Aug 2, 2012

ಕೆಲವು 'ಬರ'ದ ಪದ್ಯಗಳು

1

ಚುಕ್ಕಿ ಮೂಡುವ ಹೊತ್ತಿನಲ್ಲಿ
ನನ್ನೊಳಗೆ
ಮಿಣುಕು ಹುಳು ಜೀವ ಪಡೆಯುತ್ತವೆ
ಕತ್ತಲಲ್ಲಿ ಬಿದ್ದ ಕಣ್ಣಹನಿ ಉರಿದಂತೆ
ಮತ್ತೆ ಉದುರುತ್ತವೆ
ಈ ಜಗದ ಬೇಗುದಿ ದೊಡ್ಡದು

2

ಯಾವ ಸುದ್ದಿ
ಯಾರು ತಂದರೋ ತಿಳಿದಿಲ್ಲ
ಬತ್ತಿದ ಕೆರೆಯ ಬಿರಿದೆದೆಯ ಶೋಕಸಭೆಗೆ
ನಾವಿಂದು ಕರೆಯದೇ ಬಂದ ಅತಿಥಿ
ನೆತ್ತಿಯ ಮೇಲೆ ಹಾರುತಿದೆ
ಯಾರದೋ ನಗು ತುಂಬಿದ ವಿಮಾನ

3

ಅಳುವ
ಮಗುವಿನ ಕೈಯಲ್ಲಿನ
ನಗುವ ಗೊಂಬೆಯಂತೆ ನೀನು
ಕೋಗಿಲೆಯೊಳಗಿನ ಕೊಳಲು
ಆಲದ ಬಿಳಲು ಮುತ್ತಿರುವ ಎಲೆಯ ಕುಕಿಲು
ನೇಣು ಬಿಗಿದುಕೊಳ್ಳಲು ಬಂದ ಅನ್ನದಾತನ ಅಳಲೂ

4

ಬರದ ನೆಲದ ಬೆಂಕಿ ಹೂ
ಹೇಗೆ ಮುಡಿಯುವುದು
ಖಾಲಿ ಹೊಟ್ಟೆ ಉರಿವ ಕೊಂಡ
ನೀರು ಬತ್ತಿದ ಕಣ್ಣು ಯಾರೋ ಬಿಟ್ಟ ಬಾಣ
ಕಂಡ ಮೋಡಗಳೆಲ್ಲ ಕೆಂಡದುಂಡೆಗಳೇ
ಈ ಬೇಗೆಯೂ ಬೇಕು ಬಿಡು ನಿನ್ನಂತೆ
- ವೀರಣ್ಣ ಮಡಿವಾಳರ್ 

No comments:

Post a Comment