Apr 25, 2012

ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!

siachen glacier; source
ಡಾ ಅಶೋಕ್. ಕೆ. ಆರ್.
ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ [ಅನಧಿಕೃತ ವರದಿ; ಅಧಿಕೃತ ವರದಿಯನ್ನು ಎರಡೂ ದೇಶದ ಸರಕಾರಗಳು ಬಹಿರಂಗಗೊಳಿಸುವುದಿಲ್ಲ]. ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. 80%ಗಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ! ಪ್ರಕೃತಿಯ ಪ್ರಮುಖಾಯುಧ ಹಿಮ!! ಇದು ಸಿಯಾಚಿನ್ ಯುದ್ಧಭೂಮಿ.


ಆಪರೇಷನ್ ಮೇಘದೂತ: -

          ಬಾಂಗ್ಲಾದೇಶದ ವಿಮೋಚನಾ ಯುದ್ಧದ ನಂತರ 1972ರಲ್ಲಿ ಸಿಮ್ಲಾ ಒಪ್ಪಂದಕ್ಕೆ ಯು.ಎನ್ ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕುತ್ತವೆ. ಗಡಿರೇಖೆಯನ್ನು ವಿವರಿಸುವ ಆ ಒಪ್ಪಂದದಲ್ಲಿ ಸಿಯಾಚಿನ್ ಸೇರಿರಲಿಲ್ಲ. ಹಿಮಚ್ಛಾದಿತ ಮರುಭೂಮಿಯ ಮೇಲೆ ಹಕ್ಕು ಸಾಧಿಸಲು ಇವೆರಡೂ ದೇಶಗಳು ಬಡಿದಾಡಲಾರವು ಎಂದುಕೊಂಡಿತ್ತು ಯು.ಎನ್. ಆದರೆ ನಡೆದಿದ್ದೇ ಬೇರೆ! 1967ರಿಂದಲೇ ಅಮೆರಿಕಾದ ರಕ್ಷಣಾ ಸಂಸ್ಥೆಗಳು ತಯಾರಿಸಿದ ನಕ್ಷೆಗಳಲ್ಲಿ ಸಿಯಾಚಿನ್ ಪ್ರದೇಶವನ್ನು ಯಾವುದೇ ಐತಿಹಾಸಿಕ ಆಧಾರಗಳಿಲ್ಲದಾಗ್ಯೂ ಪಾಕಿಸ್ತಾನದ ಭಾಗವಾಗಿ ತೋರಿಸಲಾರಂಭಿಸಿತು. ಪಾಕಿಸ್ತಾನ ಕೂಡ ಅಮೆರಿಕದ ಕುಮ್ಮಕ್ಕಿನಿಂದಾಗಿ ಕ್ರಮೇಣವಾಗಿ ಸಿಯಾಚಿನ್ ಪ್ರದೇಶದ ಮೇಲೆ ಹಕ್ಕು ಚಲಾಯಿಸಲಾರಂಭಿಸಿತು. ಪಾಕಿನ ಈ ವರ್ತನೆಯನ್ನು ಗಮನಿಸಿದ ಭಾರತ ಸರಕಾರ ಕೂಡ ತನ್ನ ಸೈನ್ಯವನ್ನು ‘ಎತ್ತರದ ಪ್ರದೇಶಗಳಲ್ಲಿ ಯುದ್ಧ ತರಬೇತಿಯ’ ನೆಪದಲ್ಲಿ ಸಿಯಾಚಿನ್ ಪ್ರದೇಶಕ್ಕೆ ನಿಯೋಜಿಸಲಾರಂಭಿಸಿತು.

          ಕುದಿಯಲಾರಂಭಿಸಿದ ದ್ವೇಷ 1984ರಲ್ಲಿ ಯುದ್ಧ ರೂಪವನ್ನು ಪಡೆಯಿತು. ಸಿಯಾಚಿನ್ ಪ್ರದೇಶವನ್ನು ಹಿಂಪಡೆದುಕೊಳ್ಳಲು ಆಪರೇಷನ್ ಮೇಘದೂತದ ಹೆಸರಿನಲ್ಲಿ ಭಾರತದ ಸೈನಿಕರು ಸಿಯಾಚಿನ್ ಏರಲಾರಂಭಿಸಿದರು. ಸರಿಸುಮಾರು ಸಾವಿರ ಚದುರ ಮೈಲು ಪ್ರದೇಶವನ್ನು ವಶಪಡಿಸಿಕೊಳ್ಳುವುದರಲ್ಲಿ ಭಾರತ ಸಫಲವಾಗಿ ಯುದ್ಧದಲ್ಲಿ ಗೆಲುವು ಪಡೆಯಿತು.

ಹಿಮವನ್ನುಳಿಸಿಕೊಳ್ಳಲು ತೆರುತ್ತಿರುವ ಬೆಲೆಯೆಷ್ಟು? 

          ಅಂದಿನಿಂದ ಈ ಪ್ರದೇಶವನ್ನು ಪುನರ್ ವಶಪಡಿಸಿಕೊಳ್ಳಲು ಪಾಕಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ತಮ್ಮ ಪ್ರಯತ್ನದಲ್ಲಿ ವಿಫಲರಾಗುತ್ತಿದ್ದಾರೆ ಎಂಬುದನ್ನು ಹೇಳಬೇಕಿಲ್ಲವೇನೋ?! ಎರಡೂ ದೇಶಗಳ ಸೈನಿಕರು ವರ್ಷಪೂರಾ ಇಲ್ಲಿ ಕಾವಲಿದ್ದಾರೆ. ಒಂದು ಮೂಲದ ಪ್ರಕಾರ ಪಾಕಿಸ್ತಾನ ವರ್ಷಂಪ್ರತಿ 200 -300 ಮಿಲಿಯನ್ ಡಾಲರ್ ಗಳಷ್ಟು ಹಣವನ್ನು ಈ ಪ್ರದೇಶಕ್ಕೇ ವ್ಯಯಿಸುತ್ತಿದೆ. ಪಾಕಿಗಳಿಗಿಂತ ಹೆಚ್ಚು ಪ್ರದೇಶವನ್ನು ಹತೋಟಿಯಲ್ಲಿಟ್ಟುಕೊಂಡಿರುವ ಭಾರತ ಅವರಿಗಿಂತ ಇನ್ನೂ ಅಧಿಕ ಮೊತ್ತವನ್ನು ಖರ್ಚುಮಾಡುತ್ತಿದೆ.

          ಹಣದ ವಿಷಯ ಪಕ್ಕಕ್ಕಿರಲಿ. ಈ ಹಿಮಚ್ಛಾದಿತ ಪ್ರದೇಶಗಳನ್ನು ಉಳಿಸಿಕೊಳ್ಳುವ ‘ಪ್ರತಿಷ್ಠೆಗಾಗಿ’ ನಿಜವಾಗಿಯೂ ಬೆಲೆ ತೆರುತ್ತಿರುವುದು ಎರಡೂ ದೇಶದ ಸೈನಿಕ ಸಮೂಹ. – 50ಡಿಗ್ರಿಯ ಚಳಿ, ಆಮ್ಲಜನಕದ ಕೊರತೆ, ಕಣ್ಣಿಗೆ ಬಡಿಯುವ ಹಿಮದ ಪ್ರತಿಫಲನ ಸೈನಿಕರಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಅವುಗಳನ್ನು ಹೇಗೋ ನಿಭಾಯಿಸುವೆವು ಎಂದುಕೊಳ್ಳುವಷ್ಟರಲ್ಲಿ ಪ್ರಕೃತಿ ಮುನಿದೇಳುತ್ತದೆ. ಹಿಮದ ಪದರಗಳು ಜಾರಿ ಪ್ರಕೃತಿಗೆ ಸೆಡ್ಡು ಹೊಡೆದ ಮನುಷ್ಯನನ್ನು ಅವನ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಮೇತ ನುಂಗಿ ಹಾಕುತ್ತಿದೆ. ಹಿಮ ಪದರದ ಜಾರುವಿಕೆ ನೈಸರ್ಗಿಕವಾಗಿಯೇ ನಡೆಯುತ್ತದಾದರೂ ಮಾನವನ ಓಡಾಟ ಆ ಜಾರುವಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. 
 
          ಸಿಯಾಚಿನ್ ಪ್ರದೇಶವನ್ನು ಮಿಲಟರಿ ಮುಕ್ತ ಪ್ರದೇಶ ಮಾಡಬೇಕೆಂಬ ಒತ್ತಾಯ ಮತ್ತೆ ಶುರುವಾಗಿದೆ. ಕಾರಣ ಕೆಲವು ದಿನಗಳ ಹಿಂದಷ್ಟೇ ಏಪ್ರಿಲ್ 7ರಂದು ಪಾಕಿಸ್ತಾನದ ನೂರಕ್ಕೂ ಹೆಚ್ಚು ಸೈನಿಕರು ಹಿಮದಲ್ಲಿ ಸಮಾಧಿಯಾಗಿದ್ದಾರೆ. 80 ಅಡಿಯ ಹಿಮದೊಳಗೆ ಅಡಗಿಹೋದ ದೇಹಗಳನ್ನೊರತೆಗೆಯುವ ಕೆಲಸ ಇನ್ನೂ ಸಾಗುತ್ತಲಿದೆ. ‘ಮೊದಲು ಭಾರತ ತನ್ನ ಸೈನ್ಯವನ್ನು ವಾಪಸ್ಸು ಕರೆಸಿಕೊಳ್ಳಲಿ’ ಎಂದು ಪಾಕ್ ‘ಮೊದಲು ನೀವೇ ಹಿಂದೆ ಹೋಗಿ’ ಅಂತ ಭಾರತ. ಒಟ್ಟಿನಲ್ಲಿ ಅಪನಂಬುಗೆಯಲ್ಲೇ ಒಬ್ಬರೊನ್ನೊಬ್ಬರು ಕಾಣುವ ಎರಡೂ ದೇಶಗಳು ಸದ್ಯಕ್ಕಂತೂ ಸೈನ್ಯವನ್ನು ವಾಪಸ್ಸು ಕರೆಸಿಕೊಳ್ಳುವ ಯೋಚನೆಯಲ್ಲಿಲ್ಲ. ಯಮರೂಪಿ ಹಿಮಪದರಗಳು ಭಾರತದವನೋ ಪಾಕಿಯೋ ಎಂಬುದನ್ನು ಗಮನಕ್ಕೇ ತೆಗೆದುಕೊಳ್ಳದೆ ಮರಣಮೃದಂಗ ಬಾರಿಸುತ್ತಲೇ ಇದೆ.

No comments:

Post a Comment