ಡಾ.
ಅಶೋಕ್. ಕೆ. ಆರ್
ಮಾರ್ಕ್ಸ್ ವಾದ ಮತ್ತದರ ವಿವಿಧ ಸರಣಿವಾದಗಳು ಪದೇ ಪದೇ ವಿಫಲವಾದ ನಂತರೂ ಮತ್ತೆ ಮತ್ತೆ ಪ್ರಸ್ತುತವೆನ್ನಿಸುತ್ತಲೇ ಸಾಗುವುದಕ್ಕೆ ಕಾರಣಗಳೇನು? ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ “Religion is opium” ಎಂದು ದಶಕಗಳ ಹಿಂದೆ ಯಾವಗಲೋ ಮಾರ್ಕ್ಸ್ ಹೇಳಿದ್ದ ಮಾತುಗಳು ನೆನಪಾಗದೇ ಇರದು. ‘ಭಿನ್ನ’ ಪಕ್ಷವೆಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಭಾ.ಜ.ಪದ ಭಿನ್ನತೆ ಇಷ್ಟೊಂದು ಅಸಹ್ಯಕರವಾಗಿರಬಲ್ಲದು ಎಂದು ಸ್ವತಃ ಅದರ ಕಾರ್ಯಕರ್ತರೇ ನಿರೀಕ್ಷಿಸಿರಲಿಲ್ಲವೇನೋ?!
ಮಾರ್ಕ್ಸ್ ವಾದ ಮತ್ತದರ ವಿವಿಧ ಸರಣಿವಾದಗಳು ಪದೇ ಪದೇ ವಿಫಲವಾದ ನಂತರೂ ಮತ್ತೆ ಮತ್ತೆ ಪ್ರಸ್ತುತವೆನ್ನಿಸುತ್ತಲೇ ಸಾಗುವುದಕ್ಕೆ ಕಾರಣಗಳೇನು? ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ “Religion is opium” ಎಂದು ದಶಕಗಳ ಹಿಂದೆ ಯಾವಗಲೋ ಮಾರ್ಕ್ಸ್ ಹೇಳಿದ್ದ ಮಾತುಗಳು ನೆನಪಾಗದೇ ಇರದು. ‘ಭಿನ್ನ’ ಪಕ್ಷವೆಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಭಾ.ಜ.ಪದ ಭಿನ್ನತೆ ಇಷ್ಟೊಂದು ಅಸಹ್ಯಕರವಾಗಿರಬಲ್ಲದು ಎಂದು ಸ್ವತಃ ಅದರ ಕಾರ್ಯಕರ್ತರೇ ನಿರೀಕ್ಷಿಸಿರಲಿಲ್ಲವೇನೋ?!
ಮಾತೆತ್ತಿದರೆ ‘ಹಿಂದೂ’ವಾದದ ಬಗ್ಗೆ ಪುಂಖಾನುಪುಂಖವಾಗಿ
ಭಾಷಣ ಮಾಡುವ, ‘ಅಖಂಡ’ ಹಿಂದೂ ರಾಷ್ಟ್ರ ನಿರ್ಮಾಣವೇ ನಮ್ಮ ಗುರಿ ಎಂದು ಚುನಾವಣೆ ಸಮಯದಲ್ಲಿ ಅಬ್ಬರಿಸುವ
ಭಾರತೀಯ ಜನತಾ ಪಕ್ಷ ಮೊದಲಿನಿಂದಲೂ ‘ಹಿಂದೂ’ ಎಂಬ ಧರ್ಮದ ಒಳಗಿನ ಜಾತಿಯೆಂಬ ಅನಿಷ್ಟದ ಬಗ್ಗೆ ಪ್ರಜ್ಞಾಪೂರ್ವಕ
ಮೌನಕ್ಕೆ ಶರಣಾಗುತ್ತಿತ್ತು. ಯಾರಾದರೂ ಜಾತಿಯಾಧಾರಿತ ‘ಹಿಂದೂ’ ಧರ್ಮದ ಬಗ್ಗೆ ಖಂಡನೀಯ ಮಾತುಗಳನ್ನಾಡಿದರೆ
ಅವರನ್ನು ಸ್ಯೂಡೋ ಸೆಕ್ಯುಲರ್ ಎಂದು, ರಾಷ್ಟ್ರದ್ರೋಹಿಯೆಂದು ಪಟ್ಟ ಕಟ್ಟುವಲ್ಲಿ ಭಾ.ಜ.ಪ ಮತ್ತದರ
ಅಂಗಸಂಸ್ಥೆಗಳದು ಎತ್ತಿದ ಕೈ. ‘ನಾವೆಲ್ಲರೂ ಒಂದು ನಾವು ಹಿಂದು’ ಎಂದು ಪ್ರಚಾರ ಮಾಡುತ್ತ ಜನರನ್ನು
ನವ ಬ್ರಾಹ್ಮಣ್ಯದ ಕಡೆಗೆ ಆಕರ್ಷಿತರನ್ನಾಗಿ ಮಾಡಿ ದಲಿತ-ಶೂದ್ರ-ಬ್ರಾಹ್ಮಣ-ಅಬ್ರಾಹ್ಮಣ ಯುವಜನತೆಯಲ್ಲಿ
ಕೋಮುದ್ವೇಷವನ್ನು ಬಿತ್ತುವಲ್ಲಿಯೂ ಭಾ.ಜ.ಪದ ಪಾತ್ರ ಹಿರಿದು.
ಜಾತಿ ಸಮಸ್ಯೆಯನ್ನು ಗಮನಿಸದೆ ಜಾತಿಯ ಅಸ್ತಿತ್ವವನ್ನೇ
ನಿರಾಕರಿಸುವ ನಾಟಕವಾಡುತ್ತಿದ್ದ ಭಾ.ಜ.ಪ ಇಂದು ಜಾತಿ ಆಧಾರಿತ ಭಿನ್ನಮತೀಯ ಚಟುವಟಿಕೆಯ ಕೇಂದ್ರವಾಗಿಬಿಟ್ಟಿದೆ!
ಎಲ್ಲ ರಾಜಕೀಯ ಪಕ್ಷಗಳು, ಬಹುತೇಕ ಎಲ್ಲ ಚುನಾವಣೆಗಳು ನಡೆಯುವುದು ಜಾತಿ ಆಧಾರಿತವಾಗಿಯೇ. ಆ ಪ್ರಾಂತ್ಯದ
ಬಹುಸಂಖ್ಯಾತ ಜಾತಿಯ ಬೆಂಬಲಿತ ಅಭ್ಯರ್ಥಿಯೇ ಹೆಚ್ಚಿನ ಬಾರಿ ಗೆಲುವು ಸಾಧಿಸುವುದು. ಮತದಾರನ ಸುಪ್ತ
ಮನಸ್ಸಿನಲ್ಲಿ ಅಡಕವಾಗಿದ್ದ ಈ ಜಾತಿ ರಾಜಕಾರಣವನ್ನು ಬಡಿದೆಬ್ಬಿಸಿದ ಕೀರ್ತಿ ಮಾತ್ರ ಭಾ.ಜ.ಪಕ್ಕೆ
ಸಲ್ಲಬೇಕು. ಕರ್ನಾಟಕವೆಂದರೆ ಲಿಂಗಾಯತ ಮತ್ತು ಒಕ್ಕಲಿಗರ ನಡುವಿನ ರಣರಂಗ ಎಂದು ಬಿಂಬಿಸಿದ ಕೀರ್ತಿ
ಕೂಡ ಭಾ.ಜ.ಪ ಮತ್ತು ಕೊಂಚ ಮಟ್ಟಿಗೆ ಜೆ.ಡಿ.ಎಸ್ ಗೆ ಸೇರಬೇಕು.
ಇವರಿಗೆ ಜಾತಿಯ ನೆನಪಾಗುವುದ್ಯಾವಾಗ?
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಯಡ್ಡಿಯ ದಶಕಗಳ
ರಾಜಕೀಯ ಜೀವನ, ಕುಮಾರಸ್ವಾಮಿ ಮಾಡಿದ ವಚನಭಂಗ ಮೂಲ ಕಾರಣವೇ ಹೊರತು ಯಡ್ಡಿಯ ಜಾತಿಯಲ್ಲ. ಗೆದ್ದಾಗ
ಜಾತಿಯ ಬಗ್ಗೆ ಮಾತನಾಡಲಿಲ್ಲ. ಕೋಟಿ ಕೋಟಿ ಅಕ್ರಮವಾಗಿ ದೋಚಿದಾಗ ಜಾತಿಯ ನೆನಪಾಗಲಿಲ್ಲ, ಕೊನೆಗೆ ಅನೈತಿಕ
ರಾಜಕಾರಣ ಮಾಡುವಾಗಲೂ ಜಾತಿಯ ನೆನಪಾಗಲಿಲ್ಲ. ಜಾತಿಯ ನೆನಪಾಗಿದ್ದು ವಿರೋಧ ಪಕ್ಷದವರು, ಇತರರು ಇವರ
ಭ್ರಷ್ಟಾಚಾರವನ್ನು ಬಹಿರಂಗಗೊಳಿಸಲಾರಂಭಿಸಿದಾಗ! ‘ಅಯ್ಯಯ್ಯೋ ನಾನು ಲಿಂಗಾಯತ ಅಂತ ತುಳೀತಾವ್ರೆ ನೋಡ್ರಪ್ಪ’
ಎಂದು ಮಠದಂಗಳದಲ್ಲಿ ಗೋಳಾಡಿದರು. ಲಿಂಗಾಯತ ಮಠಾದೀಶರೂ ಜೈಲಿನವರೆಗೂ ಹೋಗಿ ಕ್ಷೇಮ ವಿಚಾರಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಕನಸು – ಆದರ್ಶಗಳನ್ನು ಹಂಚಿಕೊಂಡ ಗೆಳೆಯನೊಬ್ಬ ಕೂಡ “ನಿಮ್ಮ ದೇವೇಗೌಡ ಕುಮಾರಸ್ವಾಮಿ
ದುಡ್ಡು ಮಾಡಿಲ್ವ? ನಮ್ಮ ಯಡ್ಡಿ ದುಡ್ಡು ಹೊಡೆದರೆ ತಪ್ಪೇನು? ಯಡ್ಡಿ ಮತ್ತೆ ಸಿಎಮ್ಮಾಗಬೇಕು” ಎಂದು
ಹೇಳಿ ನೀನು ಒಕ್ಕಲಿಗ [ಒಂದು ದಿನಕ್ಕೂ ನೇಗಿಲು ಹಿಡಿದು ಉಳುಮೆ ಮಾಡದ ನಾನು ಯಾವ ರೀತಿಯಿಂದ ಒಕ್ಕಲಿಗ?!]
ನಾನು ಲಿಂಗಾಯತ ಎಂದು ನೆನಪಿಸಿದ್ದ.
ಜಾತಿ ಮೇಲೆ ಅಷ್ಟೊಂದು ‘ಅಭಿಮಾನ’ವಿದ್ದ ಯಡಿಯೂರಪ್ಪ
ಹೊಸ ಮುಖ್ಯಮಂತ್ರಿಯನ್ನಾರಿಸುವಾಗ ತಮ್ಮ ‘ಜಾತಿ’ಯ ಜಗದೀಶ್ ಶೆಟ್ಟರರನ್ನು ಬೆಂಬಲಿಸಲಿಲ್ಲ! ಬೆಂಬಲಿಸಿ
ಗೆಲ್ಲಿಸಿದ್ದು ‘ಒಕ್ಕಲಿಗರ’ ಸದಾನಂದಗೌಡರನ್ನು! ಜಾತಿ ಮರೆತು ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ
ಅವರ ‘ಜಾತ್ಯತೀತ’ ಮನೋಭಾವ ಕಾರಣವಲ್ಲ, ನನ್ನ ಮಾತು ಕೇಳ್ಕೊಂಡು ಬಿದ್ದಿರ್ತಾನೆ ಎಂಬ ಮನೋಭಾವ. ಆದರೆ
ಆಗಿದ್ದೇ ಬೇರೆ. ಗುರುವಿಗೇ ತಿರುಮಂತ್ರವಾಕಿದ ಸದು ಅವರ ಮಾತು ಕೇಳಲಿಲ್ಲ. ಗೊಂದಲಗೊಂಡ ಯಡ್ಡಿ ಕೋಪತಾಪ
ಪ್ರದರ್ಶಿಸಲಾರಂಭಿಸಿದಾಗ ಸದು ಮೊರೆ ಹೋದದ್ದು ಜಾತಿಗೆ! ‘ಒಕ್ಕಲಿಗರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾದೆ’
ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದರು. ಲಿಂಗಾಯತರನ್ನು ಒಕ್ಕಲಿಗರು ತುಳೀತಾರ್ವೆ ಅನ್ನೋ ಯಡ್ಡಿಯ ಮಾತು
ಒಂದು ವೃತ್ತ ಪೂರ್ಣಗೊಳಿಸಿ ಒಕ್ಕಲಿಗರನ್ನು ಲಿಂಗಾಯತರು ತುಳೀತಾರ್ವೆ ಅನ್ನೋ ಮಾತಾಯಿತು. ಲಿಂಗದೋರಿಗಿಂತ
ನಾವೇನು ಕಡಿಮೆ ಎಂದ್ಹೇಳುತ್ತ ಒಕ್ಕಲಿಗ ಮಠಾಧಿಪತಿಗಳೂ ಖಾವಿ ಪಂಚೆ ಕೊಡವಿಕೊಳ್ಳುತ್ತಾ ‘ಫೀಲ್ಡಿಗಿಳಿದರು’.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಡ್ಡಿಗಾಗಲೀ,
ಸದುಗಾಗಲೀ ಜಾತಿಯ ನೆನಪಾಗಿದ್ದು ಅಧಿಕಾರ ಕಳೆದುಕೊಳ್ಳುವ ಘಳಿಗೆಯಲ್ಲಿ ಮಾತ್ರ. ಜಾತಿ ಸಮುದಾಯದ ಏಳಿಗೆಯ
ಬಗ್ಗೆ ಮಾತನಾಡಲಿಲ್ಲ, ಆ ಸಮುದಾಯದ ಜನರ ಕಷ್ಟಸುಖದ ಬಗ್ಗೆ ವಿಚಾರಿಸಲಿಲ್ಲ. ಆದರೆ ಜಾತಿ ಹೆಸರಿಡಿದು
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ಹಿಂದೆ ಬೀಳಲಿಲ್ಲ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ
ಜನ ‘ನಮ್ಮ ನಾಯಕ’ರಷ್ಟೇ ನಾವೂ ನಿಕೃಷ್ಟರು ಎಂದು ನಿರೂಪಿಸುತ್ತಿರುವುದು ಕರ್ನಾಟಕದ ಸಾಂಸ್ಕೃತಿಕ,
ರಾಜಕೀಯ ಅಧಃಪತನವೆಂಬುದರಲ್ಲಿ ಸಂಶಯವಿಲ್ಲ.
ಈ ಲಿಂಗದೋರು ಮತ್ತು ಗೌಡ್ರು ಗದ್ದಲದಲ್ಲಿ ಉಳಿದ
ಜಾತಿ, ಧರ್ಮಗಳವರ ಪಾಡೇನು? ಕನ್ನಡಿಗರ ಪಟ್ಟಿಯಲ್ಲಿ ಎಲ್ಲ ಜಾತಿ ಧರ್ಮದವರೂ ಇದ್ದಾರಲ್ಲವೇ?!
No comments:
Post a Comment