telangana;source - wikipedia |
ಮತ್ತೆ ತೆಲಂಗಾಣ ಸುದ್ದಿಯಲ್ಲಿದೆ. ಎಲ್ಲ ಸಂಚಾರ ಮಾರ್ಗಗಳನ್ನು
ಮುಚ್ಚಿಸಲಾರಂಭಿಸಿದ್ದಾರೆ ತೆಲಂಗಾಣ ರಾಜ್ಯ ಪರ ಹೋರಾಟಗಾರರು. ಕನ್ನಡ ಪತ್ರಿಕೆಗಳಲ್ಲಿ ಈ ಹೋರಾಟದಿಂದ
ಕರ್ನಾಟಕ್ಕೆ ವಿದ್ಯುತ್ ಉತ್ಪಾದಿಸಲು ಸರಬರಾಜಾಗುವ ಕಲ್ಲಿದ್ದಲ್ಲಿನ ಬಗೆಗಿನ ಚಿಂತೆಯೇ ಅಧಿಕವಾಗಿ
ಪ್ರಕಟವಾಗುತ್ತಿದೆ. ದಶಕಗಳ ಹೋರಾಟದ ಇತಿಹಾಸದ ವಿವಿಧ ಮಜಲುಗಳ ಬಗ್ಗೆ ಬೆಳಕು ಚೆಲ್ಲುತ್ತಿರುವವರೇ
ಕಡಿಮೆ. ತೆಲಂಗಾಣ ಹೋರಾಟದ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳ ಸಂಕ್ಷಿಪ್ತ ಕನ್ನಡಾನುವಾದ
ಹಿಂಗ್ಯಾಕೆ?!ಯಲ್ಲಿ.
ತೆಲಂಗಾಣ ರಾಜ್ಯ ಹೋರಾಟ ಕೇವಲ ರಾಜಕೀಯ ಪುಢಾರಿಗಳಿಂದ
ಪ್ರೇರಿತವಾದುದಲ್ಲ. ಕೆಲವೇ ಕೆಲವು ವರ್ಷಗಳ ಹೋರಾಟವೂ ಅಲ್ಲ. ಭಾರತ ಸ್ವತಂತ್ರಗೊಳ್ಳುವುದಕ್ಕೂ ಮೊದಲು
1946ರಲ್ಲಿ ಆರಂಭವಾದ ರೈತ, ಕಾರ್ಮಿಕರ ಸಶಸ್ತ್ರ ಹೋರಾಟ ಇಂದಿನ ತೆಲಂಗಾಣ ಚಳುವಳಿಯ ಮುನ್ನುಡಿಯೆಂದು
ಪರಿಗಣಿಸಬಹುದು. ತೆಲಂಗಾಣ ಪ್ರಾಂತ್ಯದಲ್ಲಿ ಒಟ್ಟು ಬರುವ ಜಿಲ್ಲೆಗಳು ಹತ್ತು – ಆದಿಲಾಬಾದ್, ಹೈದರಾಬಾದ್,
ಖಮ್ಮಂ, ಕರೀಂನಗರ, ಮೆಹಬೂಬನಗರ, ಮೇದಕ್, ನಲಗೊಂಡ, ನಿಜಾಮಬಾದ್, ರಂಗಾರೆಡ್ಡಿ ಮತ್ತು ವಾರಂಗಲ್. ಒಟ್ಟು
1,14,840 ಚದುರ ಕಿ.ಮಿ ವಿಸ್ತೀರ್ಣದ 35,286,757 ಜನಸಂಖ್ಯೆ ಇರುವ ಪ್ರದೇಶ. ಸಂಯುಕ್ತಾಂಧ್ರದ
42 ಪ್ರತಿಶತಃ ಜನಸಂಖ್ಯೆಯಿದು. ಒಟ್ಟು ಆದಾಯ ಮೂಲದಲ್ಲಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದಿಂದ
18 ಪ್ರತಿಶತಃ ಬಂದರೆ, ತೆಲಂಗಾಣ ಪ್ರದೇಶದ ಆದಾಯ (ಹೈದರಾಬಾದ್ ಜಿಲ್ಲೆಯನ್ನೂ ಸೇರಿಸಿ) 62%!. ಆದರೆ
ಅಭಿವೃದ್ಧಿಯಲ್ಲಿ ಗಾವುದ ದೂರ.
1953ರಲ್ಲಿ ಭಾಷಾವಾರು ಆಧಾರದಲ್ಲಿ ರಾಜ್ಯಗಳನ್ನು
ರಚಿಸಲು ಸಮಿತಿಯನ್ನು ರಚಿಸಲಾಯಿತು. ಭಾಷೆಯಲ್ಲಿ ಸಾಮ್ಯತೆಯಿದ್ದರೂ ಪ್ರಾದೇಶಿಕ ಸಂಸ್ಕೃತಿ ಆಚಾರ ವಿಚಾರಗಳಲ್ಲಿ
ಹೆಚ್ಚೆನಿಸುವಷ್ಟೆ ವ್ಯತ್ಯಾಸಗಳಿರುವ ತೆಲಂಗಾಣ ಮತ್ತು ಆಂಧ್ರದ ಏಕೀಕರಣಕ್ಕೆ ಈ ಸಮಿತಿಗೂ ಹೆಚ್ಚಿನ
ಒಲವಿರಲಿಲ್ಲ. ತಮ್ಮ ಪ್ರದೇಶ ಹಿಂದುಳಿದಿದ್ದಾಗ್ಯೂ ಹೆಚ್ಚಿನ ಆದಾಯವಿತ್ತು. ಆ ಆದಾಯ ಆಂಧ್ರದ ಅಭಿವೃದ್ಧಿಗೆ
ಹೋಗಿಬಿಡಬಹುದೆಂಬುದು ತೆಲಂಗಾಣದವರ ಅಂಜಿಕೆ. ಅದು ನಿಜವಾಗಿದ್ದು ವಿಪರ್ಯಾಸ. ಕೃಷ್ಣ ಮತ್ತು ಗೋದಾವರಿ
ನದಿಗಳ ಹೆಚ್ಚು ಹರಿಯುವಿಕೆ ತೆಲಂಗಾಣದಲ್ಲಿ; ಆದರೆ ಅವುಗಳಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟುಗಳಿಂದ
ಹೆಚ್ಚಿನ ಪ್ರಯೋಜನ ಆಂಧ್ರಕ್ಕೆ. ಬ್ರೀಟೀಷರ ಆಳ್ವಿಕೆಯಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದ ಆಂಧ್ರದವರು
ತಮ ದಕ್ಕಬೇಕಾದ ನೌಕರಿಯನ್ನು ಕಸಿದುಕೊಳ್ಳುತ್ತಾರೆ ಎಂಬ ಭಯ. ಇವೆಲ್ಲವುಗಳನ್ನೂ ಗಮನಿಸಿದ ಸಮಿತಿ
1961 ರವರೆಗೆ ಏಕೀಕರಣ ಜಾರಿಯಲ್ಲಿರಲಿ ನಂತರ ತೆಲಂಗಾಣದ ಹೆಚ್ಚಿನ ಜನರು ಬೇರೆ ರಾಜ್ಯಕ್ಕೆ ಒತ್ತಾಯಿಸಿದರೆ
ರಾಜ್ಯ ಪುನರ್ರಚನೆ ಮಾಡಬೇಕೆಂದು ಕೊಟ್ಟ ಸಲಹೆ ಐವತ್ತು ವರುಷಗಳಾದರೂ ಇನ್ನೂ ಆಚರಣೆಗೆ ಬಂದಿಲ್ಲ.
ಅಂದು ಮತ್ತು ಇಂದು ತೆಲಂಗಾಣ ಚಳುವಳಿಯ ಆತ್ಮ ವಿದ್ಯಾರ್ಥಿಗಳದು.
1968ರಲ್ಲಿ ಒಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸರಕಾರಿ ನೇಮಕಾತಿಯಲ್ಲಿ ತಮಗಾಗುತ್ತಿರುವ
ಅನ್ಯಾಯದ ವಿರುದ್ಧ ಸಿಡಿದೆದ್ದರು. ಅಧಿಕೃತ ಸರಕಾರಿ ವರದಿಗಳ ಪ್ರಕಾರ 23 ಮಂದಿ ಪೋಲೀಸ್ ಶೂಟೌಟ್ ನಲ್ಲಿ
ಮೃತರಾದರು. 2009ರಲ್ಲಿ ಮತ್ತೆ ಪುಟಿದೆದ್ದ ಚಳುವಳಿಯಲ್ಲಿ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡು
ಪ್ರತಿಭಟನೆಯನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದರು. ಪ್ರತಿಭಟನೆಯ ಕಾವಿಗೆ ಬೆದರಿದ ಕೇಂದ್ರ ಸರಕಾರ
ಶ್ರೀ ಕೃಷ್ಣ ಸಮಿತಿಯನ್ನು ರಚಿಸಿ ಡಿಸೆಂಬರ್ 31, 2010ರ ಒಳಗೆ ವರದಿ ಸಲ್ಲಿಸಬೇಕೆಂದು ಆದೇಶಿಸಿತು.
ಪ್ರಸ್ತುರ ಸ್ಥಿತಿಯಲ್ಲಿ ಸಂಯುಕ್ತಾಂಧ್ರದ ಪರಿಕಲ್ಪನೆ ಸರಿಯಲ್ಲವೆಂದು ತನ್ನ ವರದಿಯಲ್ಲಿ ತಿಳಿಸಿದ
ಸಮಿತಿ ತೆಲಂಗಾಣಕ್ಕೆ ಕಡೇ ಪಕ್ಷ ಪ್ರತ್ಯೇಕ ಕೌನ್ಸಿಲ್ ಒಂದನ್ನಾದರೂ ರಚಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿತು.
ತೆಲಂಗಾಣ ರಾಜಕೀಯ ಪಕ್ಷಗಳ ಹತೋಟಿ, ಅಲ್ಲಿನ ಜನರ ಅಭಿಪ್ರಾಯಗಳನ್ನು ಆಂಧ್ರದವರ ಒಡೆತನದಲ್ಲೇ ಹೆಚ್ಚಿರುವ
ಮಾಧ್ಯಮಗಳ ಮುಖಾಂತರ ಬದಲಿಸುವ ಬಗ್ಗೆ ಸಲಹೆಗಳನ್ನೂ ಕೊಟ್ಟಿದ್ದ ಶ್ರೀಕೃಷ್ಣ ವರದಿ ಆಂಧ್ರ ಹೈಕೋರ್ಟಿನಿಂದ
ಛೀಮಾರಿಗೂ ಒಳಪಟ್ಟಿತು. ‘ಇಂಥ ಸಲಹೆಗಳು ಪ್ರಜಾಪೃಭುತ್ವದ ಅಡಿಪಾಯಕ್ಕೇ ಅಪಾಯವುಂಟುಮಾಡುತ್ತದೆ’ ಎಂದು
ನ್ಯಾಯಮೂರ್ತಿ ನರಸಿಂಹ ರೆಡ್ಡಿ ಅಭಿಪ್ರಾಯಪಟ್ಟರು.
ಈಗ ಮತ್ತೆ ತೆಲಂಗಾಣ ಹೋರಾಟ ತಾರಕಕ್ಕೇರಿದೆ. ಕೇಂದ್ರ
ಮತ್ತು ರಾಜ್ಯ ಸರಕಾರಗಳ ಎಂದಿನ ನಿರಾಸಕ್ತ ದೋರಣೆ, ರಾಜಕಾರಣಿಗಳ ಚತುರ ನಡೆಗಳಿಂದ ಅಲ್ಲಿನ ಜನ ಬೇಸತ್ತಿದ್ದಾರೆ.
ಬಂಧನ, ಹಲ್ಲೆಗೊಳಗಾಗುತ್ತಿದ್ದರೂ ಹಿಂದೆಗೆಯುತ್ತಿಲ್ಲ. ರಾಜ್ಯ ಪಡೆದೇ ತೀರುತ್ತೇವೆಂಬ ಅಚಲ ವಿಶ್ವಾಸದಿಂದ
ಅಂತಿಮವೆಂದೇ ಕರೆಯಬಹುದಾದ ಹೋರಾಟಕ್ಕೆ ಅಣಿಯಾಗಿದ್ದಾರೆ. ದಶಕಗಳ ಶೋಷಣೆಗೆ ಈಗಲಾದರೂ ಅಂತ್ಯ ಸಿಗುತ್ತದಾ?
ಕಾದು ನೋಡಬೇಕಷ್ಟೇ.
tumba chennaggide nimma baraha
ReplyDelete