ಕೆಲವು ದಿನಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನೊಂದು ಲೇಖನ
ನೆಂಟರೊಬ್ಬರ ಮದುವೆಯಲ್ಲಿ ಊಟಕ್ಕೆ ಕುಳಿತಿದ್ದಾಗ
ಬಾಳೆಎಲೆ ಬಡಿಸುತ್ತಿದ್ದವನಿಗೆ ನನ್ನ ಪಕ್ಕ ಕುಳಿತಿದ್ದ ಚಿಕ್ಕಪ್ಪ ‘ಎಲೆಯ ತುದಿ ಎಡಕ್ಕೆ ಬರುವಂತೆ
ಹಾಕಪ್ಪ’ ಎಂದು ಸೂಚಿಸಿದರು. ಅವನು ಅದನ್ನೇ ಪಾಲಿಸಿದ. ‘ಯಾಕೆ?’ ಪ್ರಶ್ನೆಯೆಸೆದು ಚಿಕ್ಕಪ್ಪನೆಡೆಗೆ
ನೋಡಿದೆ. ‘ಎಲ್ಲಾದಕ್ಕೂ ಯಾಕೆ ಅಂತ ಕೇಳ್ತಾರಾ? ನಡೆದುಕೊಂಡು ಬಂದಿದೆ. ಸಂಪ್ರದಾಯ’ ಅವರ ಉತ್ತರ ಸಿದ್ಧವಾಗಿತ್ತು.
ಉಪ್ಪು, ಕೋಸಂಬರಿ, ಬೀನಿಸ್ಸು ಪಲ್ಯ, ಮೊಸರು ಬಜ್ಜಿ ಎಲ್ಲ ಬಡಿಸಿದರು. ಎಲೆ ನೋಡಿದೆ. ಸಂಪ್ರದಾಯವೂ
ಅಲ್ಲ, ಮಣ್ಣೂ ಅಲ್ಲ ಎಂದು ಎಲೆ ನೋಡುತ್ತಿದ್ದಂತೆ ತಿಳಿಯಿತು! ಹೆಚ್ಚಾಗಿ ನಾವೆಲ್ಲ ಬಲಗೈ ಉಪಯೋಗಿಸುವವರು.
ಎಲೆಯ ಬಲಭಾಗ ತುದಿಯ ಭಾಗಕ್ಕಿಂತ ಅಗಲವಾಗಿರುತ್ತೆ, ತಿನ್ನಲು ಅನುಕೂಲವಾಗಲಿಕ್ಕಾಗಿ ತುದಿ ಎಡಭಾಗಕ್ಕಿರಬೇಕು
ಎಂಬುದು ಸರಿಯಾದ ವಿವರಣೆ, ಮತ್ತೇನಿಲ್ಲ. ಬಹಳಷ್ಟು ಆಚರಣೆಗಳ ಹಿಂದೆ ವೈಚಾರಿಕ ಕಾರಣವಿರುತ್ತದೆಯಾದರೂ
ಆ ಆಚರಣೆಗಳು ಇವತ್ತಿನ ಮಟ್ಟಿಗೆ ಎಷ್ಟು ಪ್ರಸ್ತುತ ಎಂಬುದರ ಬಗ್ಗೆ ನಾವು ಸ್ವಲ್ಪ ಯೋಚಿಸಬೇಕಷ್ಟೇ.