'ಆ ಅಂಗಡಿ' ಮತ್ತು 'ಈ ಅಂಗಡಿ' ನಡುವೆ...
ಫೇಸ್ ಬುಕ್ಕಿನಲ್ಲಿ ಕೊನೆಯ ಕಂತೆಂಬಂತೆ ವ್ಯಂಗ್ಯಚಿತ್ರಕಾರ ಪಿ ಮಹಮ್ಮದ್ ರವರು ಪ್ರಜಾವಾಣಿ ತೊರೆಯುತ್ತಿರುವ ಸಂಗತಿ ತಿಳಿಸಿದ್ದಾರೆ! ಪ್ರಜಾವಾಣಿಯನ್ನು ಆ ಅಂಗಡಿಯೆಂದು ಕರೆಯುತ್ತ ಯಡಿಯೂರಪ್ಪನವರನ್ನು ಚೂಪು ಮೀಸೆಯ ಸರದಾರನೆಂದು ಕರೆಯುತ್ತ ಕಾರಣಗಳನ್ನು ಹೇಳಿದ್ದಾರೆ. ಯಾವ ಪಕ್ಷಕ್ಕೂ ಸೇರಿದ್ದಲ್ಲವೆಂಬ ಭಾವನೆ ಮೂಡಿಸಿದ್ದ 'ಕರ್ನಾಟಕದ ವಿಶ್ವಾಸರ್ಹ ದಿನಪತ್ರಿಕೆಯ' ವಿಶ್ವಾಸಾರ್ಹತೆಯನ್ನು ಬೆತ್ತಲು ಮಾಡಿದ್ದಾರೆ. ಖುಷಿಯ ಸಂಗತಿಯೆಂದರೆ ಅವರು ಈ ಅಂಗಡಿಯನ್ನು ಸೇರಲಿದ್ದಾರೆ. 'ನಂಬರ್ ಒನ್' ಈ ಅಂಗಡಿ ವಿಜಯ ಕರ್ನಾಟಕವೇ ತಾನೇ?!!
|
ಪಿ. ಮಹಮ್ಮದ್ |
ನಿನ್ನೆ 'ಕೆಂಡ ಸಂಪಿಗೆ'ಯ ಅಬ್ದುಲ್ ರಶೀದ್ ಫೋನ್ ಮಾಡಿ ಹಟಾತ್ತನೆ ಒಂದು ಪ್ರಶ್ನೆ
ಕೇಳಿದರು-'ನಿಮಗೆ 'ಆ ಅಂಗಡಿ'ಯಲ್ಲಿ ಬಹಳ ಕಡಿಮೆ ಸಂಬಳ ಸಿಗುತ್ತಿತ್ತಾ, ಮಹಮ್ಮದ್?'
ಎಂದು. ಒಂದು ಕ್ಷಣ ನನಗೆ ಅವರ ಪ್ರಶ್ನೆಯ ತಲೆ, ಬುಡ ಒಂದೂ ಹೊಳೆಯದೆ ತಬ್ಬಿಬ್ಬಾದೆ.
ನಂತರ ಅವರೇ, 'ಅಲ್ಲಾ, ನಿಮ್ಮ ಫೇಸಬೂಕ್ ಪೋಸ್ಟ್-ಗಳಿಂದಾಗಿ ಆ ಇಂಪ್ರೆಶನ್ ಬಂತು!'
ಅಂದರು.
ಇದೇ ನನ್ನ ಸಮಸ್ಯೆ. ನನ್ನ ವಯ್ಯಕ್ತಿಕ ವಿಷಯಗಳ ಬಗ್ಗೆ ಹೇಳಲು
ಹೊರಟಾಗ ಸಫಲ ಆಗುವುದು ಕಡಿಮೆ. ಆದರೂ ಇದು ನನ್ನ 'ವರ್ಚಸ್ಸಿನ' ಪ್ರಶ್ನೆ
ಆಗಿರುವುದರಿಂದ ಇಲ್ಲೊಂದು ಕಟ್ಟ ಕಡೆಯ ಪ್ರಯತ್ನವನ್ನು ಮಾಡುತ್ತೇನೆ!
ನಾನು
'ಆ ಅಂಗಡಿ'ಯ ನನ್ನ ನೌಕರಿಗೆ ರಾಜೀನಾಮೆ ನೀಡಿದ ಮರುದಿನದಿಂದಲೇ 'ಮಹಮ್ಮದ್ ಒಂದು ಲಕ್ಷದ
ವೇತನಕ್ಕಾಗಿ 'ಈ ಅಂಗಡಿ'ಯನ್ನು ಸೇರುತ್ತಿದ್ದಾರಂತೆ' ಎಂಬ ಗಾಳಿಸುದ್ದಿ 'ಸುದ್ದಿ
ಅಂಗಡಿ'ಗಳಲ್ಲಿ ಹರಿದಾಡ-ತೊಡಗಿ, ನನ್ನ ಕಿವಿಗಳಿಗೂ ತಲುಪಿದಾಗ ಒಂದು ಕ್ಷಣ ನಾನು ಹೆಮ್ಮೆ
ಪಟ್ಟದ್ದು ನಿಜ, ನನ್ನ ಮಾರ್ಕೆಟ್ ವ್ಯಾಲ್ಯೂ 'ಲಕ್ಷ' ತಲುಪಿದೆಯಲ್ಲ ಎಂದು! ದುಃಖದ
ಸಂಗತಿಯೇನೆಂದರೆ ನಾನು ಅಷ್ಟು 'ಡಿಮ್ಯಾಂಡ್ ' ಮಾಡಲಿಲ್ಲ ಎನ್ನುವುದು!
ಹಾಗಾದರೆ ಸಾಮಾನ್ಯ ಓದುಗರು ಹೇಳುವಂತೆ ನಾನೊಂದು 'ಅಸ್ಸೆಟ್' ಆಗಿದ್ದ 'ಆ ಅಂಗಡಿ'ಯನ್ನು ತೊರೆದದ್ದು ಯಾಕೆ?
ಇದೆಲ್ಲ ಶುರುವಾದದ್ದು ಸುಮಾರು ಎರಡೂವರೆ ವರ್ಷಗಳ ಹಿಂದೆ. ರಾಜ್ಯದ ಅತ್ಯಂತ ಪ್ರಭಾವಿ
ರಾಜಕಾರಣಿಗಳಲ್ಲಿ ಒಬ್ಬರಾದ 'ಚೂಪು ಮೀಸೆ ಸರದಾರ(ಚೂಮೀಸ)'ನ ಕುರಿತು ನಾನು ರಚಿಸಿದ
ಕೆಲವು ಟೀಕಾಚಿತ್ರಗಳೇ ಇದಕ್ಕೆಲ್ಲಾ ಮೂಲ ಕಾರಣ. ಅವುಗಳಲ್ಲಿ ಕೆಲವಂತೂ ಪ್ರಕಟಣೆಯ
ಬೆಳಕನ್ನೇ ಕಾಣಲಿಲ್ಲ. ಅವಹೇಳನಕಾರಿ ಎಂದು ಕರೆಸಿಕೊಂಡು 'ಕ ಬು' ಸೇರಿದವು. ಆದರೆ ಮಾನ್ಯ
'ಚೂಮೀಸ' ತನ್ನ ಘನಂದಾರಿ ಕೆಲಸ-ಕಾರ್ಯಗಳಿಂದಾಗಿ ಸೆರೆಮನೆ ಸೇರಬೇಕಾಗಿ ಬಂದಾಗ ನಾನು
ರಚಿಸಿದ ಚಿತ್ರವಂತೂ 'ದಿಸ್ ಈಸ್ ಟೂ ಮಚ್' ಅಂತ ಅನ್ನಿಸಿರಬೇಕು. ಅದನ್ನು ನೋಡಿ ಮಾಲೀಕರು
ಸಿಕ್ಕಾಪಟ್ಟೆ ರೇಗಾಡಿದರು ಎಂದು ಮಾಲೀಕರ ಪರವಾಗಿ 'ದಂಡಾಧಿಪತಿ' ಅರ್ಥಾತ್
'ಮ್ಯಾನೇಜರ್' ನನಗೆ ತಮ್ಮ ಟಿಪಿಕಲ್ ತಣ್ಣಗಿನ ಧ್ವನಿಯಲ್ಲಿ ಹೇಳಿದರು. ಪೊಲಿಟಿಕ್ಸ್
ಬದಲು ಚಿನ್ನಿದಾಂಡು, ಕುಂಟಾಬಿಲ್ಲೆ ಇತ್ಯಾದಿ ಮಹತ್ವದ ವಿಷಯಗಳ ಬಗ್ಗೆ ಚಿತ್ರಗಳನ್ನು
ರಚಿಸಿ ಜನತೆಯನ್ನು ರಂಜಿಸಬಹುದು ಎಂದು ಸಲಹೆಯನ್ನೂ ನೀಡಿದರು!
ನನಗೆ ಆ ಕ್ಷಣ
ನನ್ನ ವ್ರತ್ತಿಬದುಕಿನಲ್ಲಿ ಧುತ್ತನೆ ಕತ್ತಲೆ ಮುಸುಕಿದ ಅನುಭವ. ನನ್ನ ಚಿತ್ರಗಳಲ್ಲಿ
ಅಂತ ಮಹಾ ಅಪರಾಧ ಏನು ಮಾಡಿದ್ದೇನೆ ಎಂದು ಎಷ್ಟು ತಲೆ ಕೆರೆದು-ಕೊಂಡರೂ ಉತ್ತರ
ಸಿಗಲಿಲ್ಲ. ಮಣ್ಣಿನಿಂದ ಎದ್ದು-ಬಂದವರು, ಹಾಲಿನಿಂದ ಬಂದವರು, ಗಣಿಯಿಂದ ಎದ್ದವರು ಹೀಗೆ
ಥರಾವರಿ ಪುಡ್ಹಾರಿಗಳ ಬಗ್ಗೆ ಚಿತ್ರಗಳನ್ನು ರಚಿಸುತ್ತೇನೆ. ಈ 'ಚೂಮೀಸ'ರ ಬಗ್ಗೆ ಮಾತ್ರ
ಯಾಕೆ ಇಂಥಾ ವಿಶೇಷ ಮಮತೆ ಎಂದು ಕೊನೆಗೂ ನನಗೆ ಅರ್ಥ ಆಗಲಿಲ್ಲ. ನಂತರದ ದಿನಗಳಲ್ಲಿ
'ಚೂಮೀಸ' ಬಗ್ಗೆ ಚಿತ್ರಗಳನ್ನು ಕಡಿಮೆ ಮಾಡಿದೆ. ಆದರೆ ಸಂಪೂರ್ಣ ನಿಲ್ಲಿಸಲಿಲ್ಲ.
ಈ ನಡುವೆ ನಾನು 'ಅಂಗಡಿ'ಯ ಮಂಗಳೂರು ಶಾಖೆಗೆ ವರ್ಗ ಮಾಡಿಸಿ-ಕೊಂಡೆ. ಅಲ್ಲಿ ನನಗೆ
ಬೇಕಾದ ಸೌಕರ್ಯಗಳು ಯಾವುದೂ ಇರಲಿಲ್ಲ. ನನ್ನ ಆವಶ್ಯಕ ವಸ್ತುಗಳ ಪಟ್ಟಿ-ಯೊಂದನ್ನು
ತಯಾರಿಸಿ ಮಾಲೀಕರಿಗೂ ಒಂದು ಪ್ರತಿಯನ್ನು 'ಮ್ಯಾನೇಜರ್'ಗೂ ಕಳಿಸಿದೆ. ಆದರೆ ವಾರ,
ತಿಂಗಳು, ವರ್ಷ ಕಳೆದರೂ ನನ್ನ ವಸ್ತುಗಳು ಬರಲಿಲ್ಲ. ಅಲ್ಲಿದ್ದ ಹರುಕು-ಮುರುಕು
ಸೌಕರ್ಯವನ್ನು ಬಳಸಿಕೊಂಡು ಹೇಗೋ ನನ್ನ ಕೆಲಸ ಮಾಡುತ್ತಿದ್ದೆ. ಕೊನೆಗೊಂದು ದಿನ
'ಮ್ಯಾನೇಜರ್'ಗೆ ಫೋನ್ ಮಾಡಿ ಆ ಬಗ್ಗೆ ವಿಚಾರಿಸಿದೆ. ಅವರು ಉಡಾಫೆಯಿಂದ 'ಬರುತ್ತೆ,
ಬರುತ್ತೆ..ಟೇಬಲ್ಲಿಗೆ ಎಂಟು ಸಾವಿರ ಆಗುತ್ತೇರೀ..ಕಂಪೆನಿ ಹತ್ರ ಅಷ್ಟೊಂದು ದುಡ್ಡು
ಬೇಕಲ್ಲಾ!' ಎಂದು ಹೇಳಿದಾಗ ಒಮ್ಮೆಲೇ ನನಗೆ ನಾನು ಕೆಲಸ ಮಾಡುತ್ತಿರುವುದು ಒಂದು 'ಬಡತನ
ರೇಖೆ ಕೆಳಗಿನ' ಸಂಸ್ಥೆಯಲ್ಲಿ ಎಂಬ ಜ್ಞಾನೋದಯವಾಯ್ತು. ನಂತರ ನಾನು ಈ ವಿಷಯವನ್ನು
ಮಾಲೀಕರ ಗಮನಕ್ಕೆ ತರುವ ಪ್ರಯತ್ನ ಮಾಡಿದರೆ ಅದಕ್ಕೆ ದಂಡಾಧಿಪತಿ ಅರ್ಥಾತ್
'ಮ್ಯಾನೇಜರ್'ನಿಂದ ತೀವ್ರ ಆಕ್ಷೇಪಣೆ...'ಯಾವುದೇ ಸಮಸ್ಯೆ ಇದ್ದರೂ 'ಮ್ಯಾನೇಜರ್'
ಲೆವೆಲ್ನಲ್ಲೇ ಇತ್ಯರ್ಥ-ಗೊಳಿಸಬೇಕೆಂದು ಮಾಲೀಕರು ಹುಕುಂ ಮಾಡಿದ್ದಾರೆ' ಎಂದರು.
ಇಲ್ಲಿ ಇನ್ನೊಂದು ವಿಷಯ. ನಾನು 'ಆ ಅಂಗಡಿ'ಯನ್ನು ಸೇರಿದಾಗ ಅವರ ಬಳಗಕ್ಕೆ ಸೇರಿದ
ಇಂಗ್ಲಿಶ್ 'ಅಂಗಡಿ'ಗೂ ನಿಯಮಿತವಾಗಿ ಸೇವೆ(ಪುಕ್ಕಟೆ)ಯನ್ನು ಸಲ್ಲಿಸಬೇಕೆಂದು ನನಗೆ
ಮೌಖಿಕ-ವಾಗಿ ಸೂಚಿಸಲಾಗಿತ್ತು. ಹಾಗೆ ಇಂಗ್ಲಿಶ್ 'ಅಂಗಡಿ'ಗೂ ನನ್ನ ಟೀಕಾಚಿತ್ರಗಳನ್ನು
ರಚಿಸಿ ಕೊಡುತ್ತಿದ್ದೆ. ಹೀಗೆ ಸುಮಾರು ವರ್ಷ ನಡೀತು. ಒಂದು ದಿನ ಅದೇ ಬಳಗಕ್ಕೆ ಸೇರಿದ
'ಗೂಡಂಗಡಿ'ಯ ಒಬ್ಬ ನೌಕರ ನನಗೊಂದು ಸುದ್ದಿ ತಿಳಿಸಿದ. ಅದೇನು ಅಂದರೆ ಇಂಗ್ಲಿಶ್ ಅಂಗಡಿಯ
ಮಾಲೀಕರಿಗೆ ನನ್ನ ಬಗ್ಗೆ ಅಸಮಾಧಾನವಿದೆ ಎಂದು ಹೇಳಿದ. ನನ್ನ ಚಿತ್ರಗಳ ಬಗ್ಗೆಯೇ
ಇರಬಹುದು ಎಂದು ಆತ ನನಗೆ ಹೇಳಿದ. ಈ ಇಂಗ್ಲಿಶ್ ಅಂಗಡಿ ಮಾಲೀಕ ಸಿಕ್ಕಾಪಟ್ಟೆ ಗರಂ
ಆಸಾಮಿ. ಆತ 'ಅಂಗಡಿ'ಗೆ ಬಂದರೆ ಸುಮಾರು ನೌಕರರ ಪ್ಯಾಂಟ್ ಒದ್ದೆಯಾಗುತ್ತಿದ್ದುದೂ ಉಂಟು!
ಯಾವ ಕ್ಷಣದಲ್ಲಿ ಎಂಥಾ ತೀರ್ಮಾನ ತೆಗೆದು-ಕೊಳ್ಳುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ.
ಈ ಎಲ್ಲ ಕಾರಣ-ಗಳಿಂದಾಗಿ ನನ್ನ ತಲೆಯ ಮೇಲೊಂದು ಕತ್ತಿ ತೂಗುತ್ತಿರುವ ಅನುಭವ
ನನಗಾಗತೊಡಗಿತು.(ನನ್ನ ಹಲವಾರು ಚಿತ್ರಗಲ್ಲಿ ತಲೆ ಮೇಲೆ ಕತ್ತಿ ತೂಗುವುದನ್ನು
ಚಿತ್ರಿಸಿದ್ದೆ.) ಒಂದು ದಿನ ಇಂಗ್ಲಿಶ್ 'ಅಂಗಡಿ'ಯ ಒಬ್ಬ ನೌಕರ ಫೋನ್ ಮಾಡಿ ಇನ್ನು
ಮುಂದೆ ಅವರಿಗೆ ನನ್ನ ಸೇವೆಯ ಅಗತ್ಯ ಇಲ್ಲವೆಂದು ಹೇಳಿದ. ಅದನ್ನು ಕೇಳಿ ನನಗೆ ಸಂತೋಷವೇ
ಆಯ್ತು, ಬಿಟ್ಟಿ ಸೇವೆಯ ಹೊರೆ ಮುಗೀತಲ್ಲ ಎಂದು. ಆದರೆ ಕ್ರಮೇಣ ನನ್ನ 'ಅಂಗಡಿ'ಯವರೂ
ಹಾಗೆ ಹೇಳಿಬಿಟ್ಟರೆ ಏನಪ್ಪಾ ಮಾಡುವುದು' ಎಂಬ ಆತಂಕ ನನ್ನನ್ನು ಕಾಡತೊಡಗಿತು.
ನನ್ನ ಈ ಎಲ್ಲಾ ಭಾವನೆಗಳನ್ನು ಮಾಲೀಕರ ಹತ್ತಿರ ಹೇಳಿಕೊಳ್ಳ-ಲಿಕ್ಕೆ ಕೆಲವು ಸರ್ತಿ
ಪ್ರಯತ್ನ ಮಾಡಿದೆ. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇಲ್ಲಿ ನಾನೊಬ್ಬ
ಅನಪೇಕ್ಷಿತ ಅಥಿತಿ-ಯಾಗಿರಬೇಕೆಂಬ ನನ್ನ ಅನುಮಾನ ಬಲವಾಗುತ್ತಿತ್ತು. ಅವರೇ ನನ್ನನ್ನು
'ಅಂಗಡಿ'ಯಿಂದ ಹೊರಹಾಕುವ ಮುನ್ನ ನಾನೇ ಜಾಗ ಖಾಲಿ ಮಾಡುವುದು ಒಳ್ಳೆಯದು ಎಂದು
ಯೋಚಿಸ-ತೊಡಗಿದ್ದೆ. ಹೊಟ್ಟೆಪಾಡಿಗೆ ಏನಾದರೂ ಯಾಪಾರ-ಗೀಪಾರ ಮಾಡಬಹುದು ಎಂಬ ಧೈರ್ಯ
ಇತ್ತು. ನನಗೆ ಟೀಕಾ-ಚಿತ್ರಗಳನ್ನು ರಚಿಸುವುದರಲ್ಲಿ ಆಸಕ್ತಿ ದಿನದಿಂದ ದಿನಕ್ಕೆ
ಕಡಿಮೆಯಾಗುತ್ತಿತ್ತು. ಈ ವೃತ್ತಿಗೆ ದೊಡ್ಡ ಸಲಾಂ ಹೇಳುವ ಸಿಧ್ಧತೆ
ಮಾಡಿಕೊಳ್ಳುತ್ತಿದ್ದೆ.
ಆದರೆ, ಕಾಕತಾಳೀಯ! ಇದೇ ಸಮಯದಲ್ಲಿ ನಾಡಿನ 'ನಂಬರ್
ಒನ್' ಅಂಗಡಿಯವರು ನನ್ನನ್ನು ಸಂಪರ್ಕಿಸಿ 'ನಮ್ಮಲ್ಲಿಗೆ ಬರ್ತೀರಾ?' ಎಂದು ಕೇಳಿದರೆ
ನನ್ನ ಸ್ಥಿತಿ ಹೇಗಿರಬಹುದು, ಕಲ್ಪಿಸಿಕೊಳ್ಳಿ. ಕೂಡಲೇ ಅವರ ಆಹ್ವಾನವನ್ನು
ಒಪ್ಪಿಕೊಂಡು-ಬಿಟ್ಟೆ, ಅವರು ಹೇಳಿದ ವೇತನಕ್ಕೆ. ಮುಂದಿನ ವಾರ ಅಲ್ಲಿ
ಸೇರಿಕೊಳ್ಳುತ್ತಿದ್ದೇನೆ.
ಈಗ ನೀವು ನನ್ನನ್ನು ಕೇಳಬಹುದು..'ನನಗೆ ನಾಡಿನ
ಅತ್ಯಂತ ವಿಶ್ವಾಸಾರ್ಹವಾದ 'ಆ ಅಂಗಡಿ'ಯಲ್ಲಿ ಆದ ಅನುಭವಗಳು ಈ 'ನಂಬರ್ ಒನ್'
ಅಂಗಡಿಯಲ್ಲಿ ಪುನರಾವರ್ತನೆ ಆಗುವುದಿಲ್ಲ ಏನು ಗ್ಯಾರಂಟಿ' ಎಂದು. ಈ ಪ್ರಶ್ನೆ ನನ್ನಲ್ಲೂ
ಇದೆ. ಆದರೆ 'ನಂಬರ್ ಒನ್' ಅಂಗಡಿಗೆ ಹೊಸ 'ಮ್ಯಾನೇಜರ್' ಬಂದಿದ್ದಾರೆ. ತುಂಬಾ
ಒಳ್ಳೆಯವರು ಎಂದು ಎಲ್ಲರೂ ಹೇಳುತ್ತಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸ ಇದೆ. ಎಲ್ಲಾ
ಒಳ್ಳೆಯದಾಗುತ್ತದೆ ಎಂಬ ಹಾರೈಕೆಯೊಂದಿಗೆ...
- ಪಿ. ಮಹಮ್ಮದ್.
TADAVAAGI ODUTTIDEENE. BUT NICE
ReplyDelete