ ದಾಸ" ಅಂತ ಹೇಳಲು ಅಂಗಿ ಬಿಚ್ಚಿಸುವುದಾಗಿ ಹೇಳಿದ, ಆದ್ರೆ ಅದು "____ &^%$#"ಗಳನ್ನ ಗುರಿತುವಿಸುವುದಕ್ಕೆ ಅಂತ ಗೊತ್ತಿರಲಿಲ್ಲ. ಕರ್ಮ ಕರ್ಮ,

    ReplyDelete
  3. ದೇವರ ಮುಂದೆ ಬರಿ ಮೈ ದಾಸ ಎಂಬುದು ನಿಪವಿದ್ದೀತಷ್ಟೇ! ಮೂಲಕಾರಣ ಏನಿದೆಯೋ ನನಗೂ ತಿಳಿಯದು. ಇದು ಕೇವಲ ಸುಬ್ರಹ್ಮಣ್ಯವಷ್ಟೇ ಅಲ್ಲ ಈ ಭಾಗದ ಮತ್ತು ಕೇರಳದ ಬಹಳಷ್ಟು ದೇವಾಲಯಗಳಲ್ಲಿ ಇದೇ ಪದ್ದತಿಯಿದೆ. ಕಾರಣವೇನೇ ಇರಲಿ ಇದರ ನೆಪದಲ್ಲಿ ಕೆಲವರು ಮಾಡುವ ವ್ಯತ್ಯಾಸಗಳು ಅಸಹ್ಯಕರವಾದುದು.

    ReplyDelete
  4. ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ.........
    ಮೊದಲನೆ ವಿಚಾರ..... ನೀವು ಹೆಳಿದ ವಿಜಯ ಮಲ್ಯರ ದಾನ, ಅದು ಅವರ ವಯುಕ್ತಿಕ ವಿಚಾರ ಇನ್ನೊಬ್ಬರಿಗೆ ನಿರ್ದೆಶಿಸುವ ಹಕ್ಕಿಲ್ಲ
    ಎರಡನೆ ವಿಚಾರ....... ಶ್ರೀ ಪೆಜಾವರರ ಬಗ್ಗೆ, ಶ್ರಿಗಳು ಮಧ್ಯಪಾನಿಗಳು ಮತ್ತು ಮಾಂಸಹಾರಿಗಳ ಪಕ್ಕ ಬ್ರಾಹ್ಮಣರು ಕುಳಿತುಕೊಳ್ಳುವುದರಿಂದ ದುರಬ್ಯಾಸಕ್ಕೆ ಬಲಿಯಾಗುತ್ತಾರೆ0ದು ಎಚ್ಚರಿಸಿದ್ದು ಯಾವುದೆ ಸಾರ್ವಜನಿಕ ಕಾರ್ಯಕ್ರಮದಲ್ಲಲ್ಲ,ಶಿವಮೊಗ್ಗದಲ್ಲಿ ಕಳೆದ ಮೆ ತಿ0ಗಳಲ್ಲಿ ನಡೆದ "ವಿಪ್ರ ಬ್ರಾಹ್ಮಣ ಸಮಾವೆಶದಲ್ಲಿ "ಬ್ರಾಹ್ಮಣ ಸಮಾಜ ಜಾಗ್ರತಿಗಾಗಿ ಆಡಿದ ಮಾತುಗಳನ್ನು ಪತ್ರಿಕೆ ಹಾಗು ಟಿ ವಿ ಮಾಧ್ಯಮ ತಿರುಚಿ ಇದನ್ನು ಸಾರ್ವಜನಿಕ ವಿಷಯವಾಗಿ ಶ್ರಿಗಳ ಬಗ್ಗೆ ಅಪಪ್ರಚಾರ ಮಾಡಿದೆ ,ಇಲ್ಲಿ ಸ್ವಾಮೀಜಿ ಹೇಳಿದ್ದು ನೂರಕ್ಕೆ ನೂರು ಸರಿ ಯಾಕೆ0ದ್ರೆ ಬ್ರಾಹ್ಮಣ ಸಮಾಜದಲ್ಲಿ ಮಧ್ಯಪಾನ ಮತ್ತು ಮಾ0ಸಹಾರ ನಿಷಿದ್ದ(ಗುಟ್ಟಾಗಿ ಸೆವಿಸಿದವರು ಇದ್ದಾರೆ ,ಒಪ್ಪಿಕೊಳ್ಳಲೆ ಬೇಕು)ಅದಕ್ಕಾಗಿ ಬ್ರಾಹ್ಮಣ ಸಮಾಜದ ಏಳಿಗೆಗಾಗಿ,ಜಾಗ್ರತಿಗಾಗಿ ಸ್ವಾಮೀಜಿ ಹೇಳಿಕೆ ಸರಿ.ಪ್ರತಿಯೊ0ದು ಜಾತಿಗು ಅವರದೆ ಆದ ಆಚರಣೆ ,ಸ0ಪ್ರಾದಯ ,ಶಿಸ್ಥು ಇದೆ
    ಮೂರನೆ ವಿಚಾರ......... ಯಾವುದೆ ದೇವಸ್ಥಾನ ದಲ್ಲಿ ದಾನದ ಮೂಲ ಕೆಳಲಾಗುವುದಿಲ್ಲ,ಮತ್ತು ಕೊಟ್ಟ ದಾನವು ದೇವರಿಗೆ ಸಮರ್ಪಣೆ ಹೊರತು ದೇವಸ್ಥಾನಕ್ಕೆ ಅಲ್ಲ..
    ಕೊನೆಯದಾಗಿ........... ಬಟ್ಟೆ ವಿಚಾರಕ್ಕೆ ಬ0ದರೆ ಹಿಂದೂ ಪದ್ಧತಿಗಳ ಬಗ್ಗೆ ನಂಬಿಕೆ ತಿಳುವಳಿಕೆ ಇರುವ ವನು ಆಯಾ ದೇವಸ್ಥಾನದ ನೀತಿ ನಿಯಮಗಳಿಗನುಸಾರವಾಗಿ ದೇವರ ಮೇಲೆ ನಂಬಿಕೆ ಇರುವವರಿಗೆ ಪ್ರವೇಶ ಮುಕ್ತವಾಗಿದೆ ಯಾವುದೇ ಆಚರಣೆಯ ಮುಂದುವರಿಕೆಗೆ ಮೂಲಕಾರಣ ಅದರ ಹಿಂದಿರುವ ನಂಬಿಕೆ. ಈ ಮಾತನ್ನು ಧಾರ್ಮಿಕ ವಿಚಾರಗಳಿಗೆ ಹೇಳುವುದಾದರೆ, ಯಾವುದರಲ್ಲಿ ಜನರಿಗೆ ವಿಶ್ವಾಸವಿದೆಯೋ ಅದನ್ನ ವರು ಶ್ರದ್ಧೆಯಿಂದ ಪಾಲಿಸುತ್ತಾರೆ. ಕಾಲಕ್ರಮೇಣ ಅದು ವಿವೇಚನೆಯಿಲ್ಲದೆ ಆಚರಿಸಲ್ಪಡುವ ಸಂಪ್ರದಾಯವಾಗಬಹುದು. ಆದರೆ ಎಲ್ಲಿಯ ವರೆಗೆ ಆಚರಿಸುವವರ ಮನದಲ್ಲಿ ನಂಬಿಕೆ ದೃಢವಾಗಿದೆಯೋ ಅಲ್ಲಿಯವರೆಗೆ ಆ ಆಚರಣೆ ಮುಂದುವರಿಯುತ್ತದೆ.ಒಬ್ಬ ಒಂದು ಹರಕೆ ಹೊರುತ್ತಾನೆ; ಅವನ ಬಯಕೆ ಈಡೇರುತ್ತದೆ. ಆದರೆ ಇನ್ನೊಬ್ಬನ ಹರಕೆ ಅವನ ಬಯಕೆಯನ್ನು ಈಡೇರಿಸು ವುದಿಲ್ಲ. ಆದರೆ ಈ ಇಬ್ಬರಲ್ಲೂ ಕಂಡುಬರುವ ಸಮಾನಾಂಶವೆಂದರೆ, ಅವರಿಬ್ಬರೂ ತಮ್ಮ ತಮ್ಮ ಹರಕೆಗಳನ್ನು ಮುಂದುವರಿಸುವುದು.ಮೊದಲಿನವ ತನ್ನ ಇಚ್ಛೆಯನ್ನು ಈಡೇರಿಸಿದ ದೇವರಿಗೆ ಇನ್ನೊಂದು ಹರಕೆಯ ಮೂಲಕ ತನಗಿರುವ ಅನನ್ಯ ಭಕ್ತಿಯನ್ನು ತೋರಿಸಿದರೆ, ಇನ್ನೊಬ್ಬ ತನ್ನ ಹಾರೈಕೆಯನ್ನು ಈಡೇರಿಸದ ದೇವರು ಇನ್ನೊಂದು ಹರಕೆಯಿಂದಾದರೂ ತನ್ನನ್ನು ಕರುಣಿಸಬಹುದೆಂದುಕೊಳ್ಳುತ್ತಾನೆ! ಇದು ಮಾನವ-ಮಾನವ ಮತ್ತು ಮಾನವ-ದೇವರ (ನಂಬಿಕೆಯ) ಸಂಬಂಧಗಳಲ್ಲಿ ಕಂಡುಬರುವ ಮುಖ್ಯ ವ್ಯತ್ಯಾಸ
    ಎಲ್ಲೆಲ್ಲಿ ಕಾನೂನು ಅಪಾರ ನಂಬಿಕೆಗೆ ವಿರುದ್ಧವಾಗಿ ಬಳಸಲ್ಪಟ್ಟಿದೆಯೋ ಅಲ್ಲಲ್ಲಿ ಅದು ಸೋತಿದೆ. ಅಲ್ಲದೆ, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗದ ಕಾನೂನು ತನ್ನ ಹಿರಿಮೆಯನ್ನು ಕಳೆದುಕೊಳ್ಳುತ್ತದೆ. ಜನರಿಗೆ ಅದರ ಮೇಲಿರಬೇಕಾದ ಗೌರವ ಮತ್ತು ಭಯ ಮಾಯವಾಗುತ್ತದೆ. ಇದರಿಂದ ಒಳಿತಿಗಿಂತ ಹೆಚ್ಚು ಕೆಡುಕಾಗುತ್ತದೆ. ಕೆಲವೊಮ್ಮೆ ವಿರೋಧ ಒಂದು ಆಚರಣೆಯನ್ನು ನಿಲ್ಲಿಸುವ ಬದಲು ಅದನ್ನು ತೀವ್ರಗೊಳಿಸಬಹುದು. ನಿಶ್ಚಿತವಾಗಿ ಹೇಳಬಹುದಾದ ಒಂದು ಮಾತೆಂದರೆ ಮನಸ್ಸು ಯಾವುದನ್ನು ಬಲವಾಗಿ ನಂಬುತ್ತದೆಯೋ ಅದನ್ನು ಬುದ್ಧಿಯೂ ತಿರಸ್ಕರಿಸಲಾರದು (ಶಬರಿಮಲೆ ಮಕರ ಜ್ಯೋತಿ ಇದಕ್ಕೊಂದು ಉತ್ತಮ ಉದಾಹರಣೆ). ಮನಸ್ಸಿನ ಈ ಶಕ್ತಿಯನ್ನು ವಿಶ್ಲೇಷಿಸದೆ, ನಂಬಿಕೆಯನ್ನು ‘ಸರಿ’ ಮತ್ತು ‘ತಪ್ಪು’ ಗಳನ್ನಾಗಿ ವಿಂಗಡಿಸುವುದು ಸಮಸ್ಯೆಗೆ ಪರಿಹಾರವಲ್ಲ.

    ReplyDelete
  5. there is a one beauty full saying: HE WAS VERY BRILLIANT!!! WHO INVENTED THE GOD. god also man made. except nature every thing is man made.

    ReplyDelete