ಡಾ. ಅಶೋಕ್. ಕೆ. ಆರ್.
ಅಕ್ಟೋಬರ್ 1 – ಪ್ರತಿಯೊಬ್ಬನಿಗೂ ವರ್ಷದ ಯಾವುದಾದರೊಂದು
ದಿನ ಪ್ರಮುಖವಾಗಿರುತ್ತೆ. ಹೈಸ್ಕೂಲಿನಲ್ಲಿ ಪುಂಡಾಟಗಳು; ಮುಂಜಾನೆ ಟ್ಯೂಷನ್ನೂ, ಬೆಳಿಗ್ಗೆ ಕಾಲೇಜು,
ಸಂಜೆ ಮತ್ತೊಂದೆರಡು ಟ್ಯೂಷನ್ನೂ, ರಾತ್ರಿ ಒಂದಷ್ಟು ಓದು – ಪಿ ಯು ಸಿಯಲ್ಲಿ ಬೇರೇನನ್ನೂ ಯೋಚಿಸಲು
ಸಮಯವಿರಲಿಲ್ಲ. ಓದಿದ್ದು ವ್ಯರ್ಥವಾಗದೆ ಮೆಡಿಕಲ್ ಸೀಟು ಸಿಕ್ಕಿ ಇವತ್ತಿಗಾಗಲೇ ಹತ್ತು ವರ್ಷವಾಯಿತು.
ಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿದ ಚೇತನ್ ನ ಪರಿಚಯವಾದ ದಿನವಿದು. ನನ್ನ ಜೀವನದ ಪ್ರಮುಖ ದಿನ.
ಕೆಲವು ವರ್ಷಗಳ ಹಿಂದಿನವರೆಗೂ ನನ್ನಲ್ಲಿ ಉತ್ಸಾಹ ಮೂಡಿಸುತ್ತಿದ್ದ ದಿನ. ಆದರೀಗ? ಆತ್ಮಸಾಕ್ಷಿಯ ಇರಿತಕ್ಕೆ
ಜರ್ಝರಿತನಾಗಿದ್ದೇನೆ.
ಅಕ್ಟೋಬರ್ 2 – ಅದು ಆದರ್ಶಗಳು ಉತ್ಕರ್ಷದಲ್ಲಿದ್ದ
ಕಾಲ. ಆಸ್ಪತ್ರೆಯ ಹತ್ತಿರದ ಅಗ್ರಹಾರ ಸರ್ಕಲ್ಲಿನಲ್ಲಿದ್ದ ಗಣೇಶ ಟೀ ಶಾಪಿನಲ್ಲಿ ಕುಳಿತು ಬೈಟು ಚಾ
ಕುಡಿಯುತ್ತ ಸಿಗರೇಟಿನ ಹೊಗೆಯನ್ನು ಅಂತರ್ಗತವಾಗಿಸುತ್ತಿದ್ದ ಸಮಯದಲ್ಲಾಗಲೀ, ಅರ್ಥವೇ ಇಲ್ಲದ ಚಿತ್ರವೊಂದಕ್ಕೆ
ಹೋಗಿ ಖಾಲಿ ಚಿತ್ರಮಂದಿರದಲ್ಲಿ ಕುಳಿತಾಗಾಗಲೀ, ರಾತ್ರಿ ಹೈವೇ ಡಾಬಾದಲ್ಲಿ ಊಟಕ್ಕೆ ಹೋದಾಗಾಗಲೀ ಬರೀ
ಆದರ್ಶ, ಕ್ರಾಂತಿ, ಹೋರಾಟ, ಬದಲಾವಣೆಯ ಬಗ್ಗೆಯೇ ಮಾತು. ‘ಆದರ್ಶ, ಹೋರಾಟಗಳ ಬಗ್ಗೆ ಘಂಟೆಗಟ್ಟಲೇ ಮಾತನಾಡಿದಾಕ್ಷಣ
ಏನನ್ನೂ ಬದಲಿಸಲಾಗದು. ಕ್ರಾಂತಿಯ ಬಗ್ಗೆ ಮಾತನಾಡುತ್ತಾ ಕಲ್ಪನಾ ಲೋಕದಲ್ಲಿ ವಿಹರಿಸೋದು ಸುಲಭದ ಕೆಲಸ.
ನಿಜಕ್ಕೂ ಮುಂದಿನ ನಮ್ಮ ವಾಸ್ತವ ಜೀವನದಲ್ಲಿ ಇವತ್ತಿನ ಆದರ್ಶಗಳನ್ನು ಪಾಲಿಸುತ್ತೀವಾ?’ ನಿನ್ನ ಗಂಭೀರ
ಮಾತುಗಳಿಗೆ ನಗೆಯಾಡುತ್ತ ‘ಒಳ್ಳೆ ನಿರಾಶವಾದಿ ಕಣಪ್ಪ ನೀನು’ ಎಂದು ಹೇಳುತ್ತ ನಮ್ಮ ಕಲ್ಪನಾ ಲೋಕದ
ಪಯಣವನ್ನು ಮುಂದುವರಿಸುತ್ತಿದ್ದೆವು. ನೆನಪಿದೆಯಾ ಚೇತು? ಗಾಂಧಿ ಬಗ್ಗೆ ಘನಗಾಂಭೀರ್ಯದಿಂದ ಚರ್ಚಿಸುತ್ತ
ನಾವೆಲ್ಲ ಟ್ರಿಪಲ್ ಎಕ್ಸ್ ರಮ್ ಹೀರುತ್ತಿದ್ದರೆ ನಿನ್ನ ಕಣ್ಣಂಚಿನಲ್ಲಿ ಸಣ್ಣ ವ್ಯಂಗ್ಯದ ನಗು. ಆ
ನಗುವನ್ನು ಮರೆಮಾಡೋದಿಕ್ಕೋಸ್ಕರವಾಗಿಯೇ ಮುಖದ ಮುಂದೆ ಸಿಗರೇಟಿನ ಹೊಗೆ ತುಂಬಿಸುತ್ತಿದ್ದೆಯಲ್ಲವೇ?
ನೀನು ಕೊಟ್ಟ ಸ್ಪೂರ್ತಿಯಿಂದ ಡೈರಿ ಬರೆಯೋದಿಕ್ಕೆ
ಆರಂಭಿಸಿ ಒಂಭತ್ತು ವರ್ಷವಾಯಿತು. ನನ್ನ ಮನೆಯವರ ಕೈಗೆ ಸಿಕ್ಕಿದರೆ ಏನೇನಾಗುತ್ತಿತ್ತೋ?!
ಅಕ್ಟೋಬರ್ 3 –
ಜೀವದ ಗೆಳೆಯ ಚೇತನ್,
ಸುಮನ ನನ್ನನ್ನು ತೊರೆದು ಬೇರೆಯವನನ್ನು ವರಿಸಿದ
ದಿನ ಅನುಭವಿಸಿದ ಯಾತನೆ, ಬೇಸರವನ್ನು ಇವತ್ತಿಗೂ ಮರೆಯಲಾಗಿಲ್ಲ. ಅದಕ್ಕಿಂತಲೂ ಮಿಗಿಲಾದ ಬೇಸರವಿರಲು
ಸಾಧ್ಯವೇ ಇಲ್ಲವೆಂದು ಭಾವಿಸಿದ್ದೆ. ಇಂದು ಮನದಲ್ಲಿ ಮೂಡುತ್ತಿರುವ ಬೇಸರ, ಜಿಗುಪ್ಸೆ; ಈ ಭಾವನೆಗಳನ್ನೆಲ್ಲ
ಹೇಳಿಕೊಳ್ಳಲು ಹತ್ತಿರದವರ್ಯಾರೂ ಇಲ್ಲದ ಅಸಹಾಯಕತೆ....
“ಏನು ಡಾಕ್ಟ್ರೋ ಇವನು. ದುಡ್ಡು ದುಡ್ಡು ಅಂತ ಸಾಯ್ತಾನೆ.
ಐದ್ಸಾವಿರ ಕಟ್ಟಿದ್ದೀವಿ ಸರ್, ಇನ್ನು ಐದು ಸಾವಿರ ಊರಿನಿಂದ ತರ್ತಿದ್ದಾನೆ ನನ್ನ ತಮ್ಮ, ನೀವು ಆಪರೇಷನ್
ಮುಗಿಸುವಷ್ಟರಲ್ಲಿ ತಂದು ಕಟ್ತೀವಿ ಅಂದ್ರೂ ಪೂರ್ತಿ ದುಡ್ಡು ಕಟ್ಟದಿದ್ದರೆ ನಾಡಿಮಿಡಿತಾನೂ ನೋಡಲ್ಲ
ಅಂದ್ಬಿಟ್ಟ. ಧನ ಪಿಶಾಚಿ” ರೋಗಿಯೊಬ್ಬರ ಕಡೆಯವರು ನನ್ನ ಬಗ್ಗೆ ಆಡುತ್ತಿದ್ದ ಮಾತುಗಳಿವು. ಬಹುಶಃ
ನನ್ನೆಲ್ಲಾ ರೋಗಿಗಳು ಹೀಗೇ ಮಾತನಾಡುತ್ತಾರೇನೋ? ಇವರ ಮಾತು ಮಾತ್ರ ಆಕಸ್ಮಿಕವಾಗಿ ಕೇಳಿಸಿಬಿಟ್ಟಿತು.
‘ಬಡ ರೋಗಿಗಳ ಬಳಿ ಕಡಿಮೆ ಹಣ ತೆಗೆದುಕೊಳ್ಳಬೇಕು.
ಪ್ರತಿ ಭಾನುವಾರ ಹಳ್ಳಿಗಳಲ್ಲಿ ಉಚಿತ ಕ್ಯಾಂಪ್ ಮಾಡಬೇಕು. ಡ್ರಗ್ ಕಂಪನಿಗಳಿಂದ ಯಾವತ್ತಿಗೂ ಕಮಿಷನ್
ತೆಗೆದುಕೊಳ್ಳಬಾರದು...’ಸಾವಿರ ಕನಸುಗಳಿದ್ದವು. ಕನಸು ಹಂಚಿಕೊಳ್ಳಲು, ತುಂಬಲು ನಿನ್ನಂಥ ಗೆಳೆಯರಿದ್ದರು.
ನೀನು ಹೇಳಿದ್ದು ಸತ್ಯ. ವಾಸ್ತವದ ಪ್ರವಾಹದಲೆಗಳಿಗೆ ಎದುರಾಗಿ ಆದರ್ಶದ ಹಾಯಿದೋಣಿ ಮುಳುಗದಂತೆ ತಡೆದು
ಗುರಿಯತ್ತ ಹುಟ್ಟುಹಾಕುವುದು . . .ನನ್ನಿಂದಂತೂ ಸಾಧ್ಯವಾಗಲಿಲ್ಲ.
ಸರ್ಜರಿ ಸೀಟಿಗೆ ದುಡ್ಡು ಕಟ್ಟಲು ಬ್ಯಾಂಕಿನಿಂದ
ಹದಿನೈದು ಲಕ್ಷ ಸಾಲ ತೆಗೆದುಕೊಂಡಾಗಲೇ ನೀನು ಎಚ್ಚರಿಸಿದ್ದೆ. ‘ಈ ಸಾಲ ತೀರಿಸುವುದಕ್ಕಾದರೂ ನಿನ್ನೆಲ್ಲ
ಕನಸುಗಳನ್ನು ತಾತ್ಕಾಲಿಕವಾಗಿಯಾದರೂ ತೊಡೆದುಹಾಕಿ ದುಡ್ಡು ವಸೂಲಿಗೆ ನಿಲ್ಲಬೇಕು. ಒಮ್ಮೆ ದುಡ್ಡಿನ
ರುಚಿ ಹತ್ತಿದ ಮೇಲೆ. . .ಹೋಗ್ಲಿಬಿಡು’ ನನಗೂ ಅದು ಸತ್ಯ ಅನ್ನಿಸಿತ್ತು. ಬಹುತೇಕ ಎಲ್ಲ ಗೆಳೆಯರೂ
ಪಿ ಜಿ ಸೀಟು ತೆಗೆದುಕೊಂಡಿದ್ದರು. ಬೇರೆಯವರ ಜೀವನಶೈಲಿ, ಅವರ ಏಳಿಗೆಯಿಂದ ಹಿಗ್ಗದೆ ಕುಗ್ಗದೆ ಬದುಕುವ
ನಿನ್ನ ನಿರ್ಲಿಪ್ತತೆ ನನ್ನಲ್ಲಿರಲಿಲ್ಲ. ಸುತ್ತಲಿನ ಪ್ರಪಂಚವೆಲ್ಲ ಹಣದ ಬೆನ್ನತ್ತಿ ನಿಂತಿರುವಾಗ
ಸೇವೆ, ಜನ, ಆದರ್ಶ ಅಂತ ಮಾತನಾಡುವುದೇ ಅವಮಾನದ, ಅಪಹಾಸ್ಯದ ಸಂಗತಿಯಾತ್ತು. ಪಿ ಜಿ ಗೆ ಸೇರಿದ ನಂತರ
ಜಿಜ್ಞಾಸೆಗಳು ಹೆಚ್ಚುತ್ತಾ ಸಾಗಿದವು. ಮನದಲ್ಲಿ ಉತ್ತರ ಸಿಗದ ಸಾವಿರಾರು ಪ್ರಶ್ನೆಗಳು. ಉತ್ತರ ಕೊಡುವ
ಅರ್ಹತೆಯಿದ್ದ ನೀನು ಯಾರಿಗೂ ಹೇಳದೆ ನಿನ್ನದೇ ದಾರಿಯಲ್ಲಿ ಸಾಗಿಬಿಟ್ಟೆ. ಈಗ ಎಲ್ಲಿದ್ದೀಯೋ? ಘಟ್ಟದ
ಗುಡ್ಡವೊಂದರ ಮೇಲಾ ಅಥವಾ ಪ್ರಪಾತದಲ್ಲಾ?
‘ಆತ್ಮಹತ್ಯೆ ಮಾಡಿಕೊಳ್ಳೋದು ಮಹಾಪಾಪದ ಕೆಲಸ. It is a great sin’ ಹಿಂದೆ ನಾನೇ ಹೇಳುತ್ತಿದ್ದ ಮಾತುಗಳು ಮುಂದೊಂದು ದಿನ ನನ್ನನ್ನೇ ಇರಿಯುತ್ತವೆ ಎಂದೆಣಿಸಿರಲಿಲ್ಲ. ಇಷ್ಟೆಲ್ಲ ಬರೆದ ಮೇಲೂ “ನನ್ನ ಸಾವಿಗೆ ಯಾರೂ ಕಾರಣರಲ್ಲ” ಅಂತ ಬರೆಯೋದು ಮೂರ್ಖತನ. ‘ಇವರೇ ನನ್ನ ಸಾವಿಗೆ ಕಾರಣ’ ಎಂದು ನಿರ್ದಿಷ್ಟವಾಗಿ ಬರೆಯಲು ಎದುರಿಗೆ ಒಬ್ಬ ವ್ಯಕ್ತಿ ನಿಂತಿಲ್ಲ, ಇಡೀ ವ್ಯವಸ್ಥೆಯೇ ಇದೆ. ಮುಂಚೂಣಿಯಲ್ಲಿ ನನ್ನ ಆತ್ಮಸಾಕ್ಷಿ ನಿಂತಿದೆ, ಪಕ್ಕದಲ್ಲಿ ನನ್ನ ಆತ್ಮಸಾಕ್ಷಿಯ ಪ್ರತಿಬಿಂಬದಂತೆ ನೀನು.
‘ಆತ್ಮಹತ್ಯೆ ಮಾಡಿಕೊಳ್ಳೋದು ಮಹಾಪಾಪದ ಕೆಲಸ. It is a great sin’ ಹಿಂದೆ ನಾನೇ ಹೇಳುತ್ತಿದ್ದ ಮಾತುಗಳು ಮುಂದೊಂದು ದಿನ ನನ್ನನ್ನೇ ಇರಿಯುತ್ತವೆ ಎಂದೆಣಿಸಿರಲಿಲ್ಲ. ಇಷ್ಟೆಲ್ಲ ಬರೆದ ಮೇಲೂ “ನನ್ನ ಸಾವಿಗೆ ಯಾರೂ ಕಾರಣರಲ್ಲ” ಅಂತ ಬರೆಯೋದು ಮೂರ್ಖತನ. ‘ಇವರೇ ನನ್ನ ಸಾವಿಗೆ ಕಾರಣ’ ಎಂದು ನಿರ್ದಿಷ್ಟವಾಗಿ ಬರೆಯಲು ಎದುರಿಗೆ ಒಬ್ಬ ವ್ಯಕ್ತಿ ನಿಂತಿಲ್ಲ, ಇಡೀ ವ್ಯವಸ್ಥೆಯೇ ಇದೆ. ಮುಂಚೂಣಿಯಲ್ಲಿ ನನ್ನ ಆತ್ಮಸಾಕ್ಷಿ ನಿಂತಿದೆ, ಪಕ್ಕದಲ್ಲಿ ನನ್ನ ಆತ್ಮಸಾಕ್ಷಿಯ ಪ್ರತಿಬಿಂಬದಂತೆ ನೀನು.
ಅಪರಾಧಿ ಭಾವವೇ ಮನದಲ್ಲಿ ಹುಟ್ಟದವರಿಗೆ ಮಾತ್ರ
ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುವುದು ಸಾಧ್ಯವೇನೋ? ಡೈರಿಯ ಈ ಕೊನೆಯ ಪುಟ ನಿನಗೆ ಬರೆಯುತ್ತಿದ್ದೀನೋ
ಅಥವಾ ನನ್ನೊಳಗಿನ ನನಗೋ? ಎರಡಕ್ಕೂ ಅಂಥ ವ್ಯತ್ಯಾಸವಿರಲಾರದು ಬಿಡು. ಈಗಲೂ ನಾನು ಸರಿದಾರಿಯಲ್ಲಿ ಸಾಗಬಹುದು
ಅನ್ನಿಸುತ್ತೆ. ನನಗೇ ಯಾಕೋ ವಿಶ್ವಾಸವಿಲ್ಲ. ಸಾಯುವ ಇಚ್ಛೆಯಿರದಿದ್ದರೂ ಬದುಕಬೇಕೆಂಬ ಆಸೆ ಸತ್ತುಹೋಗಿದೆ.
. .ಬರುತ್ತೀನಿ ಕಾಮ್ರೇಡ್. . .
Nin aatma kathe na machcha...
ReplyDelete@ veeraj really dont know
ReplyDelete