Aug 31, 2012

ಆದರ್ಶವೇ ಬೆನ್ನು ಹತ್ತಿ ..... ಭಾಗ 5


ಬಚ್ಚಲುಮನೆಗೆ ಹೋಗಿ ಲೋಕಿ ಕೈ ಮೂಸಿದ. ಸಿಗರೇಟಿನ ಘಮ ಇನ್ನೂ ಉಳಿದಿತ್ತು! ‘ಛೇ!! ದಿನಾ ಎಲೆ ತೆಗೆದುಕೊಂಡು ಕೈ ಉಜ್ಜಿಕೊಂಡು ಬರುತ್ತಿದ್ದೆ. ಇವತ್ತು ಮರೆತುಬಿಟ್ಟೆನಲ್ಲ. ಅಷ್ಟಕ್ಕೂ ನಾನು ಸಿಗರೇಟು ಸೇದ್ತೀನಿ ಅನ್ನೋ ಅನುಮಾನ ಇವರಿಗ್ಯಾಕೆ ಬಂತು? ನಮ್ಮ ನೆಂಟರಿಷ್ಟ್ಯಾರಾದರೂ ನೋಡಿಬಿಟ್ಟರಾ? ಅದೇಗಾದ್ರೂ ತಿಳಿದಿರಲಿ, ಕೊನೇಪಕ್ಷ ಅಣ್ಣ ಬಯ್ಯಲೂ ಇಲ್ಲವಲ್ಲ. ಏನೂ ಆಗೇ ಇಲ್ಲವೆಂಬಂತೆ ಹೊರಟುಹೋದರು. ನಾನೇ ಹೋಗೆ ತಪ್ಪಾಯ್ತು ಅಂತ ಕೇಳ್ಲಾ? ಇನ್ನು ಮುಂದೆ ಸೇದಲ್ಲ ಅಣ್ಣ . . .ಸಿಗರೇಟು ಬಿಡಬಲ್ಲೆನಾ?
ನಾನ್ಯಾಕೆ ಈ ಹಾಳು ಸಿಗರೇಟು ಕಲಿತೆ? ಮೊದಮೊದಲು ಓದೋದಿಕ್ಕೆ ಬರೆಯೋದಿಕ್ಕೆ ಮೂಡ್ ಬರಬೇಕು ಅನ್ನೋ ನೆಪ, ಈಗ ಚಟ. Habits if not resisted becomes a necessity – ನಮ್ಮ ಕಾಲೇಜಿನ ಬೋರ್ಡೊಂದರ ಮೇಲಿನ ಈ ಸಾಲುಗಳು ಎಷ್ಟು ಸತ್ಯವಲ್ಲವೇ? ಅಪರೂಪಕ್ಕೊಂದು ಸೇದ್ತೀನಿ ಅಷ್ಟೇ ಅಂತ ಹೇಳಲಾ? ಸೇದೇ ಇಲ್ಲ ಅಂತ ವಾದಿಸಲಾ? ಸೇದ್ತೀನಿ ಏನಿವಾಗ ಅಂತ ಜೋರು ದನಿಯಲ್ಲಿ ಕೇಳಲಾ? ನಾನೇ ತಪ್ಪು ಮಾಡಿ ಅವರ ಮೇಲೆ ರೇಗಿದರೆ ಅವರ ಮನಸ್ಸಿಗೆ ನೋವಾಗುವುದಿಲ್ಲವಾ? ಮ್ ಅವರಿಗೆ ನೋವು ಕೊಡುವುದರಲ್ಲಿ ನಾನು ನಿಸ್ಸೀಮನೇ ಹೌದು. ದೇವರ ವಿಷಯದಲ್ಲಿರಬಹುದು, ಅತ್ಯುತ್ತಮ ಎಂದೆನ್ನಬಹುದಾದ ಅಂಕಗಳನ್ನು ಗಳಿಸಿದರೂ ಅವರ ಇಚ್ಛೆಯಂತೆ ವೈದ್ಯವೃತ್ತಿಗೆ ಸೇರದೆ ಪತ್ರಿಕೋದ್ಯಮಕ್ಕೆ ಬಂದಿದ್ದಿರಬಹುದು...ಈಗ ಮತ್ತೊಂದು ಸೇರ್ಪಡೆ ಅಷ್ಟೇ ತಾನೇ’ ನೆಪಮಾತ್ರಕ್ಕೆ ಸ್ನಾನ ಮುಗಿಸಿ ಹೊರಬಂದ. 

ತಂದೆಯ ಕಣ್ಣು ಕೆಂಪಾಗಿತ್ತು. ಬಹುಶಃ ಅತ್ತಿರಬೇಕು ಎಂದುಕೊಂಡ. ವಿಜಿ ತನ್ನ ರೂಮಿನೊಳಗೆ ಸೇರಿದ್ದ. ಸ್ನೇಹ ಅಡುಗೆಮನೆಯಲ್ಲಿ ಚಪಾತಿ ಲಟ್ಟಿಸುತ್ತಿದ್ದಳು. ಲೋಕಿ ತಂದೆಯ ಎದುರಿಗೆ ಕುಳಿತ. ಕೆಲವು ನಿಮಿಷದ ಮೌನದ ನಂತರ ತಂದೆ “ಕುಡಿಯೋದನ್ನೂ ಕಲಿತಿದ್ದೀಯಾ?”. ಅಪ್ಪನಿಂದ ಒಂದಷ್ಟು ಬೈಗುಳದ ನಿರೀಕ್ಷೆಯಲ್ಲಿ ಕುಳಿತಿದ್ದ ಲೋಕಿಗೆ ಅವರ ಮೃದು ದನಿ ಅಚ್ಚರಿ ಹುಟ್ಟಿಸಿತು. 

“ಇಲ್ಲಣ್ಣ” 

“ನಿಜವಾಗಲೂ?”

“ನಿಜವಾಗಲು”

“ಎಷ್ಟು ದಿನ ಆಯ್ತು ಸಿಗರೇಟು ಕಲಿತು?”

“ಅದೂ...”

“ಪರವಾಗಿಲ್ಲ ಹೇಳು”

“ಬಿ ಎಗೆ ಸೇರಿದ ಮೇಲೆ”

“ಬಿಡೋದಿಕ್ಕಾಗುತ್ತಾ?” ಲೋಕಿ ಅಣ್ಣನೆಡೆಗೆ ನೋಡಿದ. ದೈನ್ಯತೆ ಇತ್ತಲ್ಲಿ. ದಯವಿಟ್ಟು ಬಿಟ್ಟುಬಿಡು ಎಂಬ ಕೋರಿಕೆಯಿತ್ತು. ಏನೆಂದು ಉತ್ತರಿಸುವುದು ಎಂಬುದನ್ನರಿಯದೆ ತಲೆತಗ್ಗಿಸಿದ. “ಬಿಡೋಕಾಗುತ್ತ ಅಂದೆ” ಅಣ್ಣನ ದನಿಯಲ್ಲಿ ಏರಿಳಿತಗಳಿರಲಿಲ್ಲ. ಇಂಥ ಉತ್ತರ ಕೊಡಲಾಗದ ಪ್ರಶ್ನೆಗಳನ್ನು ಯಾಕಾದರೂ ಕೇಳುತ್ತಾರೋ ಎಂದುಕೊಳ್ಳುತ್ತ ಮತ್ತೆ ಮೌನದ ಮೊರೆ ಹೋದ. ಅವರೇ ಮಾತು ಮುಂದುವರಿಸಿದರು “ಚಟಗಳಿಂದ ಹೊರಬರೋದು ಸುಲಭವಲ್ಲ, ನಿಜ. ನನ್ನಿಂದ ಬುದ್ಧಿ ಹೇಳಿಸಿಕೊಳ್ಳುವಷ್ಟು ಪೆದ್ದನೇನಲ್ಲ ನೀನು. ಒಳ್ಳೆಯದ್ಯಾವುದು ಕೆಟ್ಟದ್ಯಾವುದು ಎಂಬುದನ್ನು ಅರಿಯುವಷ್ಟು ದೊಡ್ಡವನಾಗಿದ್ದೀಯ. ನನ್ನ ಮಾತಿಗೆ ಕಟ್ಟು ಬಿದ್ದು ದಿನವಹಿ ಮನಸ್ಸಿನಲ್ಲಿ ನನ್ನನ್ನು ಬಯ್ದುಕೊಳ್ಳುತ್ತ ಸಿಗರೇಟು ಬಿಡಬೇಡ. ನಿನ್ನ ಮನಸ್ಸಿಗೇ ಅನ್ನಿಸಿದ ದಿನ ಬಿಟ್ಟುಬಿಡು” ಎಂದ್ಹೇಳಿ ಮೇಲೆದ್ದರು. ರೂಮಿನ ಕಡೆಗೆ ಮೆಲ್ಲನೆ ಹೆಜ್ಜೆ ಹಾಕುತ್ತ “ಬಿಡೋದಿಕ್ಕೆ ಸಾಧ್ಯವಿಲ್ಲವಾದರೆ ಕೊನೇಪಕ್ಷ ಸಿಗರೇಟಿನ ಸಂಖ್ಯೆಯನ್ನಾದರೂ ಕಡಿಮೆ ಮಾಡು. ಅಷ್ಟೇ ನಾನು ಕೇಳ್ಕೊಳ್ಳೋದು”. 

‘ಛೇ! ಹಾಳಾದ ಈ ಸಿಗರೇಟು ಕಲಿತು ಅಣ್ಣನ ಮನಸ್ಸನ್ನು ನೋಯಿಸಿಬಿಟ್ಟೆನಲ್ಲ’

“ಅಣ್ಣ. .ಚಪಾತಿ ಆಯ್ತು ಬಂದು ತಗೋ” ಸ್ನೇಹ ಕರೆದಳು. ಚಪಾತಿ ಮುರಿದು ಬಾಯಿಗ್ಹಾಕಿಕೊಳ್ಳುತ್ತ “ಅಣ್ಣನಿಗೆ ನಾನು ಸಿಗರೇಟ್ ಸೇದೋ ವಿಚಾರ ಹೇಗೆ ತಿಳಿಯಿತು” ಎಂದು ಕೇಳಿದ.

“ಅವರಿಗದು ಹೇಗಾದರೂ ಗೊತ್ತಾಗಲಿ. ನೀನು ಸಿಗರೇಟ್ ಸೇದ್ತೀಯ ಅಂದ್ರೆ ನನಗಂತೂ ನಂಬಲೇ ಕಷ್ಟವಾಯಿತು. ಪಾಪ ಅಪ್ಪ ಎಷ್ಟು ಬೇಸರ ಮಾಡಿಕೊಂಡಿದ್ದರು ಗೊತ್ತ. ಈ ವಿಷಯವಾಗಿ ಇವತ್ತೇ ಕೊನೆ ಮತ್ಯಾವತ್ತೂ ಮಾತನಾಡೋದಿಲ್ಲ ಅಂದರು. ನಮಗೂ ಈ ವಿಷಯದ ಬಗ್ಗೆ ಮಾತನಾಡಬೇಡಿ ಅಂತ ತಾಕೀತು ಮಾಡಿದ್ದಾರೆ” ಇನ್ನು ಈ ವಿಷಯ ಚರ್ಚಿಸೋದು ಬೇಡ ಎಂಬಂತೆ ಮಾತನ್ನು ಅಲ್ಲಿಗೇ ಮೊಟಕುಗೊಳಿಸಿ “ವಿಜಿ ನೀನು ಬಾ ತಿಂಡಿಗೆ” ಎಂದಳು.

“ಅಣ್ಣಂದು ತಿಂಡಿ ಆಯಿತಾ?” 

“ಇನ್ನೂ ಇಲ್ಲ. ಮನಸ್ಸಿಗೆ ಬೇಸರವಾದಾಗಲೆಲ್ಲ ಅಣ್ಣ ತಿಂಡಿ ಊಟ ಮುಟ್ಟಲ್ಲ ಅಂತ ಗೊತ್ತಲ್ವ ನಿನಗೆ. ನೀನು ಸಿಗ. . “ಏನೋ ಹೇಳಹೋದವಳು ಸುಮ್ಮನಾದಳು, ಅಪ್ಪನ ತಾಕೀತು ನೆನಪಾಗಿ.

ಲೋಕಿಗೆ ಮನೆಯಲ್ಲಿರಲು ಕಷ್ಟವಾಗಿ “ನಾನು ಕಾಲೇಜಿನ ಕಡೆ ಹೋಗಿ ಬರುತ್ತೇನೆ” ಎಂದ್ಹೇಳಿ ಮನೆಯಿಂದ ಹೊರಬಿದ್ದ. ‘ಎಲ್ಲರೂ ರೇಗಿದ್ದರೆ ನಾನೂ ರೇಗಿ ಬಂದುಬಿಡಬಹುದಿತ್ತೇನೋ. ಅವರು ರೇಗಿದ್ದಕ್ಕಾದರೂ ಸಿಗರೇಟು ಸೇದುವ ಹಟ ಮೂಡುತ್ತಿತ್ತು. ಸ್ನೇಹಳಾದರೂ ಬಯ್ಯುತ್ತಾಳೆ ಎಂದುಕೊಂಡಿದ್ದೆ, ಅಣ್ಣ ಅವಳ ಬಾಯನ್ನೂ ಕಟ್ಟಿಹಾಕಿಬಿಟ್ಟಿದ್ದಾರೆ. ಇವರ ಮನ ನೋಯಿಸೋದಕ್ಕಿಂತಾ ಸಿಗರೇಟು ಬಿಡೋದೆ ಒಳ್ಳೆಯದಲ್ವ?’. ಕಾಲೇಜಿಗೆ ಬಂದು ಅಲ್ಲಿನ ರಸ್ತೆಗಳಲ್ಲಿ ಅಡ್ಡಾಡಿದ. ಭಾನುವಾರ ಜನರ ಓಡಾಟವಿರಲಿಲ್ಲ. ಕಾಲು ಸೋಲುವಷ್ಟು ಸಮಯ ನಡೆದಾಡಿ ಮನೆಗೆ ಹಿಂದಿರುಗಿದ ಒಂದು ಸಿಗರೇಟು ಸೇವಿಸಿ. ಮನೆಯಲ್ಲೆಲ್ಲ ಅಂದು ಎಲ್ಲರ ನಡುವಿನ ಮಾತು ಕೇವಲ ಯಾಂತ್ರಿಕವಾಗಿತ್ತು. ದಿನ ಮುಗಿದರೆ ಸಾಕೆಂದು ಕಾದ ಲೋಕಿ.
* * *
‘ಇವತ್ತು ಸಯ್ಯದ್ ನೊಡನೆ ನಿನ್ನೆ ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸಿ ಅವನ ಅಭಿಪ್ರಾಯ ಕೇಳಿದರೆ ಹೇಗೆ?’ ಎಂದುಕೊಳ್ಳುತ್ತ ಲೋಕಿ ಕಾಲೇಜಿಗೆ ಬಂದ. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳೆಲ್ಲ ಗುಂಪು ಕಟ್ಟಿಕೊಂಡು ಯಾವುದೋ ವಿಷಯದ ಬಗ್ಗೆ ಗಹನವಾಗಿ ಚರ್ಚಿಸುತ್ತಿದ್ದರು. “ಏನು ಇಷ್ಟೊಂದು ಜನ?” ಎದುರಿಗೆ ಸಿಕ್ಕ ಗೆಳೆಯನೊಬ್ಬನನ್ನು ಕೇಳಿದ. “ವಿಷಯ ಗೊತ್ತಾಗಲಿಲ್ವ ಲೋಕಿ! ನಿನ್ನೆ ಸಂಜೆ ನಮ್ಮ ಸೀನಿಯರ್ ಫಾತಿಮಾ ನಮ್ಮ ಹಿಸ್ಟರಿ ಕಾಂತರಾಜ್ ಸರ್ ಮನೆಗೆ ನೋಟ್ಸ್ ತೆಗೆದುಕೊಳ್ಳಲು ಹೋಗಿದ್ದಳಂತೆ. ಕಾಂತರಾಜ್ ಸರ್ ಗೆ ಯಾವ ದೆವ್ವ ಬಡಿದಿತ್ತೋ ಏನೋ ಅವಳ ಹತ್ತಿರ ತುಂಬ ಕೆಟ್ಟದಾಗಿ ಮಾತನಾಡಿದರಂತೆ. ಅತ್ಯಾಚಾರ ಮಾಡೋಕೂ ಪ್ರಯತ್ನ ಪಟ್ಟರೆಂದು ಸುದ್ದಿ. ಕಾಂತರಾಜ್ ಸರ್ ನ ಅಮಾನತು ಮಾಡಬೇಕು ಎಂದು ಬಂದ್ ಗೆ ಕರೆ ನೀಡಿದ್ದಾರೆ. ಸಯ್ಯದ್ ಈಗಷ್ಟೇ ಪ್ರಾಂಶುಪಾಲರೊಡನೆ ಮಾತನಾಡಲು ಹೋಗಿದ್ದಾನೆ”

‘ನಮ್ಮ ಕಾಂತರಾಜ್ ಸರ್ ಈ ರೀತಿಯಾಗಿ ನಡೆದುಕೊಳ್ಳುತ್ತಾರಾ?’ ಎನ್ನಿಸಿತು ಲೋಕಿಗೆ. ಸಯ್ಯದನಿಗಾಗಿ ಹುಡುಕಿದ. ಆತ ಇನ್ನು ಪ್ರಿನ್ಸಿಪಾಲರ ಕೊಠಡಿಯಿಂದ ಹೊರಬಂದಿರಲಿಲ್ಲ. ಕಾರಿಡಾರಿನ ಒಂದು ಮೂಲೆಯಲ್ಲಿ ರೂಪಾ ಫಾತಿಮಾಳನ್ನು ಸಮಾಧಾನಪಡಿಸುತ್ತಿದ್ದಳು. ಆಕೆಯ ಪಕ್ಕದಲ್ಲಿ ಇತಿಹಾಸದ ವಿಭಾಗಕ್ಕೆ ಹೊಸದಾಗಿ ಸೇರಿದ್ದ ಎಂ ಎಸ್ ಅಲಿ ಸರ್ ನಿಂತಿದ್ದರು. ಲೋಕಿ ಅವರ ಬಳಿ ಹೋದ. 

“ಈಗ ಬರ್ತಾ ಇದ್ದೀರಲ್ಲ ಲೋಕೇಶ್. ಸಯ್ಯದ್ ಅವನ ಜೊತೆ ಕರೆದುಕೊಂಡು ಹೋಗಲು ನಿನ್ನನ್ನು ಹುಡುಕುತ್ತಿದ್ದ. ವಿಷಯ ತಿಳೀತಾ?”

“ಹ್ಞೂ. ನಮ್ಮ ಕಾಂತರಾಜ್ ಸರ್ ಈ ರೀತಿ ಮಾಡ್ತಾರೆ ಅಂದ್ರೆ ನನಗಂತೂ ನಂಬೋದಿಕ್ಕಾಗೋದಿಲ್ಲ”

“ನಂಬಕ್ಕಾಗಲ್ಲ ಅಂದ್ರೆ? ಫಾತಿಮಾ ಸುಳ್ಳು ಹೇಳ್ತಾ ಇದ್ದಾಳೆ ಅಂತೀಯ? ನಿಮ್ಮ ಕಾಂತರಾಜ್ ಏನು ದೇವರಾ? ಮದುವೆಯಾಗಿ ಎರಡು ವರ್ಷಕ್ಕೆ ಹೆಂಡತಿ ಸತ್ತು ಹೋದಳು. ಅವರಿಗೂ ವಯಸ್ಸು. . .ಅಷ್ಟೊಂದು ಆಸೆಯಿದ್ದರೆ ಇನ್ನೊಂದು ಮದುವೆಯಾಗಬೇಕಿತ್ತು. ಅದು ಬಿಟ್ಟು ಆ ಬೋ. .” ಲೋಕಿ ಅವರ ಮಾತನ್ನು ತಡೆಯುತ್ತ “ಸರ್ ಪ್ಲೀಸ್. ಕೊನೇಪಕ್ಷ ವಿದ್ಯಾರ್ಥಿಗಳ ಮುಂದೆಯಾದರೂ ನಿಮ್ಮ ಸಹೋದ್ಯೋಗಿಯ ಬಗ್ಗೆ ಸರಿಯಾದ ರೀತಿಯಲ್ಲಿ ಮಾತನಾಡಿ. ಕಾಲೇಜಿನಲ್ಲಿ ನಾವು ನೋಡಿರೋ ಕಾಂತರಾಜ್ ಸರ್ ಅಂತೂ ಆ ತರಹದ ವ್ಯಕ್ತಿಯಲ್ಲ. ಕಾಲೇಜಿನ ಹೊರಗೆ ಅವರಿಗೆ ಇನ್ನೊಂದು ಮುಖವಿರಬಹುದು. ಅದು ನನಗೆ ಗೊತ್ತಿಲ್ಲ”

ಅಲಿ ಮತ್ತೇನನ್ನೋ ಹೇಳುವಷ್ಟರಲ್ಲಿ ಫಾತಿಮಾ ಒಮ್ಮೆ ಲೋಕಿಯತ್ತ ನೋಡಿ ನಿಟ್ಟುಸಿರು ಬಿಡುತ್ತ ಅಲಿಯೆಡೆಗೆ ತಿರುಗಿ “ಅಲಿ ದಯವಿಟ್ಟು ನೀವು ಸುಮ್ಮನಿರಿ. ಯಾರ ಬಳಿ ಎಷ್ಟು ಹೇಳಿದರೂ ಅಷ್ಟೇ. ಎಲ್ಲರಿಗೂ ಕಾಂತರಾಜ್ ಸರ್ ಮೇಲೇ ನಂಬಿಕೆ. ಬೇರೆಯವರಿಗ್ಯಾಕೆ, ನನಗೇ ನನ್ನ ಸರ್ ನನ್ನೊಡನೆ ಈ ರೀತಿ ವರ್ತಿಸಿದರು ಎಂದರೆ ನಂಬಲಾಗುತ್ತಿಲ್ಲ. ಜೀವನದುದ್ದಕ್ಕೂ ಮೌಲ್ಯಗಳನ್ನು ಪ್ರತಿಪಾದಿಸಿ ಪಾಲಿಸಿದ ಅವರ ಮೇಲೆ ಹೀಗೆ ಒಮ್ಮಿಂದೊಮ್ಮೆಗೆ ಅಪವಾದ ಹೊರಿಸಿದರೆ ಯಾರಿಗೂ ನಂಬುಗೆ ಬರಲ್ಲ. ವಿದ್ಯಾರ್ಥಿಗಳ ಬೆಂಬಲವಿರೋ ಸರ್ರಿಗೆ ಯಾವ ಶಿಕ್ಷೆಯೂ ಆಗಲ್ಲ” ಎಂದ್ಹೇಳಿ ಕಣ್ಣೀರೊರೆಸಿಕೊಂಡಳು.

“ನೋಡಿ ಫಾತಿಮಾ ಸರ್ ಏನು ತಪ್ಪು ಮಾಡಿದ್ದಾರೆ ಅನ್ನೋದು ನಿಮಗೊಬ್ಬರಿಗೇ ತಿಳಿದಿರೋದು. ಅವರು ನಿಜಕ್ಕೂ ತಪ್ಪು ಮಾಡಿದ್ದಲ್ಲಿ ಅವರಿಗೆ ತಕ್ಕ ಶಿಕ್ಷೆ ಆಗುವವರೆಗೂ ನಾವು ನಿಮ್ಮ ಜೊತೆಯಲ್ಲಿರುತ್ತೀವಿ” ಲೋಕಿ ಹೇಳಿದ. ಸಯ್ಯದ್ ಪ್ರಿನ್ಸಿಪಾಲರ ಕೋಣೆಯಿಂದ ಹೊರಬಂದ. ಕಾಂತರಾಜ್ ರನ್ನು ಅಮಾನತ್ತು ಮಾಡಲು ಅವರು ಒಪ್ಪಿಲ್ಲ ಎಂಬುದನ್ನವನ ಮುಖಭಾವವೇ ಹೇಳುತ್ತಿತ್ತು.

“ಏನಾಯ್ತು ಸಯ್ಯದ್?” ರೂಪ ಕೇಳಿದಳು.

“ಅವರಿಗೆಲ್ಲ ಸರ್ ಮೇಲೇ ನಂಬಿಕೆ. ಕಾಂತರಾಜ್ ಈ ರೀತಿಯಾಗಿ ವರ್ತಿಸೋಕೆ ಸಾಧ್ಯವೇ ಇಲ್ಲ. ಸರಿಯಾದ ಸಾಕ್ಷಿಗಳಿಲ್ಲದೆ ಅಮಾನತು ಮಾಡಲಾಗುವುದಿಲ್ಲ ಎಂದರು”

“ನಾವೀಗ ಏನು ಮಾಡೋದು?” ಅಲಿ ಕೇಳೀದರು.

“ನೋಡಿ ಸರ್. ನೀವೂ ಇತಿಹಾಸದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೀರ. ನೀವು ನಮ್ಮ ಜೊತೆ ಸೇರಿ ಸ್ಟ್ರೈಕ್ ಮಾಡೋದು ಅಷ್ಟು ಸರಿ ಕಾಣೋಲ್ಲ. ಇದು ವಿದ್ಯಾರ್ಥಿಗಳು ನಡೆಸಬೇಕೆಂದಿರೋ ಸ್ಟ್ರೈಕು. ನಿಮ್ಮ ಬೆಂಬಲ ನಮಗಿದ್ದರೆ ಅಷ್ಟೇ ಸಾಕು” ಅಲಿಯವರ ಮೇಲಿನ ಕೋಪ ಇನ್ನೂ ಆರಿಲ್ಲವೆಂಬುದನ್ನು ಲೋಕಿಯ ದನಿಯೇ ಸೂಚಿಸುತ್ತಿತ್ತು.

“ಆದ್ರೂ ಸಯ್ಯದ್...”

“ಲೋಕಿ ಹೇಳ್ತಾ ಇರೋದು ಸರಿ ಸರ್. ನೀವೇ ಹುಡುಗರನ್ನು ಎತ್ತಿಕಟ್ಟುತ್ತಿದ್ದೀರ ಎಂದವರು ಭಾವಿಸಿದರೆ ಕಷ್ಟ”. ಮತ್ತೇನನ್ನೂ ಹೇಳಲಾಗದೆ “ಟೇಕ್ ಕೇರ್” ಎಂದು ಫಾತಿಮಾಳಿಗೆ ಹೇಳಿ ಅಲಿ ಹೊರಟುಹೋದರು.

“ನಡಿ ಲೋಕಿ. ಎಲ್ಲರಿಗೂ ಪ್ರಿನ್ಸಿಪಾಲರ ನಿರ್ಧಾರವನ್ನು ತಿಳಿಸಿ ಅವರೇನು ಹೇಳ್ತಾರೆ ಅಂತ ನೋಡೋಣ” “ರೂಪಾ ನೀನು ಫಾತಿಮಾಳನ್ನು ಕರೆದುಕೊಂಡು ಯಾವುದಾದರೂ ತರಗತಿಯಲ್ಲಿ ಕುಳಿತಿರು. ಇಲ್ಲಿ ನಿಂತಿದ್ದರೆ ಅವಳಿಗೂ ಮುಜುಗರ” ವಿದ್ಯಾರ್ಥಿಗಳಿದ್ದ ಜಾಗಕ್ಕೆ ಹೋಗಬೇಕಾದರೆ ಲೋಕಿ “ಸಯ್ಯದ್ ಕಾಂತರಾಜ್ ಸರ್ ಈ ರೀತಿ ವರ್ತಿಸಿದರು ಎಂದು ನಿನಗೆ ನಂಬೋದಿಕ್ಕಾಗುತ್ತಿದೆಯಾ?” ಎಂದು ಕೇಳಿದ.

“ನಿಜ ಹೇಳಬೇಕೆಂದರೆ ನನಗೂ ಮೊದಲು ನಂಬಿಕೆ ಬರಲಿಲ್ಲ. ನಂತರ ಯೋಚಿಸಿದೆ. ಒಂದು ಹುಡುಗಿ ತನ್ನ ಮೇಲೆ ಅತ್ಯಾಚಾರ ನಡೆದಾಗಲೇ ಈ ಸಮಾಜದಲ್ಲಿ ಎಲ್ಲರ ಮುಂದೆ ಹೇಳೋದಿಕ್ಕೆ ಮುಂಚೆ ಸಾವಿರ ಸಲ ಯೋಚಿಸುತ್ತಾಳೆ. ಅಷ್ಟು ಯೋಚಿಸಿದ ನಂತರವೂ ಬಹಳಷ್ಟು ಜನ ಈ ವಿಷಯವನ್ನು ತಮ್ಮೊಳಗೇ ಮಣ್ಣು ಮಾಡಿಬಿಡುತ್ತಾರೆ”.

“ನೀನು ಹೇಳುವುದು ಸರಿ. ನಾವ್ಯಾಕೆ ಒಮ್ಮೆ ಕಾಂತರಾಜ್ ಸರ್ ನೇ ಒಮ್ಮೆ ಭೇಟಿ ಮಾಡಬಾರದು? ತಪ್ಪು ಮಾಡಿದ್ದೀನಿ ಅಂತ ಅವರೇ ಒಪ್ಪಿಕೊಂಡರೆ ಎಲ್ಲವೂ ಸಲೀಸಲ್ಲವೇ? ಆಗವರನ್ನು ಅಮಾನತ್ತು ಮಾಡದೇ ಕಾಲೇಜಿನವರಿಗೂ ಬೇರೆ ದಾರಿಯಿರುವುದಿಲ್ಲ”.

“ಓಕೆ. ಅದನ್ನೂ ನೋಡೋಣ. ಬೆಳಿಗ್ಯೆಯಿಂದ ಅವರು ತಮ್ಮ ಛೇಂಬರಿನಲ್ಲೇ ಇದ್ದಾರಂತೆ”

“ಎಕ್ಸ್ ಕ್ಯೂಸ್ ಮಿ ಸರ್”, ಕಾಂತರಾಜ್ ಸರ್ ರ ಛೇಂಬರ್ರಿನ ಎದುರಿಗೆ ನಿಂತು ಲೋಕಿ ಕೇಳಿದ. ಅವರಿಬ್ಬರಿಗೂ ಒಳಬರಲು ಸನ್ನೆ ಮಾಡಿದರು. ಹೊರಗೆ ಅವರ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ಚರ್ಚೆಗಳು ನಡೆಯುತ್ತಿದ್ದರೂ ಏನೂ ಆಗೇ ಇಲ್ಲವೆಂಬಂತೆ ಮಧ್ಯಾಹ್ನದ ತರಗತಿಗೆ ನೋಟ್ಸ್ ಮಾಡಿಕೊಳ್ಳುತ್ತಿದ್ದರು. ಮುಖದಲ್ಲಿ ಎಂದಿನ ಪ್ರಶಾಂತತೆಯಿತ್ತು. ಅವರ ಮುಖಭಾವವನ್ನು ನೋಡಿ ಮಾತು ಹೇಗೆ ಪ್ರಾರಂಭಿಸಬೇಕೆಂದು ತಿಳಿಯದೆ ಅತ್ತಿತ್ತ ನೋಡಿದರು. ಅವರ ಕಷ್ಟವನ್ನರಿತವರಂತೆ “ಫಾತಿಮಾಳ ವಿಷಯವನ್ನು ಮಾತನಾಡಲು ಬಂದಿರಾ?” ಎಂದೆನ್ನುತ್ತಾ ತಮ್ಮ ಗಡ್ಡ ನೀವಿಕೊಂಡರು. ಕನ್ನಡಕದೊಳಗಿನ ಕಣ್ಣುಗಳಲ್ಲಿ ಅದೇ ತೇಜಸ್ಸು.

“ಆಕೆ ಹೇಳಿದ್ದು ನಿಜಾನಾ ಸರ್?” ಸಯ್ಯದ್ ಕೇಳಿದ.

“ನಿಮಗೇನನ್ನಿಸುತ್ತೆ”

“ನಮಗನ್ನಿಸೋದು ಮುಖ್ಯ ಅಲ್ಲ ಸರ್. ಅದು ನಿಜಾನೋ ಸುಳ್ಳೋ ಅನ್ನೋದಷ್ಟೇ ಮುಖ್ಯ. ಸುಳ್ಳೆಂದಾದರೆ ನೀವೇ ಬಂದು ಹೇಳಿದರೆ ಒಳ್ಳೆಯದಲ್ವಾ?”

“ನೋಡು ಲೋಕೇಶ್, ಆಕೆ ನಮ್ಮ ಮನೆಗೆ ನೋಟ್ಸ್ ಸಂಬಂಧವಾಗಿ ಬಂದದ್ದು ನಿಜ. ಕಾಫಿ ಕುಡಿದು ಹೋಗು ಎಂದ್ಹೇಳಿದ್ದೂ ನಿಜ. ‘ಇಲ್ಲ ಸರ್ ಮನೆಗೆ ಹೋಗ್ತೀನಿ’ ಎಂದವಳು ಹೊರಟು ಹೋದಳು. ಇಷ್ಟು ಬಿಟ್ಟರೆ ಇನ್ನೇನೂ ನಡೆದಿಲ್ಲ. ನಾನೇನೂ ತಪ್ಪು ಮಾಡಿಲ್ಲ ತಪ್ಪಾಗಿ ಮಾತನಾಡಿಲ್ಲ ಅಂತ ನನಗೆ ಗೊತ್ತು. ‘ನಾನು ಸಾಚಾ’ ಎಂದು ಬೋರ್ಡು ತಗುಲಿಸಿಕೊಂಡು ಎಲ್ಲರ ಮುಂದೆ ನಿಲ್ಲೋದಿಕ್ಕೆ ನನಗಾಗೋದಿಲ್ಲ. ಸ್ಟ್ರೈಕ್ ಮಾಡಬೇಕು ಅಂತಿದ್ದೀರ. ಸಂತೋಷ. ಸತ್ಯ ಯಾರ ಕಡೆಗಿದೆಯೋ ಅವರಿಗೆ ಜಯ ಸಿಕ್ಕುತ್ತೆ” ಅಚಲ ದನಿಯಲ್ಲಿ ಹೇಳಿ ತಮ್ಮ ಮುಂದಿದ್ದ ಪುಸ್ತಕವನ್ನು ಕೈಗೆತ್ತಿಕೊಂಡರು, ಮಾತನಾಡಲು ಇನ್ನೇನು ಉಳಿದಿಲ್ಲ ನೀವಿನ್ನು ಹೋಗಬಹುದು ಎಂಬಂತೆ.

ಮುಂದುವರೆಯುವುದು....

No comments:

Post a Comment