Mar 8, 2012

ತಾಕತ್ತಿದ್ದರೆ ಇದನ್ನೂ ಬ್ರೇಕಿಂಗ್ ನ್ಯೂಸ್ ಮಾಡಿ!!

ಪತ್ರಕರ್ತರ ಗ್ರಹಚಾರವೇ ನೆಟ್ಟಗಿಲ್ಲವೇನೋ! ದುಡ್ಡು ತೆಗೊಂಡು ವರದಿ ಮಾಡಿದ ಆರೋಪ ಎದುರಿಸಿದ್ದಾಯಿತು, ಪತ್ರಕರ್ತ ಜೇ ಡೇ ಹತ್ಯೆ ಪ್ರಕರಣದಲ್ಲಿ ಪತ್ರಕರ್ತೆಯೊಬ್ಬರ ಬಂಧನ ನಡೆಯಿತು, ಇತ್ತೀಚೆಗೆ ದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಛೇರಿ ಮೇಲೆ ನಡೆದ ದಾಳಿಯಲ್ಲೂ ಮೊದಲ ಬಂಧನವಾಗಿರುವುದು ಒಬ್ಬ ಪತ್ರಕರ್ತ! ಅಫ್ ಕೋರ್ಸ್ ಇದ್ಯಾವುದೂ ಇನ್ನು ಸಾಬೀತಾಗದ ಆರೋಪಗಳು, ಆದರೆ ಇತರರ ಮೇಲೆ ಆರೋಪಪಟ್ಟಿ ತಯಾರಾಗುವ ಮುಂಚೆಯೇ ಆರೋಪಿ ಪಟ್ಟ ಕಟ್ಟಿ ನ್ಯೂಸನ್ನು ಬ್ರೇಕ್ ಮಾಡುತ್ತಲೇ ಸಾಗುವ ಪತ್ರಕರ್ತರ ಮೇಲೆ ಆರೋಪ ಬಂದಾಗಲೂ ಸಾಬೀತಾಗುವ ಮೊದಲು ಆರೋಪಿಯೆಂದು ಗಣಿಸುವುದರಲ್ಲಿ ತಪ್ಪಿಲ್ಲವೇನೋ!!

ಈಗ ಹೊಸದಾಗಿ ಪತ್ರಕರ್ತರ ಮೇಲೆ ಬಿದ್ದಿರುವವರು ಕರ್ನಾಟಕದ ವಕೀಲರು! ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾಯಿತು, ಪೋಲೀಸರಿಗೆ ಹೊಡೆದಿದ್ದಾಯಿತು. ಕೊನೆಗೆ ಹೊಡೆತ ತಿಂದು ಆಸ್ಪತ್ರೆ ಸೇರಿದ್ದೂ ಆಯಿತು. ಎಲ್ಲ ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ವಕೀಲರ ವಿರುದ್ಧ ಲೇಖನ ಬರಲಾರಂಭಿಸಿತು. ಎಲ್ಲೋ ಕೊನೆಕೊನೆಗೆ ಮುದ್ರಣ ಮಾಧ್ಯಮದಲ್ಲಿ ವಕೀಲರ ಹೇಳಿಕೆಗಳನ್ನೂ ಪ್ರಕಟಿಸಲಾರಂಭಿಸಿದ್ದು ಬಿಟ್ಟರೆ ದೃಶ್ಯಮಾಧ್ಯಮಗಳಲ್ಲಿ ಇಂದಿಗೂ ವಕೀಲರ ವಿರುದ್ಧವಾಗಿಯೇ ಸುದ್ದಿ ಪ್ರಸಾರವಾಗುತ್ತಿದೆ.
ಬೇಸತ್ತ ವಕೀಲರು ಸುಮ್ಮನೆ ಕುಳಿತಿಲ್ಲ. ಅಡ್ವೊಕೇಟ್ ಬೆಂಗಳೂರು ಎಂಬ ಅಕೌಂಟ್ ಓಪನ್ ಮಾಡಿ ಯುಟ್ಯೂಬಿನಲ್ಲಿ ಇಲ್ಲಿವರೆಗೆ ೨೯ ವಿಡೀಯೋ ಹಾಕಿದ್ದಾರೆ. ಪೋಲೀಸರ ದೌರ್ಜನ್ಯ, ದಾಂಧಲೆಯ ವಿಡೀಯೋಗಳೇ ಹೆಚ್ಚಿದ್ದವು. ತೀರ ಇತ್ತೀಚಿನ ವಿಡೀಯೋ 'ವಕೀಲರು ನಮ್ಮ ಮೇಲೆ ಅಪ್ರಚೋದಕವಾಗಿ ಹಲ್ಲೆ ನಡೆಸಿದರು' ಎಂಬ ಮಾಧ್ಯಮದ ಹೇಳಿಕೆಗಳನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.

"ಮಾಧ್ಯಮದ ಅಸಲಿ ಬಣ್ಣವನ್ನು ನೋಡಿ" ಎಂದು ಆರಂಭವಾಗುವ ವಿಡೀಯೋದಲ್ಲಿ ಕೆಮರಾ ಹಿಡಿದ ಒಬ್ಬ ಮಾಧ್ಯಮದವನಿದ್ದಾನೆ, ಅವನ ಮುಂದೆ ಮತ್ತೊಬ್ಬ ಮೈಕ್ ಹಿಡಿದವನಿದ್ದಾನೆ. ಅಸಹ್ಯಕರವಾಗಿ ಕೂಗುತ್ತ ತನ್ನ ಪ್ಯಾಂಟಿನ ಜಿಪ್ಪಿಗೆ ಕೈಹಾಕಿ ಬೈಯುತ್ತಾನೆ. ಮೊಬೈಲಿನಲ್ಲಿ ತೆಗೆದ ವಿಡಿಯೋವಾದ್ದರಿಂದ ಮಾತುಗಳು ಕೇಳುವುದಿಲ್ಲ. ತಾಕತ್ತಿದ್ದರೆ ಇದನ್ನು ಪ್ರಸರಿಸಿ ಎಂದಿದ್ದಾರೆ ವಕೀಲರು. ಸದ್ಯದವರೆಗೆ ಮಾಧ್ಯಮದವರದು ದಿವ್ಯ ಮೌನ! ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ವಿವರಿಸುವ ಕೆಲಸವನ್ನು ಯಾವ ವಾಹಿನಿಯೂ ಮಾಡಿದಂತಿಲ್ಲ. ಮುಖ್ಯವಾಹಿನಿಯ ಮಾಧ್ಯಮಗಳನ್ನೇ ಸುದ್ದಿಗಾಗಿ ನಂಬುವ ಜನರಿಗೆ ಸತ್ಯದರಿವಾಗುವುದಾದರೂ ಯಾವಾಗ?

1 comment:

  1. The another face of truth

    really great Ashok sir

    ReplyDelete