Sep 22, 2011

ಕರ್ನಾಟಕದ ಸೊಮಾಲಿಯ ಮತ್ತು ಬಡತನ ರೇಖೆ.

ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಬಂದ ಕೆಳಗಿನ ಎರಡು ವರದಿಗಳು ಮೇಲ್ನೋಟಕ್ಕೆ ಸಂಬಂಧಪಟ್ಟಿಲ್ಲದವು ಎಂದು ತೋರಿದರೂ ಎರಡಕ್ಕೂ ನೇರಾ ನೇರ ಸಂಬಂಧವಿದೆ. ಒಂದು ಕಡೆ ಬಡವರನ್ನು ‘ಬಡವನಲ್ಲ ಶ್ರೀಮಂತ’ನೆಂದು ಗುರುತಿಸಲು ಸಾಧ್ಯವಾಗುವಂಥ ಸರಕಾರದ ವರದಿ. ಮತ್ತೊಂದೆಡೆ ಆಹಾರದ ಕೊರತೆಯಿಂದ ನರಳುತ್ತಿರುವ ಮಕ್ಕಳ ಕರುಣಾಜನಕ ಕಥನ. “Shining India”ದ ಮತ್ತೊಂದು ರೂಪ.


ಟಿ.ವಿ9 ಕನ್ನಡ ವಾಹಿನಿ ‘ಅನ್ನ ಅನ್ನ ಅನ್ನ ‘ ಎಂಬ ತನ್ನ ಕಾರ್ಯಕ್ರಮವೊದರಲ್ಲಿ ರಾಯಚೂರು ಜಿಲ್ಲೆಯಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರುವ ಮಕ್ಕಳ ಕುರಿತು ವರದಿಯೊಂದನ್ನು ಪ್ರಸಾರ ಮಾಡಿದೆ. 2009, 2010, 2011(ಆಗಸ್ಷಿನವರೆಗೆ) ಸರಕಾರದ ವರದಿಗಳೇ ಸಾರುವಂತೆ ಹತ್ತಿರತ್ತಿರ 2500 ಮಕ್ಕಳು ಸಾವೀಗೀಡಾಗಿದ್ದಾರೆ. ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರುವ ಚಿಕ್ಕ ಮಕ್ಕಳ, ಹದಿನಾರು ವರುಷದ ಹುಡುಗನ ಚಿತ್ರ ‘ಕರ್ನಾಟಕದಲ್ಲಿ ಸೊಮಾಲಿಯ’ ಎಂಬ ಟಿ.ವಿ9ನ ಬೈಲೈನನ್ನು ಸಮರ್ಥಿಸುವಂತೆ ಮನಕಲಕುವಂತಿತ್ತು. ಪೌಷ್ಟಿಕ ಆಹಾರ ವಿತರಿಸುವ ದೃಷ್ಟಿಯಿಂದ ಅಂಗನವಾಡಿಗಳ ಮೂಲಕ ಪೂರೈಸುತ್ತಿರುವ ಆಹಾರ ಎಲ್ಲಿಗೆ ಹೋಗುತ್ತಿದೆ? ಪೂರೈಕೆಯಾಗುತ್ತಿರುವ ಆಹಾರವೇ ಅಪೌಷ್ಟಿಕವಾದದ್ದು ಎಂಬುದು ಲೋಕಾಯುಕ್ತ ವರದಿಯೊಂದರ ಸಾರ. ಪೌಷ್ಟಿಕಾಂಶದ ಕೊರತೆಯ ಜೊತೆಗೆ ಆ ಭಾಗದಲ್ಲಿ ದೊರೆಯುವ ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಫ್ಲೋರೈಡ್ ಕೂಡ ಮಕ್ಕಳ ಈ ನರಳುವಿಕೆಗೆ ಕಾರಣವಾಗಿದೆಯಾ?
 
          ಬಡತನ ರೇಖೆಗೆ ಸಂಬಂಧಪಟ್ಟಂತೆ ಕೇಂದ್ರ ಯೋಜನಾ ಆಯೋಗ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ದೆಹಲಿ ಮುಂಬಯಿಯಂಥ ಶಹರುಗಳಲ್ಲಿ ಐದು ಜನರ ಕುಟುಂಬ ದಿನವೊಂದಕ್ಕೆ ಮೂವತ್ತೈದು ರುಪಾಯಿ ಸಂಪಾದಿಸಿದರೆ ಅಂಥವರನ್ನು ಬಡತನ ರೇಖೆಯಿಂದ ಹೊರಗಿಡಬಹುದು ಎಂದು ತಿಳಿಸಿದೆ. ತೆಂಡೂಲ್ಕರ್ ಸಮಿತಿಯ ಶಿಫಾರಸ್ಸನ್ನು ತನ್ನ ಪ್ರಮಾಣ ಪತ್ರಕ್ಕೆ ಪೂರಕವಾಗಿ ಬಳಸಿದೆ. ನೆನಪಿಡಿ 31 ರುಪಾಯಿ ಪ್ರತಿದಿನ!! ನಗರಗಳ ಅಂಗಡಿಗಳಲ್ಲಿ ಒಂದು ಕೆ.ಜಿ ಅಕ್ಕಿಯೂ ತರಲೂ ಕಷ್ಟವಾಗುವಷ್ಟು ಹಣವದು. ಇದು ವಾಸ್ತವಕ್ಕೆ ದೂರವಾದ ಪ್ರಮಾಣ ಪತ್ರವಲ್ಲವಾ? ಅಂಕಿ ಸಂಖ್ಯೆಗಳಿಗೆ ಹೆಚ್ಚು ಒತ್ತು ಕೊಡುವ ಸರಕಾರದ ನಾಟಕದ ಭಾಗವಾ? ಈ ಪ್ರಮಾಣ ಪತ್ರದ ಪ್ರಕಾರ ಬಹಳಷ್ಟು ಜನರನ್ನು ಬಡತನ ರೇಖೆಗಿಂತ ಹೊರಗಿಟ್ಟು ‘ಬಡವರ ಸಂಖ್ಯೆಯನ್ನು ಕಡಿತಗೊಳಿಸಿ, ಬಡವರಿಗೆ ನೀಡಬೇಕಾದ ಜವಾಬುದಾರಿಯಿಂದ ತಪ್ಪಿಸಿಕೊಳ್ಳುವ ಹುನ್ನಾರವಾ?

1 comment:

  1. ಚಿಂತನೆಗೆ ಹಚ್ಚುವಂತಿದೆ. ನಮ್ಮಲ್ಲಿ ಇಂಥ ವಿಷಯಗಳು ಇನ್ನೂ ತಲ್ಲಣ ಉಂಟುಮಾಡದಂಥ ಸಾಮಾಜಿಕ ವಿದ್ಯಮಾನಗಳಾಗಿ ಏಕೆ ಚರ್ಚೆಯಾಗುತ್ತಿಲ್ಲ? ನಮ್ಮ ಸಂವೇದನೆಗಳ ಆದ್ಯತೆಗಳು ಬದಲಾಗುತ್ತಿವೆಯೇ?

    ReplyDelete