Aug 1, 2012

ಪಾಲಿಸಲಾಗದ ಸತ್ಯವೇ “ಚಲಂ”!

ಚಲಂ

ಡಾ ಅಶೋಕ್. ಕೆ. ಆರ್
ಉಪೇಂದ್ರ ನಿರ್ದೇಶಿಸಿದ ‘ಉಪೇಂದ್ರ’ ಚಿತ್ರದ ಆರಂಭದಲ್ಲಿ ಬೇತಾಳನ ಪಾತ್ರಧಾರಿ ‘ಮನಸ್ಸಿನ ಮಾಲಿನ್ಯ’ ಎಂಬ ಪದವನ್ನು ಉಪಯೋಗಿಸುತ್ತಾನೆ. ಹಿಂದೊಮ್ಮೆ ಗೆಳೆಯನೊಡನೆ ಯಾವುದೋ ಚರ್ಚೆ ನಡೆಸುತ್ತಿದ್ದಾಗ ‘ಎಲ್ಲರೊಳಗೂ ಹಾದರದ ಮನಸ್ಸಿರುತ್ತೆ ಕಂಟ್ರೋಲ್ ಮಾಡ್ಕೊಂಡಿರ್ತೀವಿ ಅಷ್ಟೇ!’ ಎಂದು ಹೇಳಿದ್ದೆ. ಮನಸ್ಸಿನಾಳದಲ್ಲಿ ನಮ್ಮೆಲ್ಲರಲ್ಲೂ ಕಲ್ಮಶವೇ ಇರುತ್ತಾ? ನಿಷ್ಕಲ್ಮಶ ಎಂಬ ಪದವೇ ನಿರರ್ಥಕವಾದುದಾ? ಎಂಬ ಪ್ರಶ್ನೆ ಬಹಳಷ್ಟು ಕಾಡಿದ್ದಿದೆ. ಎಲ್ಲರ ಮನದೊಳಗೂ ಕೆಟ್ಟ ಆಲೋಚನೆಗಳು, ಕೆಟ್ಟ ವಿಚಾರಗಳು ಬಂದೇ ಬರುತ್ತದೆಂದು ನನ್ನ ನಂಬಿಕೆ. ನನ್ನದು ನಿಷ್ಕಲ್ಮಶ ಮನಸ್ಸು ಎಂದು ಹೇಳಿಕೊಳ್ಳುವವರ ಬಗ್ಗೆ ಅಸಡ್ಡೆ. ಆದರೆ ಮನಸ್ಸಿನ ಯೋಚನೆ- ಯೋಜನೆಗಳನ್ನೆಲ್ಲ ಕಲ್ಮಶ ನಿಷ್ಕಲ್ಮಶವೆಂದು ಭೇದ ಮಾಡದೆ ಆಚರಣೆಯಲ್ಲಿ ತರುವುದು ಕಷ್ಟಸಾಧ್ಯ. ನೈತಿಕ ಅನೈತಿಕತೆಯ ಪ್ರಶ್ನೆ, ಸಂಭಾವಿತನಾಗಬೇಕೆಂಬ ಹಪಾಹಪಿ, ಸಮಾಜದಲ್ಲೊಂದು ಗೌರವ ಪಡೆಯಬೇಕೆಂಬ ಆಸೆ ಇವೆಲ್ಲವೂ ನಮ್ಮ ಮನದ ಎಷ್ಟೋ ಯೋಚನೆಗಳನ್ನು ಹತ್ತಿಕ್ಕಿಬಿಡುತ್ತವೆ. ಆ ‘ಕೆಟ್ಟ’ ಯೋಚನೆಗಳನ್ನು ತಡೆದುಬಿಟ್ಟೆನಲ್ಲ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತ ಆತ್ಮರತಿಯಲ್ಲಿಯೇ ಕಳೆದುಹೋಗುತ್ತೀವಿ. 

          ಸಮಾಜ ತೋರಿಸಿದ ಮಾರ್ಗವನ್ನು ದಿಕ್ಕರಿಸಿ, ಮನವಿಚ್ಛಿಸಿದ ಕಡೆಗೆ ಸಂಚರಿಸಿ ತನ್ನಲ್ಲೇ ಮೂಡಿದ ಪ್ರಶ್ನೆಗಳಿಗೆ ಕೊನೆಯವರೆಗೂ ಸಮರ್ಪಕ ಉತ್ತರ ಕಂಡುಕೊಳ್ಳಲಾಗದೆ ಹೋದವನು ಚಲಂ. ಆತ್ಮಕಥೆಗಳೆಂದರೆ ನನಗೆ ಅಸಹ್ಯ ಎಂದು ಹೇಳುತ್ತಲೇ ತನ್ನ “ಆತ್ಮಕಥ” ಬರೆಸಿಬಿಡುತ್ತಾನೆ ಚಲಂ. ಇಷ್ಟವಿಲ್ಲದ ಕೆಲಸ ಮಾಡುತ್ತಿದ್ದೀನೆಂದರೆ ಯಾವುದೂ ನಮ್ಮ ಕೈಲಿಲ್ಲ ಎಂದು ಹೇಳುತ್ತಾನೆ. ತೆಲುಗಿನ ಈ ಪುಸ್ತಕವನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿರುವುದು ಪತ್ರಕರ್ತ ಲೇಖಕ ರವಿ ಬೆಳಗೆರೆ. ಬ್ರಾಹ್ಮಣನಾಗಿ ಹುಟ್ಟಿದ ಚಲಂ ಬ್ರಾಹ್ಮಣ್ಯವನ್ನು ಧಿಕ್ಕರಿಸಿ ಬ್ರಹ್ಮಸಮಾಜದ ಸದಸ್ಯನಾಗುತ್ತಾನೆ, ಮನದ ಸ್ತ್ರೀವಾಂಛೆಗೆ ಕಡಿವಾಣವಾಕುವುದು ಅಸಾಧ್ಯವೆಂದರಿವಾಗುತ್ತದೆ. ಮದುವೆಯಾಚೆಗೆ ಅನೇಕ ಸಂಬಂಧಗಳನ್ನು ಕಂಡುಕೊಳ್ಳುತ್ತಾನೆ. ಈ ಅನೀತಿಯ ಕಾರಣದಿಂದ ಬ್ರಹ್ಮಸಮಾಜ ದೂರ ಅಟ್ಟುತ್ತದೆ. ಈಶ್ವರನನ್ನು ಬಯ್ಯುತ್ತಲೇ ಸಾಗುವ ಚಲಂಗೆ ಈಶ್ವರನನ್ನು – ದೇವರನ್ನು ನೀಗಿಕೊಳ್ಳಲಾಗುವುದಿಲ್ಲ. ಯಾವುದರಲ್ಲೂ ತೃಪ್ತಿ ಕಾಣದೆ, ಹೆಂಗಸರ ಸಹವಾಸವೂ ತೃಪ್ತಿ ನೀಡದೆ ಅತೃಪ್ತನಾಗೇ ಬದುಕಿ ಕೊನೆಗೆ ರಮಣ ಮಹರ್ಷಿಯ ಆಶ್ರಮ ಸೇರುತ್ತಾನೆ. ಅಲ್ಲಾದರೂ ಆತನಿಗೆ ನೆಮ್ಮದಿ ಜೀವನದುದ್ದೇಶ ದಕ್ಕಿತಾ? ಇಷ್ಟು ಭಾವತೀವ್ರತೆಯಿಂದ ಉತ್ಕಟವಾಗಿ ಬದುಕಿದ ಚಲಂಗೆ ನೆಮ್ಮದಿ ದೊರಕುವುದು ಕಷ್ಟವೇನೋ?

          ಇದಿಷ್ಟೇ ಆಗಿದ್ದರೆ ಚಲಂನ ಪುಸ್ತಕ ಒಬ್ಬ ಲಂಪಟನ, ಲಂಪಟತನದಿಂದ ರೋಸತ್ತು ಸನ್ಯಾಸಿಯಾಗಲೊರಟವನ ಜೀವನಗಾಥೆಯಾಗಷ್ಟೇ ಉಳಿದುಹೋಗುತ್ತಿತ್ತು. ಚಲಂನೊಳಗೊಬ್ಬ ಬರಹಗಾರನಿದ್ದ, ಪ್ರಖರನಾಗಿದ್ದ. ಮಡಿವಂತರ ಜೀವನದಲ್ಲಿ ಸುನಾಮಿ ಎಬ್ಬಿಸುವ ಕಥೆ – ಲೇಖನಗಳನ್ನು ಬರೆದ. ಬರಹಗಳಿಗೆ ಅಭಿಮಾನಿಗಳಿದ್ದರು, ಚಲಂಗೆ ಅಗಾಧ ಶತ್ರುಗಳಿದ್ದರು. ಸ್ವಾತಂತ್ರ್ಯ ಭಾರತದಲ್ಲಿ ಇಂಥ ಕಥೆಗಳನ್ನು ಬರೆದಿದ್ದರೆ ನನ್ನ ಸರಕಾರೀ ಕೆಲಸವನ್ನು ಕಿತ್ತುಕೊಂಡುಬಿಡುತ್ತಿದ್ದರು, ಪುಣ್ಯಕ್ಕೆ ಇಂಥ ಗೊಡ್ಡು ಸಂಪ್ರದಾಯವಾದಿಗಳಿಗೆ ಮಣಿಯದ ಬ್ರಿಟೀಷರ ಸರಕಾರವಿತ್ತು ಎಂದು ಬರೆಯುತ್ತಾರೆ ಚಲಂ! ಸಮಾಜದ ಮೌಡ್ಯಗಳ ವಿರುದ್ಧ, ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳ ವಿರುದ್ಧ ಚಲಂ ಹೋರಾಟ ನಡೆಸಿದ್ದು ತನ್ನ ಬರಹಗಳ ಮೂಲಕ, ತನ್ನ ವಿಕ್ಷಿಪ್ತ ಜೀವನ ಪದ್ಧತಿಯ ಮೂಲಕ. 

ಚಲಂ ಆತ್ಮಕಥೆಯ ಒಂದು ಚಿಕ್ಕ ಪಾಠ-

          “ಕೆಲವು ಆತ್ಮೀಯ ಮಿತ್ರರು ಕಳಕಳಿಯಿಂದಲೇ ನನ್ನನ್ನು ಕೇಳೋರು:
‘ಈ ಮಕ್ಕಳು ದೊಡ್ಡವರಾದ ಮೇಲೆ ಇವರ ಗತಿಯೇನು?’
‘ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಅವರ ಗತಿಯೇನು?’ ಅಂತ ಮರುಪ್ರಶ್ನೆ ಹಾಕುತ್ತಿದ್ದೆ’
ಗಂಡು ಮಕ್ಕಳು ನೌಕರಿಗಳನ್ನೋ ವಕೀಲಿಕೆಯನ್ನೋ ಮಾಡುತ್ತಾರೆ ನನ್ನಂತೆ ನಿಮ್ಮಂತೆ. ನನ್ನ ಮಟ್ಟಿಗೆ ಈ ಬದುಕು ಚೆನ್ನಾಗಿಲ್ಲ. ನಿಜ ಹೇಳಿ, ಏನೋ ಮರ್ಯಾದೆಯಾಗಿ ನಾಲ್ಕು ಜನರ ಮಧ್ಯೆ ಬದುಕುತ್ತಿದ್ದೇವೆ. ಹಣ ಸಂಪಾದಿಸುತ್ತಿದ್ದೇವೆ. ಆಸ್ತಿ ಮಾಡುತ್ತಿದ್ದೇವೆ. ಅಷ್ಟು ಬಿಟ್ಟರೆ ಮನಸ್ಸಿನಲ್ಲಿ, ಆಂತರ್ಯದಲ್ಲಿ ನಿಜಕ್ಕೂ ನಿಮಗೆ ಸಂತೋಷವೆದೆಯಾ? ತೃಪ್ತಿ ಇದೆಯಾ? ಬದುಕೆಂದರೆ ಇದೇನಾ? ಹುಡುಕಿ ಹುಡುಕಿ ಯಾವನನ್ನೋ ತಂದು ಹೆಣ್ಣು ಮಕ್ಕಳಿಗೆ ಕಟ್ಟುತ್ತೇವೆ. ಮದುವೆ ಅನ್ನೊದು ಒಂಥರಾ ಲಾಟರಿ. ಆಮೇಲೇನಿದೆ? ಮಕ್ಕಳನ್ನು ಹೆರೋದು, ಅವರನ್ನು ಓದಿಸೋದು. ಅವರ ಮದುವೆ ಮಾಡೋದು; ಇದಕ್ಕಿಂತ ಚೆನ್ನಾಗಿ ಮನುಷ್ಯ ಬದುಕಬಲ್ಲ ಅಂತ ನಿಮಗೆ ಅನ್ನಿಸಿಲ್ಲವಾ? ಗಾಣದೆತ್ತಿನಂಥ ಆ ಬದುಕಿನಿಂದ ನನ್ನ ಮಕ್ಕಳನ್ನು ಉಳಿಸಬೇಕು, ತಪ್ಪಿಸಬೇಕು ಅಂತ ಪ್ರಯತ್ನ ಪಡುತ್ತಿದ್ದೇನೆ ಅನ್ನುತ್ತಿದ್ದೆ.

          ಅವರಿಂದ ನನಗೇನೂ ಬೇಕಾಗಿಲ್ಲ. ಅವರಿಂದ ಅವರಿಗೇ ಏನೂ ಬೇಕಾಗದಂತೆ ನೋಡುತ್ತಿದ್ದೇನೆ. ಮದುವೆ ಮಾಡಿ ಅವರ ಕೊರಳಿಗೆ ನೇಣು ಬಿಗಿಯುವುದಿಲ್ಲ. ಯಾರಿಗೂ ತಲೆಬಾಗಬಾರದು. ಬಾಗದಿರುವಂತೆ ನಾನು ಅಡ್ಡ ನಿಂತುಕೊಳ್ಳುತ್ತೇನೆ. ಅವರಿಗೆ ಧೈರ್ಯ ಕೊಡುತ್ತೇನೆ. ನಾನು ಬದುಕಿರುವಷ್ಟು ದಿನ ಕಷ್ಟವೇನು ಅಂತ ಗೊತ್ತಾಗದ ಹಾಗೆ ಅವರು ಬೆಳೆಯುತ್ತಾರೆ. ಆ ನಂತರ ಕಷ್ಟಪಡುತ್ತಾರಾ? ನಿಮ್ಮ ಮಕ್ಕಳು ಈಗಲೇ ಕಷ್ಟಪಡುತ್ತಿಲ್ಲವಾ ಓದು, ಸ್ಕೂಲು, ಗಂಡಂದಿರು ಅಂತ? ಅಷ್ಟರಮಟ್ಟಿಗೆ ಅವರೂ ಕಷ್ಟಪಡುತ್ತಾರೆ ಬಿಡಿ, ತೀರಾ ಬೇಕಾದರೆ. ಜೀವನ ದುರ್ಬರವಾಗಿ ಬಿಡುತ್ತದೆ ಅಂತೀರಾ? ಸುಲಭವಾಗಿ ಈ ಲೋಕವನ್ನು ಬಿಟ್ಟು ಹೇಗೆ ಹೋಗಬೇಕು ಎಂಬುದು ಅವರಿಗೆ ಈಗಾಗಲೇ ಗೊತ್ತು. ಬದುಕೋದು ಅಂದರೆ ಅದೆಷ್ಟು ಭಯಗಳೊಂದಿಗೆ ಬದುಕೋದು? ಓದದಿದ್ದರೆ ಏನಾಗಿ ಹೋಗುತ್ತೀಯಾ? ನಾಲ್ಕು ಜನರಿಂದ ಒಳ್ಳೆಯವನು ಅನ್ನಿಸಿಕೊಳ್ಳದಿದ್ದರೆ ಏನಾಗಿ ಹೋಗುತ್ತೀಯ? ನೌಕರಿ ಸಿಗದಿದ್ದರೆ ಏನಾಗಿ ಹೋಗುತ್ತೀಯ? ಮದುವೆಯಾಗದಿದ್ದರೆ ಏನಾಗಿ ಹೋಗುತ್ತೀಯ? ದುಡ್ಡಿಲದಿದ್ದರೆ ಗತಿಯೇನು? ಇಂಥ ಭಯಗಳಿಂದ ಭಾರಗಳಿಂದ ಹೇಗೆ ಜೀವ ಹಿಂಡಿ ಮಕ್ಕಳನ್ನು ಶವಗಳನ್ನಾಗಿ ಮಾಡ್ತಿದೇರೋ ನೋಡಿ’”

ಚಲಂನಂಥ ವಿಕ್ಷಿಪ್ತ ವ್ಯಕ್ತಿಗಳಿಂದಾಗುವ ಮೊದಲ ತೊಂದರೆಯೆಂದರೆ ಅವರು ಸತ್ಯ ನುಡಿಯುತ್ತಾರೆ. ನಮ್ಮೆಲ್ಲರ ಮನದೊಳಗೂ ಹಾದರದ ಮನಸ್ಸಿರುತ್ತಾದರೂ ಸಂಭಾವಿತರಾಗಿ ಗುರುತಿಸಿಕೊಳ್ಳಲು ಇಚ್ಛಿಸುತ್ತೇವೆ. ಚಲಂ ಹೇಳುವುದು ಬೆತ್ತಲೆ ಮನಸ್ಸಿನ ಸತ್ಯಗಳನ್ನು; ಆದಕಾರಣದಿಂದಲೇ ಅವುಗಳನ್ನು ಪಾಲಿಸಲಾಗುವುದಿಲ್ಲ. ಮನಸ್ಸಿಗೆ ಬಟ್ಟೆ ತೊಡಿಸಿ ಬದುಕುವುದರಲ್ಲಿನ ‘ಸುಖ’ ಬೆತ್ತಲಾಗುವುದರಲಿಲ್ಲ. ‘ಸೂಕ್ಷ್ಮ ಮನಸ್ಸು ನನ್ನದು’ ಎಂದು ದೃಡವಾಗಿ ನಂಬಿರುವವರು ದಯವಿಟ್ಟು ಈ ಪುಸ್ತಕ ಓದಬೇಡಿ. ಉಳಿದವರಿಗೆ ಓದಿ ಮುಗಿಸಿದ ಮೇಲೆ ಬೇರೆಯವರಿಗಾಗಿಯಲ್ಲದೆ ತನ್ನ ಮನಸ್ಸಿಗಾಗಿ ಬದುಕಿದ ಚಲಂನ ಮೇಲೆ ಹೊಟ್ಟೆಕಿಚ್ಚಾಗುವುದು ಖಂಡಿತ!
-      

2 comments:

  1. ಈ ಚಲಂ ಯಾರು ಅಂತ ಸ್ವಲ್ಪ ಸುಳಿವು ಕೊಟ್ಟಿದ್ದರೆ ಚೆನ್ನಾಗಿತ್ತು!

    ReplyDelete
    Replies
    1. ಚಲಂ ಆಂಧ್ರದಲ್ಲಿ ಜನಿಸಿದ ಒಬ್ಬ ಲೇಖಕ, ಕಾದಂಬರಿಗಾರ, ಬಂಡಾಯಗಾರ, ನಿರಾಶ್ರಿತರ ಆಶ್ರಯದಾತ, ಲಂಪಟ, ಸ್ತ್ರೀ ವ್ಯಾಮೋಹಿ, ಸನ್ಯಾಸಿ, ಜೀವನ ಪ್ರೀತಿಯ ಮನುಷ್ಯ!! ಬಹುಶಃ ಚಲಂ ಇದಕ್ಕಿಂತ ಹೆಚ್ಚಿನವನೂ ಅಥವಾ ಕಡಿಮೆಯವನೂ ಇರಬಹುದು!
      ಸತ್ತ ಮೇಲೆ ಉಳಿದಿರುವುದು ಅವನ ಬರಹಗಳಷ್ಟೇ! ಅದರಲ್ಲಿ ಕನ್ನಡಾನುವಾದಗೊಂಡಿರುವುದು ಅವನ ಆತ್ಮಕಥೆ - ಆತ್ಮಕಥ..... ಉಳಿದ ಪುಸ್ತಕಗಳ ಬಗ್ಗೆ ಅಲ್ಲಲ್ಲಿ ವಿಮರ್ಶೆಗಳನ್ನು ಓದಿದ್ದೇನಾದರೂ ಅವು ಕನ್ನಡದಲ್ಲಿ ಬಂದಿದೆಯಾ? ಗೊತ್ತಿಲ್ಲ....

      Delete