Sep 27, 2011

ಪೀಠದ ಬಾಗಿಲಲ್ಲಿ ಅಜ್ಞಾನದ ಪ್ರಭೆ!

-      ಡಾ ಅಶೋಕ್. ಕೆ. ಆರ್.

ಚಂದ್ರಶೇಖರ ಕಂಬಾರರಿಗೆ ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಸಿಕ್ಕಿದೆ. ಕನ್ನಡಕ್ಕೆ ದಕ್ಕಿದ ಎಂಟನೇ ಜ್ಞಾನಪೀಠ. ಈ ಬಗ್ಗೆ ಸಮಸ್ತರೂ ಸಂತಸ ಪಡಬೇಕಾದ ಸಮಯದಲ್ಲಿ ‘ಅಯ್ಯೋ ನಮ್ಮ ಭೈರಪ್ಪನವರಿಗೆ ಸಿಗಲಿಲ್ಲವಲ್ಲ. ಬರೀ ರಾಜಕೀಯ’ ಎಂದು ಕೆಲವರು ಹಲುಬುತ್ತಿದ್ದಾರೆ. ನನ್ನ ಗೆಳೆಯನೊಬ್ಬ ‘ಭೈರಪ್ಪನವರಿಗೆ ಸಿಕ್ಕದ ಜ್ಞಾನಪೀಠ ಅದು ಅಜ್ಞಾನಪೀಠ’ ಎಂದು ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ಬರುವ ‘ಹಿಂದೂ’ ಧರ್ಮದ ರಕ್ಷಕನಂತೆಯೇ ಉಗ್ರವಾಗಿ ಮೆಸೇಜು ಕಳುಹಿಸಿದ್ದ. ಮೂರು ವರ್ಷದ ನಂತರ ಭೈರಪ್ಪನವರಿಗೆ ಜ್ಞಾನಪೀಠ ದೊರಕಿದಾಗಲೂ ಆಗಲೂ ಈ ಭಕ್ತಿವೃಂದ ‘ರಾಜಕೀಯವಿದು’ ಎಂದು ಹಲುಬುತ್ತಾರಾ?!

          ಕಂಬಾರರ ಶಿಖರಸೂರ್ಯ ಕಾದಂಬರಿ, ಮಾಮೋತ್ಸೇತುಂಗನ ಕುರಿತ ಕವಿತೆಗಳನ್ನಷ್ಟೇ ಓದಿರುವುದು ನಾನು. ಅವರ ಶಿಖರಸೂರ್ಯ ಕಾದಂಬರಿಯೊಂದೇ ಜ್ಞಾನಪೀಠ ಕೊಡಿಸಲು ಸಾಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅದೇ ಭೈರಪ್ಪನವರ ಹೆಚ್ಚಿನಂಶ ಎಲ್ಲ ಕಾದಂಬರಿಗಳನ್ನು ಓದಿಮುಗಿಸಿದ್ದೇನೆ. ಪ್ರತಿಯೊಬ್ಬರೂ ತಮ್ಮದೇ ನೆಲೆಯಲ್ಲಿ ಶ್ರೇಷ್ಠ ಮತ್ತು ತಮ್ಮದೇ ನೆಲೆಯಲ್ಲಿ ಕನಿಷ್ಠರೂ ಆಗಿರುವುದು ಸರ್ವರಿಗೂ ಅನ್ವಯವಾಗುವ ವಾಸ್ತವವಾಗಿರುವಾಗ ಈರ್ವರು ಲೇಖಕರನ್ನು ಹೋಲಿಸಿ ಮಾತನಾಡುವುದೇ ಅಸಂಬದ್ಧ. ಆದರೆ ದುರದೃಷ್ಟವಶಾತ್ ಕನ್ನಡ ಸಾಹಿತ್ಯ ಲೋಕದಲ್ಲಿ ಈ ಅಪಸವ್ಯ ಅವ್ಯಾಹತವಾಗಿ ನಡೆಯುತ್ತಿದೆ. ಹೆಚ್ಚು ಜನರು ಓದುವ, ಅತಿಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಲೇಖಕನಿಗೆ ಪ್ರಶಸ್ತಿ ಕೊಡದಿರುವುದು ಮಹಾಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಹೆಚ್ಚು ಹೋಲಿಕೆಯನ್ನು ಮಾಡದೇ ಈ ‘ಜಗಳ’ವನ್ನು ಗಮನಿಸೋಣ.

          ಮತ್ತೊಂದು ಅಪಾಯಕಾರಿ ವಾದವೆಂದರೆ ‘ಎಡಪಂಥೀಯ’ ಲೇಖಕರಿಗೇ ಪ್ರಶಸ್ತಿ ಕೊಡಲಾಗುತ್ತಿದೆ ಎಂಬುದು!. ಇಂಥವರ ವಾದವನ್ನೇ ಸದ್ಯಕ್ಕೆ ಒಪ್ಪೋಣ. ಸಾಹಿತ್ಯದ ಉದ್ದೇಶ ಮನೋರಂಜನೆಯ ಜೊತೆಗೆ ವ್ಯಕ್ತಿಯ ಚಿಂತನೆಗಳಿಗೆ ಸಾಣೆ ಹಿಡಿದು ಮಾನವತಾವಾದದೆಡೆಗೆ ಕರೆದೊಯ್ಯುವುದು. ಎಡಪಂಥೀಯ ಮಾರ್ಗದ ಸಾಹಿತ್ಯ ಹೆಚ್ಚಾಗಿ ಮುಖ್ಯವಾಹಿನಿಯ ಹೊರಗಿರುವ ಜನರ ಬದುಕು – ಬವಣೆಗಳನ್ನು ಕಟ್ಟಿಕೊಡುವುದು. ಜೀವಂತವಿರುವ, ಕಣ್ಣಿಗೆ ಕಾಣುವ ವ್ಯಕ್ತಿಯ ಮನಸ್ಸನ್ನು ತೆರೆದಿಡುವುದು. ಬಲಪಂಥೀಯ ಲೇಖಕರೆಂದು ‘ಆವರಣ’ದ ನಂತರ ಬಿರುದಾಂಕಿತರಾದ ಭೈರಪ್ಪನವರ ದಾಟು ಕಾದಂಬರಿಯಲ್ಲೂ ಈ ಪ್ರಯತ್ನವನ್ನು ಕಾಣಬಹುದು. ಶಿವಪುರವೆಂಬ ಹಳ್ಳಿಯಲ್ಲಿ ಹುಟ್ಟಿದ ವ್ಯಕ್ತಿ ಹಣ, ಮದದಲ್ಲಿ ಮಿಂದ ರಾಜಧಾನಿವಾಸಿಯಾದ ಶಿಖರಸೂರ್ಯ ರಾಜನನ್ನು ಘನತೆ, ನೀತಿ, ಬದುಕಿನ ರೀತಿ, ವಿಚಾರ ಎಲ್ಲವುಗಳಲ್ಲೂ ಮೀರಿ ನಿಲ್ಲುವುದು ಮಾನವತಾವಾದವೋ ಅಥವಾ ಎಡಪಂಥೀಯ ಹುನ್ನಾರವೋ?! ಅದೇ ‘ಬಲಪಂಥೀಯ’ ಸಾಹಿತ್ಯವನ್ನು ಗಮನಿಸಿದಲ್ಲಿ ಅಲ್ಲಿ ವ್ಯಕ್ತಿ ಸಮಾಜಕ್ಕಿಂತ ಧರ್ಮ ಮತ್ತು ಪುರಾತನ ಚಿಂತನೆಗಳಿಗೇ ಆದ್ಯತೆ. ಆ ಪುರಾತನ ವಿಚಾರಗಳು ಇವತ್ತಿನ ದಿನಮಾನಕ್ಕೆ ಎಷ್ಟು ಪ್ರಸ್ತುತ ಎಂಬ ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟಿಸಬಯಸದ ಲೇಖಕರು ತಮ್ಮ ಬರವಣಿಗೆಯ ಚಾತುರ್ಯದಿಂದ ತಪ್ಪು ವಿಚಾರಗಳು ಕೂಡ ಸರಿ, ಧರ್ಮ ಮೊದಲು ಮಾನವತಾವಾದ ನಂತರ ಎಂಬ ಅಭಿಪ್ರಾಯವನ್ನು ನಮ್ಮಲ್ಲಿ ಮೂಡಿಸುವಲ್ಲಿ ಸಫಲರಾಗಿಬಿಡುತ್ತಾರೆ. ವಂಶವೃಕ್ಷದ ಬರುವ ವಿಧವೆಯಾದ ಕಾತ್ಯಾಯಿನಿ ಮತ್ತೊಬ್ಬನನ್ನು ಮದುವೆಯಾದದ್ದು ಘೋರ ತಪ್ಪು ಎಂಬ ಭಾವ ನಮ್ಮಲ್ಲಿ ಮೂಡಿಸಿ ಅವಳು ಅನುಭವಿಸುವ ಯಾತನೆಯಲ್ಲೂ ಓದುಗರಲ್ಲಿ ಖುಷಿ ಮೂಡಿಸುವಲ್ಲಿ ಭೈರಪ್ಪನವರು ಸಫಲರಾಗುತ್ತಾರೆ. ಅದೇ ಲಿಯೋ ಟಾಲ್ ಸ್ಟಾಯ್ ಗಂಡನಿದ್ದರೂ ಮತ್ತೊಬ್ಬನಲ್ಲಿ ಅನುರಕ್ತಳಾದ ಅನ್ನಾ ಕೆರನೀನಳ ಬಗ್ಗೆ ಓದುಗರಲ್ಲಿ ಅಸಹ್ಯದ ಭಾವನೆ ಮೂಡದಿರುವಂತೆ ಪಾತ್ರ ಬೆಳೆಸುತ್ತಾರೆ. ಒಂದು ವಿಚಾರ – ಆಚಾರ – ಧರ್ಮದ ಮೂಲಕ ವ್ಯಕ್ತಿಯನ್ನು ತೂಗುವ ಪರಿ; ಮತ್ತೊಂದು ಮೂಲತಃ ಚಂಚಲವೇ ಆಗಿರುವ ಮನಸ್ಸಿನ ಮೂಲಕ ವ್ಯಕ್ತಿಯ ಅಳೆಯುವಿಕೆ. [ಹೋಲಿಕೆ ಮಾಡಿದ್ದಕ್ಕೆ ಕ್ಷಮೆಯಿರಲಿ!]. ಭೈರಪ್ಪನವರದು ಬಲಪಂಥೀಯ ದಾಟಿಯೆಂದಾದರೆ ಕಂಬಾರರನ್ನು ಎಡಪಂಥೀಯರೆಂದೇ ಒಪ್ಪೋಣ.

          ಭೈರಪ್ಪನವರ ಪುಸ್ತಕಗಳನ್ನು ವಿಚಾರಧಾರೆಗಳಿಂದ ಮುಕ್ತವಾಗಿ ಓದುವವರಿಗೂ ಕೂಡ ಆವರಣದ ಹೊಳಹೊಕ್ಕು ಅವರ ಸಾಹಿತ್ಯಾಭಿರುಚಿಯೇ ಮಾಯವಾಗಿಹೋಯಿತು ಎಂದು ವ್ಯಥೆ ಪಡದೆ ಇರುವುದಿಲ್ಲ. ಪರ್ವ, ಗೃಹಭಂಗ, ದಾಟು, ಸಾಕ್ಷಿ, ಮಂದ್ರದಂಥ ಪುಸ್ತಕಗಳನ್ನು ಕೊಟ್ಟ ಭೈರಪ್ಪನವರು ನಿಜಕ್ಕೂ ಜ್ಞಾನಪೀಠಕ್ಕೆ ಅರ್ಹರಿರಬಹುದು. ಆದರೆ ಶಿಖರಸೂರ್ಯದಂಥ ಮಾನವತಾವಾದಿ, ಪ್ರಜಾಪ್ರಭುತ್ವವಾದಿ, ಚಿಂತನಾಮುಖಿ ಕೃತಿಯನ್ನು ಬರೆದ ಕಂಬಾರರಿಗೆ ಪ್ರಶಸ್ತಿ ಬಂದ ಹೊತ್ತಿನಲ್ಲಿ ಹಲುಬುವುದೇಕೆ? ಈ ಹಲುಬುವಿಕೆ ಕೂಡ ‘ಬಲಪಂಥೀಯ’ ದೋರಣೆಯೋ ಹೇಗೆ?!

ಹಿಂಗ್ಯಾಕೆ?! – ಆಗಷ್ಟೇ ಮಂದ್ರ ಓದಿದ್ದ ನೆನಪಿನಲ್ಲಿ ಮತ್ತೊಂದು ಮಹತ್ತರ ಕೃತಿಗಾಗಿ ಕಾಯುತ್ತಿರುವಾಗ ಬಂದಿದ್ದು ‘ಆವರಣ’. ಇತ್ತ ಕಾದಂಬರಿಯೂ ಅಲ್ಲ, ಇತಿಹಾಸವೂ ಅಲ್ಲ, ಕೊನೆಗೆ ಆರೆಸ್ಸೆಸ್ಸಿನ ಕರಪತ್ರವೂ ಅಲ್ಲದಂಥ ಪುಸ್ತಕವನ್ನು ಓದಿದಾಗ ಆಗಿದ್ದು ಬೇಸರ. ಇತಿಹಾಸದ ತಪ್ಪುಗಳಿಗೆ ಅದಕ್ಕೇ ಸಂಬಂಧಪಡದ ವರ್ತಮಾನದ ಜನರ ಮೇಲೆ ಸೇಡು ತೀರಿಸಿಕೊಳ್ಳಲು ಪ್ರೇರೇಪಿಸುವ ಕಾದಂಬರಿ ಒಂದು ಗುಂಪಿನ ಜನರಿಗೆ ಇಷ್ಟವಾಗಿ ಭೈರಪ್ಪನವರನ್ನು ಅವರು ಹೊತ್ತಿ ಮೆರೆದಿದ್ದು ದಿಟವಾದರೂ “ಸಾಹಿತಿ” ಭೈರಪ್ಪನವರು “ಬಲಪಂಥೀಯ” ಭೈರಪ್ಪನವರಾಗಿ ಹೋದರಲ್ಲ ಎಂದು ನನ್ನಂಥವರ ವ್ಯಸನ. ಹಿಂಗ್ಯಾಕೋ?!

1 comment:

  1. ಭೈರಪ್ಪನವರಂಥ ಅಧ್ಯಯನಶೀಲ ಸಾಹಿತಿಗೆ ಜ್ಞಾನಪೀಠ ದೊರಕದಿರುವುದು ದುರಂತ. ಸಾಹಿತ್ಯಕ ವಲಯವನ್ನು ಪ್ರಭಾವಿಸಿರುವ ಸೈದ್ಧಾಂತಿಕ ನಿಲುವುಗಳಿಂದಾಗಿ ಹೀಗಾಗಿದೆ. ಬಕೆಟ್ ಹಿಡಿದವರಿಗೆ ಅವಕಾಶ ದೊರೆಯುವ ಕಾಲದಲ್ಲಿದ್ದೇವೆ.

    ReplyDelete