Jun 13, 2012

ಅಂತ್ಯೋದಯ


ಮೂಲ 
ಡಾ ಅಶೋಕ್. ಕೆ. ಆರ್.
ಅರ್ಧ ಘಂಟೆಯ ಮುಂಚೆ ಅಪೆಂಡಿಸೈಟಿಸ್ ಆಪರೇಷನ್ ಮುಗಿಸಿ ಮಲಗಲು ಹೋದವಳನ್ನು ನರ್ಸ್ ಎಬ್ಬಿಸಿದ್ದಳು. ಆಕ್ಸಿಡೆಂಟ್ ಕೇಸ್ ಬಂದಿದೆ. ಎರಡು ಎರಡೂವರೆ ವರ್ಷದ ಮಗು, ತಲೆಗೆ ಪೆಟ್ಟಾಗಿದೆ ಎಂದು ಹೇಳಿದ್ದಳು. ತಣ್ಣನೆಯ ನೀರನ್ನು ಮುಖಕ್ಕೆರಚಿಕೊಂಡು ಕೂದಲು ಸರಿಮಾಡಿಕೊಂಡು ಎದೆಯ ಮೇಲೊಂದು ದುಪ್ಪಟ್ಟಾ ಹೊದ್ದಿಕೊಂಡು ಕೆಳಮಹಡಿಯಲ್ಲಿದ್ದ ಎಮರ್ಜೆನ್ಸಿ ವಾರ್ಡಿಗೆ ಬಂದಾಗ ಘಂಟೆ ಹನ್ನೊಂದಾಗಿತ್ತು. ಮಗುವಿನ ತಲೆಗೊಂದು ಬ್ಯಾಂಡೇಜನ್ನು ಒತ್ತಿ ಹಿಡಿದಿದ್ದರು, ರಕ್ತಮಯವಾಗಿತ್ತು. ಮಂಚದ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಅಂಗಿ ಪ್ಯಾಂಟು ಅಲ್ಲಲ್ಲಿ ಹರಿದಿತ್ತು. ಅಂಗಿಯ ಎಡಭಾಗದಲ್ಲಿ ರಕ್ತದ ಕಲೆಯಿತ್ತು. ಮಣ್ಣಾಗಿ ಕೆದರಿದ್ದ ಕೂದಲು. ಡಾಕ್ಟರ್ ಬಂದರೆಂದು ತಿರುಗಿ ನೋಡಿದ ರಾಕೇಶ. “ಅರೆ! ರಾಕಿ ನೀನು?!” ಭವ್ಯಳ ದನಿಯಲ್ಲಿ ಅಚ್ಚರಿ ಆಶ್ಚರ್ಯ ಸಂತಸವಿತ್ತು.
ಮಂಚದ ಬಳಿ ಬಂದಳು. ಒಮ್ಮೆ ಮುಗುಳ್ನಕ್ಕು “ಇವನು?” ಎಂದು ಕೇಳಿದಳು. “ನನ್ನ ಮಗ” ಮೆಲ್ಲಗಿನ ದನಿಯಲ್ಲಿ ಹೇಳಿದ. ಮನದ ವೀಣೆಯ ತಂತಿಯೊಂದು ಮೀಟಿದಂತಾಯಿತು. ಕರ್ತವ್ಯದ ನೆನಪಾಗಿ ನರ್ಸಿನ ಕಡೆ ತಿರುಗಿ “ಮಗುವನ್ನು ಮೈನರ್ ಓ.ಟಿಗೆ ಶಿಫ್ಟ್ ಮಾಡಿ” ಎಂದು ಹೇಳುತ್ತಾ ನಾಡಿ ನೋಡಿದಳು. ರಕ್ತಸ್ರಾವವಾಗಿದ್ದರಿಂದ ಕೊಂಚ ಹೆಚ್ಚಿತ್ತು. ನನ್ನ ನಾಡಿಬಡಿತ ಇನ್ನು ಹೆಚ್ಚಿರಬಹುದು ಎಂದುಕೊಳ್ಳುತ್ತ “ಹೆಸರೇನೋ ಪುಟ್ಟಾ” ಎಂದಳು. “ಅಲೋಕ್” ನೋವಿನಲ್ಲಿ ಉತ್ತರಿಸಿದ. ಹೆಸರು ಕೇಳಿ ರಾಕೇಶನೆಡೆಗೆ ನೋಡಿದಳು. ತಲೆ ತಗ್ಗಿಸಿದ. ಮಗುವನ್ನು ಸ್ಟ್ರೆಚರ್ರಿನ ಮೇಲೆ ಮಲಗಿಸಿದ ನರ್ಸ್ “ಹೊರಗೆ ಕೌಂಟರ್ ಬಳಿ ಹೋಗಿ ಕಾರ್ಡ್ ಮಾಡಿಸಿಕೊಂಡು ಬನ್ನಿ ಸರ್” ರಾಕೇಶನಿಗೆ ಹೇಳಿದಳು. ತಲೆ ಕೆಡವುತ್ತಾ “ಅದೇನು ಸದ್ಯ ಬೇಡಿ ಸಿಸ್ಟರ್. ಇವರು ನನಗೆ ಬೇಕಾದವರು. ಮೊದಲು ಮಗೂಗೆ ಏನಾಗಿದೆಯೋ ನೋಡೋಣ. ನಂತರ ಅದನ್ನೆಲ್ಲ ಮಾಡಿಸಿದರಾಯಿತು” ಎಂದು ಭವ್ಯ ಹೇಳಿದ್ದಕ್ಕೆ ಸರಿಯೆಂಬಂತೆ ತಲೆಯಾಡಿಸಿದಳು.
“ಹೇಗಾಯ್ತು ರಾಕಿ ಇದು” ಒಟಿ ರೂಮಿಗೆ ಹೋಗುವಾಗ ಕೇಳಿದಳು. “ನನ್ನ ನೆಂಟರೊಬ್ಬರಿಗೆ ಹುಷಾರಿರಲಿಲ್ಲ. ಮನೇಲೇ ಡ್ರಿಪ್ ಹಾಕಿಸಿದ್ದೆ. ಅವರನ್ನು ನೋಡಿಕೊಂಡು ವಾಪಸ್ಸಾಗುವಾಗ ಬೈಕ್ ಸ್ಕಿಡ್ಡಾಯಿತು”
ಹೆಚ್ಚು ರಕ್ತಚಲನೆಯಾಗುವ ತಲೆ ಮೇಲಿನ ಚರ್ಮ ಒಂದಿಂಚು ಸೀಳಿತ್ತು. ಹೊಲಿಗೆ ಹಾಕಿ ಬ್ಯಾಂಡೇಜ್ ಸುತ್ತಿ ಹೊರಬಂದಳು ಭವ್ಯ. “ನೀನು ಒಳಗೆ ಬಾ” ಎಂದಿದ್ದಕ್ಕೆ ‘ಬೇಡ’ ಎಂದು ಹೊರಗೆ ಕುಳಿತಿದ್ದ. “ಏನೂ ತೊಂದರೆ ಇಲ್ಲ ರಾಕಿ. ಹೊಲಿಗೆ ಹಾಕಿದ್ದೀನಿ. ತಲೆಗೆ ಪೆಟ್ಟಾಗಿರುವುದರಿಂದ ಇವತ್ತು ರಾತ್ರಿ ಅಡ್ಮಿಟ್ ಮಾಡ್ಕೊಳ್ಳೋದು ಒಳ್ಳೇದು. ನಾಳೆ ಸಂಜೆಯವರೆಗೆ ನೋಡಿ ಡಿಸ್ಚಾರ್ಜ್ ಮಾಡಿದರಾಯಿತು. ಬೆಳಿಗ್ಗೆ ಬೇಕೆನ್ನಿಸಿದರೆ ಒಂದು ಸಿ.ಟಿ ಸ್ಕ್ಯಾನ್ ಮಾಡಿಸೋಣ. ನೀನು ಮನೆಯಲ್ಲೇ ನೋಡಿಕೊಳ್ತೀಯ ಅಂದ್ರೆ ಈಗಲೇ ಕರೆದುಕೊಂಡು ಹೋಗು” ಎಂದಳು. ‘ಪ್ಲೀಸ್ ನಾಳೆಯವರೆಗಾದರೂ ಇಲ್ಲೇ ಇರೋ’ ಎಂದವಳ ಮನಸ್ಸು ಗೋಗರೆಯುತ್ತಿತ್ತು. “ಇಲ್ಲ ಅಡ್ಮಿಟ್ಟೇ ಮಾಡ್ತೀನಿ. ಇಲ್ಲಿಂದ ಇಪ್ಪತ್ತು ಕಿಮಿಯಾಗುತ್ತೆ ಮನೆಗೆ. ಬೈಕಿನಲ್ಲಿ ಅವನನ್ನು ಕರೆದುಕೊಂಡು ಹೋಗುವುದು ಕಷ್ಟ” ಎಂದುತ್ತರಿಸಿ ಮಗನ ಬಳಿ ಹೋದ. ನೋವಿನಿಂದ ಕಣ್ಣು ಮುಚ್ಚಿದ್ದ. ಕೈಕಾಲಿನ ತರಚು ಗಾಯವನ್ನು ನರ್ಸ್ ಶುಚಿಗೊಳಿಸುತ್ತಿದ್ದಳು. ಮಗನೆಡೆಗೆ ಹೆಮ್ಮೆಯಿಂದ ನೋಡಿದ. ಮುಂದಿನ ಮಾರ್ಚಿಗೆ ಮೂರು ತುಂಬುತ್ತೆ. ಅವನಲ್ಲಿರೋ ಧೈರ್ಯ ನನಗೇ ಇಲ್ಲವೇನೋ?! ಆಕ್ಸಿಡೆಂಟಾದಾಗ ನಾನೇ ಗಾಬರಿಯಾಗಿದ್ದೆ. ಅವನ ಮುಖದಲ್ಲಿ ಗಾಬರಿಯ ಲವಲೇಶವೂ ಕಾಣಲಿಲ್ಲ. “ಇಲ್ಲೇನೋ ಸ್ವಲ್ಪ ರಕ್ತ ಬರ್ತಿರೋ ಹಾಗಿದೆ, ನೋಡಿ ಅಪ್ಪ” ಎಂದಿದ್ದನಷ್ಟೇ. ಗಾಯಕ್ಕೆ ಸ್ಪಿರಿಟ್ ಹಾಕುವಾಗಾಗಲೀ, ಹೊಲಿಗೆ ಹಾಕುವಾಗಾಗಾಲೀ ಒಂಚೂರೂ ಗದ್ದಲವಿಲ್ಲ. ಹತ್ತಿರಹೋಗಿ ಪುಟ್ಟ ಕೈಯನ್ನು ಹಿಡಿದುಕೊಂಡ. ಕಣ್ಣು ತೆರೆದು ಮುಗುಳ್ನಗುತ್ತ ‘ಏನೂ ಆಗಿಲ್ಲ ಅಪ್ಪ’ ಎಂಬಂತೆ ರಾಕೇಶನ ಬೆರಳುಗಳನ್ನು ಅದುಮಿದ ಅಲೋಕ್. ರಾಕೇಶನ ಹಿಂದೆಯೇ ಒಳಬಂದಿದ್ದ ಭವ್ಯಳಿಗೆ ಭಾವನೆಗಳನ್ನು ಅದುಮಿಡುವುದು ಕಷ್ಟವೆನಿಸಿ ಹೊರಗೆ ಬಂದಳು.
ಅಲೋಕನನ್ನು ವಾರ್ಡಿಗೆ ಕರೆದೊಯ್ದು ಮಲಗಿಸಿದರು. ಸೆಕ್ಯೂರಿಟಿ ಹುಡುಗನೊಬ್ಬನನ್ನು ತನ್ನ ಮನೆಗೆ ಕಳುಹಿಸಿ ತಮ್ಮನ ಕೆಲವು ಬಟ್ಟೆಗಳನ್ನು ತರಿಸಿ ರಾಕೇಶನಿಗೆ ನೀಡಿದಳು ಭವ್ಯ. ಅಲೋಕ ನಿದ್ರೆ ಹೋದ. ಭವ್ಯ ಮಂಚದ ಮೇಲೆ ಕುಳಿತಿದ್ದ ರಾಕೇಶನೆಡೆಗೆ ನೋಡಿದಳು. ಇನ್ನು ಹಾಗೇ ಇದ್ದಾನೆ. ಪೊದೆ ಮೀಸೆ, ಹುಡುಕಾಟದ ಕಣ್ಣು, ಕುರುಚಲು ಗಡ್ಡ, ಕಣ್ಣ ಹೊಳಪು ಕೊಂಚ ಕುಂದಿದೆ ಎನ್ನಿಸಿತು. ಇಬ್ಬರ ನಡುವೆ ಮಾತು ಸತ್ತೇ ಹೋದವಾ? ಅಥವಾ ಎಷ್ಟೋ ವರುಷಗಳ ತರುವಾಯ ಭೇಟಿಯಾಗುತ್ತಿರುವ ಕಾರಣ ಮಾತುಗಳನ್ನಾರಂಭಿಸಲು ಸಾಧ್ಯವಾಗುತ್ತಿಲ್ಲವಾ? ‘ಯಾಕೆ ಆ ರೀತಿ ನಡೆದುಕೊಂಡೆ ರಾಕಿ?’ ನಾಲ್ಕು ವರ್ಷದಿಂದ ದಿನಕ್ಕತ್ತು ಬಾರಿ ನೆನಪಾಗಿ ಕಾಡುವ ಪ್ರಶ್ನೆಯನ್ನು ಕೇಳಿಬಿಡಲಾ? ‘ಉಹ್ಞೂ. ಇವತ್ತು ಆ ಪ್ರಶ್ನೆ ಕೇಳುವ ಸಮಯವಲ್ಲ’ ನಿಡುಸುಯ್ದಳು. ಏನಾದರೂ ಮಾತನಾಡಲೇಬೇಕು ಎಂದು ನಿರ್ಧರಿಸಿದವಳಂತೆ “ಹೆಂಡತಿಗೆ ವಿಷಯ ತಿಳಿಸಿದಾ ಲೋಕಿ?” ದನಿಯಲ್ಲಿ ನಡುಕವಿತ್ತಾ? ತಲೆಯಾಡಿಸಿದವನು “ಭಾರ್ಗವಿ, ನನ್ನ ಹೆಂಡತಿ ಭಾರ್ಗವಿ ಸತ್ತು ಒಂದೂವರೆ ವರ್ಷವಾಯಿತು”
“ಏನು?!”
“ಡೆಂಗ್ಯೂ ಜ್ವರವಾಗಿತ್ತು. ಬಹಳಷ್ಟು ದಿನದ ನರಳುವಿಕೆಯ ನಂತರ ತೀರಿಹೋದಳು” ಮಾತು ಮುಗಿಸಿ ಭವ್ಯಳೆಡೆಗೆ ನೋಡಿದ. ಮಬ್ಬಾಗಿ ಕಂಡಳು. ಕೃತಕವಾಗೊಮ್ಮೆ “ಸಾರಿ” ಎಂದ್ಹೇಳಿ ಮತ್ತೆ ಮಾತು ಮುಂದುವರಿಸಲು ತೋಚದೆ ಎದ್ದು ಮಂಚದ ಬಳಿ ಹೋಗಿ ರಾಕೇಶನ ಭುಜದ ಮೇಲೆ ಕೈಹಾಕಿ “ಸಾರಿ ಕಣೋ. ನಿನಗೂ ಸುಸ್ತಾಗಿದೆ. ಮಲಗಿಕೋ. ನಾಳೆ ಬೆಳಿಗ್ಗೆ ಬಂದು ಕಾಣ್ತೀನಿ. ಏನಾದ್ರೂ ಬೇಕಾದ್ರೆ ನರ್ಸ್ ಕೈಲಿ ಹೇಳಿ ಕಳಿಸು, ನಾನಿಲ್ಲೇ ಡಾಕ್ಟರ್ಸ್ ರೂಮಿನಲ್ಲಿರುತ್ತೇನೆ” ತೆರಳಿದಳು.
* * *
ನಿದ್ರೆ ಹತ್ತಲಿಲ್ಲ. ಎದುರಿನ ಗೋಡೆ ದಿಟ್ಟಿಸಿದಳು. ಔಷಧಿ ಕಂಪನಿಯೊಂದರ ಗಡಿಯಾರ ಒಂದು ಘಂಟೆಯಾಗಿದ್ದನ್ನು ಸೂಚಿಸುತ್ತಿತ್ತು. ಹಳೆಯ ಘಟನೆಗಳು ಕಣ್ಣ ಮುಂದೆ ಮೂಡಿದವು. ರಾಕೇಶ್ ಭವ್ಯಳಿಗಿಂತ ಒಂದು ವರ್ಷಕ್ಕೆ ದೊಡ್ಡವನು. ಮೊದಲ ನಾಲ್ಕುವರೆ ವರ್ಷ ಪರಿಚಯವಿರಲಿಲ್ಲ. ಕೊನೆಯ ವರ್ಷ ಎರಡು ಬಾರಿ ಫೇಲಾಗಿ ಒಂದು ವರ್ಷ ಹಿಂದೆ ಉಳಿದಿದ್ದ ರಾಕೇಶ. ಇಂಟರ್ನ್ ಶಿಪ್ಪಿಗೆ ಬಂದಾಗ ಕಮ್ಯುನಿಟಿ ಮೆಡಿಸಿನ್ ಪೋಸ್ಟಿಂಗ್ಸಿನಲ್ಲಿ ಮೊದಲು ನೋಡಿದಳು. ಮಾತು ಕಡಿಮೆ. ‘ಹಾಯ್’ ಎಂದರೆ ‘ಹಾಯ್’ ಎಂದುತ್ತರಿಸಿ ಹೊರಟುಹೋಗುತ್ತಿದ್ದ. ‘ಫೇಲ್ ಕ್ಯಾಂಡಿಡೇಟೂ. ಕೊಬ್ಬಿಗೆ ಮಾತ್ರ ಕಡಿಮೆಯಿಲ್ಲ’ ಗೆಳತಿಯರೊಂದಿಗೆ ಆಡಿಕೊಂಡು ನಕ್ಕಿದ್ದಳು. ಹದಿನೈದು ದಿನದ ಮಟ್ಟಿಗೆ ನಾಲ್ಕು ಮಂದಿಯನ್ನು ತಿತಿಮತಿಯ ಆಸ್ಪತ್ರೆಗೆ ಪೋಸ್ಟಿಂಗ್ಸ್ ಹಾಕಿದ್ದರು. ರಾಕೇಶನನ್ನು ಹೊರತುಪಡಿಸಿ ಉಳಿದೀರ್ವರೂ ಭವ್ಯಳ ತರಗತಿಯವರೇ. ಪರಿಚಿತರಲ್ಲದ ಜ್ಯೂನಿಯರ್ಸ್ ರೊಡನೆ ಬೆರೆಯಲು ಕಷ್ಟವೆನಿಸಿ ಒಬ್ಬಂಟಿಯಾಗಿ ಮೌನವಾಗಿಯೇ ಇರುತ್ತಿದ್ದ.
ಒಂದು ಮುಂಜಾನೆ ಭವ್ಯ ರೂಮಿನಿಂದ ಹೊರಬಂದಾಗ ರಾಕೇಶ ಆಸ್ಪತ್ರೆಯ ಪಕ್ಕದ ಕಾಫಿ ತೋಟದೆಡೆಗೆ ಹೋಗುತ್ತಿದ್ದ. ಎಲ್ಲಿಗೆ ಹೋಗ್ತಿದ್ದಾನೆ ಇಷ್ಟು ಬೆಳಿಗ್ಗೆ ಎಂಬ ಕುತೂಹಲದೊಂದಿಗೆ ಅವನನ್ನು ಹಿಂಬಾಲಿಸಿದಳು. ಒಂದಷ್ಟು ದೂರ ಸಾಗಿದ ಮೇಲೆ ಸಿಗರೇಟ್ ಹೊತ್ತಿಸಿಕೊಂಡ. ‘ಆಹಾ! ಇದಿಕ್ಕೆ ಸಾಹೇಬರು ಬೆಳಿಗ್ಗೆ ಬೆಳಿಗ್ಗೆ ಹೊರಟಿರೋದು’ ಅಂಗಿ ಜೇಬಿನಿಂದ ಮೊಬೈಲ್ ತೆಗೆದು ಫೋನ್ ಮಾಡಿದ. ಯಾರೋ ಗೆಳೆಯನಿಗಿರಬೇಕು. ‘ಅಬ್ಬಬ್ಬಾ! ಇವನು ಇಷ್ಟೊಂದು ಮಾತನಾಡ್ತಾನಾ?’ ಅಚ್ಚರಿಪಟ್ಟಳು. ಜೋರು ನಗು, ಮಾತು; ಆಸ್ಪತ್ರೆಯ ಆವರಣದ ಹೂದೋಟ, ಅದರ ಮಧ್ಯೆ ಇರುವ ವಿವೇಕಾನಂದರ ಪ್ರತಿಮೆ, ತೊಟ್ಟಿಯೊಂದರಲ್ಲಿರುವ ಕಮಲ – ಮೀನು, ಕಾಫಿ ತೋಟ, ಕಾಫಿ ಬೆಳೆಯ ಬಗ್ಗೆ ತಿಳಿಸಿಕೊಟ್ಟ ಮಣಿವಣ್ಣನ್ ಮೇಸ್ತ್ರಿಯ ಬಗ್ಗೆಯಲ್ಲ ಮಾತನಾಡಿದ. ‘ಓಹೋ! ಮೇಲೆ ಕಾಣುವಂತಿಲ್ಲ ಇವನು’ ಎಂದುಕೊಂಡಳು. ಮಾತು ಮುಗಿಸಿ ಫೋನನ್ನು ಕಿಸೆಯೊಳಗೆ ಸೇರಿಸಿ ಮತ್ತೊಂದು ಸಿಗರೇಟ್ ಹೊತ್ತಿಸಿಕೊಂಡ. “ಏನ್ ಡಾಕ್ಟ್ರೇ ಇವತ್ತು ಲೇಟು. ಮೇಡಮ್ ಡಾಕ್ಟ್ರೂ ಬಂದು ಬಿಟ್ಟಿದ್ದಾರೆ” ಕಾಫಿ ತೋಟದೊಳಗಿಂದ ಬಂದ ದನಿ ಮಣಿವಣ್ಣನ್ ಮೇಸ್ತ್ರಿಯದು. “ಯಾರು ಬಂದಿದ್ದಾರೆ?!” ತಿರುಗಿ ನೋಡಿದ ರಾಕೇಶ. ಹಿಂಬಾಲಿಸಿ ಬಂದುದಕ್ಕೋ ಕದ್ದು ಮಾತು ಕೇಳಿಸಿಕೊಂಡು ಸಿಕ್ಕುಹಾಕಿಕೊಂಡಿದ್ದಕ್ಕೋ ನಾಚಿದಳು ಭವ್ಯ. “ಹಾಯ್” ಎಂದಳು. “ಹಾಯ್” ಎಂದವನು ಸಿಗರೇಟಿನೆಡೆಗೆ ನೋಡಿದ. ಎಳೆದಿದ್ದು ಎರಡೇ ಜುರಿಕೆ; ಕೆಳಗೆ ಬಿಸುಟಿದ. ಮುಗುಳ್ನಕ್ಕಳು ಭವ್ಯ. ಮಣಿವಣ್ಣನ್ ತೋಟದೊಳಗಿಂದ ರಸ್ತೆಗೆ ಬರುತ್ತಾ ಇಬ್ಬರಿಗೂ ನಮಸ್ಕರಿಸಿದ. ಇಲ್ಲಿಂದ್ಯಾವಾಗ ಹೋಗ್ತೀನಪ್ಪ ಎಂದುಕೊಳ್ಳುತ್ತಿದ್ದವಳ ಸಹಾಯಕ್ಕೆಂಬಂತೆ ಅವಳ ಫೋನ್ ರಿಂಗಣಿಸಿತು, ಅಮ್ಮ ಫೋನ್ ಮಾಡಿದ್ದರು. “ನಾನು ಹೋಗಿರ್ತೀನಿ ರಾಕೇಶ್” ಎಂದು ಹೇಳಿ ಓಡುತ್ತಾ ಮಾತನಾಡುತ್ತಾ ರೂಮು ಸೇರಿದಳು.
ಅಂದು ಭವ್ಯಳ ಕೆಲಸ ಮಾತುಗಳಲ್ಲಿ ಎಂದಿನ ಉತ್ಸಾಹ ಲವಲವಿಕೆಗಳಿರಲಿಲ್ಲ. ಏನೋ ತಳಮಳ. ಅವನನ್ನು ಮಾತನಾಡಿಸಬೇಕು, ಮತ್ತೊಮ್ಮೆ ಮಗದೊಮ್ಮೆ ಅವನ ನಗುವನ್ನು ನೋಡಿ ಆನಂದಿಸಬೇಕು....ಆಸೆಗಳು ಬೆಳೆಯುತ್ತಲೇ ಸಾಗಿದವು. ಯೋಚನಾಸರಣಿ ಖುಷಿಯೊಟ್ಟಿಗೆ ಮುಜುಗರವನ್ನೂ ತಂದವು. ಅವನ ಕುರುಚಲು ಗಡ್ಡದೊಲ್ಲೊಮ್ಮೆ ಕೈಯಾಡಿಸಿದರೆ ಹೇಗಿರಬಹುದು ಎಂದು ಊಹಿಸುತ್ತಲೇ ಕೆಂಪಾದಳು ಕಂಪಿಸಿದಳು. ಸಂಜೆ ಎಂದಿನಂತೆ ಉಳಿದವರೊಡನೆ ಮೇಲಿನ ಟಿವಿ ರೂಮಿಗೆ ಹೋಗಲಿಲ್ಲ. ಮಲಗಿ ಹೊರಳಾಡಿದಳು. ಕತ್ತಲಾಗಿತ್ತು. ಎದ್ದು ಕೈಕಾಲು ಮುಖ ತೊಳೆದುಕೊಂಡು ಹೊರಬಂದಳು. ವಿವೇಕಾನಂದ ಪ್ರತಿಮೆಯ ಬಳಿ ಕುಳಿತಿದ್ದವನು ಪುಸ್ತಕದಲ್ಲಿ ಮುಳುಗಿಹೋಗಿದ್ದ. ಮಾತನಾಡಿಸಿಯೇ ತೀರಬೇಕು ಎಂದು ದೃಡನಿಶ್ಚಯದೊಂದಿಗೆ ಆತನೆಡೆಗೆ ಸಾಗುತ್ತಿದ್ದವಳ ಎದೆ ಡವಗುಟ್ಟುತ್ತಿತ್ತು.
“ನೀವಿಷ್ಟೊಂದು ಮಾತಾಡ್ತೀರ ಅಂತ ಗೊತ್ತೇ ಇರಲಿಲ್ಲ ನನಗೆ” ಪೀಠಿಕೆಗಳನ್ನೆಲ್ಲ ಪಕ್ಕಕ್ಕೆ ಸರಿಸಿ ನೇರವಾಗಿ ಹೇಳಿದಳು. ಯಾರು ಎಂಬಂತೆ ಕತ್ತೆತ್ತಿ ನೋಡಿದ. ಭವ್ಯ. “ಏನಂದ್ರಿ?!” ಆಶ್ಚರ್ಯದಿಂದ ಕೇಳಿದ. “ನೀವ್ಯಾವಗಲೂ ಮೌನವಾಗಿಯೇ ಇರುತ್ತಿದ್ದುದನ್ನು ನೋಡಿದ್ದೆನಷ್ಟೇ. ಇವತ್ತು ಬೆಳಿಗ್ಗೆ ಕಾಫಿ ತೋಟದಲ್ಲಿ ನೀವು ಮಾತನಾಡಿದ್ದು ನೋಡಿ ಅಚ್ಚರಿಯಾಯಿತು. ರಾಕೇಶ್ ಇಷ್ಟೊಂದು ಮಾತನಾಡ್ತಾರಾ? ಎಂದು. ನಮ್ಮ ಜೊತೆ ಮಾತನಾಡೋದಿಕ್ಕೆ ಇಷ್ಟವಿಲ್ಲವೇನೋ?” ಕೊಂಚ ವ್ಯಂಗ್ಯದಿಂದಲೇ ಕೇಳಿದಳು.
“ಛೇ ಛೇ ಹಾಗೇನೂ ಇಲ್ಲಪ್ಪ. ಫ್ರೆಂಡ್ಸ್ ಜೊತೆ ಹೆಚ್ಚೆನಿಸುವಷ್ಟೇ ಮಾತನಾಡ್ತೀನಿ”
“ಅಂದ್ರೆ ನಾವೆಲ್ಲ ಫ್ರೆಂಡ್ಸ್ ಆಗೋದಿಕ್ಕೆ ಲಾಯಕ್ಕಿಲ್ಲ ಅಂತಾನಾ?”
“ಹಾಗೇನಿಲ್ಲ. ದಿನಬೆಳಗಾಗೋದರೊಳಗೆ ಸ್ನೇಹ ಹುಟ್ಟೋದೂ ಇಲ್ಲ, ಸಾಯೋದೂ ಇಲ್ಲ ಅಲ್ವ ಭವ್ಯ” ನಗುತ್ತಾ ಕೇಳಿದ. ಹೌದೆಂಬಂತೆ ತಲೆಯಾಡಿಸಿದಳು. ಇಬ್ಬರ ನಡುವೆ ಸ್ನೇಹ ಉದಯಿಸಲಾರಂಭಿಸಿತ್ತು. ತಿತಿಮತಿಯಲ್ಲಿನ ಪೋಸ್ಟಿಂಗ್ಸ್ ಮುಗಿಯುವ ವೇಳೆಗೆ ಒಬ್ಬರಿಗೊಬ್ಬರು ಕೊಂಚಮಟ್ಟಿಗಾದರೂ ಪರಿಚಿತರಾಗಿದ್ದರು. ತಾನಾಗಿಯೇ ಮೊಬೈಲ್ ನಂಬರ್ ಕೇಳಿ ಪಡೆದುಕೊಂಡಿದ್ದಳು. ದಿನವಹಿ ಮೆಸೇಜುಗಳಲ್ಲಿ, ವಾರಕ್ಕೊಮ್ಮೆ ಆಸ್ಪತ್ರೆ ಪಕ್ಕದ ಪರಿವಾರ್ ಬೇಕರಿಯಲ್ಲಿನ ಭೇಟಿಗಳಲ್ಲಿ ಸ್ನೇಹ ಬೆಳೆಯುತ್ತಾ ಸಾಗಿತ್ತು. ಭವ್ಯಳ ಮನದಲ್ಲಿ ಸ್ನೇಹದೊಂದು ಕವಲು ಮೆಚ್ಚುಗೆ, ಪ್ರೀತಿ – ಪ್ರೇಮದೆಡೆಗೆ ಬೆಳೆಯಲಾರಂಭಿಸಿತ್ತು. ನಿವೇದಿಸಿಕೊಳ್ಳಬೇಕೆಂಬ ಆಸೆ; ತಿರಸ್ಕೃತಗೊಂಡರೆ ಇರುವ ಸ್ನೇಹಕ್ಕೂ ಕುಂದು ಬಂದೀತೆಂಬ ಕಳವಳ. ಅವನು ನನ್ನೊಡನೆ ಮಾತನಾಡುವ ರೀತ, ನನ್ನೆಡೆಗೆ ತೋರುವ ನೆಚ್ಚಿಕೆಯ ಭಾವ; ಕೊನೆಪಕ್ಷ ಕಾಲೇಜು ಮುಗಿಯುವ ಹೊತ್ತಿಗಾದರೂ ಪ್ರೇಮ ಪ್ರಸ್ತಾಪ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದಳು. ನಿರೀಕ್ಷೆ ಹುಸಿಯಾಗಿತ್ತು. ಅಂದು ಇಂಟರ್ನ್ ಶಿಪ್ಪಿನ ಕೊನೆ ದಿನ. ಅದೇ ಪರಿವಾರ್ ಬೇಕರಿಯಲ್ಲಿ ಕುಳಿತಿದ್ದರು. ಸ್ನಾತಕೋತ್ತರ ಪದವಿಗೆ ಓದಬೇಕೆಂದು ನನ್ನ ಸದ್ಯದ ಗುರಿಯಾಗಿದ್ದರೆ ಮೈಸೂರಿನಿಂದ ಇಪ್ಪತ್ತು ಇಪ್ಪತ್ತೈದು ಕಿಮಿ ದೂರದಲ್ಲಿರುವ ತನ್ನ ಸ್ವಂತ ಊರಿನಲ್ಲಿನ ಪಿ.ಎಚ್.ಸಿಗೆ ಸೇರಬೇಕೆಂದು ಅವನ ಇಚ್ಛೆಯಾಗಿತ್ತು. ಸರಕಾರಿ ಕೆಲಸ ಸಿಗದ ಪಕ್ಷದಲ್ಲಿ ಅದೇ ಊರಿನಲ್ಲಿ ಸದ್ಯಕ್ಕೆ ಪ್ರೈವೇಟ್ ಕ್ಲಿನಿಕ್ ತೆರೆಯಬೇಕೆಂದಿದ್ದನು. ಇನ್ನು ಮುಖತಃ ಭೇಟಿಯಾಗುವುದು ಅಪರೂಪಕ್ಕೆ ಮಾತ್ರ ಎಂಬ ನೋವು ಇಬ್ಬರನ್ನೂ ಕಾಡುತ್ತಾ ಮೌನದ ಮೊರೆ ಹೊಕ್ಕಿದ್ದರು. ರಾಕೇಶನೇ ಮೌನ ಮುರಿದ. “ಮತ್ತೆ ಭವ್ಯ. ಮದುವೆ ಯಾವಾಗಪ್ಪ? ಮನೆಯಲ್ಲಿ ಆಗಲೇ ಹುಡುಕಲು ಶುರುಮಾಡಿದ್ದಾರಾ ಹೇಗೆ?” ತಿಂಗಳುಗಳಿಂದ ಹಿಡಿದಿಟ್ಟಿದ್ದ ಭಾವನೆಗಳು ಕಣ್ಣು ಮಂಜಾಗಿಸಿದವು. “ರಾಕಿ” ಎಂದ್ಹೇಳಿ ಮೇಜಿನ ಮೇಲಿದ್ದ ಅವನ ಕೈಯನ್ನಿಡಿದುಕೊಂಡು “ರಾಕಿ. ನನ್ನನ್ನು ಮದುವೆಯಾಗ್ತೀಯೇನೋ?” ಎಂದು ಕೇಳಿಯೇ ಬಿಟ್ಟಳು. ಬೆರಗುಗಣ್ಣಿಂದ ಅವಳೆಡೆಗೆ ನೋಡಿದ ರಾಕಿ ಕೈಬಿಡಿಸಿಕೊಂಡು ಏನೊಂದೂ ಉತ್ತರವನ್ನೀಯದೆ ಹೊರಟುಹೋದ. ಇಂಥದೊಂದು ಪ್ರತಿಕ್ರಿಯೆಯನ್ನು ನಿರೀಕ್ಷಿಸದ ಭವ್ಯಳಿಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ‘ಛೇ. ಅವನಲ್ಲಿ ಆ ಭಾವನೆಗಳೇ ಇರಲಿಲ್ಲವೇನೋ! ನಾನೇ ಆತುರಪಟ್ಟುಬಿಟ್ಟೆನಾ?’ ಕ್ಷಮೆ ಕೇಳಲೆಂದು ಫೋನು ಮಾಡಿದವಳಿಗೆ ಕೇಳಿಸಿದ್ದು ‘... ಸ್ವಿಚ್ ಆಫ್ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ’ ಎಂಬ ಕಂಪ್ಯೂಟರ್ ಧ್ವನಿ. ಸತತ ಒಂದು ವಾರ ಪ್ರಯತ್ನಿಸಿದಳು. ಗೆಳೆತನವನ್ನೂ ಸ್ವಿಚ್ ಆಫ್ ಮಾಡಿ ಹೊರಟುಹೋಗಿದ್ದ. ಮನದ ಆಸೆಯನ್ನು ತೋರ್ಪಡಿಸಿದ್ದೇ ತಪ್ಪಾ? ನನ್ನ ಪ್ರೀತಿಗೆ ಈ ಕ್ರೂರತೆಯ ಪ್ರತಿಕ್ರಿಯೆಯಾ? ಇಷ್ಟವಿಲ್ಲದಿದ್ದರೆ ತಿಳಿಸಿ ತೆರಳಬಹುದಿತ್ತು. ಬೇಸರ ಸಿಟ್ಟಿನ ರೂಪಕ್ಕೆ ತಿರುಗುತ್ತಿತ್ತಾದರೂ ಅದು ಕ್ಷಣ ಮಾತ್ರ. ಮತ್ತವನೆಡೆಗೆ ಪ್ರೀತಿಯ ಭಾವವೇ ಮೂಡುತ್ತಿತ್ತು. ಸರ್ಜರಿ ವಿಭಾಗಕ್ಕೆ ಸ್ನಾತಕೋತ್ತರ ಪದವಿಗೆ ಸೇರಿದಳು. ಅವನ ಬಗ್ಗೆ ಪರಿಚಿತರಲ್ಲಿ ಕೇಳಿ ವಿಚಾರಿಸೋಣವೆಂಬ ಆಸೆಯನ್ನು ನನ್ನಿಂದ ಅವನಿಗೆ ಕಿರಿಕಿರಿಯುಂಟಾಗಬಾರದೆಂಬ ದೃಷ್ಟಿಯಿಂದ ತಡೆದಳು. ಅವನಿಗೇ ಇಷ್ಟವಿಲ್ಲದ ಮೇಲೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ಮರೆಯಲೆತ್ನಿಸಿದಳು; ಯತ್ನಿಸುತ್ತಲೇ ಇದ್ದಳು.
ದೇಹ ಮನಸ್ಸಿನಾಯಾಸ ಪರಿಹರಿಸಲೆಂಬಂತೆ ನಿದ್ರೆ ಆವರಿಸಿತು.
* * *
ಅಲೋಕ ಆರೋಗ್ಯವಾಗಿದ್ದಾನೆಂದು ಅವನ ಲವಲವಿಕೆಯೇ ಖಚಿತಪಡಿಸಿತ್ತು. ಮಧ್ಯಾಹ್ನದ ಮೇಲೆ ಮನೆಗೆ ಕರೆದುಕೊಂಡು ಹೋಗ್ತೀನಿ ಎಂದಿದ್ದ ರಾಕಿ. ರಾಕೇಶನೊಡನೆ ಮಧ್ಯಾಹ್ನ ಊಟ ಮಾಡುವಾಗ ‘ಯಾಕೋ ರಾಕಿ ಆ ರೀತಿ ಮಾಡಿದೆ ಅವತ್ತು?’ ಎಂಬ ಪ್ರಶ್ನೆ ಕೇಳಬೇಕೆಂದೆನಿಸಿತು. ‘ಉಹ್ಞೂ. ಬೇಡ. ಮತ್ತೆ ಹಳೆಯದನ್ನೇ ಕೆದಕುವ ಅನಿವಾರ್ಯತೆಯಿಲ್ಲ. ಇಷ್ಟು ವರ್ಷದ ನಂತರ ಸಿಕ್ಕಿರುವ ಸಂತಸವೇ ಸದ್ಯಕ್ಕಿರಲಿ. ಮನದ ಪ್ರಶ್ನೆಗಳನ್ನು ಮುಂದ್ಯಾವತ್ತಾದರೂ ಕೇಳಿದರಾಯಿತು ಎಂದು ಸುಮ್ಮನಾದಳು. ಔಪಚಾರಿಕ ಮಾತುಕತೆಯೊಡನೆ ಊಟದ ಶಾಸ್ತ್ರ ಮುಗಿಸಿದಳು. “ಸರಿ ರಾಕಿ. ನಾನು ಓ.ಪಿ.ಡಿಗೆ ಹೋಗಿರ್ತೀನಿ. ಅಲೋಕನನ್ನು ಕರೆದುಕೊಂಡು ಹೋಗೋದಿಕ್ಕೆ ಮುಂಚೆ ಬಂದು ನೋಡು” ಎಂದ್ಹೇಳಿ ಮೇಲೆದ್ದಳು.
ಎರಡೂ ಮೂವತ್ತರ ಸುಮಾರಿಗೆ ರಾಕಿ ಓ.ಪಿ.ಡಿಗೆ ಬಂದ. ‘ಮತ್ತೆ ಅಗಲಿಕೆಯಾ?’ ‘ಮ್’ “ಬಾ ರಾಕಿ. ಕೂರು. ಅಲೋಕನೆಲ್ಲಿ?”.” ಅವನು ವಾರ್ಡಿನಲ್ಲೇ ಇದ್ದಾನೆ ಭವ್ಯ” ಮೌನ. ಮೇಜಿನ ಮೇಲೊಂದು ಪತ್ರವನ್ನಿಟ್ಟು “ಇದನ್ನೊಮ್ಮೆ ಓದಿ ನೋಡು” ಎಂದ್ಹೇಳಿ ಉತ್ತರಕ್ಕೆ ಕಾಯದೆ ಬಾಗಿಲು ದೂಡಿ ಹೊರನಡೆದ. ಕಂಪಿಸುವ ಕೈಗಳಿಂದ ಕಾಗದ ಬಿಡಿಸಿದಳು. ಅದೇ ಮುದ್ದಾದ ಅಕ್ಷರ. ಅಕ್ಷರಗಳ ಮೇಲೊಮ್ಮೆ ಕೈಯಾಡಿಸಿದಳು.
“ಭವ್ಯ,
ಅವತ್ತಿನ ನನ್ನ ವರ್ತನೆಯನ್ನು ಕ್ಷಮಿಸಿದ್ದೀಯ ಅಂದುಕೊಂಡಿದ್ದೀನಿ ಎಂದರೆ ಕಪಟವಾಡಿದಂತಾಗುತ್ತದೆ. ನಿನ್ನ ಜಾಗದಲ್ಲಿ ನಾನಿದ್ದಿದ್ದರೆ ಖಂಡಿತವಾಗಿಯೂ ಕ್ಷಮಿಸುತ್ತಿರಲಿಲ್ಲ. ಮತ್ತೊಮ್ಮೆ ಭೇಟಿಯಾದಾಗ ಮಾತನಾಡಿಸಲೂ ಇಷ್ಟಪಡುತ್ತಿರಲಿಲ್ಲವೇನೋ! ಅಷ್ಟರಮಟ್ಟಿಗೆ ನೀನು ದೊಡ್ಡವಳು. ಅದೇ ವಾತ್ಸಲ್ಯ ಅಕ್ಕರೆಯಿದೆ ನಿನ್ನಲ್ಲಿ.
‘ಏನೊಂದೂ ಉತ್ತರ ಕೊಡದೆ ಸಂಪೂರ್ಣವಾಗಿ ದೂರಾಗಿಬಿಟ್ಟೆಯಲ್ಲ. ಯಾಕೋ ರಾಕಿ?’ ಎಂಬ ಪ್ರಶ್ನೆ ನಿನಗೆ ಬಹಳವಾಗಿ ಕಾಡಿರಬೇಕು. ಆ ಪ್ರಶ್ನೆಗೆ ಉತ್ತರ ಕೊಡದಿದ್ದರೆ ನಮ್ಮ ನಡುವೆ ಮತ್ತೆ ಗೆಳೆತನ ಚಿಗುರೊಡೆಯುವುದು ಅಸಾಧ್ಯವೇನೋ? ಅವತ್ತು ಅಷ್ಟು ಕಟುವಾಗಿ ಹೊರಟುಹೋಗಿದ್ದು ನಿನ್ನ ಮೇಲಿನ ತಿರಸ್ಕಾರದಿಂದ ಖಂಡಿತ ಅಲ್ಲ. ನಿನ್ನ ಬಗ್ಗೆ ನನ್ನಲ್ಲೂ ಹುಟ್ಟಿ ಬೆಳೆಯಲಾರಂಭಿಸಿದ್ದ ಪ್ರೇಮದ ಭಾವವೇ ನನ್ನನ್ನು ಅಷ್ಟು ಕಟುವಾಗಿ ವರ್ತಿಸುವಂತೆ ಮಾಡಿಬಿಟ್ಟಿತ್ತು! ಅಚ್ಚರಿಯಾಗುತ್ತಿದೆಯಾ ಭವಿ. ಇದೇ ಸತ್ಯ. ಇದರೊಟ್ಟಿಗೆ ಇನ್ನೊಂದು ಸತ್ಯವೂ ಇದೆ. ಸ್ನೇಹದ ದಿನಗಳಲ್ಲಿ ನಿನ್ನೊಂದಿಗೆ ಹಂಚಿಕೊಳ್ಳದೆ ಮುಚ್ಚಿಟ್ಟಿದ್ದ ಸತ್ಯ. ಅದು ನನ್ನ ಸ್ವಾರ್ಥ ಮನದ ಪ್ರತೀಕ ಎಂಬುದೂ ನಿಜ. ನಿನ್ನ ಪರಿಚಯವಾಗುವುದಕ್ಕೆ ಎರಡು ವರ್ಷ ಮುಂಚೆಯೇ ನಾನು ಪ್ರೀತಿಯಲ್ಲಿದ್ದೆ. ನನ್ನ ದೂರದ ಸಂಬಂಧಿಯೂ ಆಗಬೇಕಾದ ಭಾರ್ಗವಿಯೊಂದಿಗೆ. ನನ್ನ ಮನೆಯಲ್ಲಿ ಸಂಪೂರ್ಣ ಸಮ್ಮತಿಯಿರಲಿಲ್ಲ. ಇಂಟರ್ನ್ ಶಿಪ್ಪಿನ ಆರಂಭದಲ್ಲಿ ಹಟ ಮಾಡಿ, ರೊಳ್ಳೆ ತೆಗೆದು ಮನೆಯವರನ್ನು ಒಪ್ಪಿಸಿದೆ. ಅದಾಗಿ ಒಂದು ತಿಂಗಳಿನೊಳಗೆ ನಿನ್ನ ಪರಿಚಯವಾಯಿತು. ಇದೇನು ಮನಸ್ಸಿನ ಚಂಚಲತೆಯೋ ಹಾದರವೋ ನನಗೆ ಇನ್ನೂ ಅರಿಯಲಾಗಿಲ್ಲ. ನಿನ್ನೆಡೆಗೂ ಒಲವಿನ ಭಾವ ಬೆಳೆಯಲಾರಂಭಿಸಿತು. ಭಾರ್ಗವಿಯ ಪ್ರೀತಿಯಲ್ಲಿ ನಾನವಳೆಡೆಗೆ ಇಟ್ಟ ಪ್ರೇಮದಲ್ಲಿ ಕುಂದಿತ್ತಾ? ಉಹ್ಞೂ ಇಲ್ಲ. ಒಂದೇ ಸಮಯದಲ್ಲಿ ಇಬ್ಬರನ್ನು ಏಕಪ್ರಕಾರವಾಗಿ ಪ್ರೀತಿಸುವುದು ಸುಳ್ಳಲ್ಲವಾ? ನನಗೆ ನಾನೇ ಪ್ರಶ್ನೆ ಹಾಕಿಕೊಳ್ಳುತ್ತಲೇ ಇದ್ದೇನೆ. ಪ್ರಶ್ನೆ ಪ್ರಶ್ನೆಯಾಗಷ್ಟೇ ಉಳಿದಿದೆ. ಅಂದು ನನಗಿದ್ದ ಒಂದೇ ಭರವಸೆಯಂದರೆ ನನ್ನ ಮನದ ಬಯಕೆಗಳನ್ನು ಮನದಲ್ಲೇ ಕೊನೆಪಕ್ಷ ನಿನ್ನ ಮದುವೆಯವರೆಗಾದರೂ ಅಡಗಿಸಿಟ್ಟುಕೊಳ್ಳಬಲ್ಲೆನೆಂಬ ನಂಬುಗೆ. ಆದರೆ ಕೊನೆಯ ದಿನ ನೀನಾಗೇ ಆ ವಿಷಯವನ್ನು ಪ್ರಸ್ತಾಪಿಸುತ್ತೀಯೆಂದು ನಿರೀಕ್ಷಿಸಿರಲಿಲ್ಲ. ಏನುತ್ತರಿಸಬೇಕೆಂದು ತಿಳಿಯಲಿಲ್ಲ. ‘ನಿನ್ನ ಬಗ್ಗೆ ನನ್ನಲ್ಲಿ ಆ ರೀತಿಯ ಭಾವನೆಗಳಿಲ್ಲ’ ಅಂದರೆ ಸುಳ್ಳಾಡಿದಂತಾಗುತ್ತಿತ್ತು. ‘ಇಲ್ಲ ಕಣೇ ಭವ್ಯ. ನನಗೀಗಾಲೇ ಮದುವೆ ನಿಶ್ಚಯವಾಗಿದೆ’ ಎಂದು ಹೇಳಿಬಿಟ್ಟಿದ್ದರೆ ಬಹುಶಃ ಬಹಿರಂಗದಲ್ಲಿ ನೀನು ನಕ್ಕು ಸುಮ್ಮನಾಗಿ ನಮ್ಮ ಗೆಳೆತನ ಮುಂದುವರಿಯುತ್ತಿತ್ತೇನೋ? ಆದರೆ ನನ್ನ ಮನದಲ್ಲಿ ನಿನ್ನೆಡೆಗಿದ್ದ ಪ್ರೀತಿಯ ಭಾವ ಕಡಿಮೆಯಾಗುತ್ತಿತ್ತಾ? ಇಂದಿಗೂ ಅದು ಮರೆಯಾಗಿಲ್ಲ, ಕೊಂಚವೂ ಮುಕ್ಕಾಗಿಲ್ಲ ಎಂದಷ್ಟೇ ಹೇಳಬಲ್ಲೆ. ಬಹುಶಃ ನಿನ್ನ ಮರೆಯಬಾರದೆಂದೇ ನಿನ್ನ ಮೆಚ್ಚುಗೆಯ ಅಲೋಕ್ ಎಂಬ ಹೆಸರನ್ನು ನನ್ನ ಮಗನಿಗೆ ಇಟ್ಟಿರಬೇಕು.
ಈಗ, ನನ್ನ ಮೆಚ್ಚಿನ ಭಾರ್ಗವಿ ಸತ್ತ ನಂತರ ನನ್ನ ಮನದ ಭಾವನೆಗಳನ್ನು ಹಂಚಿಕೊಳ್ಳುವುದರಲ್ಲಿ ನಿನಗೇನಾದರೂ ಸ್ವಾರ್ಥತೆ ಕಾಣುತ್ತಿದ್ದರೆ ಅದು ಸತ್ಯ. ನಿನಗಿನ್ನೂ ಮದುವೆಯಾಗಿಲ್ಲವೆಂದು ತಿಳಿಯಿತು. ಮತ್ಯಾರನ್ನಾದರೂ ಪ್ರೀತಿಸಿದ್ದೀಯಾ? ಅಥವಾ ಮದುವೆ ನಿಶ್ಚಯವಾಗಿದೆಯಾ? ತಿಳಿಯದು. ಅಂಥದ್ದೇನಾದರೂ ಇದ್ದರೆ ನಿನ್ನ ಕಾಲಬಳಿಯ ಕಸದಬುಟ್ಟಿಗೆ ಇದನ್ನು ಬಿಸುಟುಬಿಡು. ಮೂರು ವರ್ಷದಿಂದ ನನ್ನಂಥ ನಿರ್ಭಾವುಕನನ್ನೇ ಮನದಲ್ಲಿಟ್ಟುಕೊಂಡು ಕಾಯುತ್ತಿರುತ್ತಾಳೆ ಎಂದುಕೊಳ್ಳುವುದು ಮೂರ್ಖತನ ಅಲ್ವ! ಆದರೂ ಪರವಾಗಿಲ್ಲ, ನಗೆಪಾಟಲಿಗೀಡಾದರೂ ಚಿಂತಿಲ್ಲ ಕೊನೇ ಪಕ್ಷ ವರುಷಗಳಿಂದ ಯಾರಲ್ಲೂ ಹಂಚಿಕೊಳ್ಳಲಾಗದೆ ಉಳಿದು ಹೋಗಿರುವ ಭಾವನೆಗಳಿಂದಾದರೂ ಬಿಡುಗಡೆ ಪಡೆದೇನು. ಇಷ್ಟರಲ್ಲಾಗಲೇ ನನ್ನ ಮಾತಿನ ಅರ್ಥವಾಗಿರಬೇಕು ನಿನಗೆ. ನೀನಂದು ಕೇಳಿದ ಪ್ರಶ್ನೆಯನ್ನೇ ನಾನಿಂದು ಕೇಳುತ್ತಿದ್ದೇನೆ ಭವಿ. ಕಾಲ ಪರಿಸ್ಥಿತಿಯೆಲ್ಲ ಬದಲಾಗಿದೆ. ನನಗಿಂತ ಕಟುವಾಗಿ ವರ್ತಿಸುವ ಹಕ್ಕು ನಿನಗಿದ್ದೇ ಇದೆ. ಮತ್ತದು ಸಮರ್ಥನೀಯವೂ ಹೌದು.
ಇನ್ನೇನು ಹೇಳಲು ಉಳಿದಿಲ್ಲ ಭವಿ. ಯಾವುದಕ್ಕೂ ಅಲೋಕನನ್ನು ಒಮ್ಮೆ ಹೋಗೆ ನೋಡು, ಈ ತಕ್ಷಣ.
ಇಂತಿ, ರಾಕಿ.”
          ಕಣ್ಣೊರೆಸಿಕೊಂಡು ವಾರ್ಡಿನೆಡೆಗೆ ಹೆಜ್ಜೆ ಹಾಕಿದಳು. ಔಷಧಿಯ ಬಾಟಲನ್ನೇ ಆಟಿಕೆಮಾಡಿಕೊಂಡು ಕುಳಿತಿದ್ದ ಅಲೋಕ್. ರಾಕಿ ಕಾಣಲಿಲ್ಲ. ಹೋಗಿ ಅವನ ಪಕ್ಕ ಕುಳಿತಳು.
          “ಅಪ್ಪ ಎಲ್ಲಿಗೋದ್ರು ಅಲೋಕ್”
          “ಏನೋ ಕೆಲಸವಿದೆ ಅಂತ ಹೊರಗ್ಹೋದ್ರು” ಆಟದಲ್ಲೇ ಮುಳುಗಿದ್ದ.
          “ನಿನ್ನನ್ನು ಕರೆದುಕೊಂಡು ಹೋಗೋದಿಕ್ಕೆ ಯಾವಾಗ ಬರ್ತಾರಂತೆ”
          “ಏನೋ ಗೊತ್ತಿಲ್ಲಿಪ್ಪ. ‘ನಿನ್ನ ಕರೆದುಕೊಂಡು ಬರೋದಿಕ್ಕೆ ಅಮ್ಮ ಬರ್ತಾರೆ. ಅಕಸ್ಮಾತ್ ಸಂಜೆಯವರೆಗೂ ಅಮ್ಮ ಬರದಿದ್ದರೆ ಐದು ಘಂಟೆಯ ಮೇಲೆ ನನಗೆ ಫೋನ್ ಮಾಡು’ ಅಂದರು. ಅಲ್ಲಾ? ಇಷ್ಟು ದಿನದಿಂದ ಬರದೇ ಇರೋ ಅಮ್ಮ ಇವತ್ತು ಬರ್ತಾರಾ?” ಪ್ರಶ್ನಾರ್ತಕವಾಗಿ ಭವ್ಯಳೆಡೆಗೆ ನೋಡಿದ. ಮುಗುಳ್ನಕ್ಕು ಅಲೋಕನನ್ನು ಎದೆಗವಚಿಕೊಂಡಳು.

2 comments:

  1. ಕಥೆ ಮತ್ತೆ ನೀವದನ್ನು ಹೇಳಿದ ರೀತಿ ಚೆನ್ನಾಗಿದೆ.ಆದರೆ,ಇಂತ ಕಥಾನಾಯಕನಿಗೆ ’ರಾಕಿ’ ಅನ್ನುವ ಒಳ್ಳೆ ಹೆಸರನ್ನಿಟ್ಟದ್ದಕ್ಕೆ ನನ್ನ ಆಕ್ಷೇಪವಿದೆ :)

    "‘ಅಬ್ಬಬ್ಬಾ! ಇವನು ಇಷ್ಟೊಂದು ಮಾತನಾಡ್ತಾನಾ?’ ಅಚ್ಚರಿಪಟ್ಟಳು" ... ಬಹುಷಃ ರಾಕೇಶ್ ಅನ್ನೋ ಹುಡುಗರು ಹೀಗೆ ಇರಬಹುದಾ? :)

    ReplyDelete
  2. Sir,
    Thumbha kado kathe. Antya kushi aythu.
    Seema

    ReplyDelete