ಪ್ರಜಾವಾಣಿ |
ಭ್ರಷ್ಟಾಚಾರ ಕೇವಲ ಸರಕಾರಿ ನೌಕರರ ಮತ್ತು ಸರಕಾರಕಷ್ಟೇ ಸೀಮಿತವಾಗಿಸಬಹುದಾದ ಸಂಗತಿಯಾ? ಅನಧಿಕೃತವಾಗಿ ಸಾವಿರ – ಲಕ್ಷ ರುಪಾಯಿಗಳನ್ನು ಪಡೆಯುವ ಶಾಲಾ ಕಾಲೇಜುಗಳು ಇದರ ವ್ಯಾಪ್ತಿಗೆ ಬರುವುದಿಲ್ಲವಾ? ಎಂ. ಆರ್. ಪಿ ದರಕ್ಕಿಂತ ಹೆಚ್ಚು ಹಣ ಪಡೆಯುವ ಅಂಗಡಿಗಳು? ನಾರ್ಮಾಲ್ಲಾಗೇ ಆಗುವ ನಾರ್ಮಲ್ ಡೆಲಿವರಿಗೆ 50,000 – ಒಂದು ಲಕ್ಷದವರೆಗೆ ಪಡೆಯುವ ಪಂಚತಾರಾ ಆಸ್ಪತ್ರೆಗಳು?
ಇವೆಲ್ಲ ಒತ್ತಟ್ಟಿಗಿರಲಿ, ನಾವು ಅಣ್ಣಾ ಹಜಾರೆಯ ಹೋರಾಟವನ್ನು ಸಂಪೂರ್ಣ ಬೆಂಬಲಿಸುತ್ತೇವೆ ಎಂದು ಆರ್ಭಟಿಸಿದ, ಅಣ್ಣಾ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಬಿಂಬಿಸಿದ ಪತ್ರಿಕೆ, ದೃಶ್ಯ ಮಾಧ್ಯಮದವರು ಉದ್ದಿಮೆ – ರಾಜಕಾರಣಿಗಳಿಂದ ‘ಉಡುಗೊರೆ’ ರೂಪದಲ್ಲಿ ಹಣ ಪಡೆದು ಸುದ್ದಿ ತಿರುಚಿಯೋ ಅಥವಾ ವೈಭವೀಕರಿಸಿಯೋ ಪ್ರಕಟಿಸುವುದು ಭ್ರಷ್ಟಾಚಾರವಲ್ಲವಾ? ಬ್ಲಾಕ್ ಮೇಲ್ ಮಾಡಿ ಜನರಿಂದ ಹಣ ವಸೂಲು ಮಾಡುವುದು ಯಾವ ರೀತಿಯ ನೈತಿಕತೆ?
ರಾಷ್ಟ್ರಮಟ್ಟದಲ್ಲಿ ಔಟ್ ಲುಕ್, ಓಪನ್ ಪತ್ರಿಕೆಗಳ ಮುಖಾಂತರ ಪ್ರಕಟಗೊಂಡ ನೀರಾ ರಾಡಿಯಾ ಟೇಪುಗಳು ಬಹಳಷ್ಟು ‘ಖ್ಯಾತಿ’ವೆತ್ತ ಪತ್ರಕರ್ತರ ಮುಖವಾಡಗಳನ್ನು ಬಯಲುಗೊಳಿಸಿತು. ಹತ್ತು ರುಪಾಯಿ ಲಂಚ ಪಡೆದು ಸಿಕ್ಕಿಬಿದ್ದ ಪೇದೆಯನ್ನು ಬ್ರೇಕಿಂಗ್ ನ್ಯೂಸ್ ನ ಹೆಸರಿನಲ್ಲಿ ದಿನವಹೀ ಸುದ್ದಿ ಪ್ರಸಾರಮಾಡುವ ಮಾಧ್ಯಮಗಳು ತಮ್ಮದೇ ಮನೆಯವರು ಮಾಡಿದ ಲಕ್ಷಾಂತರ ರುಪಾಯಿ ಹಗರಣಗಳ ಬಗ್ಗೆ ಮೌನ ತಾಳುವುದೇಕೆ? ಇತರೆ ಪತ್ರಕರ್ತರು ಸಿಕ್ಕಿಕೊಂಡದ್ದನ್ನು ತಮ್ಮ ವಾಹಿನಿಯಲ್ಲಿ ಪ್ರಕಟಿಸಿದರೆ ತಮ್ಮ ಬಂಡವಾಳವೂ ಬಯಲಾಗಬಹುದೆಂಬ ಅಂಜಿಕೆಯಾ?
ರವಿ ಬೆಳಗೆರೆ |
ಕರ್ನಾಟಕದ ಮಟ್ಟಿಗೆ ಈಗ ಬಂಧನಕ್ಕೊಳಗಾಗಿರುವ ಗಣಿ ಧಣಿ(?) ಗಾಲಿ ಜನಾರ್ದನ ರೆಡ್ಡಿಯದೇ ಸುದ್ದಿ. ಬಂಧಿಸಿರುವುದು ಸಿ.ಬಿ.ಐ. ಇದಕ್ಕೂ ಮುನ್ನ ಯಡಿಯೂರಪ್ಪನವರ ಪತನಕ್ಕೆ ಕಾರಣವಾದ ಲೋಕಾಯುಕ್ತ ವರದಿಯಲ್ಲಿ ಪತ್ರಕರ್ತರಿಗೆ, ಪತ್ರಿಕೆಗಳಿಗೆ ಹಣ ನೀಡಿರುವ ವರದಿಯಿದೆ. ಡೈರಿಯೊಂದರಿಂದ ಪಡೆದ ವಿವರಗಳು. ಗಣಿ ಹಗರಣದಲ್ಲಿ ಪಾಲ್ಗೊಂಡಿರುವ ರಾಜಕಾರಣಿಗಳ ಬಗ್ಗೆ ಆಕರ್ಷಕ ಹೆಡ್ ಲೈನ್ – ಬೈಲೈನ್ ಬರೆಯುವ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಪತ್ರಕರ್ತರು ಪಡೆದ ಹಣದ ಬಗ್ಗೆ ಸೊಲ್ಲೇ ಇಲ್ಲ! Ofcourse ಕೊನೆಗೆ ಜನರ ಗಮನಕ್ಕೆ ಈ ವಿಷಯವನ್ನು ತಂದದ್ದು ಕೂಡ ಪತ್ರಿಕೆಗಳೇ. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ವಾರ್ತಾ ಭಾರತಿ ಪತ್ರಿಕೆಗಳು ಮಾತ್ರ ಆ ಡೈರಿಯ ಪುಟಗಳನ್ನು ಪ್ರಕಟಿಸುವ ದೈರ್ಯ ತೋರಿದವು. ಅಂತರ್ಜಾಲ ಪತ್ರಿಕೆಗಳಲ್ಲಿ, ಸಂಪಾದಕೀಯ, ಚುರುಮುರಿಯಂಥ ಕೆಲವು ಬ್ಲಾಗುಗಳಲ್ಲಿ ಒಂದಷ್ಟು ಚರ್ಚೆ ನಡೆಯುತ್ತಿರುವುದನ್ನು ಹೊರತುಪಡಿಸಿದರೆ ಉಳಿದೆಲ್ಲವುಗಳಲ್ಲಿ ನೀರವ ಮೌನ!!
ವಿಶ್ವೇಶ್ವರ ಭಟ್ |
ಯಶವಂತ ದೇಶಪಾಂಡೆ/ ಬೆಂಗಳೂರು ಮಿರರ್/ ಸಂಜಯ್ ಸರ್ ಗೆ 1 (9/8/10ರಂದು), ವಿ. ಭಟ್ ಗೆ 50, 25(9/8/10 ಮತ್ತು 4/8/10), ಆರ್. ಬಿಗೆ 10 (31/7/10), ಸಂಜಯ್ ಸರ್ ಗೆ ಮತ್ತೆ 2, 1.5(15/9/10 ಮತ್ತು 18/9/10), ಸಂಜಯ್ ಸರ್ ರೆಫರ್ ಮಾಡಿದ ಸುರೇಶ್ ಭಟ್ ಗೆ 0.20 (8/8/10), ಪ್ರೆಸ್ ಕ್ಲಬ್ ಹರೀಶನಿಗೆ 5 (28/9/10), ಸಂಜಯ್ ಸರ್ ಮುಖಾಂತರ ಬೆಂಗಳೂರು ಲೋಕಲ್ ಪತ್ರಿಕೆಗಳಿಗೆ 2.52, 1.52 (31/8/10 ಮತ್ತು 28/9/10), ಡೆಕ್ಕನ್ ಕ್ರಾನಿಕಲ್ ಗೆ 25(28/9/10) – ಇವಿಷ್ಟು ಪತ್ರಿಕೆಗಳಿಗೆ ಸಂಬಂಧಪಟ್ಟಂತಿರುವ ಹಣ ನೀಡಿದ ಮಾಹಿತಿ. ಉಳಿದ ಮೊತ್ತಗಳನ್ನು ಗಮನಿಸಿ ನೋಡಿದಾಗ ಮೇಲಿನ ಮೊತ್ತಗಳೆಲ್ಲ ಲಕ್ಷದಲ್ಲಿರುವ ಸಾಧ್ಯತೆ ಹೆಚ್ಚು. ಒಂದಷ್ಟು ಪತ್ರಿಕೆ ಮತ್ತು ಪತ್ರಕರ್ತರ ಹೆಸರುಗಳು ಪೂರ್ಣವಾಗಿವೆ. ಕೆಲವು ಇನಿಷಿಯಲ್ ಗಳಷ್ಟೇ ಇವೆ.
ಆರ್. ಬಿ ಮತ್ತು ವಿ.ಭಟ್? ಯಾರಿವರು? ಕನ್ನಡ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಅಭ್ಯಾಸವಿರುವವರಿಗೆ ಆರ್. ಬಿ ಎಂದ ತಕ್ಷಣ ಹಾಯ್ ಬೆಂಗಳೂರಿನ ರವಿ ಬೆಳಗೆರೆ, ವಿ. ಭಟ್ ಎಂದರೆ ಈಗ ಕನ್ನಡ ಪ್ರಭ ಮತ್ತು ಸುವರ್ಣದ ಮುಖ್ಯಸ್ಥರಾಗಿರುವ ವಿಶ್ವೇಶ್ವರ ಭಟ್ಟರ ಹೆಸರುಗಳೇ ಮನದಲ್ಲಿ ಪಡಿಮೂಡುತ್ತವೆ. ಇಬ್ಬರೂ ತಮ್ಮ ಆಕರ್ಷಕ ಶೈಲಿಯ ಬರವಣಿಗೆಯಿಂದ ಓದುವ ತಲೆಮಾರನ್ನು ಬೆಳೆಸಿದವರು. ನೈತಿಕತೆಯ ಬಗ್ಗೆ ಪುಟಗಟ್ಟಲೇ ಬರೆದು ಓದುಗರನ್ನು ಮಂತ್ರಮುಗ್ದಗೊಳಿಸುವ ಇವರುಗಳೇನಾ ಗಣಿ ಧೂಳಿಗೆ ಮೈಯೊಡ್ಡಿ ಆಸ್ವಾದಿಸಿದವರು. ವಿಶ್ವೇಶ್ವರ ಭಟ್ ಮತ್ತವರ ಶಿಷ್ಯರನ್ನು ವಿಜಯ ಕರ್ನಾಟಕದಿಂದ ಹೊರದಬ್ಬಲು ತಿಂಗಳುಗಳ ಹಿಂದೆಯೇ ಪತ್ರಿಕೆಯ ಮಾಲೀಕರಿಗೆ ಇವರ ಅಮೇಧ್ಯ ಬೋಜನದ ಅರಿವಾಗಿದ್ದೇ ಕಾರಣ. ಇನ್ನು ರವಿಬೆಳಗೆರೆಯ ಬಗ್ಗೆ ಬರೆದರೆ ಕೋರ್ಟು ಕಟಕಟೆ ಹತ್ತಬೇಕಾದೀತು ಎಂಬುದು ನನ್ನೊಬ್ಬ ಪತ್ರಕರ್ತ ಗೆಳೆಯನ ಅಭಿಪ್ರಾಯ. ರವಿ ತಿನ್ನುವ ಕೆಲಸವನ್ನು ಶ್ರದ್ಧೆಯಿಂದ ಸಿಗಬೀಳದಂತೆ ಮಾಡುತ್ತಾರಂತೆ.
ಹಿಂಗ್ಯಾಕೆ? - ಈ ಅಂತೆ ಕಂತೆಯ ಮಾತು ಅತ್ಲಾಗಿರಲಿ. ಉಳಿದದ್ದೇನೇ ಇದ್ದರೂ ರವಿ ಮತ್ತು ವಿಶ್ವೇಶ್ವರ ಭಟ್ಟರ ಬರವಣಿಗೆಯನ್ನು ಮೆಚ್ಚುತ್ತಲೇ ಬಂದಿದ್ದೇವೆ. ಆರ್. ಬಿ ಮತ್ತು ವಿ. ಭಟ್ ಇವರಲ್ಲದ್ದಿದ್ದ ಪಕ್ಷದಲ್ಲಿ ತಮ್ಮ ತಮ್ಮ ಪತ್ರಿಕೆಗಳಲ್ಲಿ ಸ್ಪಷ್ಟೀಕರಣ ನೀಡಿ ಅಭಿಮಾನಿಗಳಲ್ಲಿ ಮತ್ತು ಓದುಗ ದೊರೆಗಳಲ್ಲಿರುವ ಅನುಮಾನವನ್ನು ಇವರುಗಳು ಪರಿಹರಿಸುತ್ತಿಲ್ಲವಲ್ಲ ಹಿಂಗ್ಯಾಕೆ?!
ಸಾಮಾಜಿಕ ಸ್ವಾಸ್ಥ್ಯವನ್ನು ಕಾಯುವ ಜವಾಬ್ದಾರಿ ಇರುವ ಪತ್ರಕರ್ತರೇ ಹೀಗೆ ಮಾಡಿದರೆ ಜನರ ಗತಿ ಅಧೋಗತಿ.ಬೇಲಿಯೇ ಎದ್ದು ಹೊಲ ಮೇಯ್ದ೦ತೆ.
ReplyDeleteಹಣ ಪಡೆದವರು ಅದು ಯಾರೇ ಇರಲಿ ಅವರು ಪ್ರಮಾಣಿಕವಾಗಿ ಒಪ್ಪಿಕೊಂಡು ಜನರಲ್ಲಿ(ಓದುಗರಲ್ಲಿ) ಕ್ಷೆಮೆ ಕೇಳಬೇಕು.
ReplyDelete