Jul 22, 2012

ಪ್ರತಿ ಓದಿನಲ್ಲೂ ಹೊಸ ಹೊಳಹು ನೀಡುವ “ಕರ್ವಾಲೋ”


ಡಾ.ಅಶೋಕ್. ಕೆ. ಆರ್.
ತೇಜಸ್ವಿಯ ಪುಸ್ತಕಗಳೇ ಹಾಗೆ. ವಿಡಂಬನೆ, ಹಾಸ್ಯ ಪ್ರಸಂಗಗಳು, ಒಂದಷ್ಟು ವ್ಯಂಗ್ಯ – ಇವಿಷ್ಟೂ ಇದ್ದ ಮೇಲೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆಯೆನ್ನುವುದರಲ್ಲಿ ಸಂಶಯವಿಲ್ಲ. ಕೊನೆಯ ಹಾಳೆ ಮಗುಚಿ ನಕ್ಕು ಪುಸ್ತಕವನ್ನು ಕಪಾಟಿಗೆ ಸೇರಿಸಿಯೋ ಅಥವಾ ಸ್ನೇಹಿತರಿಗೆ ಎರವಲು ಕೊಟ್ಟ ನಂತರ ತೇಜಸ್ವಿಯವರ ‘ಕಥೆ’ ಕಾಡಲಾರಂಭಿಸುತ್ತದೆ! ಉಹ್ಞೂ, ನಕ್ಕು ಮರೆಯಲಷ್ಟೇ ಈ ಕೃತಿ ಸೀಮಿತವಾಗಿಲ್ಲ. ನನ್ನರಿವಿಗೆ ಬಾರದ ತಿರುಳಿದೆ ಇದರಲ್ಲಿ ಎಂದೆನ್ನಿಸಲಾರಂಭಿಸುತ್ತದೆ. ಮತ್ತೊಮ್ಮೆ ಓದಲು ತೊಡಗಿ ಒಂದಷ್ಟನ್ನು ತಿಳಿದುಕೊಂಡಂತೆ ಭಾವಿಸಿ ಪುಸ್ತಕ ಮಡುಚಿಟ್ಟರೆ ಮತ್ಯಾವುದೋ ಪಾತ್ರ ಯಾವುದೋ ಸಾಲುಗಳು ನೆನಪಿಗೆ ಬಂದು ಪುನಃ ಪುನಃ ಓದಲು ಪ್ರೇರೇಪಿಸುತ್ತದೆ.

          ತೇಜಸ್ವಿಯವರ ಖ್ಯಾತ ಪುಸ್ತಕಗಳಲ್ಲೊಂದು – ಕರ್ವಾಲೋ. ಕರ್ವಾಲೋ ಎಂಬ ವಿಜ್ಞಾನಿ ಕೇಂದ್ರಬಿಂದುವಾಗಿರುವ ಕಥೆ. ಲೇಖಕ, ಮಂದಣ್ಣ, ಪ್ಯಾರ, ಬಿರ್ಯಾನಿ ಕರಿಯಪ್ಪ, ಪ್ರಭಾಕರ ಕೊನೆಗೆ ಲೇಖಕನ ಮುದ್ದಿನ ನಾಯಿ ಕಿವಿ ಕೂಡ ನಮಗೆ ಆಪ್ತವಾಗುತ್ತ ಸಾಗುತ್ತಾರೆ. ಹಾರುವ ಓತಿಕ್ಯಾತವನ್ನು ಹುಡುಕಲೊರಡುವ ಈ ತಂಡದೊಡನೆ ನಮ್ಮ ಮನಸ್ಸೂ ಕಾಡಿನೊಳಗೆ ಯುಗಾಂತರಗಳ ಹಿಂದಕ್ಕೆ ಪಯಣಿಸುತ್ತದೆ. ಒಂದು ‘ಸೀರಿಯಸ್’ ವೈಜ್ಞಾನಿಕ ಕೃತಿಯಾಗಬಿಡಬಹುದಾಗಿದ್ದ ಕಥೆಗೆ ಪೂರ್ಣಚಂದ್ರ ತೇಜಸ್ವಿಯವರ ಮಾಂತ್ರಿಕ ಸ್ಪರ್ಷ ಸಿಕ್ಕಿದೆ. ಇದು ಕೇವಲ ವಿಜ್ಞಾನಿ ಮತ್ತವನ ಹುಡುಕಾಟದ ಕಥೆಯಲ್ಲ. ಮಲೆನಾಡಿನ ಜೀವನದ, ಜೇನುಸಾಕಣಿಕೆಯ, ಕಳ್ಳಭಟ್ಟಿಯ, ವ್ಯವಸ್ಥೆಯ ಅವ್ಯವಸ್ಥೆಯ, ತತ್ವ ವಿಚಾರಗಳ ಅನ್ವೇಷಣೆಯ ಕಥೆ. ವಿಜ್ಞಾನಿ ಕರ್ವಾಲೋಗೆ ಹಳ್ಳಿಯೊಂದರ ‘ಗಮಾರನೆಂದೇ’ ಕರೆಯಲ್ಪಡುವ ಮಂದಣ್ಣ ಶ್ರೇಷ್ಠ ಪ್ರಕೃತಿತಜ್ಞನಂತೆ ಗೋಚರಿಸುತ್ತಾನೆ! ಮಂದಣ್ಣನಿಗೆ ಕರ್ವಾಲೋ ಕೊಡುವ ಗೌರವವನ್ನು ಗಮನಿಸಿದ ಊರ ಮಂದಿ ಕರ್ವಾಲೋರ ಈ ನಡವಳಿಕೆಯ ಬಗ್ಗೆ ಅಪಹಾಸ್ಯ ಮಾಡಿ ವದಂತಿಗಳನ್ನು ಹಬ್ಬಿಸಿದರೂ ಮಂದಣ್ಣನ ನಿಜವಾದ ಶಕ್ತಿಯ ಅರಿವಿದ್ದ ಕರ್ವಾಲೋ ಜನರ ಮಾತುಗಳಿಗೆ ಗಮನಹರಿಸುವುದಿಲ್ಲ. ನಿಸರ್ಗದೊಂದಿಗೇ ಬಾಳಿ ಬದುಕುವ ಜನರೇ ನಿಜವಾದ ಪ್ರಕೃತಿತಜ್ಞರೆಂಬ ಸತ್ಯವನ್ನು ಮನದಟ್ಟಾಗಿಸುತ್ತದೆ ಪುಸ್ತಕ. ‘ಕರ್ವಾಲೋ’ದ ನಿಜವಾದ ನಾಯಕನಾಗಿ ಮಂದಣ್ಣ ಹೊರಹೊಮ್ಮುತ್ತಾನೆ!

ಕಾದಂಬರಿಯ ಒಂದು ಚಿಕ್ಕ ಪಾಠ – 

          “ನಾವೆಲ್ಲ ಹತ್ತಿ ಕುಳಿತ ಕ್ಷಣ ಇನ್ನೊಂದು ವಿಷಯ ಹಠಾತ್ತನೆ ಬೆಳಕಿಗೆ ಬಂತು.
ಎಲ್ಲಿಂದ ಬಂದೆವು? ಎಲ್ಲಿದ್ದೇವೆ? ಯಾವ ಕಡೆಗೆ ಹೋಗುವುದು? ಈ ಮೂರೂ ಸಂಪೂರ್ಣ ತಪ್ಪಿ ಮರೆತೇ ಹೋಗಿತ್ತು. ನಾವು ಹೊರಟು ಬಂದ ಕಾಡಿನ ಅಂಚು ದಿಗಂತದಲ್ಲಿ ಸಂಪೂರ್ಣ ಕಣ್ಮರೆಯಾಗಿತ್ತು. ಸುತ್ತೆಲ್ಲ ಈಚಲು ಪೊದೆಗಳು ಅಲೆಯಲೆಯಾಗಿ ವಿಶಾಲವಾಗಿ ಹಬ್ಬಿದ್ದ ಬಯಲು. ಅಲ್ಲೊಂದು ಇಲ್ಲೊಂದು ಸಣ್ಣ ಗುಡ್ಡಗಳಿದ್ದರೂ ಅದರ ಎಲ್ಲ ಪಾರ್ಶ್ವಗಳೂ ಒಂದೇ ರೀತಿಯಾಗಿದ್ದುವು.
          ನನಗನ್ನಿಸಿತು, ನಮಗೆ ಗೊತ್ತು ಗುರಿ ಇಂಥದೇ ಎಂದು ಏನಿದೆ? ನಾವು ಹುಡುಕ ಹೊರಟಿರುವ ಹಾರುವ ಓತಿಯಾದರೋ ಇಂಥಲ್ಲೇ ಇದೆಯೆ? ಅದರ ಅಮೂಲ್ಯತೆಯಾದರೋ ಕಲ್ಪಾಂತರಗಳಾಚೆಯ ಕಾಲದ ಅಗಾಧಸ್ಥರಗಳಲ್ಲಿ ಹುದುಗಿಹೋಗಿದೆ. ಎತ್ತ ಹೋದರೂ ಒಂದೇ ಎಂದೆನ್ನಿಸಿತು. ಕರ್ವಾಲೋರ ಕಾಲದ ಮೂಲಮಾನಗಳು, ಜೀವವಿಕಾಸದ ಮಹಾನ್ ಗೋಪ್ಯಗಳು ಇವನ್ನೆಲ್ಲಾ ನಿಲುಕಿಸಿಕೊಳ್ಳಲು ಮನಸ್ಸು ಚಾಚಿ ಚಾಚಿ ತಟಕ್ಕನೆ ನನಗೆ ನಮ್ಮ ಸಧ್ಯದ ಪರಿಸ್ಥಿತಿ ನಮ್ಮ ಅಧ್ಯಾತ್ಮಿಕ ಸ್ಥಿತಿಯಂತೆ ತೋರಿತು.
          “ಅಲ್ಲಾ ಮಾರಾಯರೆ, ಈಗ ಯತ್ಲಾಗಂತ ಗಾಡಿ ಹೊಡೆಯೋದು “ ಎಂದು ಕರಿಯಪ್ಪ ಸಂಶಯಾತ್ಮಕವಾಗಿ ಉದ್ಗರಿಸಿದ.
          “ಎತ್ತಲಾಗಿ ಹೊಡೆದರೆ ಏನಯ್ಯ! ಎತ್ತು ನಿಂತಿರೋ ದಿಕ್ಕಿನ ಕಡೆಗೆ ಮುಂದೋಡಿಸು. ಈಗ ನಾವು ಹುಡುಕ ಹೊರಟಿರೋ ಪ್ರಾಣಿ ಮೂರರ ಮುಂದೆ ಏಳು ಸೊನ್ನೆ ಹಾಕಿದರಾಗೋ ಅಷ್ಟು ಹಳತು. ಅದಕ್ಕೇನು ಇಂಥಾ ಕಡೆ ಅಂತ ವಿಳಾಸ ಇಲ್ಲ” ಎಂದೆ.
          ಕರಿಯಪ್ಪನಿಗೆ ಏನೂ ಗೊತ್ತಾಗಲಿಲ್ಲೆಂದು ಕಾಣುತ್ತದೆ, “ಅದ್ಯಂತದಪ್ಪ ಮೂರೆಲೆ ಮುಂದೆ” ಎಂದ. “ಮೂರೆಲೆ ಮುಂದೆ ಅಲ್ಲಾ ಕಣೋ ಮೂರರ ಮುಂದೆ ಏಳು ಸೊನ್ನೆ” ಎಂದು ನಾನು ತಪ್ಪು ತಿದ್ದಿದೆ. ಕರಿಯಪ್ಪ ಮೊದಲಿನಷ್ಟೇ ಗೊಂದಲದಿಂದ “ಏನೋಪ್ಪ! ದೇವ್ರೇಗತಿ” ಎಂದ.
          ಕರ್ವಾಲೋ “ನೋ ನೋ ವೈಜ್ಞಾನಿಕ ಸಂಶೋಧನೇಂದರೆ ಇದೆಲ್ಲಾ ಫಿಲಾಸಫಿಗೆ ಜಾಗ ಇಲ್ಲ. ಸುಮ್ಮನೆ ಯಾವುದೋ ದಿಕ್ಕಿಗೆ ಹೊಡೀ ಅಂದರೆ ಸಾಯಂಕಾಲದ ಹೊತ್ತಿಗೆ ಹೊರಟ ಜಾಗಕ್ಕೇ ಹಿಂದಿರುಗಿರ್ತೀವಿ ಅಷ್ಟೇ” ಎಂದು “ಪ್ರಭಾಕರ ಕ್ರೊನಾಮೀಟರು ತಗೊಳ್ಳಿ. ಹಾಗೇ ಕಾಂಪಾಸ್ ತಗೊಂಡು ದಿಕ್ಕು ಸೆಟ್ ಮಾಡಿ” ಎಂದರು. ಪ್ರಭಾಕರ ಅವನ ಉಪಕರಣಗಳಿಂದ ದಶ ದಿಕ್ಕುಗಳನ್ನೂ ಜಾಲಾಡತೊಡಗಿದ.
          ಕರಿಯಪ್ಪ “ಈ ಮಿಷನ್ನಿನಾಗೇನ್ಕಾಣ್ತದೆ? ಓತೀಕ್ಯಾತಾನಾ?” ಎಂದ.
          “ಇಲ್ಲಾ ಕಣಯ್ಯ, ದಿಕ್ಕು ನೋಡ್ತಿದ್ದಾರೆ” ಎಂದೆ.
          ಪ್ರಭಾಕರ ಕೊಂಚ ಸಮಯದನಂತರ ಒಂದು ನಿರ್ಣಯಕ್ಕೆ ಬಂದು ಗಾಡಿಯನ್ನು ಅದು ನಿಂತಿದ್ದ ದಿಕ್ಕಿನ ಸಂಪೂರ್ಣ ವಿರುದ್ಧ ದಿಕ್ಕಿಗೆ ತಿರುಗಿಸಿ ನಿಲ್ಲಿಸಿದ.        
          ನನಗೆ ಹಿಂದಿರುಗಿ ಹೋಗುತ್ತಿದ್ದೇವೆಂದೇ ಗುಮಾನಿ. ಕರಿಯಪ್ಪ ಕೋವಿ ಎಳೆದಾಡುವ ಭರದಲ್ಲಿ ಪ್ರಭಾಕರನ ಯಂತ್ರ ಸಂಪೂರ್ಣ ಹದಗೆಡಿಸಿರಬೇಕು ಎಂದುಕೊಂಡೆ. ಒಟ್ಟಿನಲ್ಲಿ ದಾರಿ ತಪ್ಪಿದರೂ ಪರ್ವಾ ಇಲ್ಲ, ಆದರೆ ಕರ್ವಾಲೋ ಹೇಳಿದಂತೆ ಹಿಂದಿರುಗಿ ಹೊರಟಲ್ಲಿಗೇ ತಲುಪದಿದ್ದರೆ ಸರಿ ಎಂದಂದುಕೊಂಡೆ. ಕರ್ವಾಲೋ ಮಾತ್ರ ಯಂತ್ರೋಪಕರಣಗಳ ಬಗ್ಗೆ ಅಚಲ ವಿಶ್ವಾಸ ಇದ್ದವರಂತೆ ನಿರ್ಯೋಚನೆಯಿಂದ ಮೂಲೆಯೊಂದರಲ್ಲಿ ಗಡದ್ದಾಗಿ ಕುಳಿತರು.”

          ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕವನ್ನು ಈಗ ವಿಮರ್ಶೆ ಮಾಡುವುದಾಗಲೀ ಪರಿಚಯಿಸುವುದಾಗಲೀ ಖಂಡಿತ ಅವಶ್ಯವಲ್ಲ. ಕರ್ವಾಲೋ ಕಾದಂಬರಿ 1980ರಿಂದ 2010ರವರೆಗೆ ಒಟ್ಟು ಇಪ್ಪತ್ತೇಳು ಮುದ್ರಣಗಳನ್ನು ಕಂಡಿದೆ! ಹೆಚ್ಚುಕಡಿಮೆ ವರ್ಷಕ್ಕೊಂದು ಮುದ್ರಣ! ಓದಲು ಮರೆತವರು ಪುಸ್ತಕ ಖರೀದಿಸಲು, ಓದಿ ಮುಗಿಸಿದವರು ಮತ್ತೊಮ್ಮೆ ತಿರುವಿಹಾಕಲೆಂಬುದೇ ಈ ಲೇಖನದ ಉದ್ದೇಶ!

2 comments:

  1. This book was non detailed text for 10th standard many years ago. I had read it then. Thanks for refreshing the memories.

    ReplyDelete
  2. ನಿಜ ಸರ್.ಕಾರ್ವಾಲೊ ಪುಸ್ತಕನನ್ನು ಅದೆಷ್ಟು ಬಾರಿ ಓದಿದ್ದೇನೊ ಗೊತ್ತಿಲ್ಲ.ಯಾವುದೋ ಕಾರಣಕ್ಕೆ ಮತ್ತೆ ಮತ್ತೆ ಪುಸ್ತಕ ತೆರೆಯುವ ಸಂಧರ್ಭಗಳು ಬಂದಿವೆ.ಹಲವಾರು ದಿನಗಳ ನಂತರ ಕೈಗೆ ಸಿಕ್ಕ ಕಾರ್ವಾಲೊವನ್ನು ಮತ್ತೆ ಪುಸ್ತಕಗಳ ಮಧ್ಯೆ ಹುದುಗಿಸಿಡಲು ಮನಸ್ಸೇ ಬರುವುದಿಲ್ಲ.

    ಹೌದು,ಕಾರ್ವಾಲೊ ತೇಜಸ್ವಿಯವರ ಪ್ರಮುಖ ಕೃತಿಗಳಲ್ಲಿ ಒಂದು.ಪಾತ್ರಗಳ ಸೃಷ್ಠಿ,ಅವುಗಳ ನಿರೂಪಣೆ,ಪಾತ್ರಗಳ ಸುತ್ತಲಿನ ಪ್ರಭೆ ನಮ್ಮೆಲ್ಲರನ್ನೂ ಆವರಿಸಕೊಳ್ಳುತ್ತದೆ. ಕಿವಿ ಎಂಬ ನಾಯಿ ಕೂಡ ನಮ್ಮ ಮನಸ್ಸಿನಲ್ಲಿ ತುಂಬಾ ದಿನಗಳವರೆಗೆ ಉಲಿಯುವುದೇ ಇದಕ್ಕೆ ಸಾಕ್ಷಿ.ಮತ್ತು ಪಾತ್ರಗಳ ಪ್ರಭಾವಳಿಯ ಶಕ್ತಿ ಎಷ್ಟಿದೆ ಎಂಬುದನ್ನು ತೊರಿಸುತ್ತದೆ.

    ಕಾರ್ವಾಲೊ ಬಂದ ನಂತರ ಕುವೆಂಪುರವರು ಒಮ್ಮೆ ರಾಜೇಶ್ವರಿಯವರಲ್ಲಿ ಕೇಳಿದ್ದರಂತೆ "ಕಾರ್ವಾಲೊ ಎಂಬುವವರು ಮೂಡಿಗೆರೆಯಲ್ಲಿ ನಿಜವಾಗಿಯೂ ಇದ್ದಾರೆಯೋ ಅಥವಾ ಕೇವಲ ಪಾತ್ರವೋ"ಎಂದು.ಅಷ್ಟರ ಮಟ್ಟಿಗೆ ತೆಜಸ್ವಿಯವರ ಕೃತಿಗಳಲ್ಲಿ ಜೀವಂತಿಕೆ ತುಂಬಿರುತ್ತದೆ.(ಕಾರ್ವಾಲೊ ಪುಸ್ತಕವನ್ನು ಮೈಸೂರು ವಿಶ್ವವಿದ್ಯಾನಿಲಯ ಪಠ್ಯಪುಸ್ತಕ ಮಾಡಿದಾಗ ಕಾರ್ವಾಲೊದಲ್ಲಿ ಬರುವ ಕೆಲವು ಪಾತ್ರಗಳು ತೇಜಸ್ವಿಯವರೊಡನೆ ಜಗಳವಾಡಿದ್ದು ಬೇರೆ ವಿಷಯ).ತೇಜಸ್ವಿಯವರ ಕೃತಿಗಳೇ ಹಾಗೇ,ಹೇಳಬೇಕಾದುದನ್ನು ನೇರವಾಗಿ,ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯುತ್ತಾರೆ.

    ಮೊದಲ ಓದಿನಲ್ಲಿ ಕೇವಲ ಹಾಸ್ಯದಂತೆ ಕಾಣುವ ಅವರ ಕಾದಂಬರಿ,ಪುಸ್ತಕಗಳು ನಂತರದ ಓದಿನಲ್ಲಿ ವಿಷಯಗಳು,ಪಾತ್ರಗಳು,ಅವುಗಳ ಸುತ್ತ ನಡೆಯುವ ಸನ್ನಿವೇಶಗಳು ಗಾಂಭೀರ್ಯತೆಯ ರೂಪ ಪಡೆದುಕೊಂಡು ಏನನ್ನೋ ಯೊಚಿಸಲು ಪ್ರೇರೆಪಿಸುತ್ತದೆ.

    ಪ್ರಕೃತಿ,ಪರಿಸರವನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಅವೆಲ್ಲಾ ಅವರವರ ಅರಿವಿಗೆ ಬಂದಷ್ಟು,ಅವರವರ ಬೊಗಸೆಯಲ್ಲಿ ಸಿಕ್ಕಷ್ಟು ನೀರು ಎಂಬುದನ್ನು ನಮಗೆಲ್ಲಾ ಮನವರಿಕೆ ಮಾಡಿಕೊಡುತ್ತಾರೆ.

    ReplyDelete