ಡಾ ಅಶೋಕ್. ಕೆ. ಆರ್
ಶಿಕ್ಷಣದ ಮೂಲಉದ್ದೇಶ ನಮ್ಮನ್ನು ಸಾಕ್ಷರಗೊಳಿಸುವುದರ ಜೊತೆಗೆ ನಮ್ಮನ್ನು
ವಿಚಾರಪ್ರಿಯರನ್ನಾಗಿ ಮಾಡಿ ನಮ್ಮ ವೈಚಾರಿಕತೆಯನ್ನು ಉನ್ನತ ಮಟ್ಟಕ್ಕೇರಿಸಿ ಹಳೆಯ ಆಚಾರ ವಿಚಾರಗಳಲ್ಲಿ
ಉತ್ತಮವಾದ ನಂಬಿಕೆಗಳನ್ನು ಉಳಿಸಿಕೊಂಡು ಮೂಢನಂಬಿಕೆಗಳನ್ನು ತೊಡೆದು ಜಾತಿ – ಧರ್ಮದ ಕಂದಕ ಅಂತರವನ್ನು
ಕಡಿಮೆಗೊಳಿಸಿ ಉತ್ತಮ ಮಾನವರನ್ನಾಗಿ ಮಾಡುವುದು. ಆದರಿವು ಆಗುತ್ತಿದೆಯಾ? ಅತಿ ಹೆಚ್ಚು ಅಂಕಗಳನ್ನು
ಪಡೆಯುವ, ಹೆಚ್ಚು ಶಿಕ್ಷಿತರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾವಂತರೂ {ಕೇವಲ ಸಾಕ್ಷರರು
ಎಂಬುದು ಸರಿಯಾದ ಪದ} ಕೂಡ ಮಡೆ ಮಡೆ ಸ್ನಾನದಂತಹ ಆಚರಣೆಗೆ ಬೆಂಬಲ ವ್ಯಕ್ತಪಡಿಸುವ ರೀತಿ, ಉಗ್ರ ಬಲಪಂಥೀಯ
ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ತಮ್ಮ ಬೇರುಗಳನ್ನು ಆಳವಾಗಿ ಭದ್ರಗೊಳಿಸಿಕೊಳ್ಳುತ್ತಿರುವ
ಬಗೆಯನ್ನು ನೋಡಿದರೆ ಎಲ್ಲೋ ನಮ್ಮ ಶಿಕ್ಷಣ ಹಾದಿ ತಪ್ಪಿದೆ ಎನ್ನಿಸುವುದಿಲ್ಲವೇ? ನಮ್ಮ ತಂದೆಯವರ ಮದುವೆಯ
ಕಾಲದಲ್ಲಿ ಪ್ರಾಮುಖ್ಯತೆ ಪಡೆಯದ ಜಾತಕಫಲ, ಜ್ಯೋತಿಷ್ಯಗಳು [ಆ ಕಾಲದ ಬಹಳಷ್ಟು ಜನರಿಗೆ ತಮ್ಮ ಜನ್ಮದಿನಾಂಕವೇ
ಸರಿಯಾಗಿ ತಿಳಿದಿರುತ್ತಿರಲಿಲ್ಲ, ಇನ್ನು ಜಾತಕ ಕೂಡಿಸುವುದು ಎಲ್ಲಿ ಬಂತು?!] ‘ವಿದ್ಯೆ’ಯ ಮಟ್ಟ ಹೆಚ್ಚುತ್ತಿದ್ದಂತೆ
ಪ್ರಮುಖವಾಗುತ್ತಿವೆ ಏಕೆ?
ಸಚಿವ ಕಾಗೇರಿಯವರು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವ,
ವಿದ್ಯಾರ್ಥಿಗಳು ಬಾರದ ಕನ್ನಡ ಶಾಲೆಗಳನ್ನು ಮುಚ್ಚುವ ಮಾತುಗಳನ್ನಾಡಿದ ನಂತರ ಶಿಕ್ಷಣದ ಮಾಧ್ಯಮದ ಭಾಷೆ
ಯಾವುದಿರಬೇಕೆಂಬ ಬಗ್ಗೆ ಮತ್ತೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಇವತ್ತಿನ ಮಟ್ಟಿಗೆ ಶಿಕ್ಷಣದ ಉದ್ದೇಶ
ಕೆಲಸ ಪಡೆಯಲು ಹಣ ಸಂಪಾದಿಲು ಇರುವ ಒಂದು ಮಾನದಂಡ ಅಷ್ಟೇ! ನೀವು ವೈದ್ಯನಾಗಿದ್ದರೆ ಎಷ್ಟು ಜನಪರ ಎಂದಾರೂ
ಕೇಳುವುದಿಲ್ಲ; ಇಂಜಿನಿಯರ್ರಾಗಿದ್ದರೆ ಎಷ್ಟು ಹೊಸ ಸಾಫ್ಟ್ ವೇರ್ ಕಂಡುಹಿಡಿದಿದ್ದೀಯ? ಎಷ್ಟರ ಮಟ್ಟಿಗೆ
ಹೊಸ ರೀತಿಯ ಯೋಜನೆಗಳು ನಿನ್ನಲ್ಲಿವೆ ಎಂದ್ಯಾರು ಪ್ರಶ್ನಿಸುವುದಿಲ್ಲ; ಉಪನ್ಯಾಸಕ ವೃತ್ತಿಯಲ್ಲಿದ್ದರೆ
ಎಷ್ಟರ ಮಟ್ಟಿಗೆ ನಿಮ್ಮ ಪಾಠ ವಿದ್ಯಾರ್ಥಿಗಳನ್ನು ತಲುಪುತ್ತಿದೆ ಎಂದು ಪ್ರಶ್ನಿಸುವವರು ವಿರಳ. ಸಮಾಜ
ಕೇಳುವ ಮೊದಲ ಪ್ರಶ್ನೆ “ಎಷ್ಟು ಸಂಪಾದಿಸುತ್ತಿದ್ದೀಯಾ?” ಎಂದು ಮಾತ್ರ. ಅಲ್ಲಿಗೆ ಶಿಕ್ಷಣದ ಅಂತಿಮ
ಗುರಿ ಕೇವಲ ಹಣ ಗಳಿಸುವಿಕೆ ಮಾತ್ರ ಎಂಬ ಮನಸ್ಥಿತಿಗೆ ತಲುಪಿದ್ದೇವೆ.
ಶಿಕ್ಷಣ ಮಾಧ್ಯಮ ಮಾತೃಭಾಷೆಯಲ್ಲಿರಬೇಕೋ ಆಂಗ್ಲಭಾಷೆಯಲ್ಲಿರಬೇಕೋ
ಎಂಬುದು ಮತ್ತೊಂದು ಜಿಜ್ಞಾಸೆಯ ಸಂಗತಿ. ಜಪಾನ್ ಚೀನ ಫ್ರಾನ್ಸಿನ ಉದಾಹರಣೆ ತೆಗೆದುಕೊಂಡು ಮಾತೃಭಾಷೆಯ
ಶಿಕ್ಷಣವೇ ಉತ್ತಮವೆಂದು ವಾದಿಸುವವರು ಬಹಳ ಮಂದಿ ಇದ್ದಾರೆ. ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ
ಮುನ್ನ ಸರ್ವಶಿಕ್ಷಣವನ್ನೂ ಕನ್ನಡ [ಅಥವಾ ಭಾರತದ ಯಾವುದೇ ಭಾಷೆ] ಭಾಷೆಯಲ್ಲಿ ಕೊಡುವುದಕ್ಕೆ ನಾವೆಷ್ಟು
ತಯಾರಿದ್ದೇವೆ ಎಂಬುದನ್ನು ಪರಿಶೀಲಿಸಬೇಕು. ಹತ್ತನೇ ತರಗತಿಯವರೆಗೆ, ಪಿ ಯು ಸಿವರೆಗಿನ ಪಠ್ಯಪುಸ್ತಕಗಳು
ಕನ್ನಡದಲ್ಲಿ ಲಭ್ಯವಿದೆ. ಬಿ ಎಸ್ಸಿ, ಬಿ ಎಯ ಪುಸ್ತಕಗಳು ಕೂಡ ತಕ್ಕಮಟ್ಟಿಗೆ ಲಭ್ಯ. ಆದರೆ ಇತರೆ ಉನ್ನತ
ಶಿಕ್ಷಣಗಳಾದ ವೈದ್ಯಕೀಯ, ಇಂಜಿನಿಯರಿಂಗಿನ ಪುಸ್ತಕಗಳು? ಉಹ್ಞೂ ಲಭ್ಯವಿಲ್ಲ. ಎಲ್ಲಾ ಹಂತದ ಪಠ್ಯಪುಸ್ತಕಗಳು
ಕನ್ನಡದಲ್ಲೇ ಲಭ್ಯವಿದ್ದಾಗ ಮಾತ್ರ ಪ್ರಾಥಮಿಕ ಹಂತದಿಂದ ಮಾತೃಭಾಷೆಯ ಶಿಕ್ಷಣಕ್ಕೆ ಒತ್ತು ನೀಡುವುದನ್ನು
ಸಮರ್ಥಿಸಿಕೊಳ್ಳಬಹುದು. ಮೂಲತಃ ನಾನು ವೈದ್ಯವೃತ್ತಿಯಲ್ಲಿರುವುದರಿಂದ ಕನ್ನಡ, ಹಿಂದಿ, ಮಲಯಾಳಿ ಮಾಧ್ಯಮದಿಂದ
ಬಂದ ನನ್ನ ಕೆಲವು ಸ್ನೇಹಿತರು, ವಿದ್ಯಾರ್ಥಿಗಳು ಮೊದಲ ವರ್ಷದ ವೈದ್ಯಕೀಯ ಜೀವನದಲ್ಲಿ ಅನುಭವಿಸಿದ
ಕೀಳರಿಮೆಯನ್ನು ಕಂಡಿರುವೆನು. ಒಂದಷ್ಟು ಜನ ಆ ಕೀಳರಿಮೆ, ಹೊಸ ಆಂಗ್ಲ ಪದಗಳ ಕಲಿಯುವಿಕೆಯಲ್ಲಿನ ಕಷ್ಟದಿಂದಾಗಿ
ಆರು ತಿಂಗಳು, ಒಂದು ವರ್ಷ ಹಿಂದೆ ಉಳಿದರು. ಈ ಸುಖಕ್ಯಾಕೆ ಅವರು ಕನ್ನಡ ಮಾಧ್ಯಮದಲ್ಲಿ ಓದಬೇಕಿತ್ತು?
ಅಲ್ಲಿಗೆ ಶಿಕ್ಷಣದ ಮಾಧ್ಯಮ ನಿರ್ಧಾರವಾಗಬೇಕಿರುವುದು
Ø ಆ ಭಾಷೆಯಲ್ಲಿ ಶೈಕ್ಷಣಿಕ ಅಗತ್ಯದ ಎಲ್ಲ ಪುಸ್ತಕಗಳ ಲಭ್ಯತೆಯ ಮೇಲೆ.
Ø ಕೆಲಸ ಸಂಪಾದಿಸಲು, ಜೀವನ ಸಾಗಿಸಲು ಆ ಭಾಷೆಯ ಉಪಯೋಗ ಅನಿವಾರ್ಯವೆನಿಸಿದಾಗ.
ಇಂದು ಪಾನ್ ಕಾರ್ಡ್, ರೇಷನ್ ಕಾರ್ಡ್ ಆಗಲಿ, ಬಸ್ಸು ರೈಲಿನ ಮುಂಗಡ ಟಿಕೆಟ್ ಬುಕಿಂಗ್ಗಿಗಾಗಲೀ ಆನ್
ಲೈನ್ ನಲ್ಲೇ ಅರ್ಜಿ ತುಂಬುವ ಅವಕಾಶವಿದೆ. ಆದರಲ್ಲೂ ಕೂಡ ಆಂಗ್ಲ ಭಾಷೆಯ ಜ್ಞಾನ ಉಪಯೋಗಕ್ಕೆ ಬರುತ್ತಿದೆಯೇ
ಹೊರತು ಉಳಿದ ಭಾರತೀಯ ಭಾಷೆಗಳಲ್ಲ.
Ø ನನ್ನ ಗೆಳೆಯನೊಬ್ಬ ಹೇಳಿದಂತೆ ಗಣಿತ ಮತ್ತು ವಿಜ್ಞಾನ ಆಂಗ್ಲಭಾಷೆಯಲ್ಲಿ,
ಸಮಾಜ ವಿಜ್ಞಾನ ಮಾತೃಭಾಷೆಯಲ್ಲಿ ಇರುವಂತೆ ನೋಡುವುದು. ಇದರ ಸಾಧಕ ಭಾಧಕಗಳೆಷ್ಟು?
ನಗರಗಳಲ್ಲಿನ ಶಾಲಾ ಕಾಲೇಜುಗಳೆಲ್ಲ ಖಾಸಗಿಯವರ ಸುಪರ್ದಿಯಲ್ಲಿ ಆಂಗ್ಲಮಯವಾಗುತ್ತಿರುವಾಗ
ಹಳ್ಳಿಯ ಸರಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡವನ್ನೇ ಕಡ್ಡಾಯಗೊಳಿಸುವ ಮಾತನಾಡುವುದು ಹಳ್ಳಿ ನಗರಗಳ
ನಡುವೆ ಈಗಾಗಲೇ ಇರುವ ಬೃಹತ್ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತದಷ್ಟೇ. ಕೊನೆಯದಾಗಿ ವ್ಯಕ್ತಿಯ
ಭಾಷಾಪ್ರೇಮ ಅವನ/ಅವಳ ಶೈಕ್ಷಣಿಕ ಭಾಷೆಯ ಮೇಲೆ ಖಂಡಿತ ಅವಲಂಬಿತವಾಗುವುದಿಲ್ಲ. ಪಿ ಯುವರೆಗೂ ಕನ್ನಡದಲ್ಲೇ
ಓದಿದವರು ಆಂಗ್ಲಪ್ರೇಮಿಯಾಗಿ ಬದಲಾದಂತೆ ಆಂಗ್ಲಮಾಧ್ಯಮದಲ್ಲಿ ಓದಿದವರು ತಮ್ಮ ಮಾತೃಭಾಷೆಯ ಬೆಳವಣಿಗೆಗೆ
ಅಪಾರ ಕೊಡುಗೆ ನೀಡಿದ ಬಹಳಷ್ಟು ಉದಾಹರಣೆಗಳುಂಟು. ಆಂಗ್ಲಮಾಧ್ಯಮದ ಶಿಕ್ಷಣ ಕೂಡ ಕೊನೆ (a+b)2
= a2+b2+2ab ಎಂದು ತಿಳಿಯುವುದಕ್ಕೆ ಮಾತ್ರ ಸೀಮಿತಗೊಳ್ಳುತ್ತಿರುವುದು
ಇಂದಿನ ಶಿಕ್ಷಣದ ವೈಫಲ್ಯ.
ನನ್ನ ಅನಿಸಿಕೆಗಳು ಈ ವಿಷಯದ ಬಗ್ಗೆ:
ReplyDeleteಸರ್ಕಾರಿ ಇಂಗ್ಲಿಶ್ ಶಾಲೆ - ಬೇಲಿಯೇ ಎದ್ದು ಹೊಲವ ಮೇಯ್ದೊಡೆ ಕಾಯುವರಾರು ?
http://vasantabanda.blogspot.com/2011/06/sarkara-english-shaale-tegeyodu-sarinaa.html
ರಾಜ್ಯೋತ್ಸವಕ್ಕೆ ಸರ್ಕಾರದ ಉಡುಗೊರೆ - 3 ಸಾವಿರ ಶಾಲೆಗಳಿಗೆ ಬೀಗ !
http://vasantabanda.blogspot.com/2011/10/rajyotsavakke-sarkaarada-udugore-3.html