ಡಾ ಅಶೋಕ್. ಕೆ. ಆರ್.
ಡಿಗ್ರಿ ಸರ್ಟಿಫಿಕೇಟ್ ಪಡೆದುಕೊಳ್ಳುವ ಸಲುವಾಗಿ ಗೆಳೆಯ ಮಂಜನ ಜೊತೆ ಯುನಿವರ್ಸಿಟಿಗೆ ಹೋಗಿ ಅರ್ಜಿ ಕೊಟ್ಟೆ. ಮಧ್ಯಾಹ್ನದ ನಂತರ ಬರಲು ತಿಳಿಸಿದರು. ಅಲ್ಲಿಯವರೆಗೆ ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಮಂಜು ‘ಫೋರಮ್’ ಮಾಲಿಗೆ ಹೋಗೋಣವಾ? ಎಂದ. ಬೆಂಗಳೂರಿಗರ ಬಾಯಲ್ಲಿ ಪದೇ ಪದೇ ಕೇಳಿಬರುತ್ತಿದ್ದ ಫೋರಮ್ ನಲ್ಲಿ ಏನಿದೆ ಎಂಬ ಕುತೂಹಲ ನನ್ನಲ್ಲೂ ಇತ್ತು. ನಡಿಯಪ್ಪ ಹೋಗೋಣ ಎಂದೆ. ‘ಓಹೋ! ಇದೇನಾ ನಮ್ಮ ದೇಶದ ಯುವಜನತೆ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸುತ್ತಿರುವ ಜಾಗ’ - ಫೋರಮ್ಮಿಗೆ ಕಾಲಿಡುತ್ತಿದ್ದಂತೆಯೇ ಬಂದ ಯೋಚನೆಯಿದು. ‘ಲೇ ಇಲ್ಲಿ ನಾವೇನು ಮಾಡೋದೋ ಮಾರಾಯಾ? ಏನನ್ನೂ ತೆಗೆದುಕೊಳ್ಳೋ ಅವಶ್ಯಕತೆಯೂ ಇಲ್ಲ; ಜೇಬಿನಲ್ಲಿ ಹೆಚ್ಚು ದುಡ್ಡೂ ಇಲ್ಲ. ನಡಿ ವಾಪಸ್ಸಾಗೋಣ’ ಎಂದೆ. ‘ಲ್ಯಾಂಡ್ ಸ್ಟೋನ್ ಪುಸ್ತಕದಂಗಡಿ ಇದೆ’ ಎಂದ. ‘ನಮಗೆ ಇಷ್ಟವಾಗೋ ಜಾಗ ಇದೊಂದೇ ಇರಬೇಕು ಇಲ್ಲಿ’ ಎಂದುಕೊಳ್ಳುತ್ತಾ ಆ ಅಂಗಡಿಗೆ ಹೊಕ್ಕು ಘಂಟೆಯ ಮೇಲೆ ಪುಸ್ತಕಗಳನ್ನು ಜಾಲಾಡಿದೆವು. ಹಣದ ಅಭಾವವಿದ್ದ ಕಾರಣ ಇಬ್ಬರಿಗೂ ಒಂದೊಂದು ಪುಸ್ತಕ ಖರೀದಿಸಲಷ್ಟೇ ಶಕ್ಯವಾಯಿತು. ನಂತರ ಏನನ್ನೋ ವಿಚಾರಿಸಲು ಮೊಬೈಲ್ ಅಂಗಡಿಗೆ ಹೋದೆವು. ಆ ಅಂಗಡಿಯಲ್ಲಿ ಹಿನ್ನೆಲೆಯಲ್ಲಿ ಸಂಗೀತವಿತ್ತು. ಅಂದು ಆರಂಭವಾದ ಈ ಕೆಳಗಿನ ಯೋಚನೆ ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ ಒಂದು ವರದಿಯಿಂದಾಗಿ ಮೂರ್ತ ರೂಪ ಪಡೆದುಕೊಳ್ಳಲಾರಂಭಿಸಿದೆ.
ಕಳೆದ ವಾರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿತ್ತು. ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ [ಆರಂಭಿಕವಾಗಿ ಐಷಾರಾಮಿ ಬಸ್ಸುಗಳಲ್ಲಿ] ಪ್ರತಿಯೊಂದು ಸೀಟಿನ ಹಿಂಬದಿಯಲ್ಲಿ ಹಿಂದೆ ಕುಳಿತಿರುವ ವ್ಯಕ್ತಿಗೆ ಅನುಕೂಲವಾಗುವಂತೆ ಪುಟ್ಟ ಟಿ.ವಿಯೊಂದನ್ನು ಅಳವಡಿಸುವ ಯೋಚನೆ. ಬಸ್ಸಿನ ಟಾಪಿನಲ್ಲಿ ಸೆಟಲೈಟ್ ಡಿಷ್ ಅಳವಡಿಸಿ ಪ್ರಯಾಣಕರಿಗೆ ತಮ್ಮ ಆಯ್ಕೆಯ ಛಾನೆಲ್ಲನ್ನು ನೋಡುವ ಅವಕಾಶ. ಇದು ಕೆ ಎಸ್ ಆರ್ ಟಿ ಸಿಯ ‘ಆಧುನೀಕರಣ’ವಂತೆ ಜನರ ‘ಮನೋರಂಜನೆಗಾಗಿ’. ಕೆಲವು ತಿಂಗಳುಗಳ ಹಿಂದೆ ಮೈಸೂರು – ಬೆಂಗಳೂರು ನಡುವಿನ ರೈಲುಗಳಲ್ಲೂ ಟಿ ವಿಯನ್ನು ಅಳವಡಿಸಿದ್ದರು. ಬಸ್ ಮತ್ತು ರೈಲು ನಿಲ್ದಾಣಗಳಲ್ಲೂ ಟಿವಿಯಿದೆ. ನಗರಗಳಲ್ಲಿನ ಪೆಟ್ರೋಲ್ ಬಂಕಿಗೆ ಹೋಗಿ ಎಫ್ ಎಂ ಗುನುಗುನಿಸುತ್ತಿರುತ್ತದೆ. ಮಾಲ್ ಗಳಲ್ಲಿ, ಅಲ್ಲಿನ ಎಲ್ಲ ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ ಎಲ್ಲೆಡೆಯೂ ನಮಗೆ ಬೇಕೋ ಬೇಡವೋ ಯಾವುದೋ ಒಂದು ಸಂಗೀತ ನಮ್ಮ ಶ್ರವಣ ಪ್ರವೇಶಮಾಡುತ್ತಿರುತ್ತದೆ. ಇದು ನಿಜಕ್ಕೂ ಆಧುನಿಕತೆಯಾ? ಮನೋರಂಜನೆಯಾ?
ಪ್ರಯಾಣ ಅದರಲ್ಲೂ ಒಬ್ಬಂಟಿಗರಾಗಿ ಪಯಣಿಸುವ ಸಂದರ್ಭದಲ್ಲಿ ನಮ್ಮ ಅರಿವಿಲ್ಲದೆಯೇ ಒಂದು ಏಕಾಂತದ ಸೃಷ್ಟಿಯಾಗಿರುತ್ತದೆ. ದೈನಂದಿನ ಜಂಜಾಟಗಳಿಂದ ತಾತ್ಕಾಲಿಕವಾಗಿ ಬಿಡುಗಡೆಗೊಳ್ಳುತ್ತಾ ನಮ್ಮದೇ ಜೀವನದ ಎಷ್ಟೋ ಸಂಗತಿಗಳ ಪುನರ್ ಮನನಕ್ಕೆ, ವಿಮರ್ಶೆಗೆ ಅವಕಾಶವನ್ನೀಯುತ್ತದೆ. ಪಯಣಿಸುವ ದಾರಿಯಲ್ಲಿ ಸಿಗುವ ಊರುಗಳ ಸ್ಥಿತಿಗತಿಯ ಅರಿವು, ಸೌಂದರ್ಯದ ಆಸ್ವಾದನೆ, ಕುರೂಪದ ದರ್ಶನ ಇವೆಲ್ಲವುಗಳನ್ನು ಅನುಭವಿಸುವ ಸಾಧ್ಯತೆಯಿರುತ್ತದೆ. ಕೆಲವೊಮ್ಮೆ ಸಹಪ್ರಯಾಣಿಕರ ಜೊತೆಗಿನ ಒಡನಾಟವೂ ಸಾಧ್ಯ. ಈ ಎಲ್ಲ ಅನುಭವಗಳಿಂದ ನಮ್ಮನ್ನು ವಂಚಿಸಲೋಸುಗ ಈ ಟಿ.ವಿಗಳನ್ನು ಅಳವಡಿಸುತ್ತಾರಾ? ಸುತ್ತಲ ಪರಿಸರದ ಆಗುಹೋಗುಗಳ ಬಗ್ಗೆ ಜನರ ಗಮನವರಿಯದ್ದಿದ್ದಲ್ಲಿ ಅದರ ಬಗ್ಗೆ ಅವರು ಯೋಚಿಸಲು – ಚಿಂತಿಸಲೂ ಸಾಧ್ಯವಾಗುವುದಿಲ್ಲ. ಮನೋರಂಜನೆಯ ಹೆಸರಿನಲ್ಲಿ ನಮ್ಮನ್ನು ಕಲ್ಪನಾಲೋಕಕ್ಕೆ ಎಳೆದೊಯ್ಯುವ ಈ ಯೋಜನೆಗಳು ನಮ್ಮ ಚಿಂತಿಸುವ ಶಕ್ತಿಯನ್ನೇ ಮೊಟಕುಗೊಳಿಸುತ್ತವೆಯಲ್ಲವೇ?
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಸ್ವಇಚ್ಛೆಯಿಂದ ನಮ್ಮ ಅಭಿರುಚಿಗೆ ಹಾಡುಗಳನ್ನು ಕೇಳುವುದಕ್ಕೂ ಪೆಟ್ರೋಲ್ ಬಂಕಿನಿಂದ ಹಿಡಿದು ಬಸ್ಸಿನವರೆಗೂ ನಮ್ಮ ಕಿವಿಗೆ ತುರುಕಲಾಗುವ ಸಂಗೀತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲನೆಯದು ಭಾವಗೀತೆ, ಸುಗಮಸಂಗೀತಮ ಸಿನಿಮಾ ಹಾಡು, ಪಾಪ್, ರಾಕ್ ಯಾವುದಾದರೂ ಸರಿಯೇ ನಮ್ಮ ಅಭಿರುಚಿ ಆಸಕ್ತಿಗಳನ್ನು ಬೆಳೆಸಲು ನಮ್ಮ ಮನವನ್ನು ಸಮಾಧಾನಗೊಳಿಸುವ ಸಂಗತಿ; ಕಿವಿಯ ಮೂಲಕ ನಮ್ಮ ಬುದ್ಧಿ ಮನಸ್ಸನ್ನು ತಲುಪುವ ಪ್ರಕ್ರಿಯೆ. ಎರಡನೆಯದು ಕೂಡ ಕಿವಿಯ ಮೂಲಕ ಬುದ್ಧಿ ಮನಸ್ಸನ್ನು ತಲುಪುತ್ತಾದರೂ ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆಯೇ ಹೊರತು ಅರಳಿಸುವುದಿಲ್ಲ.
ಹಿಂಗ್ಯಾಕೆ?! – ನಡೆ ನುಡಿ, ಜೀವನದ ರೀತಿ, ಮೌಲ್ಯಗಳ ಉತ್ತಮಗೊಳ್ಳುವಿಕೆ ಆಧುನೀಕತೆಯೆನಿಸಿಕೊಳ್ಳಬೇಕಿತ್ತು. ಆದರಿಂದು ನಾವು ಉಪಯೋಗಿಸುವ ಮೊಬೈಲು, ಮೆಟ್ಟುವ ತೊಡುವ ‘ಬ್ರ್ಯಾಂಡೆಡ್’ ಕಂಪೆನಿ ವಸ್ತುಗಳು ಆಧುನಿಕತೆಯ ಮಾನದಂಡವಾಗಿದೆ. ಹಿಂಗ್ಯಾಕೋ?!
No comments:
Post a Comment