ಪುಟ ೦೪ [ ಕೊನೆಯ ಪುಟ]
ಊರಲ್ಲಿಳಿದವನಿಗೆ ಅಲ್ಲಿನ ಸುಸಜ್ಜಿತ ಬಸ್ ನಿಲ್ದಾಣ, ನಿಮಿಷಕ್ಕೊಂದರಂತೆ ಸಾಗುವ ಐಷಾರಾಮಿ ವಾಹನಗಳು, ವಾಹನಗಳಿಂದ ಬರುವ ಪಾನಮತ್ತರ ಕೇಕೆ - ಎಲ್ಲವೂ ಅಯೋಮಯ. ತನ್ನ ಮನೆಯ ಕಡೆ ಕಾಲುಹಾಕಿದ. ಹಸಿರು ಹುಲ್ಲ ನಡುವಿದ್ದ ಕಾಲುದಾರಿಯ ಜಾಗದಲ್ಲಿ ಐದಡಿಯ ಡಾಂಬರು ರಸ್ತೆಯಿತ್ತು. 'ಸುಭೋದ್ ಜಂಗಲ್ ರೆಸಾರ್ಟ್ಸ್ ' ಎಂಬ ಫಲಕ ಕಣ್ಣಿಗೆ ಬಿತ್ತು. ತನ್ನ ಮನೆಯ ಕಡೆಗೆ ತಿರುಗಿದವನಿಗೆ ಕಂಡಿದ್ದು ಆಳೆತ್ತರದ ಗೇಟು. ಗೇಟಿನ ಬಳಿ ಒಬ್ಬ ಕಾವಲುಗಾರ ನಿಂತಿದ್ದ. ಈತನನ್ನು ನೋಡಿ ಆತ ಪರಿಚಯದ ನಗೆ ನಕ್ಕು ಹತ್ತಿರ ಬಂದ. ' ಅರೆರೆ ಈತ ಪ್ರಕಾಶನ ಚಿಕ್ಕಪ್ಪನ ಮಗ ಶಂಕರನಲ್ಲವೇ?' ಎಂದುಕೊಳ್ಳುತ್ತಾ ಆತನ ಬಳಿ ಬಂದ. ಕುಶಲೋಪರಿಯೆಲ್ಲಾ ಮುಗಿದ ಮೇಲೆ "ಇದೇನಿದು, ನಮ್ಮ ಮನೆಯ ಜಾಗದಲ್ಲಿ ಯಾವುದೋ ಹೋಟ್ಲಿದ್ದ ಹಾಗಿದೆ?" ಎಂದು ಕೇಳಿದ. ಶಂಕರ ಅಲ್ಲಿ ನಡೆದದ್ದನ್ನು ಹೇಳಿದ. ಉಳಿದ ಊರಿನವರಂತೆ ಪ್ರತಿರೋಧ ತೋರಿಸದೇ ಈ ಊರಿನವರೆಲ್ಲಾ ಹೊರಟುಹೋದ ಮೇಲೆ ಮೊದಲು ಉತ್ತಮ ರಸ್ತೆಗಳನ್ನು ಮಾಡಿದರಂತೆ . ನಂತರ ಯಾರ್ಯಾರೋ ಬಂದು ಸರಕಾರ ಅವರಿಗೆ ಮಂಜೂರು ಮಾಡಿದ ಜಾಗಗಳಿಗೆ ಬೇಲಿ ಸುತ್ತಿ ನಿಧಾನಕ್ಕೆ ಐಶಾರಾಮಿ ಹೋಟೆಲುಗಳನ್ನು ಕಟ್ಟಿದರಂತೆ. ಕಾಡ ನಡುವಿನ ಬಂದುಕುಧಾರಿಗಳಿಂದ ಭಯಪಟ್ಟಿದ್ದ ನಗರದ ಜನ ಮೊದಮೊದಲು ಅಲ್ಲಿಗೆ ಬರಲಿಲ್ಲವಂತೆ. ಎಸ್. ಟಿ. ಎಫ.ನವರು ನಮ್ಮಿಡೀ ಊರಿಗೆ ಸರ್ಪಗಾವಲಾಕಿ ಕಾಯಲಾರಂಭಿಸಿದ ಮೇಲೆ ನಿಧಾನವಾಗಿ ಜನರು ಬರಲಾರಂಭಿಸಿದರು. ಇಂಥಹುದೇ ಇನ್ನು ಹತ್ತು ರೆಸಾರ್ಟ್ಸ್ ಕಟ್ಟಿದ್ದಾರೆ ಉರಿನಲ್ಲಿ " ನಿನ್ನ ಜಾಗದಲ್ಲೇ ನೀನೊಂದು ರಾತ್ರಿ ಇರಬೇಕಾದರೂ ಮುರು ಸಾವಿರ ಕೊಡಬೇಕು ರಾಮಣ್ಣ" ಎಂದ.
"ನಾನೊಮ್ಮೆ ಒಳಗೆ ನೋಡಬೇಕಲ್ಲಾ ಶಂಕರ." ಎಂದು ರಾಮೇಗೌಡ ಕೇಳಿದಾಗ ಶಂಕರ ಮ್ಲಾನವದನನಾದ. ಬೇಸರವನ್ನು ಮರೆಮಾಚಲು ಮುಖದ ಮೇಲೆ ನಗು ತಂದುಕೊಂಡು " ಒಳಗೆ ಏನು ನೋಡ್ತಿ ರಾಮಣ್ಣ. ನನ್ನದು ಇನ್ನೇನು ಡ್ಯುಟಿ ಮುಗೀತು. ಇಲ್ಲೇ ಹತ್ತಿರದಲ್ಲೇ ನನಗೂ ಒಂದು ಮನೆ ಅಂಥ ಕೊಟ್ಟಿದ್ದಾರೆ. ಅಲ್ಲಿಗೆ ಹೋಗೋಣ ನಡಿ." ಎಂದ. ಆತನ ಮುಖದ ಭಾವ ನೋಡಿದ ಮೇಲೆ ಒಳಗೆ ಹೋಗಬೇಕೆಂಬ ಹಂಬಲ ಮತ್ತಷ್ಟು ಹೆಚ್ಚಾಯಿತು.
ನಾನು ನೋಡಲೇಬೇಕು ಎನ್ನುತ್ತಾ ಗೇಟಿನ ಬಳಿ ನಡೆದ. ಡಾಂಬರು ರಸ್ತೆ ಗೇಟಿನ ಒಳಗೂ ಹೋಗಿ ನಾಲ್ಕೈದು ಕವಲೊಡೆದಿತ್ತು. ತನ್ನ ಮನೆಯಿದ್ದ ಜಾಗವನ್ನು ಅಂದಾಜಿನ ಮೇಲೆ ಗುರುತಿಸುತ್ತಾ ನಡೆದ. ಶಂಕರ ಅವನನ್ನು ಹಿಂಬಾಲಿಸಿದ. ಮನೆಯಿದ್ದ ಜಾಗವನ್ನು ಕೆಡವಿ ಅಲ್ಲೊಂದು ಕುಟಿರದಂಥ ಕಟ್ಟಡವಿರುವುದು ಗಮನಕ್ಕೆ ಬಂತು. ಯುವಜೋಡಿಯೊಂದು ಕುಟೀರದ ಎದುರು ಕುಳಿತು ಹರಟುತ್ತಿದ್ದರು. ರಾಮೇಗೌಡ ಗಕ್ಕನೆ ನಿಂತ. " ಇಲ್ಲದಿರೋ ಮನೇನ ಏನು ನೋಡುವುದು" ಎಂದು ತನಗೆ ತಾನೆ ಹೇಳಿಕೊಳ್ಳುತ್ತಾ ಸಮಾಧಿಯ ಕಡೆ ಹೆಜ್ಜೆ ಹಾಕಿದ.
ನೆಲ್ಲಿಮರಗಳನ್ನುರುಳಿಸಿ ಐಶಾರಾಮಿ ವಾಹನಗಳ ನಿಲ್ದಾಣವನ್ನಾಗಿ ಮಾಡಿರುವುದು ಕಾಣಿಸಿತು. ನೆಲ್ಲಿಕಾಯಿ ಕೀಳೋದು ಅಪರಾಧ ಆದರೆ ಮರ ಕಡಿಯೋದು....
ಸಮಾಧಿಯ ಹತ್ತಿರತ್ತಿರ ಬಂದವನಿಗೆ ದುಖ ಉಮ್ಮಳಿಸಿ ಬಂತು, ಯಾರೋ ತಡೆ ಒಡ್ಡಿದಂತೆ ಅಳಲು ಆಗಲಿಲ್ಲ. ಸಮಾಧಿಯ ಅಕ್ಕಪಕ್ಕವಿದ್ದ ತೆಂಗಿನ ಮರಗಳಿಗೆ ಬಿಗಿದ್ದಿದ್ದ ತೂಗುಯ್ಯಾಲೆಯಲ್ಲಿ ಮಲಗಿದ್ದ ಅರೆನಗ್ನ ಯುವತಿಯೊಬ್ಬಳು ಸಿಗರೇಟು ಸೇದುತ್ತಿದ್ದಳು. ಸಮಾಧಿಯ ಸುತ್ತ ಕುರ್ಚಿಗಳಿದ್ದವು. ಪಕ್ಕದಲ್ಲಿ ಪುಟ್ಟ ಶರಾಬಂಗಡಿ. ಅದರ ಮೇಲೆ ಇಂಗ್ಲೀಷಿನಲ್ಲಿ ಏನೋ ಬರೆದಿದ್ದರು. ಬಾರ್ ಎಂಬುದನ್ನು ಓದಿದನಾದರೂ ಅದರ ಹಿಂದಿದ್ದ ಪದದ ಅರ್ಥವಾಗಲಿಲ್ಲ. " ಅದೇನದು ಹೆಸರು" ಪಸೆ ಆರಿತ್ತು."ಅದು ಅದು ...." ಎಂದಾತ ತೊದಲುತ್ತಿದ್ದಂತೆ " ಸಮಾಧಿ ಹೋಟ್ಲು ಅಂತಾನಾ .....?" ಶಂಕರ ತಲೆಯಾಡಿಸಿದ. ಮಂಜಾಗಿದ್ದ ಕಣ್ಣುಗಳಿಂದಲೇ ಸಮಾಧಿಯೆಡೆಗೆ ನೋಡಿ ಹಿಂತಿರುಗಿ ನಡೆಯಲಾರಂಭಿಸಿದ.
'ನಿಮ್ಮ ತಾಯಿ ಸ್ವರ್ಗ ಸೇರೋದು ಖಂಡಿತ'.... ಹುಟ್ಟಿದರೆ ಇಂಥ ಮಗ ಹುಟ್ಬೇಕು ನೋಡು '.................. ತಾಯಿಯ ಶ್ರಾಧ್ಧದ ದಿನ ಅವರಿವರು ಹೇಳಿದ್ದು ಕಿವಿಯಲ್ಲಿ ಗುಂಯ್ಗುಡತೊಡಗಿದವು. ಶಂಕರನಾಡುತ್ತಿದ್ದ ಸಮಾಧಾನದ ಮಾತುಗಳು ಗಾಳಿಯಲ್ಲಿ ಲೀನವಾಗುತ್ತಿತ್ತು.
ಸಮಾಧಿಯ ನೆಪದಲ್ಲಿ ನೀರಾ ಇಳಿಸುವುದನ್ನು ಬಿಟ್ಟ ಜಾಗದಲ್ಲೀಗ.......................... ಗೇಟನ್ನು ರಭಸದಿಂದ ದೂಡಿ ಹೊರನಡೆದ..........
ಘಟ್ಟದ ತಪ್ಪಲಲ್ಲೆಲ್ಲೋ ಮೊರೆದ ಗುಂಡಿನ ಶಬ್ದಕ್ಕೆ ಹಕ್ಕಿಗಳ ಚಡಪಡಿಕೆಯ ಕೂಗು.
ಅಂದಿನಿಂದ ದೇವರು , ಶ್ರಾಧ್ಧ , ಸಮಾಧಿ, ಸರಕಾರಗಳ ಬಗ್ಗೆ ರಾಮೇಗೌಡನಿಗೆ....................
ಮುಕ್ತಾಯ.